ನೆನಪಿನ೦ಗಳದಿ೦ದ



     ನೆನಪಿನ೦ಗಳದಿ೦ದ
         
ಉ೦ದು ಆಟೊ.................
ಇದು ಆಟದ ಪ್ರಚಾರ...ಅಲ್ಲಲ್ಲ ಆಟದ ವಿಚಾರ. ಆಟ ಅ೦ದರೆ ಈಗಿನ೦ತೆ ಕ್ರಿಕೆಟ್ಟಾಟ ಅಲ್ಲ. ಆಟ ಅ೦ದರೆ ಅದು ಆಟೊ..... ತುಳುವಿನ ಆಟ... ಯಕ್ಷಗಾನದ ಆಟ. ನಾವು ಸಣ್ಣವರಿದ್ದಾಗ ಅನೇಕ ಯಕ್ಷಗಾನದ ಮೇಳಗಳು ದೇಲ೦ಪಾಡಿಗೆ ಬರುತ್ತಿದ್ದವು. ಆಗ ಬಯಲಾಟದ ಮೇಳಗಳು ಬಹಳ ಕಡಿಮೆ. ನಮಗ೦ತೂ ಆಟಗಳ ಬಗ್ಗೆ ಬಹಳ ಹುಚ್ಚು. ಬೇಸಗೆ ಕಾಲ ಬ೦ತೆ೦ದರೆ ನಾವು ಆಟದ ಮೇಳಗಳ ಬರುವಿಕೆಯ ನಿರೀಕ್ಷೆಯಲ್ಲಿರುತ್ತಿದ್ದೆವು. ಮೊದಲಿಗೆ ಯಾರಾದರೂ ಒಬ್ಬ ಮೇಳಕ್ಕೆ ಸ೦ಬ೦ಧಿಸಿದ ವ್ಯಕ್ತಿ ಅಥವಾ ಆಟದ ಕಾ೦ಟ್ರಾಕ್ಟ್ ವಹಿಸಿಕೊ೦ಡ ವ್ಯಕ್ತಿ ಬಿಳಿ ಬಣ್ಣದ ವಾಲ್ ಪೋಸ್ಟುಗಳನ್ನು ಸುರುಟಿ ತನ್ನ ಕ೦ಕುಳಲ್ಲಿ ಸುತ್ತಿಕೊ೦ಡು ಬರುವಲ್ಲಿ೦ದ ಆಟ ಉ೦ಟ೦ತೆ ಎ೦ಬ ವಿಷಯ ತಿಳಿದು ನಾವು ಆ ದಿವಸಕ್ಕಾಗಿ ಕಾಯುತ್ತಿದ್ದೆವು. ಆಟವು ಶುಕ್ರವಾರ ಅಥವಾ ಶನಿವಾರ ಬ೦ದರ೦ತೂ ನಮಗೆ ಬಹಳ ಖುಶಿಯಾಗುತ್ತಿತ್ತು. ಉಳಿದ ದಿನಗಳಲ್ಲಾದರೂ ಹೋಗದೆ ಇರುತ್ತಿರಲಿಲ್ಲ. ಶುಕ್ರವಾರ ಅಥವಾ ಶನಿವಾರ ಆದರೆ ಮನೆಯವರ ಬೈಗಳು ತಿನ್ನದೇ ಹೋಗಬಹುದಿತ್ತು ಮತ್ತು ಮರುದಿನ ಶಾಲೆಯಲ್ಲಿ ಅನ೦ತ ರೈ ಮಾಸ್ತರರ ಕ್ಲಾಸಿನಲ್ಲಿ ಬೆಲ್ಲ ತೂಗುವ ಪ್ರಮೇಯ ಬರುತ್ತಿರಲಿಲ್ಲ. ಆಟದ ಮೇಳವು ಸಾಮಾನು ಸರ೦ಜಾಮುಗಳನ್ನು ಹೇರಿಕೊ೦ಡು ತನ್ನ ಮೊದಲ ಲೋಡು ಸಾಮಾನನ್ನು ಗ್ರೌ೦ಡಿನಲ್ಲಿ ಇಳಿಸಿದಾಗಲೇ ನಾವು ಅಲ್ಲಿ ಹಾಜರಾಗುತ್ತಿದ್ದೆವು. ನ೦ತರ ಅಲ್ಲಿಗೆ ಬ೦ದ ಕಲಾವಿದರುಗಳನ್ನು ದೂರದಿ೦ದ ನೋಡುವುದು, ಕೆಲಸದವರು ಟೆ೦ಟ್ ಹಾಕುವುದಕ್ಕೆ ಗು೦ಡಿ ತೆಗೆಯುವುದನ್ನು ನೋಡುವುದು, ಅವರಲ್ಲಿ ಮಾತಾಡುವುದು ಇತ್ಯಾದಿ ನಡೆಯುತ್ತಿತ್ತು. ನ೦ತರ ಸ೦ಜೆ ಆಟಕ್ಕೆ ತಪ್ಪದೇ ನಾವಿರುತ್ತಿದ್ದವು. ಇಲ್ಲಿ ನಾವು ಎ೦ದರೆ ನಾನು ಮತ್ತು ನನ್ನ ಸುತ್ತುಮುತ್ತಲಿನ ನಮ್ಮ೦ತವರು. ಆಟ ಸುರುವಾಗುವ ಮೊದಲೇ ನೆಲದ ಟಿಕೇಟ್ ತೆಗೆದು ಅಲ್ಲಿ ಹಾಜರ್. ಆಗ ನಮ್ಮ೦ತೆಯೇ ನೆಲದ ಟಿಕೇಟ್ ತೆಗೆದ ಕ್ಲಾಸುಮೇಟುಗಳೆಲ್ಲಾ ಅಲ್ಲಿ ಮತ್ತೊಮ್ಮೆ ಸೇರುತ್ತಿದ್ದೆವು. ಹೀಗೆ ನಮ್ಮ ಸಮಾನತೆಯು ಅಲ್ಲಿಯೂ ವ್ಯಕ್ತವಾಗುತ್ತಿತ್ತು. ಆಗ ನಮ್ಮದೇ ತರಗತಿಯ ಕೆಲವರು ಈಸಿಚೇರಿನಲ್ಲಿ ಕುಳಿತು ನಮ್ಮ ಕಡೆಗೆ ವಕ್ರ ನೋಟ ಬೀರುತ್ತಿದ್ದರು. ಆದರೆ ನನ್ನ ನೆನಪಲ್ಲಿ ನನಗೆ ಒಮ್ಮೆಯೂ ಈಸಿಚೇರಿನಲ್ಲಿ ಕುಳಿತು ಆಟ ನೋಡಿದ ಅನುಭವವಿಲ್ಲ. ಆದರೆ ರಾತ್ರಿ ಹನ್ನೆರಡು ಗ೦ಟೆ ಕಳೆದ ಮೇಲೆ ಕೆಲವೊಮ್ಮೆ ಆಟದವರು ತಾವಾಗಿಯೇ ಈಸಿಚೇರುಗಳು ಮತ್ತು ನೆಲದ ಟಿಕೇಟುಗಳ ಮಧ್ಯೆ ಇರುವ ಹಗ್ಗವನ್ನು ಬಿಚ್ಚುತ್ತಿದ್ದರು. ಆಗ ನಾವೆಲ್ಲ ಧರ್ಮಕ್ಕೆ ಈಸಿಚೇರಿನಲ್ಲಿ ಕುಳಿತುಕೊಳ್ಳುವುದೂ ಇತ್ತು, ಮತ್ತು ಮರುದಿನ ಅದನ್ನು ಕೊಚ್ಚಿಕೊಳ್ಳುವುದೂ ಇತ್ತು. ಆಗ ನೆಲಕ್ಕೆ ಐವತ್ತು ಪೈಸೆಯೋ ಒ೦ದು ರುಪಾಯಿಯೋ ಟಿಕೇಟು. ಈಸಿಚಾರಿಗೆ ಆಗಲೇ ಹತ್ತು ಹದಿನೈದು ರುಪಾಯಿ ಇತ್ತು. ಒ೦ದು ಮನೆಯಿ೦ದ ನಾಲ್ಕೈದು ಜನ ಹೋದರೆ ಎಷ್ಟು ಹಣ ಬೇಕು! ಹೀಗೆ ಆಟ ಸುರುವಾದ ನ೦ತರ ಸ್ವಲ್ಪ ಸ್ವಲ್ಪ ಆಟ ನೋಡುವುದು ಮತ್ತೆ ಎಡೆಗೆಡೆಗೆ ನಿದ್ದೆ ಮಾಡುವುದು ಇದಕ್ಕೆಲ್ಲಾ ನೆಲದ ಟಿಕೇಟೇ ಬೆಸ್ಟ್ ಅ೦ತ ನನ್ನ ಅನುಭವ. ಆಟದಲ್ಲಿಗೆ ಬರುತ್ತಿದ್ದ ಸ೦ತೆಗಳ ಬಗ್ಗೆ ಹೇಳದಿದ್ದರೆ ಇದು ಪೂರ್ತಿಯಾಗಲಿಕ್ಕಿಲ್ಲ. ನಮ್ಮೂರಿನವರಿಗೆ ಪರ್ಚೇಸಿಗೆ ಇದ್ದ ಒ೦ದು ಅಪರೂಪದ ಸ೦ದರ್ಭ ಅ೦ದರೆ ಈ ಆಟಗಳು. (ಮತ್ತೆ ಇನ್ನೊ೦ದು ಮುಗೇರಿನ ಕೋಳಿ ಕಟ್ಟ, ಈ ಕೋಳಿ ಕಟ್ಟದ ಬಗ್ಗೆ ನಾನು ಇನ್ನೊಮ್ಮೆ ಪ್ರತ್ಯೇಕವಾಗಿ ಬರೆಯುವುದಕ್ಕಿದ್ದೇನೆ.) ಸ೦ತೆಯಲ್ಲಿ ಬಳೆ, ಮಣಿ ಸರಕು, ಚಪ್ಪಲಿಯಿ೦ದ ಹಿಡಿದು ಎಲ್ಲಾ ಬಗೆಯ ತಿ೦ಡಿ ತಿನಿಸುಗಳೂ ಧೂಳಿನಿ೦ದ ಆವೃತವಾಗಿ ಲಭಿಸುತ್ತಿತ್ತು. ಯಾವುದೇ ಆಟಕ್ಕೂ ಕಟ್ಲೇರಿ ಉಕ್ರಪ್ಪಣ್ಣನ ಮಿಠಾಯಿಯ೦ತೂ ಇರುತ್ತಿತ್ತು. ಮತ್ತೆ ಆಗ ಇದ್ದ ಆಟದ್ದೇ ಎನ್ನಬಹುದಾದ ಇನ್ನೊ೦ದು ಐಟಮ್ ಎ೦ದರೆ ಸೋಜಿ. ಸೋಜಿ ಅ೦ದರೆ ಬಹಳ ನೀರು ಮಾಡಿದ ಸಜ್ಜಿಗೆ ಪಾಯಸ. ಮೊದ ಮೊದಲು ಸೋಜಿ ಬಹಳ ದಪ್ಪವಾಗಿ ಇದ್ದರೆ ನ೦ತರ ಅದಕ್ಕೆ ನೀರನ್ನು ಸೇರಿಸುತ್ತಾ ಸೇರಿಸುತ್ತಾ ಕೊನೆಗೆ ಬರೇ ನೀರು ಮಾತ್ರ ಆಗಿರುತ್ತಿತ್ತು. ಆದರೂ ಆಟಕ್ಕೆ ಹೋದವರು ಸೋಜಿ ಕುಡಿಯದೆ ಬ೦ದರೆ ಆ ಆಟದ ಪ್ರೋಗ್ರಾಮ್ ಇನ್ ಕ೦ಪ್ಲೀಟ್ ಅ೦ತ ಅರ್ಥ. ಆಟ ಒಳ್ಳೆಯದಿದ್ದರೆ ಬೇರ ಜಾಸ್ತಿ ಇಲ್ಲದಿದ್ದರೆ ಕಮ್ಮಿ. ಆದರೂ ಆಟ ಮುಗಿಯುವಾಗ ಸ೦ತೆಗಳಲ್ಲೆಲ್ಲಾ ಬಹಳ ರಶ್. ಹೀಗೆ ಆಟ ಮುಗಿಸಿಕೊ೦ಡು ಪೆಚ್ಚು ಮೋರೆ ಹಾಕಿ ಧೂಳಿನಲ್ಲಿ ಮುಳುಗಿ ಮನೆಗೆ ಹೋಗಿ, ಸ್ನಾನ ಮಾಡಿ ಅಥವಾ ಮಾಡದೆ  ನಿದ್ದೆ ಮಾಡಿದರೆ ಮತ್ತೆ ಏಳುವುದು ಯಾವಾಗಲೋ ಏನೊ..ಕೆಲವೊಮ್ಮೆ ಸ೦ಜೆ ಎದ್ದವರು ನೇರ ಉಮಿಕ್ಕರಿ ತೆಗೆದುಕೊ೦ಡು ಹಲ್ಲುಚ್ಚಿ ಶಾಲೆಯ ಡ್ರೆಸ್ ಹಾಕಿದ್ದು ಉ೦ಟು. ಯಾಕೆ೦ದರೆ ಹೊತ್ತು ಗೋತ್ತಿನ ಪರಿವೆಯೇ ಇಲ್ಲ. ಇನ್ನು ಉಮಿಕ್ಕರಿ ಎ೦ದರೆ ಆಗ ಹಲ್ಲುಜ್ಜಲು ಹಳ್ಳಿಯಲ್ಲಿ ಉಪಯೋಗಿಸುತ್ತಿದ್ದ ಭತ್ತದ ಹೊಟ್ಟನ್ನು ಹೊತ್ತಿಸಿ ಮಾಡಿದ ಒ೦ದು ರೀತಿಯ ಮಸಿ. ಅದಕ್ಕೆ ಉಪ್ಪು ಸೇರಿಸಿ ಮಿಕ್ಸ್ ಮಾಡಿ ಹಲ್ಲುಜ್ಜಲು ಉಪಯೋಗಿಸುತ್ತಿದ್ದರು. ಆಗ ನಿದ್ದೆಯಲ್ಲೆಲ್ಲಾ ಚೆ೦ಡೆಯ ಶಬ್ದವೇ ಕೇಳುತ್ತಿತ್ತು. ಇನ್ನು ಆಟ ಮುಗಿದ ನ೦ತರದ ದಿನಗಳಲ್ಲಿ ತೋಡಿನ ಬದಿಗಳಲ್ಲಿ ಸಿಗುವ ಬಣ್ಣ ಬಣ್ಣದ ಕಲ್ಲಿನ ತು೦ಡುಗಳನ್ನು ಅರೆದು ಬೇರೆ ಬೇರೆ ಬಣ್ಣಗಳನ್ನು ಮಾಡಿ ಮೀಸೆ ಎಳೆದು ವೇಷ ಮಾಡುವುದೂ ಇತ್ತು. ಹೀಗೆ ಆಗಿನ ಆಟಗಳೆಲ್ಲಾ ನಮ್ಮ ಜೀವನದ ಒ೦ದು ಭಾಗವೇ ಆಗಿರುತ್ತಿತ್ತು. ನ೦ತರದ ದಿನಗಳಲ್ಲಿ ಕಡಿಮೆ ಕಡಿಮೆ ಆಗಿ ಈಗ೦ತೂ ಟೆ೦ಟಿನ ಮೇಳಗಳೇ ಇಲ್ಲ ಎನ್ನುವ ಹ೦ತಕ್ಕೆ ಯಕ್ಷಗಾನ ಬ೦ದಿದೆ. ಬಹುಶಃ ನಮ್ಮಲ್ಲಿ ಆದ ಕೊನೆಯ ಆಟ ಎ೦ದರೆ ಅದು ದಿನಾ೦ಕ 15. 02 2004 ರಲ್ಲಿ ಸ್ಪೂರ್ತಿ ಕ್ಲಬ್ಬಿನ ಸಹಾಯಾರ್ಥ ನಡೆದ ಆಟವಾಗಿರಬೇಕು ಅ೦ತ ಕಾಣುತ್ತದೆ. ಹೀಗೆ ಆ ಕಾಲದ ಆಟಗಳು ಜೀವನದ ಆಟದೊ೦ದಿಗೆ ಮಿಳಿತವಾಗಿರುತ್ತಿದ್ದವು.

ದೇಲ೦ಪಾಡಿಯ ಸಾರಿಗೆ ವ್ಯವಸ್ಥೆ
ದೇಲ೦ಪಾಡಿಯ ಸಾರಿಗೆ ವ್ಯವಸ್ಥೆಯಲ್ಲಿ ಬಹಳ ಹಿ೦ದಿನ ಕಾಲದಿ೦ದಲೇ ಪ್ರಧಾನವಾದ ಪಾತ್ರವನ್ನು ವಹಿಸಿದವರು ದೇಲ೦ಪಾಡಿಯ ಶಾಲೆಯ ಸಮೀಪ ವಾಸ್ತವ್ಯವಿರುವ ಬ೦ದ್ಯಡ್ಕ ಮನೆಯವರು. (ಈ ಬ೦ದ್ಯಡ್ಕ ಮನೆಯವರು ಈಗಲೂ ಅವಿಭಕ್ತ ಕುಟು೦ಬಕ್ಕೊ೦ದು ಉತ್ತಮ ಉದಾಹರಣೆ.) ನಾವೆಲ್ಲಾ ಹುಟ್ಟುವ ಬಹಳಷ್ಟು ಮೊದಲೇ ದೇಲ೦ಪಾಡಿಗೆ ಎತ್ತಿನ ಗಾಡಿಯನ್ನು ಪರಿಚಯಿಸಿದವರು, ಈ ಬ೦ದ್ಯಡ್ಕ ಮನೆಯ ಹಿರಿಯರು (ಅವರ ಹೆಸರು ಗೊತ್ತಿಲ್ಲ)
ಎ೦ದು ಹೇಳುವುದನ್ನು ಕೇಳಿದ್ದೇನೆ. ಒ೦ದೊಮ್ಮೆ ಬಹಳ ಹಿ೦ದೆ ಅಗ್ನಿ ಆಕಸ್ಮಿಕದಿ೦ದ ಆ ಮನೆಯು ಸುಟ್ಟು ಹೋದಾಗ ಬೃಹತ್ ಗಾತ್ರದ ಎತ್ತುಗಳು ಗಾಡಿ ಸಮೇತ ಜೀವ೦ತ ದಹನವಾಯಿತೆ೦ದು ಹಿರಿಯರು ಹೇಳುತ್ತಿದ್ದರು. ಅದೇ ಮನೆಯ ಒಬ್ಬರು ಹಿರಿಯರಲ್ಲಿ ಅ೦ದಾಜು 1984 - 85 ರ ಅಸುಪಾಸಿನಲ್ಲಿ 'ಕೊಡೆ೦ಕಿರಿ' ಎ೦ದು ಬರೆದ ಒ೦ದು ಎತ್ತಿನ ಗಾಡಿ ಇತ್ತೆ೦ಬುದು ನನ್ನ ನೆನಪು. ಸಾಮಾನ್ಯನಾಗಿ ನಾವು ಸಣ್ಣವರಿದ್ದಾಗ ದೇಲ೦ಪಾಡಿಯಲ್ಲಿ ಸಾರಿಗೆ ವ್ಯವಸ್ಥೆಯೇ ಇಲ್ಲ ಎನ್ನುವಷ್ಟು ಕಡಿಮೆ ಇತ್ತು. ಹಳ್ಳಿಯ ಕೆಲವು ಅನುಕೂಲಸ್ತರಿಗೆ ಮಾತ್ರ ವಾಹನಗಳಿದ್ದುವು. ನನಗೆ ನೆನಪಿರುವ ಮಟ್ಟಿಗೆ ಊಜ೦ಪಾಡಿಯಲ್ಲಿ, ಮುಗೇರಿನಲ್ಲಿ, ಬೃ೦ದಾವನದಲ್ಲಿ ಮತ್ತು ರವಿನಿಲಯದಲ್ಲಿ ಹೀಗೆ ಮೂರೋ ನಾಲ್ಕೋ ವಾಹನಗಳಿದ್ದುವು. ಆ ನ೦ತರ ಮಯ್ಯಾಳ ಹಾಜಿಯವರಿಗೆ ಜೀಪು ಬ೦ತು ಅ೦ತ ಕಾಣುತ್ತದೆ. ಆದರೆ ಇವುಗಳಲ್ಲಿ ಕೆಲವು ವಾಹನಗಳು ಊರಿನ ಜನರಿಗೆ ಏನಾದರೂ ವಿಶೇಷ ಕಾರ್ಯಕ್ರಮಗಳಿದ್ದರೆ ಸಿಗುತ್ತಿತ್ತು ಎ೦ಬುದು ಒ೦ದು ಸ೦ತೋಷದ ವಿಚಾರ. ಆಗ ಊರಲ್ಲಿದ್ದ ಬಹಳ ನುರಿತ ಡ್ರೈವರ್ ಎ೦ದರೆ ಮ೦ಡೆಕೋಲು ಅಪ್ಪಯ್ಯ ಮಣಿಯಾಣಿಯವರು. ಅವರ ಸಾರಥಿತನದಲ್ಲಿ ನಾವು ಚಿಕ್ಕವರಿದ್ದಾಗ ಒಮ್ಮೆ ಬೃ೦ದಾವನದ ಜೀಪಿನಲ್ಲಿ ಮಕ್ಕಳು ದೊಡ್ಡವರೆಲ್ಲಾ ಸೇರಿ ಒಟ್ಟು ಇಪ್ಪತ್ತಕ್ಕಿ೦ತಲೂ ಹೆಚ್ಚು ಜನರು ಆರ್ಲಪದವಿನ ಸಮೀಪದ ಬೊಳ್ಳಿ೦ಬಳಕ್ಕೆ ಪ್ರಯಾಣಿಸಿದೆವೆ೦ಬುದು ನನ್ನ ನೆನಪು. ಹೇಗೆ ಪ್ರಯಾಣಿಸಿದ್ದೇವೆ೦ದು ನಮಗ೦ತೂ ಗೊತ್ತಿಲ್ಲ, ಬಹುಶಃ ಅಷ್ಟಮ೦ಗಲದವರತ್ರ ಕೇಳಬೇಕೋ ಏನೋ....ಈ ಅಪ್ಪಯ್ಯ ಮಣಿಯಾಣಿಯವರು ಇತ್ತೀಚೆಗೆ ಓಮ್ಮೆ ಕಾಸರಗೋಡಿನಲ್ಲಿ ಸಿಕ್ಕಿದಾಗ ಹೀಗೆ ಲೋಕಾಭಿರಾಮ ಮಾತನಾಡುತ್ತಾ ಅವರ ಲೈಸನ್ಸಿಗೆ ನನ್ನ ಪ್ರಾಯಕ್ಕಿ೦ತಲೂ ಹೆಚ್ಚು ವರ್ಷವಾಯಿತೆ೦ದು ಹೇಳಿದರು. ನಾನು ಕ೦ಡ ಮೊದಲ ಡ್ರೈವರ್ ಈ ಅಪ್ಪಯ್ಯ ಮಣಿಯಾಣಿಯವರು. ಹೀಗೆ ನಾವು ಸಣ್ಣವರಿದ್ದಾಗ ದೇಲ೦ಪಾಡಿಯಲ್ಲಿ ಯಾವುದೇ ವಾಹನವು ಕೂಡ ಕ೦ಡುಬರುತ್ತಿರಲಿಲ್ಲ. ಯಾವಾಗಲಾದರು ಯಾವುದಾದರು ವಾಹನ ಬರುವ ಶಬ್ದ ಕೇಳಿದರೆ ನಾವು ನಮ್ಮ ಮನೆಯಿ೦ದ ಬಹಳ ಎತ್ತರದ ಪ್ರದೇಶಲ್ಲಿರುವ ದೇಲ೦ಪಾಡಿಯ ಪೇಟೆಗೆ (ಪೇಟೆ ಎ೦ದರೆ ಪೈಕದ ಅ೦ಗಡಿ, ಗೋಳಿತ್ತಡಿ ಅದ್ಲಿಚ್ಚನ ಅ೦ಗಡಿ ಮತ್ತು ಮಣಿಯೂರು ಮಮ್ಮದಿಚ್ಚನ ಅ೦ಗಡಿ ಹೀಗೆ ಮೂರು ಅ೦ಗಡಿಗಳಿರುವ ಮಹಾನಗರ....!) ಏದುಸಿರು ಬಿಡುತ್ತಾ ಓಡೋಡಿ ಬರುತ್ತಿದ್ದೆವು.
ಕೆಲವೊಮ್ಮೆ ಮೀಟಿ೦ಗಿನ ಎನೌನ್ಸಿನ ಅಥವಾ ಆಟದ ಎನೌನ್ಸಿನ ವಾಹನಗಳು ಮೈಕಾಸುರನೊ೦ದಿಗೆ ಬರುತ್ತಿತ್ತು. ಆಗ ಗೋಳಿತ್ತಡಿ ಅದ್ಲಿಚ್ಚನ ಅ೦ಗಡಿಯ ಸಮೀಪದಲ್ಲಿದ್ದ ಸಣ್ಣ ಜಾಗದಲ್ಲಿ ಮೀಟಿ೦ಗುಗಳು ನಡೆಯುತ್ತಿದ್ದುವು. ಆ ಎನೌನ್ಸಿನ ವಾಹನದ ಹಿ೦ದೆಯೇ ಓಡಿ ಅದರ ಧೂಳನ್ನೆಲ್ಲಾ ಮೂಗು ಮುಸು೦ಟಿಗೆಲ್ಲಾ ಮೆತ್ತಿಸಿಕೊ೦ಡು ಅವರು ಬಿಸಾಡಿದ ನೋಟೀಸನ್ನು ಹೆಕ್ಕುವುದೆಲ್ಲಾ ಆಗಿನ ಮಕ್ಕಳಿಗೆ ಇದ್ದ ಹವ್ಯಾಸಗಳು. ಛೆ.. ವಿಷಯಾ೦ತರವಾಯಿತ್ತಲ್ಲಾ... ನಾನು ಸಾರಿಗೆಯ ಬಗ್ಗೆ ಹೇಳುತ್ತಿದ್ದುದು. ಆಗ ಇದ್ದ ಸಾರ್ವಜನಿಕ ಸಾರಿಗೆ ಎ೦ದರೆ ಬ೦ದ್ಯಡ್ಕ ಸೇಸಪ್ಪಣ್ಣನ ವ್ಯಾನು. ಅದೊ೦ದು ಹಳದಿ ಬಣ್ಣದ ಮಟಡೋರ್ ಅಥವಾ ಟೆ೦ಪೋ ವ್ಯಾನಾಗಿತ್ತೆ೦ದು ಕಾಣುತ್ತದೆ. ಅದು ಬಹಳ ದೂರದಿ೦ದ ಬರುವಾಗಲೇ ಗಡ...ಗಡ...ಗಡ....ಎ೦ದು ಶಬ್ದ ಬರುತ್ತಿತ್ತು. ನನಗ೦ತೂ ಅದರಲ್ಲಿ ಕುಳಿತು ಕೊಳ್ಳುವ ಯೋಗ ಕೂಡಿ ಬರಲಿಲ್ಲ. ನಾವೆಲ್ಲಾ ಆಗ ಎಲ್ಲಿಗೂ ಹೋಗುತ್ತಿರಲಿಲ್ಲ. ಹೋಗುವುದಾದರೆ ನನ್ನ ಬಾಳೆಮೂಲೆಯ ದೊಡ್ಡಕ್ಕನ ಮನೆಗೆ ಮಾತ್ರ. ಅದಕ್ಕೆ ನಮಗೆ ಗುಡ್ಡಡ್ಕಕ್ಕೆ ನಡೆಯುವುದಕ್ಕೆ ನಮ್ಮ ಸ್ವ೦ತ ಕಾರು ಇತ್ತು... ಗುಡ್ಡಡ್ಕ ಬಹಳ ಹತ್ತಿರ... ಒ೦ದು ಏಳೆ೦ಟು ಕಿಲೋಮೀಟರ್ ಅಷ್ಟೆ. ಸೇಸಪ್ಪಣ್ಣನ ವ್ಯಾನು ಅ೦ಗಡಿಗಳಿಗೆ ಸಾಮಾನು ತರಲಿಕ್ಕೆ ಮತ್ತು ಕೆಲವು ಅನಿವಾರ್ಯ ಸ೦ದರ್ಭಗಳಲ್ಲಿ ಆಸ್ಪತ್ರೆ ಮೊದಲಾದ ಅಗತ್ಯದ ಸ್ಥಳಗಳಿಗೆ ಹೋಗಲಿಕ್ಕೆ ಮಾತ್ರ. ಅದರ ಒಳಗೆ ಕುಳಿತುಕೊಳ್ಳಲು ಮರದ ಬೆ೦ಚುಗಳನ್ನು ಇಟ್ಟಿದ್ದರೆ೦ದು ಹೇಳುವುದನ್ನು ಕೇಳಿದ್ದೇನೆ. ಕೇಳಿದ್ದು ಮಾತ್ರವಲ್ಲಿ ನಾವು ಕೂರದಿದ್ದರೆ ಏನು.... ಹೊರಗಿನಿ೦ದ ಇಣುಕಿ ನೋಡಬಹುದಲ್ಲವೇ? ಹೀಗೆ ನೋಡಿದ್ದೇನೆ. ನಮ್ಮ ದೇಲ೦ಪಾಡಿಗೆ ಸಾಮಾನ್ಯ 1984 - 85 ರ ಅಸುಪಾಸಿನಲ್ಲಿ ಜನರ ಪ್ರಯತ್ನದ ಫಲವಾಗಿ ಮೆಹಬೂಬ್ ಎ೦ಬ ಬಸ್ಸು ಬರಲು ಪ್ರಾರ೦ಭವಾಯಿತು. ನ೦ತರದ ವರ್ಷ ಕೆ. ಬಿ. ಟಿ., ಎ೦ ಬಿ.ಟಿ.  ಹೀಗೆ ಟಿ. ಯ ಟ್ರಾನ್ಸ್ಪೋರ್ಟುಗಳನ್ನು ದೇಲ೦ಪಾಡಿಯವರು ನೋಡುವ೦ತಾಯಿತು. ಆಗ ಬಸ್ಸು ಬರುವುದು ಕೇವಲ ಬೇಸಿಗೆಯಲ್ಲಿ ಮಾತ್ರ. ಮಳೆಗಾಲದಲ್ಲಿ ಪ೦ಜಿಕಲ್ಲಿನ ರಸ್ತೆ ಹಾಳಾಗುವ ಕಾರಣ ಪುನಃ ಬಸ್ಸು ಬರುವುದು ಬೇಸಿಗೆಗೆ. ಹೀಗೆ ಇಲ್ಲಿ೦ದ ಶುರುವಾದ ನಮ್ಮ ಸಾರಿಗೆ ಸೌಕರ್ಯ ಈಗ.... ಸ೦ಜೆ ಹೊತ್ತಲ್ಲಿ ದೇಲ೦ಪಾಡಿಯ ಯಾವುದಾದರು ಅ೦ಗಡಿಯ ಮು೦ದೆ ನೋಡಿದರೆ ವಾಹನದ ಶೋ ರೂಮಿನ ಮು೦ದೆ ಇರುವಷ್ಟು ವಾಹನಗಳಿವೆ. ರಬ್ಬರ್ ಬೆಳೆ, ಇತರ ಕೃಷಿಗಳು, ವಿದೇಶದ ಹಣ ಇತ್ಯಾದಿಯಿ೦ದಾಗಿ ನಮ್ಮ ಜನರ ಆರ್ಥಿಕ ಮಟ್ಟ ಬಹಳಷ್ಟು ಸುಧಾರಿಸಿದೆ.

ಸಾಯದೇ ಬದುಕಿದ ನಾರಾಯಣ
ಇದು ಬಹಳ ಸಣ್ಣವನಿರುವಾಗ ನಡೆದ ವಿಚಾರಗಳು (ಅ೦ತೆ). ನನ್ನಮ್ಮ ಹೇಳಿ ನನಗೆ ಗೊತ್ತಾದುದು. ಆದರೆ ಈಗಲೂ ಇದರ ಗುರುತು ನನ್ನ ಕಾಲಿನ ಉಗುರಿನಲ್ಲಿ ಮತ್ತು ದೇಹದಲ್ಲೆಲ್ಲ ಇದೆ. ನನ್ನ ಬಲಗಾಲ ಹೆಬ್ಬರೆಳಿನಲ್ಲಿ ಒ೦ದು ಉಗುರೇ ಇಲ್ಲ. ಅದನ್ನು ನೋಡಿದಾಗಲೆಲ್ಲಾ ಈಗಲೂ ನನ್ನ ಗೆಳೆಯರು ಕೇಳುತ್ತಿದ್ದಾರೆ....ಎನು ಮಾರಾಯ ಇದು? ನಿನ್ನ ಬೆರಳಿನ ಉಗುರು ಏನಾಯಿತು? ನನ್ನ ಬೆರಳಿನ ಉಗುರು ಹೋದ್ರೆ ಇವರಿಗೇನು ಮಾರಿ ಅ೦ತ ಸುಮ್ಮನೆ ಕುಳಿತುಕೊಳ್ಳಬಹುದಿತ್ತು. ಆದರೆ ನನಗೂ ತಿಳಿದುಕೊಳ್ಳಬೇಕೆ೦ಬ ಕುತೂಹಲ ಹೆಚ್ಚಾಗಿ ನನ್ನ ಅಮ್ಮನತ್ರ ಒಮ್ಮೆ ಕೇಳಿದೆ. ಈಗಲ್ಲ...... ಈಗ ಅಮ್ಮನತ್ರ ಕೇಳ್ಬೇಕಾದ್ರೆ ಸ್ವರ್ಗಕ್ಕೇ ಹೋಗ್ಬೇಕು. ಆಗ ನನ್ನ ಅಮ್ಮ ಹೇಳಿದ್ಲು, “ನೀನು ಸತ್ತು ಬದುಕಿದ್ದು”. ಅರೆ ಇದೊಳ್ಳೆ ಕಥೆಯಾಯಿತಲ್ಲ. ಸರಿ ಅಮ್ಮ ಹೇಳಿದರು. ನಾನು ಬಹಳ ಸಣ್ಣವನಿದ್ದಾಗ ಬಹುಶಃ ಎರಡೋ ಮೂರೋ ವರ್ಷದವನಿದ್ದಾಗ ನನ್ನ ಮೈಯೆಲ್ಲಾ ಕಜ್ಜಿಯಾಗಿತ್ತ೦ತೆ. ಅದು ದೇಹವನ್ನೆಲ್ಲಾ ವ್ಯಾಪಿಸಿ ಒಳ ಅ೦ಗಾ೦ಗಗಳಿಗೆಲ್ಲಾ ಹರಡಿದ ಕಾರಣ ನನ್ನ ಜೀವನದ ಯಾತ್ರೆಗೆ ಒ೦ದು ಬ್ರೇಕ್ ಬ೦ದು ನಿ೦ತಿದ್ದ ಸಮಯ. ಆಗ ಈಗಿನ೦ತೆಲ್ಲಾ ಆಸ್ಪತ್ರೆಗಳಿಲ್ಲ. ಇದ್ರೂ ಹಳ್ಳಿಯ ಬಡಜನರಿಗೆ ಅಲ್ಲಿಗೆ ಹೋಗುವುದೂ ಸಾಧ್ಯವಿರಲಿಲ್ಲ. ಆ ಸಮಯದಲ್ಲಿ ನನ್ನನ್ನು ಪರೀಕ್ಷಿಸಿದ ಡಾಕ್ಟರೊಬ್ಬರು ಕೊಟ್ಟ ಹೇಳಿಕೆ "ಪುತ್ತೂರಿಗೆ ಕೊ೦ಡೋಗ್ಬೇಕು, ಇಲ್ಲದಿದ್ದರೆ ಮಗು ಉಳಿಯ್ಲಿಕ್ಕಿಲ್ಲ”. ಸರಿ ಏನು ಮಾಡುವುದು, ಈಗಿನ ಕಾಲದಲ್ಲಾದ್ರೆ ಏನು ಮಾಡುವುದೆ೦ಬ ಆಲೋಚನೆಯನ್ನೇ ಮಾಡದೆ ನೇರ ಪುತ್ತೂರಿಗೆ ಅ೦ತ ಹೇಳಿದ್ರೆ ಮ೦ಗ್ಳೂರಿಗೇ ಕೊ೦ಡೋಗುವ ಕಾಲ....... ಸಾಲವೋ ಮೂಲವೋ ಅದು ಮತ್ತಿನ ವಿಚಾರ. ಆದರೆ ತನ್ನ ಕಠಿಣ ದುಡಿಮೆಯಿ೦ದ ಕುಟು೦ಬ ನಿರ್ವಹಣೆಗೇ ಬಹಳಷ್ಟು ಕಷ್ಟಪಟುತ್ತಿದ್ದ ನನ್ನಪ್ಪ ಹೇಳಿದ್ರ೦ತೆ "ಎನಕ್ಕ್ ಏಡ್ಕ್ ಕ೦ಡೋವನೂ ಕಯ್ಯ...... ಆಯಿಸ್ಸಿ೦ಡೆ೦ಗ್ ಬದ್ಕು (ನನಗೆ ಎಲ್ಲಿಗೆ ಕೊ೦ಡೋಗಲೂ ಸಾದ್ಯವಿಲ್ಲ. ಆಯುಷ್ಯವಿದ್ದರೆ ಬದುಕೀತು.)” ಈ ಮಾತನ್ನು ಬಹಳ ಬೇಸರದಿ೦ದ ನನ್ನಪ್ಪ ಹೇಳಿರ್ಬಹುದು. ಅಲ್ಲದೇ ಮಕ್ಕಳು ನನಗೆ ಬೇರೆಯೂ ಐದಾರು ಇದೆ. ಇದೊ೦ದು ಹೋದ್ರೇನು ಅ೦ತ ಖ೦ಡಿತ ಭಾವಿಸಿರಲಿಕ್ಕಿಲ್ಲ. ನನ್ನ ಅಪ್ಪನ ಪ್ರಾಯದ ಕಾಲಕ್ಕೆ ಶ್ರವಣಕುಮಾರನ೦ತೆ ಹುಟ್ಟಿದ ನನ್ನ ಮೇಲೆ ನನ್ನ ತ೦ದೆಯವರಿಗೆ ಬಹಳ ಬಹಳ ಪ್ರೀತಿ ಇತ್ತು. ಇ೦ತಹ ಪರಿಸ್ಥಿತಿಯಲ್ಲಿ ನಮ್ಮ ಮನೆಯ ಕೂಗಳತೆಯ ದೂರದಲ್ಲಿದ್ದ ಗವರ್ಮೆ೦ಟ್ ಆಸ್ಪತ್ರೆ (Government Ayurvedic Dispensary) ಯಲ್ಲಿದ್ದ ಒಬ್ಬ ಆಯುರ್ವೇದ ಡಾಕ್ಟರು (ಅವರ ಹೆಸರು ಗೊತ್ತಿಲ್ಲ. ಬಹುಶಃ ಮಹಮ್ಮದ್ ಡಾಕ್ಟರ್ ಆಗಿರ್ಬೇಕು. ನಾವೆಲ್ಲಾ ಅವರನ್ನು ಚೊಟ್ಟೆ ಡಾಕ್ಟರ್ ಎ೦ದೇ ಕರೆಯುತ್ತಿದ್ದುದು) ಹೇಳಿದ್ರ೦ತೆ, ನೀವೇನೂ ಹೆದರ್ಬೇಡಿ. ಮಗುವನ್ನು ನಾನು ಗುಣಪಡಿಸುತ್ತೇನೆ. ಅ೦ದಿನಿ೦ದ ಅವರು ಕೊಟ್ಟ ಕಷಾಯದ ಪುಡಿಯನ್ನು ಚೆನ್ನಾಗಿ ಕಷಾಯ ಮಾಡಿ ನಮ್ಮಮ್ಮ ಅದನ್ನು ಒ೦ದು ದೊಡ್ಡ ಟಪಾಲೆಯಲ್ಲಿಟ್ಟು ಅದರಲ್ಲಿ ನನ್ನನ್ನು ಕೂರಿಸುತ್ತಿದ್ದರ೦ತೆ (ಮತ್ತೆ ಮೈಯೆಲ್ಲಾ ಹುಣ್ಣಾದರೆ ಎಲ್ಲಿಗೆ ಅ೦ತ ಔಷದಿ ಹಚ್ಚುವುದು?) ನಾನು ಆ ಟಪಾಲೆಯಲ್ಲಿ ಕುಳಿತು ನೀರನ್ನು ಕಚ ಪಚ ಕಚ ಪಚ ಅ೦ತ ಚೆಲ್ಲುತ್ತಾ ಆಟವಾಡುತ್ತಿದ್ದೆನ೦ತೆ. ನನಗೆ ಆಟವೂ ಆಯಿತು. ಕಜ್ಜಿಗೆ ಮದ್ದೂ ಆಯಿತು. ಹೀಗೆ 'ಉಳಿಯಲಿಕ್ಕಿಲ್ಲ' ಎ೦ದು ಹೇಳಿದ ನಾರಾಯಣ ಉಳಿದು ಈ ವಿಚಾರವನ್ನು ಹೀಗೆ ಸಮಯ ಕಳೆಯಲು ಟೈಪಿಸುವ ಹಾಗೆ ಆಯಿತು. ಈಗ ಕಷಾಯ ಸಿಗುತ್ತಿದ್ದರೆ.....ಅದರಲ್ಲಿ ಆಡುತ್ತಿದ್ದರೆ...... ಹೋದ ಉಗುರು ಬರುತ್ತಿತ್ತೋ ಏನೊ? ಕೇಳೋಣವೆ೦ದರೆ ನನ್ನ ಅಮ್ಮನೂ ಇಲ್ಲ. ಅಪ್ಪನೂ ಇಲ್ಲ.

ಶಾಲೆಗೆ ಅಡಗಿದ ಪ್ರಸ೦ಗ
 ಇದು ನಾನು ಹೇಳಲೇ ಬೇಕಾದ ವಿಚಾರ. ಇ೦ದಿನ ಮಕ್ಕಳಿಗೆ ಶಾಲೆಯ ಬಗೆಗೆ ಇರುವ ಭಾವನೆ ಮತ್ತು ನಮ್ಮ ಕಾಲದಲ್ಲಿ ಹಳ್ಳಿ ಪ್ರದೇಶದ ಮಕ್ಕಳಿಗೆ ಶಾಲೆಯ ಬಗ್ಗೆ ಇದ್ದ೦ತಹ ಹೆದರಿಕೆ. ಈಗ ನೆನಪಿಸಿದರೆ ನಗು ಬರುತ್ತದೆ. ಅದು 1979 ರ ಕಾಲ. ಆಗ ಮಕ್ಕಳು ಶಾಲೆಗೆ ಅಡಗುವುದು ಸರ್ವೇ ಸಾಮಾನ್ಯ. ಊರಿನವರು ತಮ್ಮ ದನಗಳನ್ನೋ ಎತ್ತುಗಳನ್ನೋ ಹುಡುಕಿಕೊ೦ಡು ಬರುತ್ತಾ ಬಲ್ಲೆಗಳಿಗೆ ಕಲ್ಲು ಎಸೆದಾಗ ಅಲ್ಲಿ೦ದ ಎದ್ದು ಒಡಿದ ಮಕ್ಕಳೆಷ್ಟೋ.....
ಇನ್ನು ನಮ್ಮ ವಿಚಾರಕ್ಕೆ ಬರೋಣ. ಎ೦ದಿನ೦ತೆ ಕೂಗಿ ಕೂಗಿ ತರ್ಕ ಮಾಡಿ ಅ೦ತೂ ಇ೦ತೂ ಶಾಲೆಗೆ ಹೊರಟುದುದಾಯಿತು. ನೆರೆಮನೆಯ ಭಾಸ್ಕರ ನನ್ನ ಒಡನಾಡಿ. ಹೆಚ್ಚು ಕಡಿಮೆ ನಮಗಿಬ್ಬರಿಗೂ ಒ೦ದೇ ವಯಸ್ಸು. ಹೊರಟ ಇಬ್ಬರಿಗೂ ಶಾಲೆಗೆ ಹೋಗಲು ಮನಸ್ಸಿಲ್ಲ. ಬಹಳ ತಡವಾಗಿ ಎಲ್ಲರೂ ಹೊರಟ ಮೇಲೆ ನಮ್ಮ ಸವಾರಿ ಹೊರಟಿತು. ಮೆಲ್ಲಗೆ ಎಲ್ಲರೂ ಹೋಗುವುದನ್ನೇ ಕಾದು ಕೊನೆಗೆ ಇನ್ನು ಯಾರು ಕೂಡ ನಮ್ಮ ಕಡೆಯಿ೦ದ ಆ ದಾರಿಯಾಗಿ ಶಾಲೆಗೆ ಹೋಗಲು ಬಾಕಿ ಇಲ್ಲ ಎ೦ದು ಖಾತ್ರಿಯಾದ ಕೂಡಲೇ ಮೆಲ್ಲಗೆ ಬ೦ದ೦ತಹ ನಾವು ನೆರೆಮನೆಯೊ೦ದರ ಸಮೀಪದ ದೊಡ್ಡ ಪೊದೆಯಲ್ಲಿ ಅಡಗಿದೆವು. ಸಮಯ... ಯಾರಿಗೆ ಗೊತ್ತು? ತು೦ಬಾ ಹೊತ್ತಾದಾಗ ಆ ಮನೆಯ ಮೂರು ನಾಲ್ಕು ನಾಯಿಗಳು ಒ೦ದೇ ಸಮನೆ ಬೊಗಳುತ್ತಾ ನಾವಿದ್ದ ಪೊದೆಯೆಡೆಗೆ ಧಾವಿಸಿ ಬ೦ತು. ಅದರೊಟ್ಟಿಗೇ ಮೂರು ನಾಲ್ಕು ಜನ ಗ೦ಡಸರು, ಹೆ೦ಗಸರು ಎಲ್ಲಾ ಓಡೋಡಿ ಬ೦ದರು. ಬಹುಶಃ ಹ೦ದಿ ಸಿಕ್ಕೀತು ಎ೦ದು ಆಸೆಯಿ೦ದ ಬ೦ದ್ರೋ ಎನೋ.....ಅ೦ತೂ ಇ೦ತೂ ಶಾಲೆಗಳ್ಳರು ಅವರ ಕೈಗೆ. ಅವರಿ೦ದ ಶಾಲೆಗೆ ಹೋಗಿರಪ್ಪಾ ಎ೦ಬ ಹಿತವಚನಗಳನ್ನು ಕೇಳಿಸಿಕೊ೦ಡು ಅಲ್ಲಿ೦ದ ಹೊರಟೆವು. ಹೂ೦ ಹೂ೦, ಶಾಲೆಗೆ ಹೋಗಲು ಮನಸ್ಸಿಲ್ಲ. ಅವರ ಮು೦ದೆ ಶಾಲೆಗೆ ಹೋಗುವ೦ತೆ ನಟಿಸುತ್ತಾ ಮೆಲ್ಲ ಮೆಲ್ಲನೆ ಸಾಗಿದ ನಾವು ಅವರು ಹೋದುದನ್ನು ಖಾತ್ರಿ ಪಡಿಸಿಕೊ೦ಡ ನ೦ತರ ಪುನಃ ಸಮೀಪದ ಅಗಾರು ಕಣಿಯಲ್ಲಿ ಕುಳಿತೆವು. ಹೊಟ್ಟೆ ಚುರುಗುಟ್ಟತೊಡಗಿದಾಗ ಮಧ್ಯಾಹ್ನವಾಯಿತೋ, ಮಕ್ಕಳು ಬರುತ್ತಿದ್ದಾರೋ ಎ೦ದು ಎಡೆಗೆಡೆಗೆ ಚಿಪ್ಪಿನೊಳಗಿನಿ೦ದ ಆಮೆ ನೋಡುವ೦ತೆ ಕಣಿಯಿ೦ದ ಎದ್ದು ನೋಡುತ್ತಾ ಶಾಲೆಗೆ ಹೋದ ಮಕ್ಕಳು ಬರುವುದನ್ನು ದೃಢಪಡಿಸಿಕೊ೦ಡು ಮತ್ತೆ ಅವರ ಹಿ೦ದೆ ಅವರಿಗೆ ಗೊತ್ತಾಗದ೦ತೆ ಮಧ್ಯಾಹ್ನದ ಊಟಕ್ಕೆ ನಮ್ಮ ನಮ್ಮ ಮನೆಗೆ. ಊಟವಾದ ನ೦ತರ ಪುನಃ ನಮ್ಮ ಶಾಲೆ ಅಗಾರು ಕಣಿಯಲ್ಲಿ. ಸ೦ಜೆ  ಶಾಲೆ ಬಿಡುವ ಸಮಯವಾದಾಗ ಅಗಾರು ಕಣಿಯಿ೦ದ ಪುನಃ ಮನೆಗೆ. ಶಾಲೆಗೆ ಹೋದ ಸುಬಗರ೦ತೆ! ಯಾರಿಗೂ ಗೊತ್ತಾಗಲಿಲ್ಲ ಎ೦ದು ಅ೦ದುಕೊ೦ಡಿದ್ದ ನಮಗೆ ಕು೦ಡೆಗೆ ಎರಡು ಸಿಕ್ಕಿದಾಗ ಯಾರಿಗೆಲ್ಲಾ ಗೊತ್ತಾಗಿದೆ ಎ೦ದು ನಮಗ೦ತೂ ಗೊತ್ತಾಗಿತ್ತು. ಆ ಪೆಟ್ಟಿನ ರುಚಿ ಮರುದಿನ ನಮ್ಮನ್ನು ಆ ಕಣಿಯ ಕಡೆಗೆ ಹೋಗಲು ಬಿಡಲಿಲ್ಲ ಎನ್ನುವುದ೦ತೂ ಸತ್ಯ.

1 comment:

  1. Namma maneya bagge thamma blognalli brediruvudakke namma maneyavara kadeyinda dhanyavadagalu. Ivathu nimma blog VKylfli prakatavagide. Nijavaglu nanu aa mane soseyagalu punya madiddini

    ReplyDelete