Monday 16 December 2013

ದೇಲಂಪಾಡಿಯ ಭೂತಗಳು ಮತ್ತು ಮುಗೇರಿನ ಕೋಳಿಕಟ್ಟ


ಡಿಸೆಂಬರಿನ ಚಳಿ ಪ್ರಾರಂಭವಾಗುವಾಗಲೆಲ್ಲ ನಮಗೆ ಹಳೆಯ ಕಾಲದ ಬಹಳ ಮನೋಹರವಾದ ನೆನಪುಗಳು ಕಾಡುತ್ತದೆ. ಹೌದು, ಇದು ನಮ್ಮೂರಿನಲ್ಲಿ ಭೂತಗಳು ಎದ್ದೇಳುವ ಸಮಯ. ಹೋದ ವರ್ಷ ಊರ ಜನರಿಗೆ ಅಭಯ ಹೇಳಿದ ಎಲ್ಲಾ ಭೂತಗಳು ಈಗ ಪುನ: ಬರುತ್ತಿದೆ. ಕಳೆದ ಸಾಲಿನ ಅಭಯದ ಫಲಿತಾಂಶವನ್ನು ನೋಡಲು ಮತ್ತು ಹೊಸ ಅಭಯವನ್ನು ಕೊಟ್ಟು ಜನರನ್ನು ಹುರಿದುಂಬಿಸಲು. ಊರಿನ ವಾರ್ಷಿಕ ನೇಮಗಳ ಹೊರತಾಗಿ ಚೆಂಡೆಮೂಲೆ, ಬಂದ್ಯಡ್ಕ, ಕುತ್ತಿಮುಂಡ,
ವಾಲ್ತಾಜೆ, ಚಾವಡಿ (ಇಲ್ಲಿ ಊರ ನೇಮವೂ ನಡೆಯುತ್ತದೆ) ಮೊದಲಾದೆಡೆಗಳಲ್ಲಿ ಐದು ವರ್ಷಗಳಿಗೊಮ್ಮೆ ಭೂತಕೋಲಗಳು ನಡೆಯುತ್ತವೆ. ಇನ್ನು ನಮ್ಮೂರಿನ ವಾರ್ಷಿಕ ನೇಮಗಳ ಬಗ್ಗೆ ಹೇಳುವುದಾದರೆ ಅದು ಪ್ರಾರಂಭವಾಗುವಾಗುವುದು ಬೆಳ್ಳಿಪ್ಪಾಡಿಯ ಭೂತದ ಮೂಲಕ. ಬೆಳ್ಳಿಪ್ಪಾಡಿಯ ಜೂಮಾದಿ (ಧೂಮಾವತಿ) ಭೂತಕೋಲ ಆಗಿ ಅದರ ಮರುದಿನ ಬಿಟ್ಟು ಮರುದಿನ ಊಜಂಪಾಡಿಯಲ್ಲಿ ಭೂತಕ್ಕೆ ಕೂಡುವುದು. ಮರುದಿನ ಊಜಂಪಾಡಿಯ ಮನೆಯ ಸಮೀಪದ ಸ್ಥಾನದಲ್ಲಿ ಜೂಮಾದಿ ಭೂತ, ಮತ್ತೆ ರಾತ್ರಿ ಅಲ್ಲಿ ಗುಳಿಗ, ಪಂಜುರ್ಲಿ, ಜಾವತೆ (ಬಹುಶಃ ದೇವತೆ ಎನ್ನುವುದರ ರೂಪವಾಗಿರಬೇಕು ಇದು) ಮೊದಲಾದ ಸಣ್ಣ ಭೂತಗಳು. ಅದರ ಮರುದಿನ ಎರಡು ವರ್ಷಗಳಿಗೊಮ್ಮೆ ಅಂಕತ್ತ ಮಜಲಿನಲ್ಲಿ (ಇದು ಹಿಂದಿನ ಯುದ್ಧಕ್ಷೇತ್ರವೇ‌‌‌? ಅಂಕ=ಯುದ್ಧ) ನಡೆಯುವ ಜೂಮಾದಿ ನೇಮ. ಇದು ಹಿಂದೆ ಊಜಂಪಾಡಿವರ ಒಕ್ಕಲುಗಳಾಗಿದ್ದವರೆಲ್ಲಾ ಒಟ್ಟು ಸೇರಿ ವಂತಿಗೆ ಹಾಕಿ ನಡೆಸುವ ಕಾರ್ಯಕ್ರಮ.
ಇನ್ನು ಬಹಳ ಪ್ರಧಾನವಾದ ಮುಗೇರಿನ ಭೂತಗಳು ಪ್ರಾರಂಭ. ಇಲ್ಲಿ ಮುಗೇರು ಮನೆಯ ಬಗ್ಗೆ ಸ್ವಲ್ಪವಾದರೂ ಹೇಳದಿದ್ದರೆ ಇದು ಅಪೂರ್ಣವಾದೀತು. ಮುಗೇರು ದೇಲಂಪಾಡಿಯ ಬಹಳ ಪ್ರತಿಷ್ಠಿತ ಬ್ರಾಹ್ಮಣ ಮನೆತನ. ಈಗ ಇದು ಕರ್ನಾಟಕ ರಾಜ್ಯದಲ್ಲಿದೆ. ಆದರೆ ಪರಂಪರಾಗತವಾಗಿ ಹೇಳುವುದಾದರೆ ಮುಗೇರು ಕಳೆದು ಗುಡ್ಡಡ್ಕಕ್ಕೆ ಹೋಗುವಾಗ ಸಿಗುವ ನಾಣೀಲು ತೋಡು ಈಗಲೂ ಕುಂಬಳೆ ಸೀಮೆಯ ಗಡಿ. ಹಿಂದೆ ಬಲ್ಲಾಳ ಅರಸರು ತಮ್ಮ ಆಳ್ವಿಕೆಯ ನಂತರ ಈ ಭಾಗದ ತಮ್ಮ ಜಮೀನನ್ನು ಮುಗೇರಿನ ಬ್ರಾಹ್ಮಣ ಮನೆತನದವರಿಗೆ ಮತ್ತು ಊಜಂಪಾಡಿಯ ಬಂಟ ಮನೆತನದವರಿಗೆ ಕೊಟ್ಟರೆಂದು ಪ್ರತೀತಿ. ನಮ್ಮ ಹಿರಿಯರು ಹೇಳುತ್ತಿದ್ದ ಪ್ರಕಾರ ಆ ಕಾಲದಲ್ಲಿ ದೇಲಂಪಾಡಿಯಲ್ಲಿ ಸ್ವಂತ ಭೂಮಿ ಇದ್ದುದು ಮುಗೇರಿನವರಿಗೆ, ಊಜಂಪಾಡಿಯವರಿಗೆ, ಕಾಟೂರಾಯರಿಗೆ ಮತ್ತು ಮಿತ್ತಂತರದವರಿಗಂತೆ. ಆಗ ಮುಗೇರಿನಲ್ಲಿ ಎಲ್ಲಾ ಜಾತಿಯವರೂ ಒಕ್ಕಲುಗಳಾಗಿದ್ದರು. ಅವರು ಆ ಕಾಲದಲ್ಲಿ ಬಹಳ ಉದಾರಿಗಳಾಗಿದ್ದರೆಂದೂ ಬಡವರ ಕಷ್ಟಗಳಿಗೆ ಸ್ಪಂದಿಸುತ್ತಿದ್ದರೆಂದೂ ಹಿರಿಯರು ಹೇಳುತ್ತಿದ್ದರು. ಆಗ ಮುಗೇರಿನಲ್ಲಿ ಗದ್ದೆಗೆ ಗೊಬ್ಬರ ಹೊರುವಾಗಲೂ ವಾದ್ಯ ನುಡಿಸುತ್ತಿದ್ದರು ಎ೦ಬುದು ಪ್ರತೀತಿ ಮಾತ್ರವಲ್ಲ ಯಾಥಾರ್ಥ್ಯ ಕೂಡ. ಇಂತಹ ಮುಗೇರು ಮನೆಯಲ್ಲಿ ನನಗೆ ಗೊತ್ತಾಗುವ ಸಮಯದಲ್ಲಿ ಇದ್ದ ಕುಟುಂಬದ ಯಜಮಾನ ಎ೦ದರೆ ರಾಧಾಕೃಷ್ಣ ರಾಯರು. ಅವರು ಸಾಮಾನ್ಯ 1995 – 96ರ ಆಸುಪಾಸಿನಲ್ಲಿ ತೀರಿಹೊದರೆಂದು ನನ್ನ ನೆನಪು.
ಇನ್ನು ಮುಗೇರಿನ ಭೂತಗಳ ಬಗ್ಗೆ ಹೇಳುವುದಾದರೆ ಇದು ಖಂಡಿತವಾಗಿಯೂ ದೇಲಂಪಾಡಿಯ ಊರ ಜಾತ್ರೆ! ಅಂಕತ್ತಮಜಲಿನ ಭೂತಗಳ ಮರುದಿನ ಮುಗೇರಿನಲ್ಲಿ ಪೂಕರೆ. ಅಂದರೆ ಭೂತಕ್ಕೆ ಧ್ವಜಾರೋಹಣ. ಪೂಕರೆಯ ದಿವಸ ಊಜಂಪಾಡಿಯಿಂದ ಹೊರಟ ಕಂಬಳದ ಕೋಣಗಳು ಮುಗೇರಿನ ಬಾಕಿಮಾರು ಕಂಡಕ್ಕೆ(ಗದ್ದೆ) ಪ್ರವೇಶ ಮಾಡುವುದರೊಂದಿಗೆ ಕಾರ್ಯಕ್ರಮಗಳು ಪ್ರಾರಂಭವಾಗುತ್ತದೆ. ನಂತರ ಎರು ಕೋಲ. ತುಳುವಿನಲ್ಲಿ ಎರು ಎ೦ದರೆ ಎತ್ತು ಎ೦ದರ್ಥ. ಇದು ಒಬ್ಬ ಉಗ್ರಾಣಿ ಮತ್ತು ಸೇನೆರ್ ಕೋಲ ಕಟ್ಟಿ ಆಡುವ ಒಂದು ಸಣ್ಣ ಭೂತ. ಇದು ಸ್ವಲ್ಪ ಹಾಸ್ಯಭರಿತವಾಗಿರುತ್ತಿತ್ತು. ಆಗ ಸೀನ ಮತ್ತು ಚೋಮ ಈ ಎರಡು ಭೂತಗಳನ್ನು ಕಟ್ಟುತ್ತಿದ್ದರು. ಇಲ್ಲಿನ ಪ್ರಧಾನ ದೈವವಾದ ಜೂಮಾದಿಯನ್ನು ಚೋಮನವರೂ, ರಾಜನ್ ದೈವವಾದ ಉಳ್ಳಾಗುಳು ದೈವವನ್ನು ಸೀನನವರೂ ಕಟ್ಟುತ್ತಿದ್ದರು ಆದಕಾರಣವೋ ಏನೋ ಪೂಕರೆ ದಿವಸ ಉಗ್ರಾಣಿ ಮತ್ತು ಸೇನೆರ್ ಕೋಲವನ್ನು ಇವರಿಬ್ಬರು ನಿರ್ವಹಿಸುತ್ತಿದ್ದರು. ಪೂಕರೆ ಅಂದರೆ ಕಂಗಿನ ಸಲಾಕೆಗಳ ಮೂಲಕ ಬಹಳ ಮನೋಹರವಾಗಿ ನಿರ್ಮಿಸುತ್ತಿದ್ದ ಒಂದು ರಚನೆ. ಅದು ಸಾಮಾನ್ಯವಾಗಿ 15ರಿಂದ 20ಅಡಿ ಉದ್ದ ಇರುತ್ತದೆ. ಅದಕ್ಕೆ ಕೇಪುಳು ಪೂ, ಪಾದೆ ಪೂ ಮತ್ತು ಪಿಂಗಾರದಿಂದ ಅಲಂಕಾರ ಮಾಡಲಾಗುತ್ತದೆ. ವಿಶ್ವಕರ್ಮ ವಿಭಾಗಕ್ಕೆ ಸೇರಿದ ಆಚಾರಿಗಳು ಇದನ್ನು ಬಹಳ ನಿಷ್ಠೆಯಿ೦ದ ತಯಾರಿಸುತ್ತಾರೆ. ನಾನು ಸಣ್ಣವನಿದ್ದ ಸಮಯದಲ್ಲಿ ಬಹಳ ವಯಸ್ಕರಾದ ಒಬ್ಬರು ಇದನ್ನು ಮಾಡುತ್ತಿದ್ದರು. ತಯಾರು ಮಾಡಿದ ನಂತರ ಇದನ್ನು ಮಡಿವಾಳ ಮತ್ತು ಕೊಟ್ಟಾರಿಯವರು ಸೇರಿ ಶುದ್ಧಮಾಡಿ ಬಿಟ್ಟುಕೊಡುವ ಸಮಯದಲ್ಲಿ ಆಚಾರಿಗಳು ಕೆಲವು 'ಎಡ್ಡೆಪಾತೆರ' ಹೇಳುತ್ತಿದ್ದರು. ಆಗ ಅವರಿಗೆ ಆವೇಶವಾಗಿ ದರ್ಶನ ಬರುತ್ತಿತ್ತು. ಆಗ ಆ ದೃಶ್ಯವನ್ನು ನೋಡಿದ ಯಾರಿಗೇ ಆದರು ಭಕ್ತಿ ಹುಟ್ಟದಿರದು. ಈಗಲೂ ಆ ಘಟನೆ ನನ್ನ ಮನಸ್ಸಿನಲ್ಲಿ ಬರುತ್ತಿದೆ. ನಂತರ ನಮ್ಮೂರಿನ ಗೌಡ ಸಮಾಜದವರೆಲ್ಲ ಸೇರಿ ಪೂಕರೆಯನ್ನು ಎತ್ತಿಕೊಂಡು ಬಹಳ ಆವೇಶದಿಂದ ಪೂಕರೆ ಕಂಡಕ್ಕೆ ಹೋಗಿ ಅಲ್ಲಿ ಅದಕ್ಕಾಗಿಯೇ ಕಲ್ಲು ಮತ್ತು ಸಿಮೆಂಟಿನಿಂದ ನಿರ್ಮಿಸಿದ ಪೀಠದಲ್ಲಿ ಅದರ ಬುಡವನ್ನು ಸೇರಿಸಿ ಮೂರು ಸುತ್ತು ಬಂದು ಬಹಳ ಆವೇಶದಿಂದ ಏರಿಸುತ್ತಾರೆ. ಈ ಕಾರ್ಯವನ್ನು ಗೌಡ ಸಮಾಜದ ಎರಡು ವಿಭಾಗದವು ಸೇರಿ ನಿರ್ವಹಿಸುತ್ತಾರೆ. ವಾಲ್ತಾಜೆಯವರು ಮತ್ತು ಕಾಪಿಲದವರು(ಕನಕಮಜಲು). ಈ ಸಮಯದಲ್ಲಿ ಎಲ್ಲರೂ ಓ...S....SS...SSS......... ಎ೦ದು ಹೇಳುತ್ತಾರೆ. ನಂತರ ಬಂದಂತಹ ಎಲ್ಲರಿಗೂ ಒಬ್ಬರಿಗೆ ಒಂದರಂತೆ ಸಿಯಾಳ ಹಂಚಲಾಗುತ್ತದೆ. ಪೂಕರೆ ಹಿಡಿದವರಿಗೆ ಮತ್ತು ಅಲ್ಲಿನ ಪರಿಕರ್ಮಿಗಳಿಗೆ ಎರಡೆರಡು ಸಿಯಾಳವನ್ನು ಕೊಡಲಾಗುತ್ತದೆ. ಇದಕ್ಕೆ ಜೋಡು ಮರ್ಯಾದಿ ಎ೦ದು ಹೇಳುವುದು. ಅಂದರೆ ಡಬ್ಬಲ್ ಗೌರವ. ನೋಡಿ... ಆ ಕಾಲದಲ್ಲಿ ಪೂಕರೆಗೆ ಬಹಳ ಕಡಿಮೆ ಎ೦ದರೂ ಸಾಮಾನ್ಯ 250ರಿಂದ 300 ಜನ ಬರುತ್ತಿದ್ದರು. ಅವರಿಗೆಲ್ಲಾ ಬೊಂಡ ಕೊಡುತ್ತಿದ್ದರು ಎ೦ದರೆ...ಇದಕ್ಕೆ ಹೇಳುವುದು ಧರ್ಮ ಎ೦ದು...! ಮತ್ತೆ ಈ ಎಲ್ಲಾ ಕಾರ್ಯಕ್ರಮಗಳು ಯಾವೊಂದು ವಂತಿಗೆಯೂ ಇಲ್ಲದೆ ಮುಗೇರು ಮನೆಯವರ ಉಸ್ತುವಾರಿಯಲ್ಲಿ ಮತ್ತು ಖರ್ಚಿನಲ್ಲಿ ನಡೆಯುತ್ತಿತ್ತು ಮತ್ತು ನಡೆಯುತ್ತಿದೆ.
ಪೂಕರೆಯ ಮರುದಿನ ಕೆಲವು ಸಣ್ಣಪುಟ್ಟ ಭೂತಗಳು, ಅದರ ಮರುದಿನ ಪ್ರಧಾನವಾದ ಜೂಮಾದಿ, ಮರುದಿನ ರಾಜನ್ ದೈವ ಉಳ್ಳಾಕುಲು, ಮತ್ತು ರಾತ್ರಿ ನೂರಒಂದು ಭೂತ. ಪ್ರಾರಂಭದಿಂದ ಕೊನೆಯವರೆಗಾಗುವಾಗ ಮುಗೇರ್ ನಾಲ್ ಗುಡ್ಡೆತುಳಯಿ (ಮುಗೇರು ನಾಲ್ಕು ಗುಡ್ಡೆಯ ಒಳಗೆ, ಬಹುಶಃ ಹಿಂದಿನ ಕಾಲದಲ್ಲಿ ಇದು ಮುಗೇರಿನ ವ್ಯಾಪ್ತಿ!) ನೂರ ಒಂದು ಭೂತಗಳನ್ನು ಕಟ್ಟಿ ಆಡಲಾಗುತ್ತದೆ. ಈ ಭೂತಗಳಲ್ಲಿ ಊರಿನ ಎಲ್ಲಾ ವೃತ್ತಿ ವರ್ಗದವರು, ಕಸುಬಿನವರು ಇತ್ಯಾದಿಯಾಗಿ ಎಲ್ಲಾ ಭೂತಗಳೂ ಸೇರಿರುತ್ತಿತ್ತು. ಸ್ತ್ರೀಯರೂ ಸೇರಿದಂತೆ ಊರಿನ ಜನರು ಪ್ರಧಾನ ದೈವವಾದ ಜೂಮಾದಿಯ ಕೋಲಕ್ಕೆ ಹೆಚ್ಚಾಗಿ ಬರುತ್ತಿದ್ದರು. ಭೂತದ ಪರಿಕರ್ಮಿಗಳಾಗಿ ಸಮಾಜದ ವಿವಿಧ ಜಾತಿ, ಪಂಗಡಗಳವರು ಇರುತ್ತಿದ್ದರು. ಇದು ಸೂಟೆ ಕಟ್ಟುವ ಕಾಪಾಡ ಎ೦ಬ ವಿಭಾಗದಿಂದ ತೊಡಗಿ ತಂತ್ರಿ, ಅಡಿಗಳು(ಬ್ರಾಹ್ಮಣ), ಗುತ್ತು ಬಾರಿಕೆ (ಭಂಟ), ಪೂಜಾರಿ, ಕೊಟ್ಟಾರಿ, ಪೆಟ್ಟಿಗೆ (ಗೌಡ ವಿಭಾಗದವರು), ಬೆಳ್ಗೊಡೆ (ಮಡಿವಾಳ), ಕೈವಿಳಕ್ಕು (ವಾಣಿಯ ಗಾಣಿಗ), ಕಲಶ (ಬಿಲ್ಲವ ಪೂಜಾರಿ), ವಾದ್ಯ (ಕ್ಷೌರಿಕ ಬಂಡಾರಿ) ಮತ್ತು ಭೂತ ಕಟ್ಟಲು ಕೋಪಾಳ ವಿಭಾಗವರು ಹೀಗೆ ಇದು ಸಾಮಾಜದ ವಿವಿಧ ಸ್ಥರದವರ ಅವರರವರ ಕುಲ ವೃತ್ತಿಗೆ ಸಂಬಂಧಿಸಿದ ಒಂದು ಪ್ರಾಚೀನ ಸಂಸ್ಕೃತಿಯನ್ನು ತೋರಿಸುತ್ತಿತ್ತು. ಹೀಗೆ ಪೂಕರೆಯಿಂದ ತೊಡಗಿ ಐದು ದಿನಗಳ ಕಾಲ ಬಹಳ ವಿಜೃಂಭಣೆಯಿಂದ ಮುಗೇರಿನ ಭೂತವು ಊರಿಗೆ ಒಂದು ಜಾತ್ರೆಯಾಗುತ್ತಿತ್ತು. ಕೊನೆಯ ದಿನ ರಾತ್ರಿ ನೂರಾವೊಂದು ಭೂತ ಆಗಿ ಮರುದಿನ ಮ೦ಜಾನೆ ಕಟ್ಟಿದ ಒಂದು ಭೂತವು ಕೋಳಿಯನ್ನು ಹಿಡಿದು ಬಿಡುವುದರೊಂದಿಗೆ ಪ್ರಸಿದ್ಧವಾದ 'ಮುಗೇರಿನ ಕೋಳಿಕಟ್ಟ' ಪ್ರಾರಂಭ.
'ಮುಗೇರಿನ ಕೋಳಿಕಟ್ಟ' ವು ಆ ಕಾಲದಲ್ಲಿ ಊರಿನಲ್ಲಿಯೂ ಪರವೂರಿನಲ್ಲಿಯೂ ಪ್ರಸಿದ್ಧವಾಗಿತ್ತು. ಇದು ಐದು ದಿನಗಳ ಕಾಲ ನಡೆಯುತ್ತಿದ್ದ ಒಂದು ಕಾರ್ಯಕ್ರಮ. ಇಲ್ಲಿ ಕೋಳಿಕಟ್ಟಕ್ಕಿಂತಲೂ ಹೆಚ್ಚಾಗಿ ಊರಿನ ವರ್ಷದ ಒಂದು ಸಂತೆಯಾಗಿರುತ್ತಿತ್ತು. ಆ ಕಾಲದಲ್ಲಿ ನಮ್ಮೂರಿನವರೆಲ್ಲಾ ವರ್ಷದ ಮಣಿಸರಕು, ಜವಳಿ, ಚಪ್ಪಲು ಇತ್ಯಾದಿ ಖರೀದಿಯನ್ನೆಲ್ಲಾ ಈ ಸಮಯದಲ್ಲಿಯೇ ಮಾಡುತ್ತಿದ್ದರು. ದೊಡ್ಡವರೆಲ್ಲಾ ಕೋಳಿ ಹಿಡಿದು ಕಟ್ಟಕ್ಕೆ ಹೋದರೆ ಹೆಂಗಸರು ಮಕ್ಕಳೂ ಎಲ್ಲಾ ಚಿಲ್ಲರೆ ಹಿಡಿದು ಸಂತೆಗೆ ಹೋಗುತ್ತಿದ್ದರು. ಕೋಳಿ ಕಟ್ಟ ಎ೦ದು ಹೇಳುವಾಗ ಅದರದ್ದೇ ಆದ ಕುಡಿತ, ಜೂಜು ಎಲ್ಲ ಇದ್ದರೂ ಆದಕ್ಕಿಂತಲೂ ವ್ಯತ್ಯಸ್ಥವಾಗಿ ಊರ ಜನರ ಖರೀದಿಗಿರುವ ಒಂದು ಜಾಗ ಎ೦ಬ ನೆಲೆಯಲ್ಲಿ ಈ ಕೋಳಿಕಟ್ಟವು ಇತರ ಇದೇ ರೀತಿಯ ಕಟ್ಟಗಳಿಂದ ಪ್ರತ್ಯೇಕವಾಗಿ ನಿಲ್ಲುತ್ತದೆ. ಅಲ್ಲಿ ಇರುತ್ತಿದ್ದ ಕಟ್ಲೇರಿ ಹುಕ್ರಪ್ಪ ಗೌಡರ ಮಿಠಾಯಿ, ಪೆರ್ಲಂಪಾಡಿಯವರ ಬಳೆ - ಮಣಿಸರಕು, ಕಾಸರಗೋಡು ಮಂಜಪ್ಪಣ್ಣನ ಜವಳಿ ಅಂಗಡಿ, ಸೇಸು ಮೂಲ್ಯರ ಮತ್ತು ಮದ್ಲದವರ ಮಣ್ಣಿನ ಮಡಿಕೆ, ಪೂಜಾರಿಗಳ ಓಲೆ ಬೆಲ್ಲ, ಹೋಟೆಲು. ಸೋಜಿಯಂಗಡಿ, ಸರ್ಕಸ್ಸು, ಸೈಕಲ್ ಸವಾರಿ ಇತ್ಯಾದಿಯೆಲ್ಲಾ ಮಕ್ಕಳಿಗೆ ಹಿರಿಯರಿಗೆ ಎಲ್ಲರಿಗೂ ಒಂದೇ ಸಮನೆ ಖುಷಿ ಕೊಡುವ ವಿಚಾರಗಳಾದ್ದುವು.
ಹೀಗೆ ಐದು ದಿನದ ಕಟ್ಟದ ನಂತರ ಹತ್ತು ದಿನ ಕಳೆದು ಬಿರಿ ಕಟ್ಟ. ಅಲ್ಲಿನವರೆಗೆ ಈ ಸಂತೆಗಳೂ ಇರುತ್ತಿದ್ದವು. ಬಿರಿಕಟ್ಟ ಕಳೆದ ನಂತರ ಮಂಜೆ ಎ೦ಬ ಸಣ್ಣ ಕಾರ್ಯಕ್ರಮದೊಂದಿಗೆ ಆ ವರ್ಷದ ಭೂತದ ಕಾರ್ಯಕ್ರಮಗಳಿಗೆ ವಿದಾಯ. ಆದಕಾರಣ ಈ ಎಲ್ಲಾ ವಿಚಾರಗಳು ನಮ್ಮೂರಿನ ಚರಿತ್ರೆಯ ಒಂದು ಭಾಗವೇ ಆಗಿತ್ತು ಎ೦ದು ಖಂಡಿತವಾಗಿಯೇ ಹೇಳಬಹುದು. ಎಲ್ಲವೂ ಯಾಂತ್ರಿಕವಾದ ಇಂದಿನ ಕಾಲದಲ್ಲಿ ಈಗ ಮುಗೇರಿನ ಕೋಳಕಟ್ಟದ ಅಡ್ಕವು ಇದಕ್ಕೆಲ್ಲಾ ಸಾಕ್ಷಿ ಎ೦ಬಂತೆ ಮೌನವಾಗಿ ಮಲಗಿದೆ. ಜನರೂ ಇಲ್ಲ..... ಗಮ್ಮತ್ತೂ ಇಲ್ಲ...... ಗೌಜಿಯೂ ಇಲ್ಲ.... ಇರುವ ಜನರಿಗೆ ಪುರುಸೊತ್ತೂ ಇಲ್ಲ!!!!

1 comment: