Saturday 17 September 2022

ಮಂಡೆ ಎಂಬ ಶ್ರಮ ಜೀವಿ

 ಮಂಡೆ ಎಂಬ ಶ್ರಮ ಜೀವಿ



'ಮಂಡೆ', ಇದು ಒಬ್ಬರ ಹೆಸರು. ತನ್ನ ಜೀವನ ಪೂರ್ತಿ ದುಡಿಮೆಯನ್ನೇ ಕಾಯಕವಾಗಿಸಿ ದಿನ ನಿತ್ಯದ ಅನ್ನಾಹಾರದಲ್ಲೇ ಸಂತೃಪ್ತಿಯನ್ನು ಕಂಡು ಹೆಚ್ಚಿನದ್ದೇನನ್ನೂ ಅಪೇಕ್ಷಿಸಲೂ ಆಶಿಸಲೂ ಸಾಧ್ಯವಿಲ್ಲದೆ ತಮ್ಮ ಜೀವನವನ್ನು ಸವೆಸಿ, ಕೊನೆಗೊಳಿಸುವ ಬಡ ಶ್ರಮ ಜೀವಿ ಸಮೂಹದ ಒಬ್ಬ ಪ್ರತಿನಿಧಿ.

ನಾನು ಹುಟ್ಟಿ ನನಗೆ ಬುದ್ಧಿ ಬರುವ ಕಾಲದಿಂದಲೇ ಈ ಮಂಡೆಯನ್ನು ನನಗೆ ಗೊತ್ತು. ನಮ್ಮ ದೇಲಂಪಾಡಿಯ ಒಂದು ಭಾಗವಾದ ಕೋಪಾಲಮೂಲೆಯಲ್ಲಿ ಮಂಡೆಯ ವಾಸ, ತನ್ನ ಪ್ರೀಯ ಪತ್ನಿ ಕೊರಪ್ಪೊಳು ಮತ್ತು ಮಕ್ಕಳೊಂದಿಗೆ.

ನನ್ನ ತಂದೆಯವರು ಆ ಕಾಲದಿಂದಲೇ ಕೆಲಸಗಳ ಕಂತ್ರಾಟು ವಹಿಸಿ ವಿವಿಧ ತರದ ಕೆಲಸಗಳನ್ನು ಮಾಡಿಸುತ್ತಿದ್ದುದರಿಂದ ಆಗಲೇ ನಮ್ಮ ತಂದೆಯವರ ಜೊತೆಗೆ ಈ ಮಂಡೆ ಮತ್ತು ಕೊರಪ್ಪಳು ಕೆಲಸಕ್ಕೆ ಬರುತ್ತಿದ್ದರು. ನಂತರ ನಮ್ಮ ಮನೆಯ ಕೆಲಸಗಳಿಗೂ ಈ ಮಂಡೆ ಮತ್ತು ಕೊರಪ್ಪಳು ಯಾವಾಗಲೂ ಒದಗುತ್ತಿದ್ದರು.

ಬೆಳಿಗ್ಗೆ ಮನೆಯಿಂದ ಗಂಜಿ ಕುಡಿದೋ ಕುಡಿಯದೆಯೋ ಇವರು ಕುಟುಂಬ ಸಮೇತರಾಗಿ ಹೊರಟರೆಂದರೆ ನಂತರ ನಮ್ಮ ಮನೆಯಲ್ಲಿಯೋ, ಕೆಲಸ ಮಾಡುವ ಇತರ ಮನೆಗಳಲ್ಲಿಯೋ ಹತ್ತೋ ಹನ್ನೊಂದೋ ಗಂಟೆಗೆ ಚಾ ಜೊತೆಗೆ ದೋಸೆಯೋ, ಕಡುಬೋ, ರೊಟ್ಟಿಯೋ ಅಥವಾ ಇನ್ನೇನಾದರೋ ತಿನ್ನುವಾಗಲೇ ಇವರಿಗೆ ಹೊಟ್ಟೆ ಪೂರ್ತಿ ತುಂಬುತ್ತಿತ್ತು. ಈ ಮಂಡೆ ಮತ್ತು ಕೊರಪ್ಪಳು ಯಾವತ್ತೂ ಜೀವನ ಪೂರ್ತಿ ದುಡಿಮೆ ಮಾತ್ರ ಮಾಡುವ, ಆದರೆ ಆಧುನಿಕವಾದ ಇನ್ನಿತರ ಯಾವುದೇ ಸೌಕರ್ಯ ಸೌಲಭ್ಯಗಳಿಗೆ ಆಸೆ ಪಡಲೂ ಅವಕಾಶ ಅಥವಾ ಅಧಿಕಾರವಿಲ್ಲದ ಒಂದು ದೊಡ್ಡ ಅವಕಾಶ ವಂಚಿತ ಜನವಿಭಾಗದ ಪ್ರತಿನಿಧಿಗಳಾಗಿ ಯಾವತ್ತೂ ನಮ್ಮ ಮುಂದೆ ನಿಲ್ಲುತ್ತಾರೆ.

ಇವರಿಗೆ ಯಾವುದೇ ಕೆಲಸವನ್ನು ವಹಿಸಿದರೆ ಅತ್ಯಂತ ಶ್ರದ್ಧೆಯಿಂದ ಅಚ್ಚುಕಟ್ಟಾಗಿ ನಿರ್ವಹಿಸುವ ಜಾಣ್ಮೆ ಜನ್ಮತಃ ಕರಗತವಾಗಿದೆಯೆಂದೇ ಹೇಳಬಹುದು. ಸಾಮಾನ್ಯವಾದ ತೋಟದ ಕೆಲಸಗಳಿಂದ ಹಿಡಿದು ತೆಂಗು, ಕಂಗು ಹಾಗೂ ಇತರ ಮರ ಏರುವ ಕೆಲಸಗಳು, ಮಣ್ಣಿನ ಕೆಲಸಗಳು, ಬಾವಿ. ಕೆರೆ, ಕೊಳಗಳ ಕೆಲಸಗಳು, ಕಪ್ಪು ಕಲ್ಲು ಒಡೆಯುವ, ಕಟ್ಟುವ ಕೆಲಸಗಳು ಇವೆಲ್ಲವೂ ಈ ಮಂಡೆಯು ಸಲೀಸಾಗಿ ನಿರ್ವಹಿಸುತ್ತಿದ್ದ ಕೆಲಸಗಳಾಗಿದ್ದವು. ಅದೇ ರೀತಿ ನಾವೇನಾದರೂ ಮನೆ ಬಿಟ್ಟು ಕೆಲದಿನಗಳ ಮಟ್ಟಿಗೆ ಹೊರಗೆ ಹೋಗುವುದಾದರೆ ಆಗಲೂ ಅತ್ಯಂತ ಪ್ರಾಮಾಣಿಕವಾಗಿ ಈ ದಂಪತಿಗಳು ನಮ್ಮ ಮನೆ ಕಾಯುವ ಕೆಲಸವನ್ನು ಮಾಡುತ್ತಿದ್ದರು.

ಈ ಮಂಡೆಗೆ ಉತ್ತಮ ಹಾಸ್ಯ ಪ್ರಜ್ಞೆಯೂ ಇತ್ತು. ಕೆಲಸದ ಮಧ್ಯೆ ನಮ್ಮಂತಹ ಮಕ್ಕಳನ್ನು ಇವರ ಆ ಕಾಲದ ತಮಾಷೆಗಳ ಮೂಲಕ ನಕ್ಕು ನಗಿಸುತ್ತಿದ್ದರು. ಇನ್ನು ಈ ಮಂಡೆಯ ಹೊಟ್ಟೆಯಲ್ಲಿ ಹೊಕ್ಕುಳಿಗಿಂತ ಮೇಲೆ ಒಂದು ಅಂಬಟೆಯಾಕಾರದ ಬಾಪು ಇತ್ತು. ಅದೇನೆಂದು ನಾವು ಕೇಳುವಾಗ ಅದು ಮೊದಲೊಮ್ಮೆ ಅಂಬಟೆಯನ್ನು ನುಂಗಿದಾಗ ಅದು ಅಲ್ಲಿ ಸಿಕ್ಕಿ ಕೊಂಡದ್ದೆಂದು ಹೇಳುತ್ತಿದ್ದರು. ನಮ್ಮಂತಹ ಬೋದಾಳ ಮಕ್ಕಳು ಅದನ್ನು ನಂಬುತ್ತಿದ್ದರು. ಇಲ್ಲದಿದ್ದರೆ ಅಂಬಟೆ ನುಂಗಿದರೂ ಅದು ಮೇಲ್ ಹೊಟ್ಟೆಯಲ್ಲಿ ಹೊರಗೆ ಕಾಣುವಂತೆ ಸಿಕ್ಕಿಕೊಳ್ಳುವುದುಂಟೆ!!?

ರಜಾ ದಿವಸಗಳಲ್ಲಿ ಈ ಮಂಡೆ ಸ್ವಲ್ಪ ಸಾರಾಯಿ ಕುಡಿಯುವುದಿತ್ತು. ಆಗೆಲ್ಲಾ ಮನೆಗೆ ಬಂದರೆ ಅವರ ತಮಾಷೆಗಳು ಸ್ವಲ್ಪ ಜಾಸ್ತಿ ಆಗುತ್ತಿತ್ತೇ ವಿನಃ ಅವರ ನಡವಳಿಕೆಗಳಲ್ಲಿ ಬೇರೇನೂ ವ್ಯತ್ಯಾಸವಾಗುತ್ತಿರಲಿಲ್ಲ. ಹಾಗಂತ ಕೆಲಸದ ಸಮಯಗಳಲ್ಲಿ ಈ ಮಂಡೆ ಖಾಲಿಯಾಗಿರುತ್ತಿತ್ತು.

ಈ ರೀತಿಯಾಗಿ ದಿನಪೂರ್ತಿ ಮೈ ಬೆವರು ಸುರಿಸಿ ಕೆಲಸ ಮಾಡುತ್ತಿದ್ದರೂ ಈ ಮಂಡೆಯ ಕುಟುಂಬಕ್ಕೆ ಉಳಕೊಳ್ಳಲು ಉತ್ತಮವಾದ ಒಂದು ಬೆಚ್ಚನೆಯ ಸೂರು ಇರಲಿಲ್ಲ. ನಾನು ಸಣ್ಣದಿರುವಾಗ ನೋಡಿದ ಮಂಡೆಯ 'ಚೇರ’ ಎಂದು ಕರೆಯಲ್ಪಡುತ್ತಿದ್ದ ಸಣ್ಣ ಗುಡಿಸಲಿಗೂ ಅದರ ನಂತರ ಎರಡು ಸಲ ಪಂಚಾಯತು ಧನಸಹಾಯದಿಂದ ಕಟ್ಟಲ್ಪಟ್ಟ ಮಂಡೆಯ 'ಮನೆ’ಗೂ ಹೆಚ್ಚಿನ ವ್ಯತ್ಯಾಸವೇನೂ ಇರಲಿಲ್ಲ. ಅರ್ಥಾತ್ ಈ ರೀತಿಯ ಧನಸಹಾಯ ಲಭಿಸಿದರೂ ಅದನ್ನು ಸರಿಯಾದ ರೀತಿಯಲ್ಲಿ ಈ ವ್ಯಕ್ತಿಗಳಿಗೆ ಪ್ರಯೋಜನಕಾರಿಯಾಗಿಸುವಲ್ಲಿ ನಮ್ಮ ಪ್ರಸ್ತುತ ವ್ಯವಸ್ಥೆಯು ಪರಿಪೂರ್ಣವಾಗಿ ಸಫಲವಾಗಲಿಲ್ಲ ಎಂದೇ ಹೇಳಬೇಕಾಗುತ್ತದೆ.

ಅಂತೂ ಜೀವನದ ಪೂರ್ಣ ತೊಂಬತ್ತು ತೊಂಬತ್ತೈದು ಸಂವತ್ಸರಗಳನ್ನು ಇನ್ನೊಬ್ಬರ ಮನೆಯಲ್ಲಿ ಚಾಕರಿ ಮಾಡುತ್ತಾ ದುಡಿದು ಸವೆಸಿದ ಮಂಡೆ ಹದಿನೈದು ವರ್ಷಗಳ ಹಿಂದೆ ತೀರಿಕೊಂಡಾಗ ತನ್ನವರಿಗಾಗಿ ಏನನ್ನೂ ಬಾಕಿ ಉಳಿಸಿಕೊಳ್ಳಲಾಗಲಿಲ್ಲವೆಂಬುದು ನಮ್ಮ ಸಾಮಾಜಿಕ ವ್ಯವಸ್ಥೆಯ ಒಂದು ದೌರ್ಬಲ್ಯ ಎಂದೇ ಹೇಳಬೇಕಾಗುತ್ತದೆ. ಮಂಡೆಯ ನಿಧನಾನಂತರ ಹತ್ತು ಹದಿನೈದು ವರ್ಷಗಳ ತನಕ ನಮ್ಮ ಹಾಗೂ ಪಕ್ಕದ ಹಲವಾರು ಮನೆಗಳಲ್ಲಿ ತನಗೆ ಸಾಧ್ಯವಾಗುವಷ್ಟರ ಮಟ್ಟಿಗೆ ಕೂಲಿ ನಾಲಿ ಮಾಡಿ ಜೀವನ ಮುಂದುವರಿಸಿದ ಕೊರಪ್ಪಳುರವರು ಮೂರ್ನಾಲ್ಕು ವರ್ಷಗಳ ಹಿಂದೆ ತೀರಿಕೊಂಡಾಗ ಆ ಶ್ರಮಿಕ ಕುಟುಂಬದ ಜೀವನ ಚರಿತ್ರೆಯ ಭಾಗವಾಯಿತು.

ಮಂಡೆಯ ಯೌವನ ಕಾಲದಲ್ಲಿ ಮಂಡೆಯ ಸಮಕಾಲೀನರಾಗಿದ್ದು ಅವರಂತೆಯೇ ದುಡಿತವನ್ನೇ ಜೀವನವನ್ನಾಗಿಸಿಕೊಂಡಿದ್ದ ಇತರ ಜನ ಸಮುದಾಯದವರು ತಮ್ಮ ಕುಟುಂಬದ ಎರಡನೇ ತಲೆಮಾರಿಗಾಗುವಾಗ ಅತಿ ಬಡತನದ ಸ್ಥಿತಿಯಿಂದ ಕನಿಷ್ಟ ಮಧ್ಯಮ ವರ್ಗದ ಸಾಮಾಜಿಕ ಸ್ಥಿತಿ, ಅಂತಸ್ತಿನ ಮಟ್ಟಕ್ಕೆ ಸ್ಥಾನಪಲ್ಲಟವಾದರೂ ಈ ಮಂಡೆ ಮತ್ತು ಅವರ ಸಮುದಾಯದ ಇತರರು ತಮ್ಮ ಮುಂದಿನ ತಲೆಮಾರಿನಲ್ಲಿಯೂ ಹಿಂದಿನ ರೀತಿಯಲ್ಲಿಯೇ ಈಗಲೂ ಮುಂದುವರಿಯುತ್ತಿದ್ದಾರೆ ಎನ್ನುವಲ್ಲಿ ನಮ್ಮ ಸಂವಿಧಾನವು ಪ್ರತಿಪಾದಿಸುವ, ನಮ್ಮ ಸಾಮಾಜಿಕ ವ್ಯವಸ್ಥೆಯ ಅವಕಾಶ ಸಮತ್ವ ಅಥವಾ ಆ ಅವಕಾಶಗಳನ್ನು ಉಪಯೋಗಿಸಿಕೊಳ್ಳುವ ರೀತಿಯಲ್ಲಿ ಎಲ್ಲೋ ಒಂದು ಕಡೆ ಏನೋ ಕೆಲವು ಕೊರತೆಗಳಿವೆ ಎಂಬ ವಾಸ್ತವಾಂಶಗಳನ್ನು ನಮಗೆ ಒಪ್ಪಿಕೊಳ್ಳದೇ ಇರಲು ಸಾಧ್ಯವಿಲ್ಲ. ಅದಲ್ಲ ಅಂತಾದ್ರೆ ಅವರ ಮುಂದಿನ ತಲೆಮಾರಿನವರಾದ್ರೂ ಇತರರ ಮಟ್ಟಕ್ಕಲ್ಲಂತಾದ್ರೂ ಅದರ ಸಮೀಪಕ್ಕಾದರೂ ತಲುಪಬೇಕಾಗಿತ್ತು, ಬೆಳೆಯಬೇಕಾಗಿತ್ತು. ಅಂತೂ ಮಂಡೆಯನ್ನು ಒಂದು ಪ್ರತೀಕವಾಗಿ ಇಟ್ಟುಕೊಂಡು ನೋಡುವಾಗ ಶತಶತಮಾನಗಳಿಂದ ಶೋಷಣೆಗೊಳಗಾಗಿ ದುರಿತವನ್ನನುಭವಿಸಿದ, ತನ್ನದಲ್ಲದ ಕಾರಣಗಳಿಂದಾಗಿ ಸಮಾಜದಲ್ಲಿ ಯಾವುದಕ್ಕೂ ಆಸೆಪಡುವುದಕ್ಕೋ, ಕನಸುಕಾಣುವುದಕ್ಕೋ ಅವಕಾಶವಿಲ್ಲದೆ ಬದುಕಿದ ಒಂದು ಜನವಿಭಾಗದ ಜೀವನ ನಮ್ಮನ್ನು ಅಣಕಿಸುತ್ತದೆ, ದುಃಖಿತರನ್ನಾಗಿಸುತ್ತದೆ. ಇಂತವರನ್ನು ಕಂಡೇ ಪ್ರಸಿದ್ಧ ಕವಿ ಡಾ. ಸಿದ್ಧಲಿಂಗಯ್ಯನವರು ಬರೆದಿರಬೇಕು....

ಬೀದಿವಾಸಿಯ ಅಳಲು ಜೋಪಡಿಯ ಕತ್ತಲು

ದಿನದಿನದ ಅನ್ನಕ್ಕೆ ಮಾರಿಕೊಳ್ಳುವ ಮಯ್ಯಿ

ಆಸೆಯಲಿ ಚಾಚಿರುವ ಲಂಚಕೋರನ ಕೈಯಿ

ಯುಗಯುಗವು ಕಳೆದರೂ ಅಳಿಯದೇನು?

ಮಂಡೆ ಮತ್ತು ಅದೇ ರೀತಿ ಬದುಕಿದ ಶ್ರಮಜೀವಿಗಳಿಗೆ ಚಿರಶಾಂತಿ ಲಭಿಸಲಿ. ಮುಂದಿನ ತಲೆಮಾರಿಗಾದರೂ ಹೊಸ ಅವಕಾಶಗಳ ನವಲೋಕ ತೆರೆದು ಬರಲಿ ಎಂದು ಹಾರೈಸೋಣ.

No comments:

Post a Comment