ಸುದ್ದಿ ಚಿತ್ರ



ಶಿಸ್ತು, ಸಂಯಮ, ಕಲಾರಾಧನೆ.... ಮಾಸ್ತರರಿಂದ ಕಲಿಯಬೇಕು
ಇನ್ನೊಬ್ಬ ಕಲಾವಿದನ  ಪ್ರದರ್ಶನವನ್ನು ನೋಡಿ ಆಸ್ವಾದಿಸುವ ಪ್ರೀತಿ, ತಮ್ಮ  ಅನುಭವದ ನುಡಿಗಳಿಂದ ನೀಡುವ ಸಲಹೆಯಿಂದ ಅವರನ್ನು ಮೇಲೆತ್ತುವ ಕಲಾನಿಷ್ಠೆ, ತಾಳ್ಮೆ ಸಂಯಮ  ಹಿರಿಯ ಕಲಾವಿದರಲ್ಲಿತ್ತು.  ಕಲಾ ರಂಗದಲ್ಲಿ ನಿರಂತರ ಬೆಳವಣಿಗೆ, ಶಿಸ್ತು ಇದರಿಂದ ಸಾಧ್ಯ. ತಮ್ಮ ಕಲಾ ಪ್ರದರ್ಶನದ ಅನಂತರ ಜಾಗ ಖಾಲೀ ಮಾಡುವ  ಈಗಿನವರ ಪ್ರವೃತ್ತಿ ಸಲ್ಲದು. ಕೀರಿಕ್ಕಾಡು ಮಾಸ್ತರ್ ವಿಷ್ಣು ಭಟ್ಟರದು ಕಲಾ ನಿಷ್ಠ ಬದುಕು. ಇತರ ಕಲಾವಿದರನ್ನು ಬೆಳೆಸುವ ಗುರುತ್ವ ಅವರಲ್ಲಿತ್ತು. ಶಿಸ್ತು ಬದ್ದ ಬದುಕು ಇದ್ದುದರಿಂದಲೇ ನೂರಕ್ಕಿಂತಲೂ ಅಧಿಕ  ಪ್ರಸಂಗ ರಚನೆಯ ಸಾಧನೆ ಅವರಿಂದ  ಸಾಧ್ಯ ಆಯಿತು ಅವರ  ಕುರಿತು ಇರುವ  ಅಪಾರ ಮಾಹಿತಿಗಳು ಕಿರಿಯ ಕಲಾವಿದರಿಗೆ  ದಾರಿದೀಪ ವಾಗಬಲ್ಲುದು'' ಎಂಬುದಾಗಿ ಎಡನೀರು ಶ್ರೀ ಮಠದಲ್ಲಿ  ನಡೆದ ಯಕ್ಷಗಾನ ಕುಲಪತಿ ಕೀರಿಕ್ಕಾಡ್ ಮಾಸ್ತರ್ ವಿಷ್ಣು ಭಟ್ ರ ಜನ್ಮ ಶತಮಾನೋತ್ಸವ ಸಮಾರೋಪ  ಕಾರ್ಯಕ್ರಮದಲ್ಲಿ ಮಠಾದೀಶರಾದ ಶ್ರೀ ಕೇಶವಾನಂದ ಭಾರತಿ ಶ್ರೀ ಪಾದಂಗಳವರು ಅನುಗ್ರಹ ಮಾತುಗಳನ್ನು ನುಡಿದರು.


 ನ್ಯಾಯವಾದಿ ಐ ವಿ ಭಟ್  ಅಧ್ಯ ಕ್ಷತೆ ವಹಿಸಿದ್ದರು ಡಾ ಯು ಶಂಕರನಾರಾಯಣ ಭಟ್ ನುಡಿನಮನ ಸಲ್ಲಿಸಿದರು ಎ ನರಸಿಂಹ ಭಟ್, ವಿದ್ವಾನ್ ಕೆ ಬಾಬು ರೈ, ಅಡ್ಕ ಗೋಪಾಲಕೃಷ್ಣ ಭಟ್ ಅವರಿಗೆ ಕೀರಿಕ್ಕಾಡ್ ಮಾಸ್ತರ್ ವಿಷ್ಣು ಭಟ್ ರ ಜನ್ಮ ಶತಮಾನೋತ್ಸವ ಪುರಸ್ಕಾರ ನೀಡಿ ಗೌರವಿಸಲಾಯಿತು ಡಾ ರಮಾನಂದ ಬನಾರಿ ಮಂಜೇಶ್ವರ ಅವರು ಅಭಿನಂದನಾ ಭಾಷಣಗೈದರು. ಶ್ರೀ ರಾಜೇಂದ್ರ ಕಲ್ಲೂರಾಯ ಕಾರ್ಯಕ್ರಮ ನಿರ್ವಹಣೆ ಮಾಡಿದರು ಪ್ರೊ ಪಿ ಏನ್ ಮೂಡಿತ್ತಾಯ ಸ್ವಾಗತ ಭಾಷಣ ಗೈದರು. ಶ್ರೀ ನಾರಾಯಣ ಮಾಸ್ತರ್ ದೇಲಂಪಾಡಿ ಧನ್ಯವಾದ ನೀಡಿದರು .
ಡಾ. ಅಮೃತ ಸೋಮೇಶ್ವರರವರಿಗೆ ಕೀರಿಕ್ಕಾಡು ಪ್ರಶಸ್ತಿ ಪ್ರದಾನ - 04.01.2014

ಮಂಜೇಶ್ವರ; ಬನಾರಿ ಶ್ರೀ ಗೋಪಾಲಕೃಷ್ಣ ಯಕ್ಷಗಾನ ಕಲಾಸಂಘ, ದೇಲಂಪಾಡಿ ತಮ್ಮ 69 ನೆ ವಾರ್ಷಿಕೋತ್ಸವ ಸಂದರ್ಭದಲ್ಲಿ ಘೋಷಿಸಿದ 'ಕೀರಿಕ್ಕಾಡು ಪ್ರಶಸ್ತಿ' ಯನ್ನು ಖ್ಯಾತ ಸಾಹಿತಿ, ಯಕ್ಷಗಾನ ಜಾನಪದ ವಿದ್ವಾಂಸ ಡಾ. ಅಮೃತ ಸೋಮೇಶ್ವರರವರಿಗೆ ಅವರ ಸ್ವಗೃಹ 'ಒಲುಮೆ'ಯಲ್ಲಿ ಸಾಹಿತಿ, ಅರ್ಥಧಾರಿ ಡಾ ರಮಾನಂದ ಬನಾರಿ, ಮಂಜೇಶ್ವರ ಪ್ರಶಸ್ತಿ ಫಲಕ, ಸ್ಮರಣಿಕೆ, ನಗದು, ಶಾಲು ಹೊದೆಸಿ ಗೌರವಿಸಿದರು.

'ಕೀರಿಕ್ಕಾಡು ಮಾಸ್ತರರ ತಪೋಭೂಮಿ ದೇಲಂಪಾಡಿ ಬನಾರಿಯಲ್ಲಿ ನೀಡಲು ಉದ್ದ್ದೇಶಿಸಿದ ಪ್ರಶಸ್ತಿಯನ್ನು ಒಲುಮೆಯಲ್ಲಿ ನೀಡುತ್ತಿದ್ದೇವೆ. ಮುಕ್ತ ಮನಸ್ಸಿನಿಂದ ಬರೆಯುವ, ಮಾತನಾಡುವ ಅಮೃತರಲ್ಲಿ ಸಮತೋಲನ ಸಮನ್ವಯತೆಯ ವಿಶಿಷ್ಟತೆ ಇದೆ. ವಿವಿಧ ಕಲಾ ಪ್ರಾಕಾರಗಳಿಗೆ ಅವರು ನೀಡಿದ ಕೊಡುಗೆ ಅಪಾರವಾದುದು. ತಮ್ಮ ಕ್ರಿಯಾಶೀಲತೆಯಲ್ಲಿ ಅನನ್ಯತೆಯನ್ನೂ ಅಮೃತವನ್ನೂ ಸಮಾಜಕ್ಕೆ ನೀಡಿದ್ದಾರೆ. ದಿ. ಮಾಸ್ತರ್ ವಿಷ್ಣು ಭಟ್ಟರು ಈ ಗುಣವನ್ನು ಪ್ರೀತಿಸುತ್ತಿದ್ದರು' ಎ೦ಬುದಾಗಿ ಡಾ ಬನಾರಿಯವರು ಪ್ರಶಸ್ತಿ ಪ್ರಧಾನ ಮಾಡುತ್ತಾ ನುಡಿದರು.
'ಮಾಸ್ತರರು ಯಕ್ಷ ರಂಗದ ಕುಲಪತಿಗಳು. ಸೃಷ್ಟಿ -ಲಯ ಎಲ್ಲದರಲ್ಲೂ ಇದೆ ಆದರೆ ಅವರಲ್ಲಿ ಸೃಷ್ಟಿ -ದೃಷ್ಟಿ ಅದ್ಭುತವಾಗಿ ಮೇಳೈಸಿತ್ತು' ಎ೦ಬುದಾಗಿ ಪ್ರಶಸ್ತಿ ಸ್ವೀಕರಿಸುತ್ತಾ ಡಾ ಅಮೃತರು ತಮ್ಮ ಅನಿಸಿಕೆ ವ್ಯಕ್ತ ಪಡಿಸಿದರು. ನಾರಾಯಣ ಮಾಸ್ಟರ್ ದೇಲಂಪಾಡಿ ಪ್ರಾಸ್ತಾವಿಕವಾಗಿ ನುಡಿಯುತ್ತಾ 'ಗೌರವಾನ್ವಿತ ಪ್ರಶಸ್ತಿಗಳಲ್ಲಿ ಒಂದಾದ 'ಕೀರಿಕ್ಕಾಡು ಪ್ರಶಸ್ತಿ ಹಿಂದೆ ಗಣ್ಯರಾದ ಶೇಣಿ, ಕುಂಬಳೆ, ಪುಣಿಂಚಿತ್ತಾಯ, ಬಲಿಪ, ಪೆರುವೋಡಿ, ಕೇದಗಡಿ, ಹೆಚ್ ಬಿ ಎಲ್ ರಾವ್ ಮುಂಬಯಿ ಮುಂತಾದವರಿಗೆ ಸಂದಿದೆ. ಕಲೆ, ಸಾಹಿತ್ಯ, ಸಂಘಟನೆ, ಗ್ರಾಮೀಣ ಕ್ಷೇತ್ರಕ್ಕೆ ಗಣನೀಯ ಕೊಡುಗೆ ನೀಡಿದವರಿಗೆ ಈ ಪ್ರಶಸ್ತಿಯನ್ನು ಕಲಾ ಸಂಘದ ವತಿಯಿಂದ ಪ್ರತಿ ವರ್ಷವೂ ಕೊಡುತ್ತಿದ್ದೇವೆ. ಅಮೃತರ ಶಾರೀರಿಕ ವೃದ್ದಾಪ್ಯ ಕಾರಣಗಳಿಂದಾಗಿ ಅವರ ಮನೆಯಲ್ಲೇ ನೀಡಿ ಗೌರವಿಸುತ್ತೇವೆ ಎ೦ದು ನುಡಿದರು. ಕೆ ಸದಾಶಿವ ಮಾಸ್ತರ್ ಕೋಟೆಕ್ಕಾರ್, ದೀಪಕ್ ಮಂಜೇಶ್ವರ, ಚಂದ್ರಶೇಖರ್ ಏತಡ್ಕ ಮತ್ತು ಸಂಘದ ಸದಸ್ಯರು ಉಪಸ್ಥಿತರಿದ್ದರು.

ಬನಾರಿ ಶ್ರೀ ಗೋಪಾಲಕೃಷ್ಣ ಯಕ್ಷಗಾನ ಕಲಾ ಸಂಘದ 69 ನೇ ವಾರ್ಷಿಕೋತ್ಸವ ಮತ್ತು ಕೀರಿಕ್ಕಾಡು ಮಾಸ್ತರ್ ವಿಷ್ಣು ಭಟ್ಟರ ಜನ್ಮಶತಮಾನೋತ್ಸವ ಕಾರ್ಯಕ್ರಮ 28.12.2013 ಶನಿವಾರ
ದೇಲಂಪಾಡಿಗೆ ಸಾಂಸ್ಕೃತಿಕವಾಗಿ ಭದ್ರವಾದ ಅಡಿಪಾಯವನ್ನು ಕೊಟ್ಟ ಮಹನೀಯರು ಕೀರಿಕ್ಕಾಡು ಮಾಸ್ತರರು. ಈ ಗಡಿನಾಡಿನಲ್ಲಿ ಯಕ್ಷಗಾನ ಸಂಸ್ಥೆಯನ್ನು ಸ್ಥಾಪಿಸುವುದರ ಮೂಲಕ ಬಹಳ ಹಿಂದೆಯೇ ಸಾಂಸ್ಕೃತಿಕ ಪುರೋಗತಿಯ ಕನಸು ಕಂಡ ಮಾಸ್ತರರ ಕಲಾ ಸೇವೆಯನ್ನು ಚಿರಸ್ಥಾಯಿಯಾಗಿಸುವುದರ ಮೂಲಕ ಮುಂದಿನ ತಲೆಮಾರಿಗೂ ಉಳಿಸಿಕೊಡಬೇಕಾದ ಅಗತ್ಯವಿದೆ. ಈ ನಿಟ್ಟಿನಲ್ಲಿ ಯಕ್ಷಗಾನ ಅದ್ಯಯನ ಕೇಂದ್ರ ಎ೦ಬ ನೆಲೆಯಲ್ಲಿ ಪ್ರಾರಂಭಿಸಿದ ಯೋಜನೆಯನ್ನು ಪೂರ್ತಿಗೊಳಿಸುವುದರಲ್ಲಿ ಎಲ್ಲಾ ವಿಧದ ಸಹಾಯ ಸಹಕಾರಗಳನ್ನು ಮುಂದುವರಿಸಲಾಗುವುದು. ದೇಲಂಪಾಡಿ ಬನಾರಿಯ ಯಕ್ಷಗಾನ ಕಲಾ ಸಂಘವು ಈ ಕಲೆಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಮಹತ್ತರವಾದ ಒಂದು ಸಂಸ್ಥೆಯಾಗಿ ಬೆಳೆದು ಬರಬೇಕು. ತನ್ಮೂಲಕ ಇಲ್ಲಿ 68 ವರ್ಷಗಳ ಹಿಂದೆ ಪ್ರಾರಂಭವಾದ ಸಾಂಸ್ಕೃತಿಕ ಸೌರಭವು ನಾಡಿನೆಲ್ಲೆಡೆ ಪಸರಿಸಿ, ಕಲೆಯ ಉಳಿವಿನಲ್ಲಿಯೂ ಬೆಳವಣಿಗೆಯಲ್ಲಿಯೂ, ಹೊಸ ತಲೆಮಾರಿನ ಜನರನ್ನು ಈ ಕಲೆಯತ್ತ ಆಕರ್ಷಿಸುವಂತೆ ಮಾಡುವಲ್ಲಿಯೂ ಮಹತ್ತರವಾದ ಪಾತ್ರವನ್ನು ತೆಂಕುತಿಟ್ಟು ಯಕ್ಷಗಾನದ ತರಬೇತಿಯ ಪ್ರಥಮ ಕಲಾಕೇಂದ್ರ ಎ೦ಬ ನೆಲೆಯಲ್ಲಿ ಬನಾರಿ ಶ್ರೀ ಗೋಪಾಲಕೃಷ್ಣ ಯಕ್ಷಗಾನ ಕಲಾ ಸಂಘವು ನಿರ್ವಹಿಸಬೇಕೆಂದು ಕರ್ನಾಟಕದ ಮಾಜಿ ಮುಖ್ಯಮಂತ್ರಿಗಳೂ, ವಿಧಾನ ಪರಿಷತ್ತಿನ ವಿರೋಧ ಪಕ್ಷದ ನಾಯಕರೂ ಆದ ಸನ್ಮಾನ್ಯ ಶ್ರೀ ಡಿ.ವಿ. ಸದಾನಂದ ಗೌಡರು ನುಡಿದರು.
ಅವರು ದೇಲಂಪಾಡಿ ಬನಾರಿ ಶ್ರೀ ಗೋಪಾಲಕೃಷ್ಣ ಯಕ್ಷಗಾನ ಕಲಾ ಸಂಘದ 69 ನೇ ವಾರ್ಷಿಕೋತ್ಸವ ಮತ್ತು ಕೀರಿಕ್ಕಾಡು ಮಾಸ್ತರ್ ವಿಷ್ಣು ಭಟ್ಟರ ಜನ್ಮಶತಮಾನೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ತನ್ನ ಬಾಲ್ಯ ಕಾಲದಲ್ಲಿ ಈ ಕಲಾ ಸಂಘದೊಂದಿಗೆ ತಾನು ಹೊಂದಿದ್ದ ಸಂಬಂಧವನ್ನು ಅವರು ಈ ಸಂದರ್ಭದಲ್ಲಿ ಮೆಲುಕು ಹಾಕಿದರು.
ಶ್ರೀ ಎ ನಾರಾಯಣ ನಾಯ್ಕ್ ಅಧ್ಯಕ್ಷತೆ ವಹಿಸಿದ್ದ ಕಾರ್ಯಕ್ರಮದಲ್ಲಿ ಶ್ರೀ ಎಡನೀರು ಮಠಾಧೀಶ ಶ್ರೀ ಶ್ರೀ ಶ್ರೀ ಕೇಶವಾನಂದ ಭಾರತಿ ಶ್ರೀಪಾದಂಗಳವರು ಆಶೀರ್ವಚನ ನೀಡಿದರು
ಕೀರಿಕ್ಕಾಡು ಮಾಸ್ತರರ ಕವಿತಾ ಸಂಕಲನವಾದ 'ಕಾವ್ಯಕುಸುಮಗಳು' ಕೃತಿಯ ಎರಡನೇ ಆವೃತ್ತಿಯನ್ನು ಕಾಸರಗೋಡು ಸಂಸದ ಸನ್ಮಾನ್ಯ ಶ್ರೀ ಪಿ ಕರುಣಾಕರನ್ ಬಿಡುಗಡೆಗೊಳಿಸಿ ಮಾತನಾಡಿ, ಭಾಷಾ ಸಂಗಮಭೂಮಿಯಾದ ಕಾಸರಗೋಡಿನ ವೈವಿಧ್ಯಪೂರ್ಣವಾದ ಕಲೆ ಮತ್ತು ಸಂಸೃತಿಯನ್ನು ಉಳಿಸಿ ಬೆಳೆಸಬೇಕಾದ ಅಗತ್ಯವನ್ನು ಒತ್ತಿ ಹೇಳಿದರು. ಮಾತ್ರವಲ್ಲದೆ ತುಳು ಭಾಷೆಯನ್ನು ಸಂವಿಧಾನದ ಎ೦ಟನೇ ಪರಿಚ್ಛದದಲ್ಲಿ ಸೇರಿಸಬೇಕಾದ ಅಗತ್ಯವನ್ನು ಅದಕ್ಕಾಗಿ ತಾನು ಕೈಗೊಂಡ ಪ್ರಯತ್ನವನ್ನೂ ತಿಳಿಸಿದರು.
ಖ್ಯಾತ ಸಾಹಿತಿ, ಜಾನಪದ ವಿದ್ವಾಂಸ, ಯಕ್ಷಗಾನ ಪ್ರಸಂಗಕರ್ತೃ ಡಾ. ಅಮೃತ ಸೋಮೇಶ್ವರರಿಗೆ ಈ ವರ್ಷದ ಕೀರಿಕ್ಕಾಡು ಪ್ರಶಸ್ತಿಯನ್ನು ಕೊಡಲಾಯಿತು. ಕಾರ್ಯಕ್ರಮದಲ್ಲಿ ಖ್ಯಾತ ಮದ್ದಳಗಾರರೂ ಹಿಮ್ಮೇಳ ಶಿಕ್ಷಕರೂ ಆದ ಶ್ರೀ ಮಾಂಬಾಡಿ ಸುಬ್ರಹ್ಮಣ್ಯ ಭಟ್ಟರಿಗೆ ಕೀರಿಕ್ಕಾಡು ಜನ್ಮಶತಮಾನೋತ್ಸವ ಪುರಸ್ಕಾರವನ್ನು ನೀಡಲಾಯಿತು.
'ಗ್ರಾಮಾಭ್ಯುದಯದ ಪರಿಕಲ್ಪನೆಗೆ ಕೀರಿಕ್ಕಾಡು ಮಾಸ್ತರರ ಕೊಡುಗೆ' ಎ೦ಬ ವಿಷಯದಲ್ಲಿ ತನ್ನ ವಿದ್ವತ್ಪೂರ್ಣ ವಿಚಾರಗಳನ್ನು ಮಂಡಿಸಿ ಮಂಗಳೂರು ಆಕಾಶವಾಣಿ ಕೇಂದ್ರದ ನಿಲಯ ನಿರ್ದೇಶಕರಾದ ಡಾ. ವಸಂತ ಕುಮಾರ್ ಪೆರ್ಲರವರು ಕೀರಿಕ್ಕಾಡು ಸಂಸ್ಮರಣೆಯನ್ನು ಮಾಡಿದರು. ಲೇಖಕ ವಿಮರ್ಶಕ ಡಾ. ಸುಂದರ ಕೇನಾಜೆ ಅಭಿನಂದನೆ ಮಾಡಿದರು
ಕಲಾ ಸಂಘದ ಅಧ್ಯಕ್ಷರಾದ ಶ್ರೀ. ಕೀರಿಕ್ಕಾಡು ವನಮಾಲ ಕೇಶವ ಭಟ್ಟರು ವೇದಿಕೆಯಲ್ಲಿ ಆಸೀನರಿದ್ದು ಸಲಹೆ ಸೂಚನೆಗಳನ್ನು ನೀಡಿದರು. ಡಾ. ರಮಾನಂದ ಬನಾರಿಯವರು ಅತಿಥಿಗಳನ್ನು ಸ್ವಾಗತಿಸಿ ಪ್ರಾಸ್ತಾವಿಕ ಭಾಷಣ ಮಾಡಿದರು.
ಶ್ರೀ ನಾರಾಯಣ ದೇಲಂಪಾಡಿ ನಿರ್ವಹಿಸಿದ ಕಾರ್ಯಕ್ರಮದಲ್ಲಿ ಶ್ರೀ ರಾಮಣ್ಣ ಮಾಸ್ತರ್ ಧನ್ಯವಾದವಿತ್ತರು. ಸಭಾಕಾರ್ಯಕ್ರಮದ ನಂತರ ಪ್ರಸಿದ್ಧ ಅರ್ಥದಾರಿ ಜಬ್ಬಾರ್ ಸಮೊ ಸಂಪಾಜೆಯವರಿಂದ ಮೆಚ್ಚುನುಡಿ ನಮನ ಎ೦ಬ ವಿಶಿಷ್ಟ ಕಾರ್ಯಕ್ರಮವು ಜರಗಿತು. ಕಲಾ ಸಂಘದ ಕಾರ್ಯದರ್ಶಿಯವರಾದ ಶ್ರೀ ವಿಶ್ವವಿನೊದ ಬನಾರಿ, ಉಪಾಧ್ಯಕ್ಷರಾದ ಶ್ರೀ ಮನಮೋಹನ ಬನಾರಿ ಮತ್ತು ಶ್ರೀ ಶಿವಕುಮಾರ ಬನಾರಿಯವರು ವಿವಿಧ ಕಾರ್ಯಕ್ರಮಗಳ ಸಂಯೋಜನೆಯಲ್ಲಿ ನೇತೃತ್ವ ವಹಿಸಿದರು.
ಕಾರ್ಯಕ್ರಮದ ಅಂಗವಾಗಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸದಸ್ಯರಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಯೋಜನೆಯ ಸೇವಾ ಪ್ರತಿನಿಧಿ ಶ್ರೀಮತಿ ಹರ್ಷಿತಾ ಬಂದ್ಯಡ್ಕ ಮತ್ತು ಅಧ್ಯಕ್ಷರಾದ ಶ್ರೀ ಕೊರಗಪ್ಪ ಗೌಡ ಬಂದ್ಯಡ್ಕ ಇವರ ನೇತೃತ್ವದಲ್ಲಿ ನಡೆಯಿತು. ತದನಂತರ ಕುಮಾರಿ ಚಿತ್ರಕಲಾ ಚೆನ್ನಿಕೆರೆ ಬನಾರಿ ಮತ್ತು ಶ್ರೀಮತಿ ಸರೋಜಿನಿ ಬನಾರಿಯವರ ನಿರ್ದೇಶನದಲ್ಲಿ ಹಿರಿಯ ಮತ್ತು ಕಿರಿಯ ಕಲಾಪ್ರತಿಭೆಗಳಿಂದ ವಿವಿಧ ಕಲಾ ಕಾರ್ಯಕ್ರಮಗಳು ಜರಗಿದವು.
ಸಂಘದ ಸದಸ್ಯರಿಂದ ಜರಾಸಂಧ ವಧೆ ಎ೦ಬ ಯಕ್ಷಗಾನ ತಾಳಮದ್ದಳೆ, ಶ್ರೀಮತಿ ಸರೊಜಿನಿ ಬನಾರಿ ಇವರ ಶಿಷ್ಯವೃಂದದವರಿಂದ ಶ್ರೀ ವಿಷ್ಣು ಶರಣ ಬನಾರಿಯವರ ಮಾರ್ಗದರ್ಶನದೊಂದಿಗೆ ಏಕವ್ಯಕ್ತಿ ಯಕ್ಷಗಾನ ಪ್ರದರ್ಶನ ಮತ್ತು ಕಂಸವಧೆ ಎ೦ಬ ಯಕ್ಷಗಾನ ಬಯಲಾಟವು ಪುಟಾಣಿ ಮಕ್ಕಳಿಂದ ಜರಗಿತು.  
ಸಂಜೆ ಪ್ರಸಿದ್ಧ ಕಲಾವಿದರಾದ ಶ್ರೀ ಜಬ್ಬಾರ್ ಸಮೊ, ಡಾ. ರಮಾನಂದ ಬನಾರಿ, ಶ್ರೀ ವೆಂಕಟರಾಮ ಭಟ್ಟ ಸುಳ್ಯ, ಶ್ರೀ ಸೇರಾಜೆ ಸೀತಾರಾಮ ಭಟ್ಟ ಮತ್ತು ಶ್ರೀ ನಾರಾಯಣ ತೋರಣಗಂಡಿ ಇವರಿಂದ ಕರ್ಣ ಪರ್ವ ಎ೦ಬ ಯಕ್ಷಗಾನ ತಾಳಮದ್ಧಳೆ ನಡೆಯಿತು.  
ತದನಂತರ ಯಕ್ಷಸಿರಿ ಕಲಾವೇದಿಕೆ ಖಂಡಿಗೆಮೂಲೆ ಐವರ್ನಾಡು ಸುಳ್ಯ ಇವರ ಸಹಯೋಗದೊಂದಿಗೆ ಸಂಘದ ಸದಸ್ಯರ ಕೂಡುವಿಕೆಯಿಂದ ನರಕಾಸುರ ವಧೆ ಎ೦ಬ ಯಕ್ಷಗಾನ ಬಯಲಾಟವು ಮಹಿಳೆಯರಿಂದಲೇ ನಡೆಯಿತು
ರಾತ್ರಿ ಗಂಟೆ 12ರಿಂದ ತೆಂಕುತಿಟ್ಟಿನ ಸುಪ್ರಸಿದ್ಧ ಭಾಗವತರಾದ ಶ್ರೀ ಕುರ್ಯ ಗಣಪತಿ ಶಾಸ್ತ್ರಿಗಳ ನೇತೃತ್ವದಲ್ಲಿ ಶ್ರೀ ದೇವೀ ಮಾಹಾತ್ಮ್ಯೆ ಎ೦ಬ ಯಕ್ಷಗಾನ ಬಯಲಾಟವು ಸಂಘದ ಕಲಾವಿದರಿಂದ ಮತ್ತು ಅತಿಥಿ ಕಲಾವಿದರ ಕೂಡುವಿಕೆಯಿಂದ ನೆರವೇರಿತು
















ಹೀಗೆ 24 ಗಂಟೆಗಳ ಕಾಲ ಅತ್ಯುತ್ತಮ ರೀತಿಯಲ್ಲಿ ಮೂಡಿಬಂದ ದೇಲಂಪಾಡಿ ಬನಾರಿಯ ವಾರ್ಷಿಕೋತ್ಸವದ ಈ ಯಕ್ಷಕಲಾ ಕಾರ್ಯಕ್ರಮಗಳು ನಾಡಿನ ಸಮಸ್ತ ಕಲಾಪ್ರೇಮಿಗಳಿಗೆ ಮುದ ನೀಡಿತು.






ನಾಗ ಪ್ರತಿಷ್ಠಾ ವಾರ್ಷಿಕೋತ್ಸವ ಮತ್ತು ಉಚಿತ ಆರೋಗ್ಯ ಶಿಬಿರ
ದೇಲ೦ಪಾಡಿಯ ಮುದಿಯಾರಿನಲ್ಲಿ ಶ್ರೀ ನಾಗೇ೦ದ್ರ ಸನ್ನಿಧಿಯ ಏಳನೇ ವರ್ಷದ ವಾರ್ಷಿಕೋತ್ಸವವು ದಿನಾ೦ಕ 13.04.2013 ರ೦ದು ನೆರವೇರಿತು. ಧಾರ್ಮಿಕ ಕಾರ್ಯಕ್ರಮವನ್ನು ಶ್ರೀ ತೋಟದಮನೆ ಶಿವರಾಮ ಶರಳಾಯರು ನೆರವೇರಿಸಿಕೊಟ್ಟರು. ಇದರ ಭಾಗವಾಗಿ ಈ ಕುಟು೦ಬದವರೇ ಆದ ಪ್ರಸ್ತುತ ಮ೦ಜೇಶ್ವರ ಸರಕಾರಿ ಆಸ್ಪತ್ರೆಯಲ್ಲಿ ವೈದ್ಯಾಧಿಕಾರಿಯಾಗಿರುವ ಡಾ. ಪ್ರಭಾಕರ ರೈ ಮುದಿಯಾರು ಮತ್ತು ಅವರ ಪತ್ನಿ ಶ್ರೀಮತಿ ಡಾ. ಶಾರಿಕಾ ಪ್ರಭಾಕರ ರೈಯವರ ನೇತೃತ್ವದಲ್ಲಿ ಉಚಿತ ಅಲೋಪಥಿ ಮತ್ತು ಆಯುರ್ವೇದ ಆರೋಗ್ಯ ಶಿಬಿರವು ನಡೆಯುತು.
ಮುದಿಯಾರು ದಿ. ನಾರಾಯಣ ರೈ, ರಾಮಯ್ಯ ರೈ, ಮುತ್ತಣ್ಣ ರೈ ಮತ್ತು ನೇಮಿರಾಜ ರೈಯವರ ಸ್ಮರಣಾರ್ಥವಾಗಿ ಆಯೋಜಿಸಿದ ಈ ಶಿಬಿರದ ಉದ್ಘಾಟಣೆಯನ್ನು ಡಾ. ಪ್ರಭಾಕರ ರೈಯವರ ಮಾತೃಶ್ರೀಯವರಾದ ಶ್ರೀಮತಿ ಸರಸ್ವತಿ ನಾರಾಯಣ ರೈಯವರು ನೆರವೇರಿಸಿದರು. ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಶ್ರೀ ಬೆಳ್ಳಿಪ್ಪಾಡಿ ಬಾಲಕೃಷ್ಣ ಗೌಡರು ಮಾತನಾಡುತ್ತಾ ಹಳ್ಳಿ ಪ್ರದೇಶದಲ್ಲಿ ಕಲಿತ ಡಾ. ಪ್ರಭಾಕರ ರೈಯವರು ತನ್ನ ಊರಿನ ಜನರಿಗಾಗಿ ಪ್ರತಿ ವರ್ಷ ಹಮ್ಮಿಕೊಳ್ಳುವ ಈ ಆರೋಗ್ಯ ಶಿಬಿರವು ತನ್ನ ಉರಿನ ಜನರ ಮೇಲೆ ಅವರಿಗಿರುವ ಪ್ರೀತಿ ಮತ್ತು ಅಭಿಮಾನವನ್ನು ಎತ್ತಿ ತೋರಿಸುತ್ತದೆ ಎ೦ದರು. ಇದೇ ರೀತಿಯಲ್ಲಿ ಯಾವನೇ ವ್ಯಕ್ತಿ ಎಷ್ಟೇ ಉನ್ನತ ಹ೦ತಕ್ಕೆ ಏರಿದರೂ ತನ್ನ ಊರನ್ನು ಮತ್ತು ಊರಿನ ಜನರನ್ನು ಮರೆಯಬಾರದು. ಈ ನಿಟ್ಟಿನಲ್ಲಿ ಪ್ರಭಾಕರ ರೈಯವರು ಆದರ್ಶಪ್ರಾಯರು ಎ೦ದರು. ಅಲೋಪಥಿ ಮತ್ತು ಆಯುರ್ವೇದ ಎರಡೂ ವಿಭಾಗಗಳಲ್ಲಿ ಸುಮಾರು ಅರುವತ್ತಕಿ೦ತಲೂ ಹೆಚ್ಚು ಜನರು ಶಿಬಿರದ ಪ್ರಯೋಜನವನ್ನು ಪಡೆದುಕೊ೦ಡರು. ಶ್ರೀ ನಾರಾಯಣ ದೇಲ೦ಪಾಡಿ ಸ್ವಾಗತಿಸಿ ನಿರ್ವಹಿಸಿದ ಕಾರ್ಯಕ್ರಮದಲ್ಲಿ ಶ್ರೀ ರಾಮಣ್ಣ ಮಾಸ್ತರ್ ರವರು ಧನ್ಯವಾದವಿತ್ತರು.

 ದಿನಾ೦ಕ 11.11.2012 ರ೦ದು ದೇಲ೦ಪಾಡಿ ಸ್ಪೂರ್ತಿ ಯೂತ್ ಕ್ಲಬ್ಬಿನ ನೇತೃತ್ವದಲ್ಲಿ ನಡೆದ ಉಚಿತ ದ೦ತ ಚಿಕಿತ್ಸಾ ಶಿಬಿರದ ಉದ್ಘಾಟನಾ ಕಾರ್ಯಕ್ರಮ
ಯೋಗರತ್ನ ಗೋಪಾಲಕೃಷ್ಣ ದೇಲ೦ಪಾಡಿಯವರಿ೦ದ ಉದ್ಘಾಟನೆ

ಡಾ. ಎಸ್. ಎನ್. ಶರ್ಮ

ಯೋಗರತ್ನ ಗೋಪಾಲಕೃಷ್ಣ ದೇಲ೦ಪಾಡಿ
ಶ್ರೀ ರಾಮಣ್ಣ ಮಾಸ್ತರ್ ಅಧ್ಯಕ್ಷರು ಸ್ಪೂರ್ತಿ ಯೂತ್ ಕ್ಲಬ್ಬ್

No comments:

Post a Comment