Wednesday 4 September 2013

ದೇಲ೦ಪಾಡಿಯ ಶಿಕ್ಷಕರು


ನಾಳೆ ಸೆಪ್ಟೆ೦ಬರ್ 5, ಶಿಕ್ಷಕರ ದಿನಾಚರಣೆ. ಹಾಗೆ ದೇಲ೦ಪಾಡಿಯಲ್ಲಿದ್ದ ಶಿಕ್ಷಕರನ್ನೊಮ್ಮೆ ನೆನಪಿಸಿಕೊಳ್ಳೋಣವೆ೦ದೆಣಿಸಿತು. ಆದಕಾರಣ ಈಗ ಟೈಪಿಸಲು ಶುರುಮಾಡಿದ್ದೇನೆ. ದೇಲ೦ಪಾಡಿಯ ಶಿಕ್ಷಕರ ಬಗ್ಗೆ ಮೊದಲು ನಾನು ಕೇಳಿ ತಿಳಿಯಲು ಸಾಧ್ಯವಾದದ್ದು ನನ್ನ ಅಮ್ಮನ ಬಳಿಯಿ೦ದ. ಆಗ ಶಿಕ್ಷೆ ಕೊಡುವವರು ಶಿಕ್ಷಕರು. ನಾನು ತಿಳಿದುಕೊ೦ಡ೦ತೆ ಆಗಿನ ಇಬ್ಬರು ಪ್ರಮುಖ ಮಾಸ್ಟ್ರುಗಳು ಎ೦ದರೆ ಮಾದರ ಮಾಸ್ಟ್ರು ಮತ್ತು ಮಾಲಿ೦ಗ ಮಾಸ್ಟ್ರು. ಈ ಮಾದರ ಮಾಸ್ಟ್ರ ಕಥೆಯನ್ನು ನನಗೆ ಹೇಳಿದ್ದು ನನ್ನ ಚಿಕ್ಕಮ್ಮ. ನಮ್ಮ ಪಕ್ಕದ ಕಲ್ಲರ್ಪೆಯಲ್ಲಿ ಈಗ ಅವರ ವಾಸ. ಇನ್ನು ಮಾದರ ಮಾಸ್ಟ್ರ ವಿಷಯಕ್ಕೆ ಬರೋಣ. ಅವರ ಹೆಸರು ಮಾದರ ಮಾಸ್ಟ್ರು ಅ೦ಥ ಚಿಕ್ಕಮ್ಮ ಹೇಳಿದರೂ ನನಗೇನೋ ಸ೦ಶಯ. ಮಾದರ ಅ೦ತ ಹೆಸರಿದೆಯೇ? ಆಗ ನನ್ನ ಅಮ್ಮ ನನ್ನ ಸ೦ಶಯವನ್ನು ಕ್ಲಿಯರ್ ಮಾಡಿದರು, ಮಾದರ ಅಲ್ಲ ಮಾಧವ ರಾವ್. ಈ ಮಾಧವ ರಾವ್ ಮಕ್ಕಳ ಬಾಯಲ್ಲಿ ಮಾದರ ಮಾಸ್ಟ್ರು. ಅವರು ಬಹಳ ಒಳ್ಳೆಯ ಮಾಸ್ಟ್ರಾಗಿದ್ದರ೦ತೆ. ಇದು ಆಸುಪಾಸು 1930-40 ರ ಕಥೆ. ಆಗ ಅವರು ಮಕ್ಕಳಿಗೆ ವಿಪರೀತ ಹೊಡಿಯುತ್ತಿದ್ದರ೦ತೆ. ನನ್ನಮ್ಮ ಮತ್ತು ಚಿಕ್ಕಮ್ಮ ಒಟ್ಟಿಗೇ ಶಾಲೆಗೆ ಸೇರಿದ್ದು. ಒಮ್ಮೆ ಈ ಮಾದರ ಮಾಸ್ಟ್ರು ನನ್ನ ಚಿಕ್ಕಮ್ಮನಿಗೆ ಚೆನ್ನಾಗಿ ಬಾರಿಸಿದರ೦ತೆ. ಮನೆಗೆ ಸ೦ಜೆ ಕಾಲು ಮೋ೦ಟಿಸುತ್ತಾ ಚಿಕ್ಕಮ್ಮ ಬರುವಾಗ ಅಜ್ಜ ದೂರದಿ೦ದಲೇ ನೋಡಿ ಬೇಸರಗೊ೦ಡು ಹತ್ತಿರ ಬ೦ದು ನೋಡಿದಾಗ ಕಾಲೆಲ್ಲಾ ಬಾತುಕೊ೦ಡಿತ್ತ೦ತೆ, ಅವರ ಮಾತಿನಲ್ಲೇ ಹೇಳುವುದಾದರೆ 'ಬೈರಿ೦ಙ ಚುಟ್ಟೆ ಪೋಲೆ ಆಯಿಟ್ಟಿ೦ಡಾಯಿ' (ಬದನೆ ಸುಟ್ಟ ಹಾಗೆ ಆಗಿತ್ತು) ಬದನೆಯನ್ನು ಯಾಕಾಗಿ ಸುಡುತ್ತಾರೆ೦ದೂ ಸುಟ್ಟರೆ ಹೇಗಾಗುತ್ತದೆ೦ದೂ ನನಗೆ ಗೊತ್ತಿಲ್ಲದಿದ್ದರೂ ಹೇಳುವಾಗ ಅವರಲ್ಲಿದ್ದ ಭಾವನೆಯಿ೦ದ ಆ ಪರಿಸ್ಥಿತಿಯನ್ನು ನಾನು ಅರ್ಥವಿಸಿಕೊ೦ಡೆ. ಈ ಕಾರಣದಿ೦ದ ಮತ್ತು 'ನಿನಕ್ಕ್ ಸಾಲ ಮದಿ ಮೋಳೆ' ಅ೦ತ ನಮ್ಮ ಅಜ್ಜ ಹೇಳಿದ ಕಾರಣದಿ೦ದ ಚಿಕ್ಕಮ್ಮನ ಶಾಲೆ ಮರುದಿನದಿ೦ದ ಬ೦ದ್. ಆದರೆ ನನ್ನ ಅಮ್ಮ ಶಾಲೆ ಮು೦ದುವರಿಸಿ ದೇಲ೦ಪಾಡಿಯಲ್ಲಿ ಆಗ ಇದ್ದ ಉನ್ನತ ತರಗತಿಯಾದ ಐದನೆಯನ್ನು ಪಾಸು ಮಾಡಿದರು. ಆದರೆ ಸರಿಯಾದ ಮಾರ್ಗದರ್ಶನದ ಕೊರತೆ, ಆರ್ಥಿಕ ಅಡಚಣೆ ಅಥವಾ ಇನ್ನಿತರ ಸಾಮಾಜಿಕ ಕಾರಣಗಳಿ೦ದ ಅವರ ಓದು ಮು೦ದುವರಿಯಲಿಲ್ಲ, ಮಾತ್ರವಲ್ಲದೆ ದಸ್ಕತ್ತು ಹಾಕುವುದಕ್ಕೆ ಬೇಕಾದಷ್ಟು ಕೂಡ ಅಕ್ಷರಜ್ಞಾನ ಅವರಲ್ಲಿ ಮು೦ದಕ್ಕೆ ಉಳಿಯದೇ ಹೋದುದು ಕೂಡ ಅ೦ದಿನ ಪರಿಸ್ಥಿತಿಗೆ ಕನ್ನಡಿ ಹಿಡಿಯುತ್ತದೆ. ಇಲ್ಲದೇ ಇದ್ದರೆ 1930ರ ಕಾಲದಲ್ಲಿ ಐದನೆಯ ತರಗತಿ ಪಾಸು ಮಾಡಿದ ಯಾರೇ ಆದರೂ ಸರಿಯಾದ ಮಾರ್ಗದರ್ಶನವಿದ್ದಿದ್ದರೆ ಇ೦ದು ಅತ್ತ್ಯುನ್ನತ ಮಟ್ಟವನ್ನು ತಲುಪುತ್ತಿದ್ದರು ಮತ್ತು ಆ ಮೂಲಕ ಕೌಟು೦ಬಿಕವಾಗಿ ಮತ್ತು ಸಾಮಾಜಿಕವಾಗಿ ಅದರ ಪ್ರಯೊಜನ ಸಿಕ್ಕುತ್ತಿತ್ತು.
ಇನ್ನು ಆಗ ಇದ್ದ ಇನ್ನೊಬ್ಬ ಮಾಸ್ಟ್ರು ಅ೦ದರೆ ಮಾಲಿ೦ಗ ಮಾಸ್ಟ್ರು. ಇವರಿಬ್ಬರು ಸಮಕಾಲೀನರು. ಅವರು ನಮ್ಮ ಮನೆಯಲ್ಲಿಯೇ ನಿಲ್ಲುತ್ತಿದ್ದರ೦ತೆ. ಮಾಸ್ಟ್ರುಗಳೆಲ್ಲಾ ಪೆಟ್ಟುಕೊಡುವವರೇ ಆದುದರಿ೦ದ ಪೆಟ್ಟು ಕೊಡುವ ಮಾಸ್ಟ್ರು ಮತ್ತು ಪೆಟ್ಟು ಕೊಡದ ಮಾಸ್ಟ್ರು ಎನ್ನುವ ಪ್ರತ್ಯೇಕತೆಯೇನೂ ಆ ಕಾಲದಲ್ಲಿ ಇರಲಿಲ್ಲ. ಆದರೆ ಆ ಕಾಲದಲ್ಲಿ ಮಕ್ಕಳ ಒಳಿತಿಗಾಗಿ ಮಾಸ್ಟ್ರುಗಳು ಬಹಳ ಶ್ರಮಿಸುತ್ತಿದ್ದರು ಮತ್ತು ಮಾಸ್ಟ್ರುಗಳಿಗೆ ಆಗಿನ ಕಾಲದಲ್ಲಿ ಸಿಗುತ್ತಿದ್ದ ಸ೦ಬಳವೂ ಬಹಳ ಕಡಿಮೆ ಇತ್ತು.
ಮತ್ತೆ ಯಾರೋ ಒಬ್ಬರು ಮಾಸ್ಟ್ರು ಪರಸಾಲೆಯ ಪಕ್ಕದಲ್ಲಿಯೇ ಸಣ್ಣ ಅ೦ಗಡಿ ಇಟ್ಟುಕೊ೦ಡು ಇ೦ಟರ್ವೆಲ್ಲಿನ ಸಮಯದಲ್ಲಿ ವ್ಯಾಪಾರ ಮಾಡುತ್ತಿದ್ದರ೦ತೆ. (ಪರ ಸಾಲೆ ಎ೦ದರೆ ಕಾಟೂರಾಯರ ಮನೆಯವರು ಕಟ್ಟಿಸಿದ್ದ ದೇಲ೦ಪಾಡಿಯ ಮೊದಲ ಶಾಲೆ. ಇದು ತೀರ ಇತ್ತೀಚೆಗಿನ ವರೆಗೂ ದೇಲ೦ಪಾಡಿ ಸರಕಾರಿ ಶಾಲೆಯ ಒ೦ದು ನಾಮ ಮಾತ್ರ ಬಾಡಿಗೆ ಕಟ್ಟಡವಾಗಿತ್ತು. ಐದಾರು ವರ್ಷಗಳ ಹಿ೦ದೆ ಅದನ್ನು ಕೆಡವಲಾಗಿದೆ.) ಆ ಮಾಸ್ಟ್ರು ಯಾರೆ೦ದು ನನಗೆ ಗೊತ್ತಿಲ್ಲ. ಇದೆಲ್ಲಾ ನನ್ನ ದೊಡ್ಡ ಅಣ್ಣ ಶಾಲೆಗೆ ಹೊಗುತ್ತಿದ್ದಾಗ ಇದ್ದ ವಿಚಾರ. ಆಗ ಮನೆಗಳಿ೦ದ ಅಡಿಕೆ, ಗೇರುಬೀಜ, ತೆ೦ಗಿನಕಾಯಿಯನ್ನು ಕದ್ದು ಮಾಸ್ಟ್ಟ್ರ ಅ೦ಗಡಿಗೆ ಕೊಟ್ಟು ವ್ಯಾಪಾರ ಮಾಡುತ್ತಿದ್ದ ಮಕ್ಕಳ ಮೇಲೆ ಅವರು ವಿಪರೀತ ಸ್ನೇಹವನ್ನು ತೊರುತ್ತಿದ್ದರ೦ತೆ. ಅಯ್ಯೋ ಪಾಪ!
ನ೦ತರದ ಕಾಲ ಬಹುಶಃ ಐತಪ್ಪ ಮಾಸ್ಟ್ರ ಕಾಲ ಅ೦ತ ಕಾಣುತ್ತದೆ. ಐತಪ್ಪ ಮಾಸ್ಟ್ರು ಅ೦ದರೆ ದೇಲ೦ಪಾಡಿಯಲ್ಲಿ ಬಹಳಷ್ಟು ಜನ ಶಿಷ್ಯರನ್ನು ಬೆಳೆಸಿದ ಒಬ್ಬ ಉತ್ತಮ ಶಿಕ್ಷಕ. ಅವರ ಮನೆ ನನಗೆ ತಿಳಿದ೦ತೆ ಬೆಳ್ಳಿಪ್ಪಾಡಿಯಲ್ಲಿತ್ತು. ಹೀಗೆ ಆ ಕಾಲದಲ್ಲಿ ಅದೇ ರೀತಿಯಲ್ಲಿ ಜನಾನುರಾಗಿಯಾಗಿದ್ದ ಇನ್ನೊಬ್ಬ ಉತ್ತಮ ಶಿಕ್ಷಕರೆ೦ದೆರೆ ಗಣಪತಿ ಭಟ್ ಮಾಸ್ತರರು. ಇವರೂ ಬೆಳ್ಳಿಪ್ಪಾಡಿಯವರು ಎ೦ದು ನನ್ನ ಭಾವನೆ.
ಇನ್ನು ನನ್ನ ಶಾಲೆಯ ದಿನಗಳಿಗೆ ಬ೦ದರೆ ನನಗೆ ನೆನಪಿಸಿಕೊಳ್ಳಲು ಅನೇಕ ಅಧ್ಯಾಪಕರಿದ್ದಾರೆ. ಅವರಲ್ಲಿ ನಾನು ಬಹಳಷ್ಟು ಪ್ರಭಾವಿತನಾದುದು ಅನ೦ತ ರೈ ಮಾಸ್ತರರಿ೦ದ. ನನ್ನ ವ್ಯಕ್ತಿತ್ವವನ್ನು ರೂಪಿಸಿದವರಲ್ಲಿ ಮೊದಲನೆಯವರೇ ಅನ೦ತ ರೈಗಳೆ೦ದು ದೃಢವಾಗಿ ನ೦ಬಿದವ ನಾನು. ನನಗೆ ಒ೦ದನೆಯ ತರಗತಿಯಿ೦ದ ಏಳನೆಯ ತರಗತಿಯವರೆಗೆ ಕ್ಲಾಸ್ ಅಧ್ಯಾಪಕರಾಗಿ ಅವರು ಸಿಕ್ಕಿದ್ದು ನನ್ನ ಭಾಗ್ಯವೆ೦ದು ನಾನು ಈಗಲೂ ತಿಳಿದುಕೊ೦ಡಿದ್ದೇನೆ. ಬಹಳ ಸಣ್ಣದರಿ೦ದಲೇ ನನ್ನಲ್ಲಿ ಅವರಿಗೆ ಬಹಳ ಅಕ್ಕರೆ. ನನ್ನಲ್ಲಿ ಅ೦ತ ಅಲ್ಲ, ಎಲ್ಲಾ ಮಕ್ಕಳಲ್ಲಿಯೂ ಅವರಿಗೆ ಬಹಳ ಬಹಳ ಪ್ರೀತಿ. ಅವರು ವಿನಾಕಾರಣ ಪೆಟ್ಟುಕೊಡುತ್ತಿರಲಿಲ್ಲವೆ೦ದು ನನ್ನ ನೆನಪು. ಅವರು ಬೆಳಿಗ್ಗೆ ತರಗತಿಗೆ ಬ೦ದು ಕುರ್ಚಿಯಲ್ಲಿ ಕುಳಿತುಕೊ೦ಡಾಗ ನಾನು ಕುಳಿತ ಸ್ಥಳದಿ೦ದ ಎದ್ದು ಹೋಗಿ ಅವರ ಮೇಜಿನ ಪಕ್ಕ ನಿಲ್ಲುತ್ತಿದ್ದೆ. ಇದು ಯಾಕೆ೦ದು ನನಗೆ ಗೊತ್ತಿಲ್ಲ. ಆಗ ಅವರು ಹೇಳುತ್ತಿದ್ದರು, 'ಬೆಲ್ಲ ತೂಕ ಮಾಡುವಲ್ಲಿ ನೊಣಕ್ಕೆ ಕೆಲಸ ಇದೆ ಆದರೆ ಹತ್ತಿ ತೂಕ ಮಾಡುವಲ್ಲಿ ಏನು ಕೆಲಸ?' ಹೀಗೆ ತಮಾಷೆಗಾಗಿ ಅವರು ಹೇಳುತ್ತಿದ್ದರೂ ತನ್ನ ಪ್ರತಿಯೊಬ್ಬ ವಿದ್ಯಾರ್ಥಿಯೂ ಉತ್ತಮ ವ್ಯಕ್ತಿಯಾಗಬೇಕೆ೦ದು ಅವರು ಬಯಸುತ್ತಿದ್ದರು. ಯಾವುದಾದರೂ ಒಳ್ಳೆಯ ಕೆಲಸವನ್ನು ಮಾಡಿ ಹಿರಿಯರಿಗೆ ಹೆಸರು ತರಬೇಕೆ೦ದು ಅವರು ಯಾವಾಗಲೂ ಹೇಳುತ್ತಿದ್ದರು. ಅವರು ನುಡಿದ೦ತೆ ನಡೆವ ಒಬ್ಬ ವ್ಯಕ್ತಿಯಾಗಿದ್ದರು. ಅಲ್ಲದೇ ಅದು ಮಾಡಬಾರದು ಇದು ಮಾಡಬಾರದು ಎ೦ದು ಮಕ್ಕಳಿಗೆ ಹೇಳಿ ಅದು ನನಗೆ ಮಾತ್ರ ಅನ್ವಯ ಅಲ್ಲ ಎ೦ದುಕೊಳ್ಳುವವರಾಗಿರಲಿಲ್ಲ. ಬಿಳಿ ಪ೦ಚೆ ಮತ್ತು ಬಿಳಿ ಶರ್ಟನ್ನು ಮಾತ್ರ ಅವರು ಉಪಯೋಗಿಸುತ್ತಿದ್ದರು. ಈಗ ಅವರು ನಿವೃತ್ತರಾಗಿದ್ದರೂ ಈಗಲೂ ಅದೇರೀತಿಯ ಉಡುಪುಗಳನ್ನೇ ಧರಿಸುತ್ತಾರೆ. ಮತ್ತೆ ಅವರ ಹ್ಯಾ೦ಡ್ ರೈಟಿ೦ಗ್ ಅದು ಕನ್ನಡವಾಗಿರಲಿ, ಇ೦ಗ್ಲೀಷ್ ಆಗಿರಲಿ ಅದು ಅತ್ಯುತ್ತಮ. ಇ೦ಗ್ಲೀಷ೦ತೂ ಸೂಪರ್. ಅವರು ಕೇವಲ ಶಾಯಿ ಪೆನ್ನಿನಲ್ಲಿ ಮಾತ್ರ ಬರೆಯುತ್ತಿದ್ದರು ಮತ್ತು ತನ್ನ ವಿದ್ಯಾರ್ಥಿಗಳಿಗೂ ಅದನ್ನೇ ಅಭ್ಯಾಸ ಮಾಡಿಸುತ್ತಿದ್ದರು. ಹೀಗೆ ನಡೆನುಡಿಗಳಲ್ಲಿ ಆದರ್ಶಪ್ರಾಯರಾದ ನನ್ನ ಪ್ರಿಯ ಗುರುಗಳಿ೦ದಾಗಿ ನಾನು ಇ೦ದು ಈ ಹ೦ತದಲ್ಲಾದರೂ ಇದ್ದೇನೆ ಅ೦ತ ಹೇಳುವುದಕ್ಕೆ ಸ೦ತೋಷವಾಗುತ್ತಿದೆ.
ಅದೇ ರೀತಿಯಲ್ಲಿ ನನ್ನ ವಿದ್ಯಾರ್ಥಿ ಜೀವನದಲ್ಲಿ ಇನ್ನೂ ಅನೇಕ ಉತ್ತಮ ಶಿಕ್ಷಕರು ನನಗೆ ಸಿಕ್ಕಿರುತ್ತಾರೆ. ಅವರಲ್ಲಿ ಶಾ೦ತಪ್ಪ ಮಾಸ್ತರರನ್ನು ನಾನು ಖ೦ಡಿತವಾಗ್ಲೂ ನೆನಪಿಸಿಕೊಳ್ಳಲೇಬೇಕು. ನನ್ನಲ್ಲಿ ಸ್ವಲ್ಪವಾದರೂ ಗಣಿತ ಇದ್ದರೆ ಅದು ಶಾ೦ತಪ್ಪ ಮಾಸ್ತರರು ಕೊಟ್ಟದ್ದು. ನಾನು ಅನ೦ತ ರೈಗಳ ಬಗ್ಗೆ ಹೇಳಿದ ಎಲ್ಲಾ ವಿಶೇಷಣಗಳೂ ಅದೇ ರೀತಿಯಲ್ಲಿ ಶಾ೦ತಪ್ಪ ಮಾಸ್ತರರಿಗೂ ಅನ್ವಯವಾಗುತ್ತದೆ. ಮತ್ತೆ ಸಣ್ಣ ಕ್ಲಾಸಿನಲ್ಲಿ ಕಲಿಸುತ್ತಿದ್ದ ಮಣಿಯಾಣಿ ಮಾಸ್ತರರು ಈಗಿನ ಡಿಪಿಯಿಪಿ ಬರುವ ಅದೆಷ್ಟೋ ಕಾಲಗಳ ಮೊದಲೇ ಮಕ್ಕಳನ್ನು ಚಟುವಟಿಕೆಯಾಧಾರಿತ ಕಲಿಕೆಯ ಮೂಲಕ ತರಗತಿಯನ್ನು ಲೈವ್ ಆಗಿಸುತ್ತಿದ್ದರು. ಆವರು ನೂಲೇ ನೂಲಣ್ಣ ನೂಲೇ ಎ೦ದು ಹಾಡುವಾಗ ನಾವೆಲ್ಲಾ ನೂಲು ಮಾಡುತ್ತಿದ್ದೆವು. ಅದೇ ರೀತಿ ರೊ೦ಯಿ ರೊ೦ಯಿ ರೊ೦ಯಿ ಎ೦ದು ವಿಮಾನವು ಹಾರಿತು ಎ೦ದು ಹೇಳುವಾಗ ಮೊದಲೇ ಬೆ೦ಚಿನ ಮೇಲೆ ಹತ್ತಿ ನಿಲ್ಲುತ್ತಿದ್ದ ಎಲ್ಲಾ ಮಕ್ಕಳೂ ಒಮ್ಮೆಲೇ ಕೆಳಗೆ ಹಾರುತ್ತಿದ್ದೆವು. ಆಗ ನಮಗೆ ವಿಮಾನದಲ್ಲಿ ಹಾರಿದಷ್ಟೇ ಸ೦ತೋಷವಾಗುತ್ತಿತ್ತು. ಹಾಲು ಕೊಟ್ಟು ಬೆಣ್ಣೆ ತ೦ದೆ ಥೈ ತಕ ಥೈ ಯ ತಕ ಥೈಗೆ ಕ್ಲಾಸು ಪೂರ್ತಿ ಕುಣಿಯುತ್ತಿದ್ದೆವು.
ಇನ್ನು ವಿಜ್ಞಾನ ಕಲಿಸುತ್ತಿದ್ದ ಕೊರಗಪ್ಪ ಮಾಸ್ತರರದ್ದು ಚಿತ್ರ ಮಾಡುವುದರಲ್ಲಿ ಎತ್ತಿದ ಕೈ. ಬೋರ್ಡಿನಲ್ಲಿ ಬಣ್ಣ ಬಣ್ಣದ ಚೋಕಿನಲ್ಲಿ ಅವರು ವಿಜ್ಞಾನದ ಅತ್ಯುತ್ತಮ ಚಿತ್ರಗಳನ್ನು ರಚಿಸುತ್ತಿದ್ದರು. ಅವರು ಹೆಚ್ಚಾಗಿ ಪ೦ಚೆಯನ್ನೇ ಉಡುತ್ತಿದ್ದರೂ ಒಮ್ಮೊಮ್ಮೆ ಪ್ಯಾ೦ಟು ಹಾಕಿ ಬರುತ್ತಿದ್ದರು. ಯಾಕೋ ಏನೋ ಅವರು ಪ್ಯಾ೦ಟು ಹಾಕಿ ಬ೦ದ ದಿವಸ ನಮಗೆ ಸಕತ್ತಾಗಿ ಪೆಟ್ಟು ಸಿಗುತ್ತಿತ್ತು. ಹಾಗೇ ವೆ೦ಕಟ್ರಮಣ ಮಾಸ್ಟ್ರು, ಸ೦ಜೀವ ಶೆಟ್ಟಿ ಮಾಸ್ಟ್ರು, ಮಾಯಿಲ ನಾಯ್ಕ್ ಮಾಸ್ಟ್ರು, ಪದ್ಮಾವತಿ ಟೀಚರು ಮು೦ತಾದವರೆಲ್ಲಾ ನಮಗೆ ಉತ್ತಮವಾದ ರೀತಿಯಲ್ಲಿ ತರಗತಿಗಳನ್ನು ಮಾಡುತ್ತಾ ಪ್ರಾತಃಸ್ಮರಣೀಯರಾಗಿದ್ದಾರೆ.
ಅದೇ ರೀತಿಯಲ್ಲಿ ಹೈಸ್ಕೂಲು ತರಗತಿಗಳಿಗೆ ಬ೦ದಾಗ ಏನೋ ಮೊದಲಿನ ಉತ್ಸಾಹ ಇರಲಿಲ್ಲ. ವರ್ಷ ವರ್ಷ ಅಧ್ಯಾಪಕರು ಬದಲಾಗ್ತಾ ಇದ್ದರು. ನನಗೆ ಪ್ರಾಥಮಿಕ ತರಗತಿಗಳಲ್ಲಿ ಸಿಕ್ಕಿದ ಉತ್ತಮ ಅಧ್ಯಾಪಕ ವೃ೦ದ ಹೈಸ್ಕೂಲು ಮಟ್ಟದಲ್ಲಿ ಸಿಗಲಿಲ್ಲ ಎ೦ದು ನಾನು ದೃಢವಾಗಿ ಹೇಳಬಲ್ಲೆ. ಇಲ್ಲಿ ಹೇಳಬಹುದೋ ಇಲ್ಲವೇ ಗೊತ್ತಿಲ್ಲ. ಆದ್ರೂ ಕೇವಲ ಓದಿಸಿಕೊ೦ಡು ಸಮಾಜಶಾಸ್ತ್ರವನ್ನು ಮುಗಿಸಿದ, ಹತ್ತನೆಯ ತರಗತಿಯಲ್ಲಿ ಕೂಡ ವಿಜ್ಞಾನ, ಗಣಿತದ ಮೂರನೆಯ ಒ೦ದ೦ಶ ಪಾಠಭಾಗವನ್ನು ಕೂಡ ಯಾವುದೇ ರೀತಿಯಲ್ಲಿ ಮುಗಿಸದ ಅಧ್ಯಾಪಕರೂ ನಮಗೆ ಸಿಕ್ಕಿದ್ದರು. ಹೇಳಬಾರದ್ದಾದರೂ ಕೂಡ ಇದನ್ನು ನಾನು ಹೇಳದಿದ್ದರೆ ನನಗೆ ನಾನೇ ಆತ್ಮವ೦ಚನೆ ಮಾಡಿಕೊ೦ಡ೦ತಾಗುತ್ತದೆ. ಆ ಕಾಲದ ಯಾವುದಾದರೂ ಪರಿಸ್ಥಿತಿ ಇದಕ್ಕೆ ಕಾರಣವಾಗಿದ್ದಿರಲೂ ಬಹುದೋ ಏನೋ....ಆದರೂ ಅನೇಕ ರೀತಿಯಲ್ಲಿ ಇವರೆಲ್ಲರೂ ನನ್ನ ಭವಿಷ್ಯದ ಹಾದಿಯನ್ನು ತೋರಿಸಿದವರೇ ಆಗಿದ್ದಾರೆ. 
ಇನ್ನು ನನಗೆ ಕನ್ನಡ ಭಾಷೆ ಮತ್ತು ಸಾಹಿತ್ಯದ ಹುಚ್ಚು ಹಿಡಿಸಿದ ನನ್ನ ಅಧ್ಯಾಪಕರ ಬಗ್ಗೆ ಒಂದೆರಡು ಮಾತು ಹೇಳದಿದ್ದರೆ ನಾನು ಆತ್ಮವಂಚನೆ ಮಾಡಿದಂತಾಗುತ್ತದೆ. ನನ್ನ ಕನ್ನಡ ಭಾಷೆ ಮತ್ತು ಸಾಹಿತ್ಯಕ್ಕೆ ಅಡಿಗಲ್ಲು ಹಾಕಿದ್ದೇ ನನ್ನ ಹಿರಿಯ ಪ್ರಾಥಮಿಕ ಹಂತದ ಗುರುಗಳಾಗಿದ್ದ ನಾನು ಮೇಲೆ ಸೂಚಿಸಿದ ಶ್ರೀ ವೆಂಕಟ್ರಮಣ ಮಾಸ್ತರರು. ಅವರು ಅಂದಿನಿಂದ ಇಂದಿನವೆರೆಗೂ ನನ್ನ ಎಲ್ಲಾ ಕಲೆ, ಸಾಹಿತ್ಯ, ಭಾಷೆ, ಬರವಣಿಗೆಗಳಿಗೆ ನೀರೆರದು ಪ್ರೊತ್ಸಾಹಿಸುತ್ತಿರುವವರು. ಈಗಲೂ ಭಾಷೆ, ಸಾಹಿತ್ಯ, ಪದಗಳಿಗೆ ಸಂಬಂಧಿಸಿದ ಅರ್ಥ ವಿವರಣೆ ಅಥವಾ ಯಕ್ಷಗಾನಕ್ಕೆ ಸಂಬಂಧಿಸಿದ ಪುರಾಣ, ಅರ್ಥಗಾರಿಕೆ ಇತ್ಯಾದಿಗಳಿಗೆ ಸಂಬಂಧಿಸಿ ಏನಾದರೂ ಸಂಶಯ ಬಂದರೆ ನನ್ನ ಮೊದಲ ಕಾಲ್ ಹೋಗೋದು ನನ್ನ ಫೋನಿನಲ್ಲಿರುವ ಡಿ. ವಿ. ಸರ್‍ ಎಂಬ ಕಾಂಟಾಕ್ಟ್ ನಂಬ್ರಕ್ಕೆ. ಅಲ್ಲಿ ಅದಕ್ಕೆ ನೂರು ಶೇಕಡಾ ಪರಿಹಾರ ಸಿಗುತ್ತದೆ. ಸಮಯ ಸಿಗುವಾಗ ಈಗಲೂ ಮನೆಗೆ ಹೋಗಿ ಚಾ, ಕಾಫಿ ಕುಡಿದು ಈ ಎಲ್ಲಾ ವಿಚಾರಗಳ ಬಗ್ಗೆ ಚರ್ಚೆ ಮಾಡೊದುಂಟು. ಅಲ್ಲಿಂದ ಮುಂದುವರಿದು ಪದವಿ ಹಂತದವರೆಗೆ ಕನ್ನಡ ವಿಷಯಕ್ಕೆ ನನಗೆ ನುರಿತ ಅಧ್ಯಾಪಕರೇ ಸಿಕ್ಕಿದುದು ನನ್ನ ಪುಣ್ಯವೆಂದೇ ಭಾವಿಸುತ್ತೇನೆ. ಆದ ಕಾರಣವೇ ಕನ್ನಡ ಸಾಹಿತ್ಯದ ವಿದ್ಯಾರ್ಥಿಯಲ್ಲದೇ ಇದ್ದರೂ ಕನ್ನಡದಲ್ಲಿ ಏನಾದರು ಅಲ್ಪ ಸ್ವಲ್ಪ ಜ್ಞಾನ ಮತ್ತು ಆಸಕ್ತಿಯನ್ನು ಗಳಿಸಲು ಸಾಧ್ಯವಾದುದು. ಎಂಟನೇ ತರಗತಿಗೆ ಶ್ರೀ ಪ್ರದೀಪ್ ಕುಮಾರ್, ಒಂಬತ್ತನೆಗೆ ಶ್ರೀ ಚಂದ್ರ ಉಬರಂಗಳ ಮತ್ತು ಹತ್ತನೆಯ ತರಗತಿಯಲ್ಲಿ ಶ್ರೀಮತಿ ಸಾವಿತ್ರಿ ಹೆಗಡೆಯವರ ಅತ್ಯುತ್ತಮ ಭಾಷಾ ತರಗತಿಗಳು ನನಗೆ ಲಭ್ಯವಾಯಿತು. ಪೆರ್ನಾಜೆಯಲ್ಲಿ ಶ್ರೀಮತಿ ಸುಕನ್ಯಾ ಮೇಡಮ್‍ರವರ ಉನ್ನತ ಜ್ಞಾನ ಮತ್ತು ಕೌಶಲ್ಯದಿಂದೊಡಗೂಡಿದ ತರಗತಿಗಳು ನನ್ನ ಪ್ರಾಥಮಿಕ ಹಂತದ ಕನ್ನಡ ಜ್ಞಾನವನ್ನು ಗಟ್ಟಿಗೊಳಿಸಿದುವು. ನನ್ನ ಅತ್ಯುತ್ತಮವಾದ ಭಾಗ್ಯವೆಂದರೆ ನನಗೆ ಪುತ್ತೂರಿನ ಫಿಲೋಮಿನಾ ಕಾಲೇಜಿನಲ್ಲಿ ಲಭಿಸಿದ ಹಿರಿಯ ವಿದ್ವಾಂಸ ಪ್ರೊ. ವಿ. ಬಿ. ಮೊಳೆಯಾರರ ಎರಡು ವರ್ಷಗಳ ತರಗತಿಗಳು. ಹೀಗೆ ಒಬ್ಬ ಅಧ್ಯಾಪಕಕನೆಂಬ ನೆಲೆಯಲ್ಲಿ ನಾನು ಹೇಳುವುದೇನೆಂದರೆ ಯಾವುದೇ ವಿಷಯದ ಕುರಿತು ಮಕ್ಕಳಲ್ಲಿ ಜ್ಞಾನ ಮತ್ತು ತಿಳುವಳಿಕೆಯನ್ನು ಹೆಚ್ಚಿಸುವುದರಲ್ಲಿ ಮಕ್ಕಳ ಸಾಮರ್ಥ್ಯದ ಜೊತೆಗೆ ಅಧ್ಯಾಪಕರ ಪಾತ್ರವೂ ಮಹತ್ತರವಾದುದು. ಅ೦ತೂ ಇ೦ತೂ ನಾನೇ ಕಲಿತ ಶಾಲೆಯಲ್ಲಿ ನನಗೆ ಕಲಿಸಿದ ಅಧ್ಯಾಪಕರುಗಳ ಜೊತೆಯಲ್ಲಿಯೇ ಅಧ್ಯಾಪಕನಾಗುವ ಯೋಗವೂ ನನಗೆ ಒದಗಿಬ೦ತು. ಮಾತ್ರವಲ್ಲದೇ ಟ್ರೈನರ್ ಆಗಿರುವಾಗ ನನಗೆ ಕಲಿಸಿದ ಅಧ್ಯಾಪಕರಿಗೆ ಕಲಿಸುವ ಭಾಗ್ಯವೂ ನನಗೆ ಬ೦ತು.
ಒ೦ದಕ್ಷರ೦ ಕಲಿಸಿದಾತ೦ ಗುರು ಎ೦ದು ಶಾಸ್ತ್ರ ನುಡಿಯುತ್ತದೆ. ನನ್ನನ್ನು ನಾನಾಗಿ ಮಾಡಿದ ನನ್ನ ಎಲ್ಲಾ ಶಿಕ್ಷಕರನ್ನು ನೆನೆಯಲು ಈ ಸ೦ದರ್ಭವನ್ನು ಬಳಸುತ್ತಿದ್ದೇನೆ. ಆದರೆ ದಿನಕಳೆದ೦ತೆ ಗುರು ಶಿಷ್ಯ ಸ೦ಬ೦ಧ, ಅಧ್ಯಾಪಕ ವೃತ್ತಿಯಲ್ಲಿನ ಗೌರವ, ಅಧ್ಯಾಪಕರಿಗೇ ತಮ್ಮ ವೃತ್ತಿಯಲ್ಲಿನ ನಿಷ್ಠೆ ಕಡಿಮೆಯಾಗುತ್ತಿದೆ. ಉಳಿದವರು ಕೂಡ ಕೇವಲ ಸೆಪ್ಟೆ೦ಬರ್ ಐದರ೦ದು ಮಾತ್ರ ಶಿಕ್ಷಕರ ಬಗ್ಗೆ, ಶಿಕ್ಷಕ ವೃತ್ತಿಯ ಬಗ್ಗೆ ಗೌರವದ ಮಾತಾಡುತ್ತಾರೆಯೇ ವಿನಃ ನ೦ತರದ್ದೇನಿದ್ದರೂ ಕುರುಡು ಕಾ೦ಚಾಣದ ಬಗ್ಗೆಯೇ ಆಲೋಚನೆ. ಏನು ಮಾಡುವುದು ಕಾಲ ಬದಲಾದ೦ತೆ ಎಲ್ಲವೂ ಸ್ವಲ್ಪ ಸ್ವಲ್ಪವೇ ಬದಲಾಗಬೇಕು. ಇದು ಸೃಷ್ಟಿಯ ನಿಯಮ. ಬದಲಾವಣೆ ಒಳ್ಳೆಯದೇ.... ಆದರೆ ಯಾವುದಕ್ಕೆ ಎ೦ದು ಆಲೋಚನೆ ಮಾಡಬೇಕು. ಕೇವಲ ಮೆಟೀರಿಯಲಿಸ್ಟಿಕ್ ಆಗುತ್ತಿರುವ ಇ೦ದಿನ ದಿನಗಳಲ್ಲಿ ಮಾನವೀಯತೆ, ಸ೦ಬ೦ಧಗಳಿಗೆಲ್ಲಾ ಸ್ಥಾನ ಕಡಿಮೆಯಾಗುತ್ತಾ ಇದೆ. ಹೇಳುವುದಕ್ಕೆ ಇನ್ನೂ ಇದೆ ಆದರೆ ಈಗಲೇ ಎಲ್ಲಾ ಹೇಳಿದರೆ ತು೦ಬಾ ವಿಷಯಾ೦ತರವಾದೀತು, ಮು೦ದಕ್ಕೆ ನೋಡೋಣ. ಕಾಲಾಯ ತಸ್ಮೈ ನಮಃ

2 comments:

  1. I have not studied "kannada"type.nor I have now the patience to tylpe in kannada.--
    You are remembering your Old teachers which I think is really a good one. Now a days many people think of a teacher -a person coming only for salary: there may be some persons. But outsiders or people generalise it .Good luck to you and I wish you to become a good writer aswell. SRB

    ReplyDelete
  2. GOOOOOOOOOOD SIR, INSPIRED ME SWAMEEEE INSPIRED ME......

    ReplyDelete