Tuesday 28 April 2020

ಊರೊಳಗಿನ ಊರುಗಳು


ಊರೊಳಗಿನ ಊರುಗಳು
ದೇಲಂಪಾಡಿಯೊಳಗಣ 134 ಸ್ಥಳಗಳ ಮೂಲಕ ಒಂದು ಪಯಣ....

ಹೇಳಿ ಕೇಳಿ ನನ್ನ ಊರು ದೇಲಂಪಾಡಿ. ಅಂದರೆ ದೇಲಂಪಾಡಿ ಪಂಚಾಯತಿನ ಮುಖ್ಯ ಪ್ರದೇಶವಾದ ದೇಲಂಪಾಡಿ. ದೇಲಂಪಾಡಿ ಪಂಚಾಯತು ದೇಲಂಪಾಡಿಯಿಂದ ಹಿಡಿದು ಅಡೂರು, ಪಾಂಡಿ, ಬಳವಂತಡ್ಕ, ಅತ್ತನಾಡಿ, ಪಳ್ಳಂಜಿ, ಪಯರಡ್ಕ ಇತ್ಯಾದಿ ಅನೇಕ ಪ್ರದೇಶಗಳನ್ನೊಳಗೊಂಡಿದೆ. ಸದ್ಯಕ್ಕೆ ಈ ಎಲ್ಲಾ ಪ್ರದೇಶಗಳನ್ನು ನಾನು ಮುಟ್ಟಲು ಹೋಗುವುದಿಲ್ಲ, ನನ್ನ ದೇಲಂಪಾಡಿಯ ಸುತ್ತಮುತ್ತಲಿನ ಸಣ್ಣ ಸಣ್ಣ ಊರುಗಳ ಬಗ್ಗೆ ಹೇಳುವುದು ಮಾತ್ರ ಇಲ್ಲಿ ನನ್ನ ಉದ್ದೇಶ. ಈ ಸ್ಥಳನಾಮಗಳ ಹಿನ್ನೆಲೆ, ಚರಿತ್ರೆ ಇತ್ಯಾದಿಗಳ ಬಗ್ಗೆಯೂ ಅಧಿಕೃತವಾಗಿ ಹೇಳುವಷ್ಟು ಸಾಮರ್ಥ್ಯವೂ ಇಲ್ಲ. ಮುಂದಕ್ಕೆ ಸಾಧ್ಯವಾದರೆ ಇನ್ನೊಮ್ಮೆ ನೋಡೋಣ. ಇದ್ಯಾವುದನ್ನೂ ಹೇಳದಿದ್ದರೆ ಮತ್ತೆ ಇಲ್ಲಿ ಈ ಊರುಗಳ ಹೆಸರನ್ನು ಹೇಳೋದು ಯಾಕೆ ಎಂಬ ಸಂಶಯ ನಿಮಗೆ ಬರಬಹುದು. ಇದಕ್ಕೆ ಪ್ರಧಾನವಾಗಿ ಎರಡು ಕಾರಣಗಳಿವೆ. ಮೊದಲನೆಯದಾಗಿ ಈಗಾಗಲೇ ಹಲವರ ಬಾಯಿಂದ ಅಳಿದು ಹೋಗಿರುವ ಈ ಸ್ಥಳನಾಮಗಳು ಸ್ವಲ್ಪವಾದ್ರೂ ಉಳಿಯಲಿ ಎಂಬುದು. ಇನ್ನೊಂದು ನಮ್ಮೂರಿನ ಎಲ್ಲಾ ಸಣ್ಣ ಸಣ್ಣ ಪ್ರದೇಶಗಳಿಗೂ ಬೇರೆ ಬೇರೆ ಹೆಸರುಗಳಿದ್ದುವು ಎಂದು ನಮ್ಮ ಮುಂದಿನ ತಲೆಮಾರಿಗೆ ಸ್ವಲ್ಪವಾದರೂ ತಿಳಿಯಲಿ ಎಂಬುದು.
ಸಮೂಹ ಮಾಧ್ಯಮಗಳ ಪರಿಣಾಮದಿಂದಾಗಿ ಜಗತ್ತು ಮೇರೆಗಳಿಲ್ಲದ ಒಂದು ಜಾಗತಿಕ ಗ್ರಾಮವಾಗಿ ಬದಲಾಗುತ್ತಿರುವ ಈ ಕಾಲಘಟ್ಟದಲ್ಲಿ ನಮ್ಮ ನಮ್ಮ ಅಸ್ತಿತ್ವವನ್ನು ನಾವು ಉಳಿಸಿಕೊಳ್ಳುವ ರೀತಿಯಲ್ಲಿಯೇ ನಮ್ಮ ನಮ್ಮ ಊರಿನ ಅಸ್ತಿತ್ವವನ್ನೂ ಉಳಿಸಿಕೊಳ್ಳಬೇಕಾದುದು ಅಗತ್ಯವಾಗಿದೆ. ಆದುದರಿಂದ ಊರೊಳಗಿನ ಊರುಗಳು ಎಂಬ ನನ್ನ ಈ ಲೇಖನದಲ್ಲಿ ನಮ್ಮ ದೇಲಂಪಾಡಿ ಗ್ರಾಮಕ್ಕೊಳಪಟ್ಟ ಸುತ್ತಮುತ್ತಲಿನ ಸಣ್ಣ ಸಣ್ಣ ಪ್ರದೇಶಗಳ ಹೆಸರನ್ನು ಇಲ್ಲಿ ಪ್ರಸ್ತಾಪಿಸುತ್ತಾ ಮುಂದುವರಿಯುತ್ತೇನೆ.
ಮೊದಲಿಗೆ ಪೂರ್ವ ಭಾಗದಿಂದ ಪ್ರಾರಂಭಿಸಿದರೆ ಕೇರಳದ ಗಡಿ ಪ್ರದೇಶವಾದ ಪಂಜಿಕಲ್ಲಿನಿಂದ ದೇಲಂಪಾಡಿಯ ಕಡೆಗೆ ನನ್ನ ಈ ಪ್ರಯಾಣವನ್ನು ಪ್ರಾರಂಭಿಸುತ್ತೇನೆ. ನಮ್ಮ ದೇಲಂಪಾಡಿಗೆ ಸಂಬಂಧಿಸಿ ಹೇಳುವುದಾದರೆ ಪಂಜಿಕಲ್ಲು (1) ಸಾಮಾನ್ಯ ಆಗ್ನೇಯ ಭಾಗದಲ್ಲಿದೆ. ಅಡೂರು ಶ್ರೀ ಮಹಾಲಿಂಗೇಶ್ವರ ಕ್ಷೇತ್ರಕ್ಕೆ ಸಂಬಂಧಿಸಿದ ಇಂದ್ರಕೀಲಕ ಕಥೆೊಂದಿಗೆ ಈ ಪ್ರದೇಶ ತಳಕು ಹಾಕಿಕೊಂಡಿದೆ ಎಂದು ಹಿರಿಯರು ಹೇಳುತ್ತಾರೆ. ಇಂದ್ರಕೀಲಕ ಪ್ರಸಂಗದಲ್ಲಿ ಬರುವ ಹಂದಿ ಬಿದ್ದ ಪ್ರದೇಶವೇ ಈ ಪಂಜಿಕಲ್ಲು ಎಂಬ ಒಂದು ಕಥೆ ಇದೆ. ಹಂದಿಗೆ ತುಳುವಿನಲ್ಲಿ ಪಂಜಿ ಎನ್ನುತ್ತಾರೆ. ಪಂಜಿ ಬಿದ್ದ ಕಲ್ಲು ಪಂಜಿಕಲ್ಲಾಗಿದೆ. ಇನ್ನೊಂದು ಕಥೆಯ ಪ್ರಕಾರ ಬೆಳ್ಳಿಪ್ಪಾಡಿ ಮತ್ತು ಮಂಡೆಕೋಲು ಭಾಗದಿಂದ ವಾರ್ಷಿಕ ನೇಮಾದಿಗಳು ಕಳದ ನಂತರ ಈ ಪ್ರದೇಶಕ್ಕೆ ಮಾರಿ ಬರುವ ಕ್ರಮ ಇದೆ. ಮಾರಿಯ ಸಮಯದಲ್ಲಿ ಹಂದಿಯನ್ನು ಬಲಿಕೊಡುತ್ತಿದ್ದರು. ಹಂದಿಯನ್ನು ಬಲಿಕೊಡುವ ಒಂದು ಕಲ್ಲು ಇಲ್ಲಿ ಹೊಳೆಬದಿಯಲ್ಲಿದೆ. ಕಾರಣದಿಂದಲೂ ಪಂಜಿಕಲ್ಲ್ ಎಂಬ ಹೆಸರು ಬಂದಿರಬಹುದೆಂದು ಹೇಳುತ್ತಾರೆ. ಇಲ್ಲಿಂದ ಸ್ವಲ್ಪ ಮುಂದುವರಿದು ಪಶ್ಚಿಮಾಭಿಮುಖವಾಗಿ ಬರುವಾಗ ಬಲಬದಿಗೆ ಒಂದು ರಸ್ತೆ ಸಿಗುತ್ತದೆ. ಅಲ್ಲಿಯೇ ಸ್ವಲ್ಪ ಮುಂದುವರಿದಾಗ ನಾವು ಬಂದು ತಲುಪುವ ಒಂದು ಸಣ್ಣ ಪ್ರದೇಶವೇ ಮೆನ್ನ (2) ಅಥವಾ ಮೆನ್ನತ್ತಮೂಲೆ. ಇದೊಂದು ಐದಾರು ಮನೆಗಳಿರುವ ಸಣ್ಣ ಪ್ರದೇಶ. ಹಿಂದೆ ಯಾರೊ ಒಬ್ಬ ಮೆನ್ನ ಎನ್ನುವ ವ್ಯಕ್ತಿ ವಾಸಮಾಡುತ್ತಿದ್ದ ಒಂದು ಪ್ರದೇಶವೇ ಮೆನ್ನಮೂಲೆ ಅಥವಾ ಮೆನ್ನತ್ತಮೂಲೆಯಾಗಿರಬಹುದು ಎಂದು ತಿಳಿದುಬರುತ್ತದೆ. ಸ್ವಲ್ಪ ಮುಂದವರಿದಾಗ ಸಿಗುವ ಪ್ರದೇಶ ನಡುಬೈಲು (3). ಇದು ಈ ಬೆಳ್ಳಿಪ್ಪಾಡಿ ಪ್ರದೇಶಕ್ಕೆ ಸಂಬಂಧಿಸಿ ನಡುಭಾಗದಲ್ಲಿರುವ ಬಯಲು ಪ್ರದೇಶವಾದ ಕಾರಣ ಇದು ನಡುಬೈಲು. ಈಗಿನ ತೆಂಕುತಿಟ್ಟಿನ ಪ್ರಸಿದ್ದ ವೇಷಧಾರಿ, ಕಟೀಲು ಮೇಳದ ಯುವ ಕಲಾವಿದ ಶ್ರೀ ಮೋಹನ ಬೆಳ್ಳಿಪ್ಪಾಡಿಯವರ ಮನೆ ಇದೇ ನಡುಬೈಲಿನಲ್ಲಿದೆ. ಸ್ವಲ್ಪ ಮುಂದವರಿದರೆ ಬಲಭಾಗದಲ್ಲಿ ನಮಗೆ ನಡುಬೆಟ್ಟು (4) ಎಂಬ ಸ್ವಲ್ಪ ಎತ್ತರದ ಜಾಗ ಸಿಗುವುದು. ಬೆಳ್ಳಿಪ್ಪಾಡಿಯ ಪ್ರಸಿದ್ಧ ಉಳ್ಳಾಗುಳು ಧೂಮಾವತಿ ಕ್ಷೇತ್ರವು ಇಲ್ಲಿದೆ. ಇಲ್ಲಿಂದ ಇನ್ನೂ ಬಲಭಾದಲ್ಲಿ ಸ್ವಲ್ಪ ಎತ್ತರದಲ್ಲಿರು ಐದಾರು ಮನೆಗಳಿರುವ ಒಂದು ಪ್ರದೇಶಕ್ಕೆ ಪಡ್ಪು (5) ಎಂದು ಕರೆಯುತ್ತಾರೆ. ಕೃಷಿಯೋಗ್ಯವಾದ ಸಮತಲ ಗುಡ್ಡಪ್ರದೇಶವನ್ನು ಪಡ್ಪು ಎನ್ನುತ್ತಾರೆ. ಈ ಪ್ರದೇಶಗಳಲ್ಲಿ ಹೇರಳವಾಗಿ ಮುಳಿಹುಲ್ಲ ಬೆಳೆಯುತ್ತದೆ. ಮರ ಗಿಡಗಳೂ ಇರುತ್ತವೆ. ಇನ್ನು ಈ ಪಡ್ಪಿನಿಂದ ಮೇಲಕ್ಕೆ ಮೈಕ್ರೋ ಟವರಿನ ಕಡೆಗಾಗಿ ಸಾಗುವಾಗ ಸಿಗುವ ಎರಡು ಸ್ಥಳಗಳಿವೆ. ಅವುಗಳಲ್ಲೊಂದು ಇಡ್ಯಡ್ಕ (6) ಮತ್ತು ಇನ್ನೊಂದು ಬೆಳ್ಳಿಪ್ಪಾಡಿ ತೋಟ (7). ಮತ್ತೆ ಪುನಃ ಕೆಳಗಿಳಿದು ಬಯಲಿನ ದಾರಿಯಲ್ಲಿಯೇ ಮುಂದುವರಿಯುವಾಗ ಸಿಗುವ ಸ್ಥಳವೇ ಬೆಳ್ಳಿಪ್ಪಾಡಿ (8). ಪ್ರಸ್ತುತ ಪಂಜಿಕಲ್ಲಿನಿಂದ ಹಿಡಿದು ಕಲ್ಲಡ್ಕ, ದೇರ್ಕಜೆಯವರೆಗಿನ ಎಲ್ಲಾ ಪ್ರದೇಶಗಳನ್ನೂ ಬೆಳ್ಳಿಪ್ಪಾಡಿ ಎಂದು ಕರೆಯಲಾಗುತ್ತಿದ್ದರೂ ಹಿಂದಿನ ಕಾಲದಲ್ಲಿ ಇಲ್ಲಿಗೆ ಬಂದ ಬೆಳ್ಳಿಪ್ಪಾಡಿ ಮನೆಯವರು ನೆಲೆನಿಂತ ಮೂಲ ಸ್ಥಳ ಮತ್ತು ಅದಕ್ಕೆ ಸಂಬಂಧಿಸಿದ ಭೂತಸ್ಥಾನ, ತರವಾಡು ಎಲ್ಲಾ ಇರುವ ಪ್ರಧಾನವಾದ ಈ ಸ್ಥಳವೇ ಮೂಲ ಬೆಳ್ಳಿಪ್ಪಾಡಿ ಎನ್ನಬಹುದು. ಇಲ್ಲಿ ಪ್ರಧಾನವಾಗಿ ಮೈಸಂದಾಯ ಮತ್ತು ಧೂಮಾವತಿ ಹಾಗೂ ಇತರ ದೈವಗಳ ಆರಾಧನೆ ನಡೆಯುತ್ತದೆ. ಇಲ್ಲೇ ಸಮೀಪದಲ್ಲಿ ಈ ದೈವಸ್ಥಾನಕ್ಕೆ ಹತ್ತಿರ ಸಂಬಂಧವಿರುವ ಎರಡು ಸ್ಥಗಳು ಬೂತಾಳಕಾನ (9) ಮತ್ತು ಮಂಜಪಿಲ (10). ಎರಡು ವರ್ಷಗಳಿಗೊಮ್ಮೆ ಇಲ್ಲಿ ನಡೆಯುವ ಮಾಯಾ ಸ್ವರೂಪ ಕೋಲವು ಕಾರ್ನಿಕದ್ದಾಗಿದೆ. ಬೆಳ್ಳಿಪ್ಪಾಡಿ ಬಯಲು ಭಾಗದಿಂದ ನಾವು ಬಲಬದಿಯಲ್ಲಾಗಿ ಸ್ವಲ್ಪ ಮುಂದುವರಿದಾಗ ಸ್ವಲ್ಪ ಎತ್ತರದ ಒಂದು ಗುಡ್ಡೆ ಸಿಗುತ್ತದೆ. ಇದುವೇ ಮಠದ ಗುಡ್ಡೆ (11). ಹಿಂದಿನ ಕಾಲದಲ್ಲಿ ಇಲ್ಲೊಂದು ಮಠವಿತ್ತೆಂದು ಬಲ್ಲವರು ಹೇಳುತ್ತಾರೆ. ಹಿಂದೆ ದಕ್ಷಿಣ ಕನ್ನಡದ ವಿವಿಧ ಭಾಗಗಳಿಂದ ಸನ್ಯಾಸಿಗಳು ಅಡೂರು ಕ್ಷೇತ್ರಕ್ಕೆ ಮುಂದುವರಿಯುವಾಗ ಇಲ್ಲಿ ವಿಶ್ರಾಂತಿ ಪಡೆದು ಸಾಗುತ್ತಿದ್ದರಂತೆ. ಈಗ ಮಠದ ಅವಶೇಷಗಳಾವುವೂ ಇಲ್ಲಿ ಇಲ್ಲದೇ ಇದ್ದರೂ ಇಲ್ಲಿ ಈಗಲೂ ಯಾರಿಗೂ ಮನೆ ಕಟ್ಟುವುದಕ್ಕೆ ಸಾಧ್ಯವಾಗುವುದಿಲ್ಲ ಎಂಬುದು ಪ್ರತೀತಿ. ಅಲ್ಲಿಂದ ಮುಂದಕ್ಕೆ ಸಾಗಿದಾಗ ಸಿಗುವ ಇನ್ನೊಂದು ಪ್ರದೇಶ ಅಮ್ಮಾಜಿಮೂಲೆ (12). ಹಿಂದಿನ ಕಾಲದಲ್ಲಿ ಉಪಯೋಗಿಸುತ್ತಿದ್ದ ಅಪ್ಪಾಜಿ.. ಅಮ್ಮಾಜಿ... ಎಂಬ ಸಂಬಂಧಸೂಚಕ ಪದಗಳಿಂದ ಈ ಹೆಸರು ಬಂದಿರಬಹುದೋ ಏನೋ.... ಅಮ್ಮಾಜಿ ಇದ್ದ ಮೂಲೆಯೇ ಅಮ್ಮಾಜಿಮೂಲೆಯಾಗಿರಬಹುದು. ಅಮ್ಮಾಜಿಮೂಲೆಯನ್ನು ದಾಟಿ ಕನಕಮಜಲಿನಿಂದ ಬರುವ ರಸ್ತೆಗೆ ನಾವು ಇಳಿಯುತ್ತೇವೆ. ಅಲ್ಲೇ ಬಲಬದಿಯಲ್ಲಿ ಇರುವ ಸ್ಥಳವೇ ದೇರ್ಕಜೆ (13). ದೇರ್ಕಜೆ ಕರ್ನಾಟಕ ರಾಜ್ಯಕ್ಕೆ ಸೇರಿದ ಪ್ರದೇಶವಾದರೂ ನಮ್ಮ ಬೆಳ್ಳಿಪ್ಪಾಡಿಯ ಒಂದೆರಡು ಮನೆಗಳು ಈ ಪ್ರದೇಶದಲ್ಲಿವೆ. ಅಲ್ಲಿಂದ ರಸ್ತೆಯ ಮೂಲಕ ದೇಲಂಪಾಡಿಯ ಕಡೆಗೆ ನಡೆಯುವಾಗ ಮುಂದಕ್ಕೆ ಸಿಗುವ ಸ್ಥಳ ಓಟೆಕಜೆ (14). ಟೆ ಬಿದಿರುಗಳು ಹೇರಳವಾಗಿರುವುದರಿಂದಾಗಿ ಈ ಪ್ರದೇಶ ಓಟೆಕಜೆಯಾಯಿತೆಂದು ಹಿಂದಿನವರು ಹೇಳುತ್ತಾರೆ. ಇಲ್ಲಿಯೇ ನಮ್ಮ ದೇಲಂಪಾಡಿಯ ಪಟೇಲರಾಗಿದ್ದ ಕಾಟರಾಯ ಲಕ್ಷ್ಮೀನಾರಾಯಣಯ್ಯನವರ ಮಗನಾಗಿದ್ದ ದೇಲಂಪಾಡಿ ಕಾಟೂರಾಯ ಶಂಭು ಶರ್ಮರ ಮನೆ 'ಬೃಂದಾವನ' ಮತ್ತು ಅವರ ಕೃಷಿ ಸ್ಥಳವಿರುವುದು. ಸುತ್ತಮುತ್ತಲೂ ದೇಲಂಪಾಡಿಗೆ ನಿಕಟ ಸಂಪರ್ಕವಿರುವ ಹಲವಾರು ಮನೆಗಳಿವೆ. ಅಲ್ಲಿಂದ ಮುಂದಕ್ಕಿರುವ ಒಂದು ಘಾಟಿಯನ್ನು ರಸ್ತೆ ಮೂಲಕವಾಗಿ ಮುಂದುವರಿದು ಮುಂದಕ್ಕೆ ಹೋದಾಗ ನಮಗೆ ಎಡಭಾಗದಲ್ಲಿ ಸಿಗುವ ಸ್ಥಳವೇ ಬಾಳೆಕೋಡಿ (15). ಇಲ್ಲಿ ಬಾಳೆಕೋಡಿ ಗೌಡ ಮನೆತನದವರ ನಾಲ್ಕೈದು ಮನೆ, ತರವಾಡು ಮತ್ತು ದೈವಸ್ಥಾನಗಳಿವೆ. ನಂತರ ಬಾಳೆಕೋಡಿಯ ದಕ್ಷಿಣಕ್ಕೆ ಹಾಗೂ ಅಮ್ಮಾಜಿಮೂಲೆಯ ಪಶ್ಚಿಮಕ್ಕೆ ಬನದಮೂಲೆಯ ತನಕ ವ್ಯಾಪಿಸಿದ ಒಂದು ಜಾಗವಿದೆ. ಸುಮಾರು 5 ತಲೆಮಾರಿನ ಇತಿಹಾಸ ಹೊಂದಿದ ಈ ಸ್ಥಳವನ್ನು ಕೋಟಿಗದ್ದೆ (16) ಎನ್ನುವರು. ಈ ಜಾಗಕ್ಕೆ ಹಿಂದೆ ಕೋಡಿಕಂಡ ಎಂದು ತುಳು ಭಾಷೆಯಲ್ಲಿ ಕರೆಯುತಿದ್ದರು. ನಾನು ಮುಂದೆ ಹೇಳಲಿರುವ ಗೌರಿ ತೋಡಿನ ಬಲ ದಂಡೆಯ ಮೂರು ಬೆಳೆ ಬೆಳೆಯುವ ಏಕೈಕ ಕೊಳಕೆ ಗದ್ದೆಗೆ ಹಿಂದೆ ಕೋಡಿಕಂಡ (ಕೊನೆಯ ಗದ್ದೆ) ಎನ್ನುವ ಹೆಸರು ಇದ್ದಿರಬಹುದು. ಈ  ಕೋಡಿಕಂಡವೇ ಮುಂದಕ್ಕೆ ಕೋಟಿಕಂಡವಾಗಿ ಅಲ್ಲಿಂದ ಕನ್ನಡ ಭಾಷಾಂತರವಾಗಿ ಕೋಟಿಗದ್ದೆಯಾಗಿರಬಹುದು. ಕೊಟಿಕಂಡಕ್ಕೆ ತಾಗಿಕೊಂಡು ಮುಂದಕ್ಕೆ ಇರುವ ಒಂದು ಸಣ್ಣ ಪ್ರದೇಶವೇ ಬನದಮೂಲೆ (17). ಬನ ಅಂದರೆ ವನ ಎಂಬುದರ ಕನ್ನಡ ರೂಪವಾದರೂ ಇಲ್ಲಿ ಬನ ಎನ್ನುವಾಗ ದೈವ ದೇವರಿಗೆ ಸಂಬಂಧಿಸಿದ ಬನದ ನೆನಪು ಬರುವುದು. ಹಾಗೆ ದೇವರಿಗೆ ಸಂಬಂಧಿಸಿದ ಬನ ಇರುವ ಮೂಲೆಯೇ ಬನದಮೂಲೆಯಾಗಿರಬಹುದೇನೋ? ಅಲ್ಲಿ ಮುಂದಕ್ಕೆ ಅತ್ಯಂತ ಎತ್ತರದಲ್ಲಿರುವ ಜಾಗವೇ ಶಕ್ತಿನಗರ (18). ಇಲ್ಲಿ ಪ್ರಸಿದ್ಧವಾದ ಬೆಳ್ಳಿಪ್ಪಾಡಿ ಶಕ್ತಿನಗರ ಶ್ರೀ ಶಾರದಾಂಭಾ ಭಜನಾ ಮಂದಿರವಿರುವುದು. ಭಜನಾ ಮಂದಿರದಿಂದ ನೇರ ಸ್ವಲ್ಪ ಮುಂದಕ್ಕೆ ಬರುವಾಗ ಎಡಭಾಗಲ್ಲಿ ಕೆಳಗೆ ರುವ ಸ್ಥಳವನ್ನು ಪಾಳೆಮಜಲು (19) ಎನ್ನುತ್ತಾರೆ. ಹಾಳೆಯ ಮಜಲು ಎಂಬರ್ಥದಲ್ಲಿ ಪಾಳೆಮಜಲಾಗಿರಬಹುದು. ಅದೇ ರೀತಿ ಭಜನಾಮಂದಿರದ ಎಡಭಾಗದಲ್ಲಿ ಹಿಂದಕ್ಕೆ ಬಂದು ಬೆಳ್ಳಿಪ್ಪಾಡಿ ಬೈಲಿಗೆ ಹೋಗುವ ದಾರಿಯಲ್ಲಿ ಕೆಳಕ್ಕೆ ಇಳಿದಾಗ ಸಿಗುವ ಒಂದು ಸಣ್ಣ ತೋಡು ಇರುವ ಸ್ಥಳವೇ ಗೌರಿತೋಡು (20). ಈ ಗೌರಿತೋಡು ದಾಟಿ ನಾವು ಮುಂದುವರಿದಾಗ ನಮಗೆ ಬೆಳ್ಳಿಪ್ಪಾಡಿ ಬಯಲು ಸಿಗುವುದು. ನಾವು ಅಮ್ಮಾಜಿಮೂಲೆಗೆ ಹೋಗುವಾಗ ಬೆಳ್ಳಿಪ್ಪಾಡಿ ಬಯಲನ್ನು ಬಿಟ್ಟ ಜಾಗಕ್ಕೆ ತಲುಪುತ್ತೇವೆ. ಇಲ್ಲಿಂದ ಪಶ್ಚಿಮಾಭಿಮುಖವಾಗಿ ಸ್ವಲ್ಪ ಸಾಗಿದರೆ ಅಲ್ಲಿ ಎಂಟ್ಹತ್ತು ಕುಟುಂಬಗಳು ವಾಸಿಸುವ ರೆಂಜಾಳ (21) ಎಂಬ ಸ್ಥಳವಿದೆ. ಈ ರೆಂಜಾಳದಿಂದ ಮತ್ತೂ ಮುಂದಕ್ಕೆ ಹೋದರೆ ಪಂಜಿಕಲ್ಲ ದೇಲಂಪಾಡಿ ರಸ್ತೆ ಸಿಗುತ್ತದೆ. ಒಟ್ಟು ಬೆಳ್ಳಿಪ್ಪಾಡಿ ಪ್ರದೇಶದಲ್ಲಿ ಬಹುಸಂಖ್ಯಾತರಾಗಿರು ಗೌಡ ಸಮಾಜದವರ ಪೈಕಿ ಹೆಚ್ಚಿನವರು ಹೊಸಮನೆ (22) ಹಳೆಮನೆ (23) ಎಂಬ ಎರಡು ಕವಲುಗಳಿಗೆ ಸೇರುತ್ತಾರೆ. ಇವರು ಎಲ್ಲಿದ್ದರೂ ಇವರ ಮನೆಗಳಿಗೆ ಈ ವಿಶೇಷಣಗಳನ್ನು ಉಪಯೋಗಿಸುವುದರಿಂದ ಮತ್ತು ನಿರ್ಧಿಷ್ಟವಾಗಿ ಒಂದು ಸ್ಥಳಕ್ಕೆ ಈ ಹೆಸರನ್ನು ಕೊಡಲು ಸಾಧ್ಯವಿಲ್ಲದುದರಿಂದ ಈ ಹೊಸಮನೆ, ಹಳೆಮನೆಯನ್ನು ಇಲ್ಲಿ ಪ್ರತ್ಯೇಕ ಸ್ಥಳಗಳಾಗಿ ಸೂಚಿಸಿಲ್ಲ. ಆದರೆ ಒಟ್ಟು ಸ್ಥಳಗಳ ಪಟ್ಟಿಯಲ್ಲಿ ಇದನ್ನು ಸೇರಿಸಿರುತ್ತೇನೆ. ಇಲ್ಲಿಗೆ ಸಾಮಾನ್ಯವಾಗಿ ಬೆಳ್ಳಿಪ್ಪಾಡಿ ಎಂಬ ವಿಶಾಲ ವ್ಯಾಪ್ತಿಯಲ್ಲಿ ಬರುವ ಸ್ಥಳಗಳಿಗೆ ಒಂದು ಪ್ರದಕ್ಷಿಣೆ ಬಂದಾಯಿತು.
ಇನ್ನು ನಾವು ಕುತ್ತಿಮುಂಡ ಭಾಗಕ್ಕೆ ಹೋಗೋಣ. ಕುತ್ತಿಮುಂಡ ಅಂದರೆ ಕುತ್ತಿಯ ಹಾಗೆ ಕಡಿಮೆ ಎತ್ತರಕ್ಕೆ ಬೆಳೆಯುತ್ತಿದ್ದ ಒಂದು ಜಾತಿಯ ಮುಳ್ಳಿನ ಗಿಡ. ಹಿಂದೆ ಈ ಪ್ರದೇಶದಲ್ಲಿ ಈ ಜಾತಿಯ ಗಿಡಗಳು ಹೇರಳವಾಗಿದ್ದುವಂತೆ. ಹಾಗೆ ಈ ಪ್ರದೇಶಕ್ಕೆ ಕುತ್ತಿಮುಂಡ ಎಂಬ ಹೆಸರು ಬಂತೆಂದು ಹಿಂದಿನವರು ಹೇಳುತ್ತಾರೆ. ಕುತ್ತಿಮುಂಡ ಭಾಗಕ್ಕೆ ಹೋಗಬೇಕಾದರೆ ನಾವು ಹಿಂದೆ ಹೇಳಿದ ಓಟೆಕಜೆ ಭಾಗದಿಂದ ಬಲಭಾಗದ ಮೂಲಕ ಉತ್ತರ ದಿಕ್ಕಿಗೆ ಸಾಗಬೇಕು. ಹೀಗೆ ಉತ್ತರ ದಿಕ್ಕಿನ ಮೂಲಕ ಗುಡ್ಡವನ್ನು ಹತ್ತಿ ಸಾಗುವಾಗ ನಮಗೆ ಸಿಗುವ ಮೊದಲ ಜಾಗವೇ ಪೊಸಕಂಡ (24). ಪೊಸಕಂಡ ಅಂದರೆ ಹೆಸರೇ ಸೂಚಿಸುವ ಹಾಗೆ ಪೊಸಕಂಡ. ತುಳುವಿನಲ್ಲಿ 'ಪೊಸ' ಅಂದರೆ 'ಹೊಸತು' 'ಕಂಡ' ಅಂರೆ 'ಗದ್ದೆ'. ಇಡೀ ಕುತ್ತಿಮುಂಡದಲ್ಲಿ ಹಿಂದೆ ಇದ್ದ ಪ್ರಧಾನವಾದ ಒಂದು ವಿಭಾಗದವರು ಎಂದರೆ ಗೌಡ ಸಮಾಜದವರು. ಇಡೀ ಕುತ್ತಿಮುಂಡ ಬೈಲು ಇವರಿಗೆ ಸೇರಿತ್ತು. ಇವರ ಜೊತೆಗೆ ಒಂದೆರಡು ಸ್ಥಳೀಯ ಇತರ ವಿಭಾಗದವರೂ ಇದ್ದರು. ಹೀಗೆ ಈ ಕುತ್ತಿಮುಂಡದ ಗೌಡ ಸಮಾಜದವರ ಕುಟುಂಬ ವಿಸ್ತಾರವಾದಾಗ ಕೃಷಿ ಸ್ಥಳವನ್ನೂ ವಿಸ್ತರಿಸಬೇಕಾದ ಅನಿವಾರ್ಯತೆ ಒದಗಿರಬಹುದು. ಹೀಗೆ ಕಾಡಿನ ಬದಿಯಲ್ಲಿದ್ದ ಗುಡ್ಡವನ್ನು ಅಗೆದು ನೂತನವಾಗಿ ನಿರ್ಮಿಸಿದ ಗದ್ದೆಗೆ ಪೊಸಕಂಡ ಎಂದು ಹೆಸರಾಯಿತು. ನಂತರ ಆ ಪ್ರದೇಶ ಪೂರ್ತಿಯಾಗಿ ಪೊಸಕಂಡವಾಗಿ ಬದಲಾಯಿತು. ಅಲ್ಲಿಂದ ಮತ್ತೆ ಕೆಳಗಿಳಿಯುತ್ತಾ ಸಾಗುವಾಗ ನಮಗೆ ಕಾನ ಅಥವಾ ನೇಲ್ಯಕಾನ (25) ಸಿಗುತ್ತದೆ. ಕಾನ ಎಂದರೆ ಗದ್ದೆಗೆ ತಾಗಿಕೊಂಡಿರುವ ಜಮೀನು ಎಂಬ ಅರ್ಥವಿದೆ. ನೇಲ್ಯ ಎಂಬ ಪದಕ್ಕೆ ತುಳುವಿನಲ್ಲಿ ದೊಡ್ಡದು ಎಂದರ್ಥ. ಅರ್ಥಾತ್ ನೇಲ್ಯಕಾನ ಎಂದರೆ ದೊಡ್ಡ ಜಮೀನು. ಅದೇ ರೀತಿ ಕಾನನ ಅಂದರೆ ಕಾಡು ತಾನೆ.... ಇಲ್ಲೇ ಸಮೀಪದಲ್ಲಿ ದೊಡ್ಡ ಕಾಡು ಇದೆ. ಇಲ್ಲಿ ಅಪಾರವಾಗಿ ಕಾನಕಜೆ ಎಂಬ ವನುತ್ಪತ್ತಿ ಇಂದೂ ಲಭಿಸುತ್ತದೆ. ಈ ಎಲ್ಲಾ ಕಾರಣಗಳಿಂದಾಗಿ ಕುತ್ತಿಮುಂಡದ ಮುಖ್ಯ ಬಯಲು ಪ್ರದೇಶಕ್ಕೆ ತಾಗಿಕೊಂಡಿರುವ ಈ ಪ್ರದೇಶವನ್ನು ಕಾನ ಅಥವಾ ನೇಲ್ಯಕಾನ ಎಂದು ಕರೆಯುತ್ತಾರೆ. ಕಾನದಿಂದ ಹೊರಟು ಮುಂದಕ್ಕೆ ಕೆಳಗಿಳಿಯುತ್ತಾ ಸಾಗುವಾಗ ಸಿಗುವ ಸಮತಲವಾದ ಕುತ್ತಿಮುಂಡ ಬಯಲು ಪ್ರದೇಶದ ಒಂದು ಪ್ರಧಾನ ಸ್ಥಳವೇ ಕಜೆ (26). ಕಜೆ ಅಂದರೆ ನೀರಿನ ಕಜೆ ಅರ್ಥಾತ್ ನೀರಿನ ನಿಧಿ. ಇಲ್ಲಿ ಹಿಂದೆ ಯಾವುದೇ ಕಾಲಕ್ಕೂ ನೀರಿಗೆ ಬರ ಬಂದುದಿಲ್ಲವಂತೆ. ಆದರೆ ಈಗಿನ ಅವೈಜ್ಞಾನಿಕ ಜಲ ವಿನಿಯೋಗ ಮತ್ತು ಬೋರ್‍ವೆಲ್ಲಿನಿಂದಾಗಿ ಎಪ್ರಿಲ್ ತಿಂಗಳಿಗಾಗುವಾಗಲೇ ನೀರಿನ ಕೊರತೆಯಾಗುತ್ತದೆಂದು ಇಲ್ಲಿರುವ ನಮ್ಮ ವಾಸಪ್ಪ ಮಾಸ್ತರ್ ಹೇಳುತ್ತಾರೆ. ಮತ್ತೆ ಮುಂದುವರಿದಾಗ ನಮಗೆ ಕೆರೆಮೂಲೆ (27) ಸಿಗುತ್ತದೆ. ಈ ಪ್ರದೇಶ ಬಹುಶಃ ಇಡೀ ಕುತ್ತಿಮುಂಡ ಬಯಲಿನ ಒಂದು ಮೂಲೆಯಾಗಿರಬೇಕು. ಇಲ್ಲೊಂದು ಕೆರೆಯಿದೆ. ಕೆರೆ ಎಂದಿಗೂ ಬತ್ತುವುದಿಲ್ಲ. ಆದುದರಿಂದ ಬಯಲಿನ ಮೂಲೆಯಲ್ಲಿ ಕೆರೆ ಎಂಬ ಅರ್ಥದಲ್ಲಿ ಕೆರೆಮೂಲೆ ಎಂಬ ಹೆಸರು ಬಂದಿರಬೇಕು. ಹಿಂದೆ ಇಲ್ಲಿ ಲಕ್ಷ್ಮಣ ಗೌಡ ಎಂಬವರೊಬ್ಬರಿದ್ದರು. ಅವರು ಬಂದ್ಯಡ್ಕ ತರವಾಡು ಕುಟುಂಬಕ್ಕೆ ಸೇರಿದವರು. ಅವರ ಬಗ್ಗೆ ಇಲ್ಲಿ ಯಾಕೆ ಪ್ರಸ್ತಾಪಿಸುತ್ತಿದ್ದೇನೆಂದರೆ ಅವರೊಬ್ಬ ನಮ್ಮೂರಿನ ಜನಪದ ಪ್ರಪಂಚದ ಅಕ್ಷಯ ನಿ. ಸಾವಿರಾರು ವಚನಗಳು, ಕೀರ್ತನೆಗಳು, ಶೋಭಾನೆಗಳು ಮತ್ತು ಇತರ ಜನಪದ ಹಾಡುಗಳು ಅವರಿಗೆ ಬಾಯಿಪಾಠವಿತ್ತು. ಅವರನ್ನು ಪ್ರೀತಿಯಿಂದ ಜನರು ಭಜನೆ ಲಕ್ಷ್ಮಣ ಗೌಡರೆಂದೂ ಕರೆಯುತ್ತಿದ್ದರು. ಇಲ್ಲಿರುವ ಇನ್ನೊಂದು ಪ್ರದೇಶವೇ ಕೇದಗಡಿ (28). ಕೇದಗೆದ ಅಡಿ ಎಂಬ ಅರ್ಥದಲ್ಲಿ ಈ ಹೆಸರು ಬಂತು. ತೆಂಕುತಿಟ್ಟಿನ ಸುಪ್ರಸಿದ್ಧ ಹಿರಿಯ ಕಲಾವಿದರಾಗಿದ್ದ ಶ್ರೀ ಕೇದಗಡಿ ಗುಡ್ಡಪ್ಪ ಗೌಡರು ಇಲ್ಲಿ ವಾಸವಾಗಿದ್ದರು. ಇಲ್ಲೇ ಸಮೀಪದಲ್ಲಿ ಇಡೀ ಕುತ್ತಿಮುಂಡ ಗೌಡ ಸಮಾಜದವರ ತರವಾಡು ಮನೆ ಇದೆ. ಇದನ್ನು ಕುತ್ತಿಮುಂಡ (29) ತರವಾಡು ಎಂದು ಕರೆಯುತ್ತಾರೆ. ಮೇಲೆ ಹೇಳಿದ ಎಲ್ಲಾ ಪ್ರದೇಶಗಳಿಗೂ ಒಟ್ಟಾಗಿ ಕುತ್ತಿಮುಂಡ ಎಂದು ಕರೆಯುವುದಲ್ಲದೆ ಇದುವೇ ಕುತ್ತಿಮುಂ ಎಂದು ಕೈತೋರಿಸಿ ಹೇಳಬಹುದಾದ ಒಂದು ನಿರ್ದಿಷ್ಟ ಸ್ಥಳ ಇಲ್ಲದೇ ಇದ್ದರೂ ಕುತ್ತಿಮುಂಡ ತರವಾಡು ಇಲ್ಲಿರುವ ಕಾರಣ ಈ ಸ್ಥಳವನ್ನೇ ಕುತ್ತಿಮುಂಡ ಎಂದು ಕರೆಯಬಹುದು. ಇಲ್ಲಿಂದ ಮುಂದಕ್ಕೆ ಸಿಗುವ ಒಂದೆರಡು ಮನೆಗಳಿರುವ ಜಾಗವೇ ಪೊಸಇಲ್ಲಾಡೆ (30). ಇದು ಕುತ್ತಿಮುಂಡದ ಬೇರೆ ಪ್ರದೇಶದಲ್ಲಿ ಇದ್ದವರು ಇಲ್ಲಿ ಹೊಸಮನೆ ಕಟ್ಟಿ ವಾಸಿಸಲು ಪ್ರಾರಂಭಿಸಿದುದರಿಂದಾಗಿ ಬಂದ ಹೆಸರು. ಹೊಸಮನೆ ಎಂಬರ್ಥದಲ್ಲಿ ಪೊಸಇಲ್ಲಾಡೆ. ಮತ್ತೆ ಕುತ್ತಿಮುಂಡ ಬೈಲಿಗೆ ದಾಟಿ ಅಲ್ಲಿಂದ ದೇಲಂಪಾಡಿಗೆ ಹಗುವ ದಾರಿಯಲ್ಲಿ ಸಾಗುವಾಗ ಸಿಗುವ ಸ್ಥಳವೇ ಬಂದ್ಯಡ್ಕ (31). ಇದು ಬಹಳ ಹಿಂದಿನ ಕಾಲದಲ್ಲಿ ತೆಂಕಣ ಬಂದಡ್ಕದಿಂದ ಬಂದು ಇಲ್ಲಿ ನೆಲೆನಿಂತ ಗೌಡ ಸಮಾಜದವರ ಕೇಂದ್ರ ಸ್ಥಾನ. ಇಲ್ಲಿ ಬಂದ್ಯಡ್ಕ ಕುಟುಂಬಸ್ಥರ ತರವಾಡು ಮನೆಯೂ ಇದೆ. ೆಂಕಣ ಬಂದಡ್ಕದಿಂದಾಗಿಯೇ ಈ ಸ್ಥಳಕ್ಕೆ ಬಂದ್ಯಡ್ಕ ಎಂಬ ಹೆಸರಾಯಿತು. ಬಂದ್ಯಡ್ಕದ ಜಮೀನು ಮುಗಿದಾಗ ನಮಗೆ ಅದರ ಹೊರಭಾಗದಲ್ಲಿ ಉಪ್ಪಾಡ್ ಕಂಡ (32) ಎಂಬ ಒಂದು ಬಹಳ ಸಣ್ಣ ಪ್ರದೇಶವೂ ಸಿಗುತ್ತದೆ. ಇದು ಹಿಂದಿನ ಕಾಲದಲ್ಲಿ ಉಪ್ಪಿನಕಾಯಿ (ತುಳುವಿನಲ್ಲಿ ಉಪ್ಪಾಡ್) ಸಾಲಕ್ಕೆ ಮಾರಾಟ ಮಾಡಿ ಆ ಸಾಲವನ್ನು ತೀರಿಸಲಾಗದಿದ್ದಾಗ ಅವಗದ್ದೆಯನ್ನೇ ಸಾಲದ ಪಾವತಿಯಾಗಿ ವಶಪಡಿಸಿಕೊಂಡ ಒಂದು ಜಾಗವೆಂದು ಹಿಂದಿನವರು ಹೇಳುತ್ತಾರೆ. ಇದು ಒಂದು ಸಣ್ಣ ಸ್ಥಳವೇ ಹೊರತು ಹೆಚ್ಚಿನ ಕುಟುಂಬಗಳಿರುವ ಪ್ರದೇಶವಲ್ಲ. ಆದರೂ ಹೀಗೂ ಒಂದು ಜಾಗವಿತ್ತು ಎಂದು ಸೂಚಿಸುವುದಕ್ಕಾಗಿ ಇಲ್ಲಿ ಇದನ್ನು ಸೇರಿಸಿದ್ದೇನೆ.
ಇಲ್ಲಿಂದ ಪುನಃ ಕುತ್ತಿಮುಂಡ ತರವಾಡಿನಲ್ಲಿಯವರೆಗೆ ಹೋಗಿ ಅಲ್ಲಿಂದ ದಕ್ಷಿಣಾಭಿಮುಖವಾಗಿ ಸ್ವಲ್ಪ ದೂರ ಸಾಗಿದಾಸಿಗುವ ಒಂದು ಜಾಗ ಕೊರೆಕ್ಕಾನ (33). ಹಿಂದೆ ಇಲ್ಲಿಂದ ಕೆಂಗಲ್ಲು ಕಡಿಯುತ್ತಿದ್ದರಂತೆ. ಹೀಗೆ ಕೆಂಗಲ್ಲು ಕೋರೆ ಇದ್ದ ಕಾನ ಅಥವಾ ಜಮೀನು ಎಂಬರ್ಥದಲ್ಲಿ ಕೊರೆಕ್ಕಾನ ಎಂಬ ಹೆಸರು ಬಂದಿರಬಹುದು. ಸಮೀಪದಲ್ಲಿಯೇ ಚಾಂಬಾರ್ (34) ಎಂಬ ಇನ್ನೊಂದು ಸ್ಥಳವೂ ಇದೆ. ಇಡೀ ದೇಲಂಪಾಡಿಯಲ್ಲಿಯೇ ಅತ್ಯಂತ ಎತ್ತರವಾದ ಚಾಂಬಾರ್ ಗುಡ್ಡಯೂ ಇಲ್ಲೇ ಇದೆ. ಚಾಂಬಾರ್ ಗುಡ್ಡೆ ದಾಟಿ ದಕ್ಷಿಣಕ್ಕೆ ಮುಂದುವರಿದಾಗ ನಮಗೆ ಕಲ್ಲಡ್ಕ (35) ಸಿಗುತ್ತದೆ. ಕಲ್ಲುಗಳಿರುವ ಅಡ್ಕ ಎಂಬರ್ಥದಲ್ಲಿ ಈ ಪ್ರದೇಶಕ್ಕೆ ಕಲ್ಲಡ್ಕ ಎಂಬ ಹೆಸರು ಬಂದಿರಬಹುದು. ಇದು ತಾರತಮ್ಯೇಣ ಸ್ವಲ್ಪ ಹೆಚ್ಚು ವಿಸ್ತಾರವಿರುವ ಪ್ರದೇಶ. ಕಲ್ಲಡ್ಕವನ್ನು ದಾಟಿ ಪಂಜಿಕಲ್ಲು ಕಡೆಗೆ ಸಾಗುವ ರಸ್ತೆಯ ಒಳಭಾಗದ ಬಯಲಿನ ಮೂಲಕವೇ ಸಾಗುವಾಗ ನಮಗೆ ಎಡಭಾಗದಲ್ಲಿ ಸಿಗುವ ಪ್ರದೇಶವೇ ಗುಂಡ್ಯಡ್ಕ (36) ತಾರತಮ್ಯೇ ಈ ಸ್ಥಳವು ಹೊಂಡ ಪ್ರದೇಶದಲ್ಲಿದೆ. ತುಳುವಿನಲ್ಲಿ ಹೊಂಡವನ್ನು ಗುಂಡಿ ಎಂದು ಕರೆಯುತ್ತಾರೆ. ಅಲ್ಲಿಗೆ ತಲುಪಿದರೆ ಅಡ್ಕದ ರೀತಿಯ ಸಣ್ಣ ಬಯಲು ಪ್ರದೇಶವಿದೆ. ಆದುದರಿಂದ ಇದು ಗುಂಡ್ಯಡ್ಕ. ಈಗಾಗಲೇ ಹೇಳಿದ ಹಾಗೆ ಎಡಭಾಗದಲ್ಲಿ ಗುಂಡ್ಯಡ್ಕವಾದರೆ ಬಲಭಾಗದಲ್ಲಿ ಇರುವ ಪ್ರದೇಶ ಕೊಳಂಬೆ (37). ಕೊಳಂಬೆ ಎಂದರೆ ನೀರೆತ್ತಲು ಅಥವಾ ನೀರು ತುಂಬಿಸಿಡಲು ಉಪಯೋಗಿಸುವ ಮರದ ಕಾಂಡ ಅಥವಾ ಬೊಡ್ಡೆಗಳಿಂದ ಮಾಡಿದ ಅರ್ಧಚಂದ್ರಾಕೃತಿಯ ಪಾತ್ರೆ ಎಂಬ ಅರ್ಥ ನಮಗೆ ಅರ್ಥಕೋಶಗಳಿಂದ ಸಿಗುತ್ತದೆ. ಅರ್ಥಾತ್ ಯಥೇಚ್ಚವಾಗಿ ನೀರಿರುವ ಪ್ರದೇಶ ಎಂದರ್ಥ. ಇದು ಅರಣ್ಯ ಪ್ರದೇಶದ ತಪ್ಪಲಾದದರಿಂದ ಹಿಂದೆ ಈ ಭಾಗದಲ್ಲಿ ಬೇಕಾದಷ್ಟು ನೀರಿತ್ತು. ಇಲ್ಲಿಯೇ ಬನಾರಿ ಶ್ರೀ ಗೋಪಾಲಕೃಷ್ಣ ಯಕ್ಷಗಾನ ಕಲಾಸಂಘದ ಸ್ಥಾಪಕರಾದ ಕೀರಿಕ್ಕಾಡು ಮಾಸ್ತರ್ ವಿಷ್ಣುಭಟ್ಟರ ಸುಪುತ್ರರೂ ಪ್ರಸಂಗಕರ್ತರೂ ಆದ ಶ್ರೀ ವಿಶ್ವವಿನೋದ ಬನಾರಿಯವರ ಮನೆ 'ಬನಸಿರಿ' ಇರುವುದು. ಇವರ ಕೊಳಂಬೆ ಆಸ್ತಿಯ ಳಭಾಗದಲ್ಲಿರುವ ಇನ್ನೊಂದು ಸ್ಥಳವೇ ಮಾಪ್ಪಳಚ್ಚಿ ಗುಂಡಿ (38). ಈ ಹೆಸರು ಯಾಕೆ ಬಂತು ಎನ್ನುವುದು ಇಂದಿಗೂ ಒಂದು ಸೋಜಿಗ. ಯಾಕೆಂದರೆ ಮಾಪ್ಪಳಚ್ಚಿ ಎಂದರೆ ಮಲಯಾಳ ಭಾಷೆಯಲ್ಲಿ ಮುಸ್ಲಿಂ ಹೆಂಗಸು ಎಂದರ್ಥ. ಇಡೀ ಬೆಳ್ಳಿಪ್ಪಾಡಿ ಪ್ರದೇಶದಲ್ಲಿ ಅಂದಿಗೂ ಇಂದಿಗೂ ಯಾವುದೇ ಮುಸ್ಲಿಂ ಕುಟುಂಬಗಳು ವಾಸವಾಗಿಲ್ಲ. ಹಾಗಿರುವಾಗ ಈ ಹೆಸರಿಗೆ ಏನಾದರೂ ಚಾರಿತ್ರಿಕ ಅವಾ ದೈವಿಕ ಸಂಬಂಧವಿರಬಹುದೇನೋ. ಅಲ್ಲಿಂದ ಪೂರ್ವಭಾಗದಲ್ಲಿರುವ ರಸ್ತೆಗೆ ಹತ್ತಿದರೆ ರಸ್ತೆಯ ಎಡಭಾಗದಲ್ಲಿರುವ ಸ್ಥಳವನ್ನು ಪೆರಂದಲಪದವು (39) ಎನ್ನುತ್ತಾರೆ. ಲ್ಲಿ ಸಮಾನ್ಯ ಹತ್ತು ಹದಿನೈದು ಮನೆಗಳಿವೆ. ಇಲ್ಲಿ ಒಂದು ಅಂಗನವಾಡಿಯೂ ಇದೆ. ಸಾಮಾನ್ಯವಾಗಿ ಸಮತಟ್ಟಾದ ಸ್ಥಳವನ್ನು ಪದವು ಎನ್ನುತ್ತಾರೆ. ಇಲ್ಲಿ ಎತ್ತರದಲ್ಲಿ ಸ್ವಲ್ಪ ಸಮತಟ್ಟಾದ ಪ್ರದೇಶವಿದೆ. ಅಲ್ಲಿ ಹಿಂದೆ ಕೆಂಪುಕಲ್ಲಿನ ಕೋರೆಗಳಿದ್ದುವು. ಇಲ್ಲಿಂದ ಬಲಭಾಗಕ್ಕಿರುವ ಸ್ಥಳವೇ ಬನಾರಿ (40). ಯಕ್ಷಗಾನ ಕುಲಪತಿ ಶ್ರೀ ಕೀರಿಕ್ಕಾಡು ಮಾಸ್ತರ್ ವಿಷ್ಣುಭಟ್ಟರ1945ರಲ್ಲಿ ಸ್ಥಾಪಿಸಿದ ತೆಂಕುತಿಟ್ಟಿನ ಮೊದಲ ಯಕ್ಷಗಾನ ತರಬೇತಿ ಕೇಂದ್ರ ಬನಾರಿ ಶ್ರೀ ಗೋಪಾಲಕೃಷ್ಣ ಯಕ್ಷಗಾನ ಕಲಾಮಂದಿರ ಮತ್ತು ನಂತರ ಅಭಿವೃದ್ಧಿಪಡಿಸಿದ ಯಕ್ಷಗಾನ ಅಧ್ಯಯನ ಕೇಂದ್ರ ಹಾಗೂ ಸಭಾಭವನವ ಇಲ್ಲಿದೆ. ಹಿಂದೆ ಈ ಪ್ರದೇಶವನ್ನು ಬನೇರಿ ಎಂದು ಕರೆಯುತ್ತಿದ್ದರಂತೆ. ಯಾಕೆ ಈ ಹೆಸರು ಬಂತೆಂದು ಗೊತ್ತಿಲ್ಲ. ನಿಬಿಡವಾದ ಕಾಡಿನ ತಪ್ಪಲಿನಲ್ಲಿಯೇ ಈ ಪ್ರದೇಶವಿದೆ. ಅನೇಕ ಬನಗಳು ಇಲ್ಲಿವೆ. ಹಿಂದ ಕಾಡಾಗಿದ್ದ ಪ್ರದೇಶವನ್ನು ಕೀರಿಕ್ಕಾಡಿನಿಂದ ಬಂದು ಇಲ್ಲಿ ನೆಲೆಸಿದ ವಿಷ್ಣುಭಟ್ಟರು ಕೃಷಿಯೋಗ್ಯವನ್ನಾಗಿ ಮಾಡಿದರಂತೆ. ಈಗ ಬನಾರಿಯ ಆಸುಪಾಸಿನಲ್ಲಿ ಬೇರೆ ಕೆಲವು ಕುಟುಂಬಗಳಿದ್ದರೂ ಬನಾರಿಯ ಮುಖ್ಯ ಕೃಷಿ ಪ್ರದೇಶವು ಇದೇ ಕುಟುಂಬಸ್ಥರಲ್ಲಿಯೇ ಇದೆ.
ಹೀಗೆ ಬನಾರಿಯನ್ನು ಬಿಟ್ಟು ಸ್ವಲ್ಪ ತ್ತರಕ್ಕೆ ಹಾದು ನಂತರ ಪಶ್ಚಿಮದತ್ತ ಸಾಗುವಾಗ ಸಿಗುವ ಒಂದು ಸಣ್ಣ ಪ್ರದೇಶ ನಾಗನಡ್ಕ (41). ಹೆಸರೇ ಸೂಚಿಸುವಂತೆ ನಾಗನ ಅಡ್ಕವೇ ನಾಗನಡ್ಕವಾಗಿರಬಹುದು. ಇದು ಒಂದೆರಡು ಮನೆಗಳಿರುವ ಪ್ರದೇಶ. ಅಲ್ಲಿಯೇ ಇರುವ ಇನ್ನೊಂದು ಮನೆಗೆ ಕೊರುಂಬಡ್ಕ (42) ಎಂದು ಕರೆಯುತ್ತಾರೆ. ಈ ಮನೆಯ ಯಜಮಾನರು ಹಿಂದೆ ಪೆರ್ಲಂಪಾಡಿ ಸಮೀಪದ ಕೊರುಂಬಡ್ಕದಿಂದ ಇಲ್ಲಿಗೆ ಬಂದು ವಾಸ ಮಾಡಿದುದರಿಂದಾಗಿ ಈ ಮನೆಗೆ ಕರುಂಬಡ್ಕ ಎಂಬ ಹೆಸರು ಬಂತು. ಇಲ್ಲಿಂದ ನಾವು ಮೇಲ್ಭಾಗಕ್ಕೆ ಹೋಗಬೇಕಾದುದಾರೂ ಅದರೆಡೆಯಲ್ಲಿರುವ ಒಂದೆರಡು ಸ್ಥಳಗಳನ್ನು ಸಚಿಸಬೇಕಾಗಿರುವುದರಿಂದ ಒಮ್ಮೆ ಕೆಳಗಿಳಿಯುತ್ತೇನೆ. ಸ್ವಲ್ಪ ಕೆಳಗಿಳಿದಾಗ ಬಲಭಾಗಕ್ಕೆ ಇರುವ ಜಾಗವೇ ಬೀಜೋಟು (43). ಇಲ್ಲಿ ನಾಲ್ಕೈದು ಮನೆಗಳಿರು ಜಾಗಕ್ಕೆ ಮಾತ್ರವೇ ಬೀಜೋಟು ಎಂದು ಕರೆಯುತ್ತಾರೆ. ಈ ಹೆಸರಿನ ಮೂಲದ ಬಗ್ಗೆ ಸ್ಪಷ್ಟತೆ ಇಲ್ಲದಿದ್ದರೂ ಈ ಎಲ್ಲಾ ಭಾಗಗಳು ಹಿಂದೆ ಗುಡ್ಡಪ್ರದೇಶವಾಗಿದ್ದುದರಿಂದ ಮತ್ತು ಹೇರಳವಾಗಿ ಗೇರು ಬೀಜದ ಮರಗಳಿರುವುದರಿಂದ ಬೀಜೊತ ತೊಟೊ ಎಂಬ ತುಳುಪದದ ಬದಲಾದ ರೂಪವೇ ಬೀಜೋಟು ಆಗಿರಲೂ ಬಹುದು. ಬೀಜೋಟಿನಿಂದ ಪೂರ್ವಕ್ಕೆ ಸ್ವಲ್ಪ ಮುಂದುವರಿದರೆ ಸಿಗುವ ಒಂದು ಸಣ್ಣ ಪ್ರದೇಶವನ್ನು ಕಂಪ (44) ಎಂದು ಕರೆಯುತ್ತಿದ್ದರು. ಇಲ್ಲಿ ಹಿಂದೆ ಕಲಾವಿದರಾಗಿದ್ದ ಕಂಪ ನಾರಾಯಣ ರೈಗಳು ವಾಸವಾಗಿದ್ದರು. ಅದೇ ರೀತಿ ಅಲ್ಲಿ ಒಂದು ಮನೆ ಮಾತ್ರ ಇರುವ ಇನ್ನೊಂದು ಪ್ರದೇಶಕ್ಕೆ ಕೆದಂಬಾಡಿ (45) ಎನ್ನುತ್ತಾರೆ. ಈ ಮನೆಯ ಯಜಮಾನರು ಪುತ್ತೂರು ಸಮೀಪದ ಕೆದಂಬಾಡಿಯಿಂದ ಬಂದು ಇಲ್ಲಿ ವಾಸವಾಗಿದ್ದ ಕಾರಣ ಈ ಹೆಸರು ಬಂತು. ಇನ್ನು ಪುನಃ ಬೀಜೋಟು ದಾಟಿ ಉತ್ತರಕ್ಕಿರುವ ಒಂದು ದೊಡ್ಡಗುಡ್ಡೆಯನ್ನು ಹತ್ತಿದರೆ ಅಲ್ಲಿಂದ ಕೆಳಭಾಗಕ್ಕಿರುವ ಕೇವಲ ಒಂದೆರಡು ಮನೆಗಳಿರುವ ಸಣ್ಣ ಒಂದು ಪ್ರದೇಶವೇ ಸೂರ್ಯಮೂಲೆ (46). ಹಿಂದೆ ಇಲ್ಲೊಂದು ಬ್ರಾಹ್ಮಣ ಕುಟುಂಬದವರಿದ್ದರು. ಅವರನ್ನು ಸೂರ್ಯಮೂಲೆತ ಅಣ್ಣೆರ್ ಎಂದು ಕರೆಯುತ್ತಿದ್ದರು. ಅವರ ಮೂಲ ಸ್ಥಳದಿಂದಾಗಿ ಈ ಹೆಸರು ಬಂತೋ ಅಥವಾ ಈ ಸ್ಥಳದ ಮೂಲನಾಮವೋ ಈ ಸೂರ್ಯಮೂಲೆ ಎಂಬುದು ನಮಗೆ ಗೊತ್ತಿಲ್ಲ. ಸೂರ್ಯಮೂಲೆಯಿಂದ ಉತ್ತರಭಾಗಕ್ಕೆ ರಸ್ತೆಯ ಬದಿಯವರೆಗೆ ಚಾಚಿಕೊಂಡಿರುವ ಒಂದು ಪ್ರದೇಶವನ್ನು ಉದ್ದಾರ (47) ಎಂದು ಕರೆಯುತ್ತಾರೆ. ಈ ಮಧ್ಯೆ ನಾನು ಮೊದಲೇ ಸೂಚಿಸಿದ ಕಲ್ಲಡ್ಕಕ್ಕೆ ಸಂಬಂಧಿಸಿದ ಒಂದು ಪುರಾತನ ಬಂಟಮನೆತನದ ಗುತ್ತಿನ ಮನೆ ಇದೆ. ಈ ಮನೆ ಮತ್ತು ಇಲ್ಲಿನ ಪ್ರದೇಶವನ್ನು ಕಲ್ಲಡ್ಕ ಗುತ್ತು  (48) ಎಂದು ಕರೆಯುತ್ತಾರೆ. ಹಿಂದೆ ಗುತ್ತು ನಾರಾಯಣರೈಗಳು ಈ ಮನೆಯಲ್ಲಿ ವಾಸವಾಗಿದ್ದರು. ಈಗ ಅವರ ಮಕ್ಕಳು ಈ ಗುತ್ತಿನ ಮನೆಯಲ್ಲಿ ವಾಸವಾಗಿದ್ದಾರೆ.
ನಾವು ಪುನಃ ಹಿಂದಿರುಗಿ ನಾಗನಡ್ಕದ ಮೂಲಕವಾಗಿ ಪರಪ್ಪೆ ಕಾಡಿನ ತಪ್ಪಲಿಗೆ ಹೋಗಬೇಕಾಗಿದೆ. ಅಲ್ಲಿ ಕಾಡಿನೊಳಗಿರುವ ಒಂದು ಸ್ಥಳವೇ ಬಾವೆಲಿಗುಂಡಿ (49). ಕಾಡೊಳಗೆ ಇನ್ನೂ ಅನೇಕಾನೇಕ ವ್ಯತ್ಯಸ್ಥ ಸ್ಥಳಳಿರು ಕಾರಣ ನಾನು ಕಾಡಿನ ಸ್ಥಳಗಳನ್ನು ಮುಟ್ಟಲು ಹೋಗುವುದಿಲ್ಲ. ಆದರೆ ಈ ಬಾವೆಲಿಗುಂಡಿಯ ಬಗ್ಗೆ ಯಾಕೆ ಹೇಳುತ್ತೇನೆಂದರೆ ಅಲ್ಲಿ ಅತ್ಯಂತ ಮೇಲ್ಭಾಗದಲ್ಲಿರುವ ಒಂದೆರಡು ಮನೆಗಳಿರುವ ಸ್ಥಳಕ್ಕೂ ಬಾವೆಲಿಗುಂಡಿ ಎಂದೇ ಕರೆಯುತ್ತಾರೆ. ಬಾವೆಲಿಗಳ ಗುಂಡಿಯೇ ಬಾವೆಲಿಗುಂಡಿಯಾಗಿದೆ. ಕಾಡು ಪ್ರಾರಂಭವಾಗುವಲ್ಲಿ ಒಂದು ದೊಡ್ಡ ಹೊಂಡ ಮತ್ತು ಸುರಂಗ ಹಾಗೂ ಆ ಸುರಂಗದಲ್ಲಿ ಅಸಂಖ್ಯಾತ ಬಾವೆಲಿಗಳಿವೆ. ಈ ಭಾಗದಿಂದ ಪಶ್ಚಿಮಕ್ಕೆ ಮುಂದುವರಿದು ಪರಪ್ಪೆಗ ಹೋಗುವ ಕಾಲುದಾರಿಯನ್ನು ದಾಟಿದಾಗ ಸಿಗುವ ಒಂದೆರಡು ಮನೆಗಳಿರುವ ಪ್ರದೇಶವೇ ದರ್ಖಾಸ (50). ಹಿಂದೆ ಸರಕಾರವು ಸರಕಾರಿ ಭೂಮಿಯನ್ನು ಜನರ ಹೆಸರಿಗೆ ಪಟ್ಟೆ ಮಾಡಿ ಕೊಡುತ್ತಿತ್ತು. ಈ ಭೂಮಿಯನ್ನು ದರ್ಖಾಸು ಎಂದು ಕರೆಯುತ್ತಿದ್ದರು. ಈ ಸ್ಥಳವೂ ಆದೇ ರೀತಿಯ ದರ್ಖಾಸು ಆಗಿರುವುದರಿಂದ ಇಲ್ಲಿಗೆ ಈ ಹಸರು ಬಂತು. ನಮ್ಮ ದೇಲಂಪಾಡಿಯಲ್ಲಿ ಇದೇ ಹೆಸರಿನ ಮೂರು ಸ್ಥಳಗಳಿವೆ. ಅಲ್ಲಿಂದ ಉತ್ತರ ಪಶ್ಚಿಮ ಭಾಗದಲ್ಲಿ ಐದಾರ ಮನೆಗಳಿರುವ ಸಣ್ಣ ಪ್ರದೇಶವನ್ನು ಕಲ್ಲರ್ಪೆ (51) ಎಂದು ಕರೆಯುತ್ತಾರೆ. ಇಲ್ಲಿ ಬೇಕಾಬಿಟ್ಟಿಯಾಗಿ ಕಪ್ಪು ಉಂಡೆಕಲ್ಲುಗಳಿರುವ ಕಾರಣ ಇಲ್ಲಿಗೆ ಈ ಹೆಸರು ಬಂದಿರಬಹುದು. ಕಲ್ಲರ್ಪೆಯಿಂದ ಮುಂದವರಿದು ಪರಪ್ಪೆಗೆ ಹೋಗುವ ಕಾಲು ದಾರಿಯಲ್ಲಾಗಿ ನಾವು ದೇಲಂಪಾಡಿಯ ಕಡೆಗ ಬರುವಾಗ ಬಲಭಾಗಕ್ಕಿರುವ ತೆಂಗಿನ ಕೊಪ್ಪಳದಿಂದೊಡಗೂಡಿದ ಒಂದು ಸಣ್ಣ ಪ್ರದೇಶವನ್ನು ಸೆಟ್ಲಮಜಲ್ (52) ಎಂದು ಕರೆಯುತ್ತಾರೆ. ಬಹುಶಃ ಶೆಟ್ಟರಮಜಲು ಮುಂದಕ್ಕೆ ಸೆಟ್ಲಮಜಲು ಆಗಿರಬಹುದು. ಸೆಟ್ಲಮಜಲಿನಿಂದ ಅದೇ ದಾರಿಯಲ್ಲಿ ಮುಂದಕ್ಕೆ ಬಂದು ಕೆಳಗೆ ಗದ್ದೆಗಳಿರುವ ಬಯಲಿಗೆ ತಲುಪುವಾಗ ಎಡಕ್ಕೆ ಸ್ವಲ್ಪ ಹತ್ತುತ್ತಾ ಹೋದರೆ ನಾವು ತಲುಪುವ ಜಾಗವೇ ಮಿತ್ತಂತರ (53). ಹಿಂದೆ ಮುದಿಯಾರು ಗಡ ಸಮಾಜಕ್ಕೆ ಸೇರಿದ ಹಿರಿಯರೂ ಘನವಂತರೂ ಆದ ಪಂಡಿತಜ್ಜರು ಎಂದು ಕರೆಯಲ್ಪಡುತ್ತಿದ್ದವರು ತಮ್ಮ ಕುಟುಂಬದವರೊಂದಿಗೆ ಇಲ್ಲಿ ವಾಸವಾಗಿದ್ದರು. ಈ ಒಂದು ಮನೆಗೆ ಮಾತ್ರಾ ಆಗಲೂ ಈಗಲೂ ಮಿತ್ತಂತರ ಎಂದು ಕರೆಯುತ್ತಾರೆ. ತುಳುವಿನಲ್ಲಿ ಮಿತ್ತ ಎಂದರೆ ಮೇಲೆ, ಅಂತರ ಎಂದರೆ ತಟ್ಟು. ಹೀಗೆ ಮಿತ್ತಂತರ ಎಂದರೆ ಮೇಲಿನ ತಟ್ಟು ಎಂದರ್ಥ. ಇದು ಇಲ್ಲಿನ ಇತರ ಉಳಿದ ಪ್ರದೇಶಗಳಿಗಿಂತ ಎತ್ತರದಲ್ಲಿದೆ. ಇಲ್ಲಿಂದ ಮುಂದಕ್ಕೆ ನಾವು ದೇಲಂಪಾಡಿಯ ಕಡೆಗೆ ಬರಬೇಕಾದರೆ ಎರಡು ಮೂರು ಮನೆಗಳಿರುವ ಒಂದು ಜಾಗ ಸಿಗುತ್ತದೆ. ಇದು ಪೊಸೊಕ್ಕೆಲ್ (54). ಪೊಸೊಕ್ಕೆಲ್ ಎಂದರೆ ಹೊಸ ಒಕ್ಕಲು. ಬಹುಶಃ ಇಲ್ಲಿರುವ ಮನೆಯವರು ಬೇರೆಲ್ಲಿಂದಲಾದರೂ ಬಂದು ಇಲ್ಲಿ ಹೊಸ ಓಕ್ಕಲಾಗಿ ನೆಲೆಸಿರಬೇಕು. ಅಲ್ಲಿಂದ ಮುಂದೆ ಬಂದು ನಂತರ ಪೂರ್ವಾಭಿಮುಖವಾಗಿ ಸಾಗುವಾಗ ಸಿಗುವ ಸ್ಥಳವೇ ಮುದಿಯಾರು (55). ಕಾಡಿನ ಬದಿಯಿಂದಲೇ ಮುದಿಯಾರಿನ ಸರಹದ್ದು ಪ್ರಾರಂಭವಾಗುತ್ತದೆ. ಇಲ್ಲಿಂದ ತೊಡಗಿ ಸಾಮಾನ್ಯ ಚೆಂಡೆಮೂಲೆಯವರೆಗೆ ಹಾಗೂ ಬೀಜೋಟಿನಿಂದ ತೊಡಗಿ ಮಯ್ಯಾಳದ ಗಡಿಯವರೆಗಿನ ಒಟ್ಟು ಭಾಗವನ್ನು ಮುದಿಯಾರು ಎಂದು ಕರೆಯುತ್ತಾರೆ. ಆದರೂ ಮುದಿಯಾರಿನ ಕೇಂದ್ರ ಸ್ಥಾನವನ್ನು ನಮಗೆ ಕಲ್ಲರ್ಪೆ, ಚೆಂಡೆಮೂಲೆ ಮತ್ತು ಬೀಜೋಟಿನ ಮಧ್ಯೆ ಗುರುತಿಸಬಹುದು. ಇದರ ಆಸುಪಾಸಿನಲ್ಲಿ ರಕ್ತೇಶ್ವರಿ ಕಟ್ಟೆ, ನಾಗನಕಟ್ಟೆ, ಗುಳಿಗಬನ ಇತ್ಯಾದಿ ದೈವಿಕ ಸಾನ್ನಿಧ್ಯಗಳಿದ್ದುವು. ಇವುಗಳ ಪೈಕಿ ನಾಗನಕಟ್ಟೆಯು ಜೀರ್ಣೋದ್ಧಾರಗೊಂಡು ಮುದಿಯಾರು ನಾಗೇಂದ್ರ ಸನ್ನಿಧಿಯಾಗಿ ಪ್ರತಿವರ್ಷ ತಂಬಿಲ ಪರ್ವಾದಿಗಳು ನಡೆಯುತ್ತಿವೆ. ಇತರ ದೈವ ಸಾನ್ನಿಧ್ಯಗಳಲ್ಲಿ ನಿಯಮಿತ ರೀತಿಯ ಸಂಕಲ್ಪಗಳು ನೆರವೇರುತ್ತಿವೆ. ಮುದಿಯಾರಿನ ನಂತರ ಎಡಕ್ಕೆ ಸಿಗುವ ಸ್ಥಳವೇ ಅಲಕ್ಕೆತ್ತಿಮಾರ್ (56). ಇಲ್ಲಿ ಒಂದು ತೋಡು ಹರಿಯುತ್ತದೆ. ಮಾರ್ ಎಂಬ ಪದಕ್ಕೆ ಸಾಮಾನ್ಯವಾಗಿ ನದಿ/ ಹೊಳೆಗೆ ತಾಗಿದ ಗದ್ದೆ ಎಂಬ ಅರ್ಥ ಇದೆ. ಇಲ್ಲಿ ನೀರು ತುಂಬಿರುತ್ತದೆ. ಒಂದೆಲಗ/ ತಿಮರೆ ಜಾಸ್ತಿ ಬೆಳೆಯುತ್ತದೆ. ಆದರೆ ಇದು ಬರೇ ಮಾರ್ ಹೋಗಿ ಅಲಕ್ಕೆತ್ತಿಮಾರ್ ಯಾಕಾಯಿತು ಎನ್ನುವುದೊಂದು ಸೋಜಿಗ. ಈ ಅಲಕೆತ್ತಿಮಾರ್ ಪ್ರದೇಶದಲ್ಲಿ ವಾಸವಾಗಿರುವ ಬ್ರಾಹ್ಮಣ ಮನೆತನದವರ ಮನೆ ಇರುವ ಜಾಗವನ್ನು ಪಟ್ಟಾಜೆ (57) ಎಂದು ಕರೆಯುತ್ತಾರೆ. ಇವರು ಪಟ್ಟಾಜೆ ಎಂಬ ಪ್ರದೇಶದಿಂದ ಈ ಅಲಕ್ಕೆತ್ತಿಮಾರಿಗೆ ಬಂದವರಾಗಿರಬೇಕು. ಪಟ್ಟಾಜೆಯಿಂದ ಸ್ವಲ್ಪ ಮುಂದುವರಿದರೆ ಬಲಭಾದಲ್ಲಿರುವ ಜಾಗವೇ ಚೆಂಡೆಮೂಲೆ (58). ಇಲ್ಲಿ ಗೌಡ ಕುಟುಂಬಸ್ಥರ ತರವಾಡು ಮನೆ ಇದೆ. ಈ ಕುಟುಂಬಸ್ಥರು ಹಿಂದಿನ ಕಾಲದಲ್ಲಿ ಪರಪ್ಪೆ ಸಮೀಪದ ಚೆಂಡೆಮೂಲೆ ಎಂಬ ಪ್ರದೇಶದಿಂದ ಇಲ್ಲಿಗೆ ಬಂದ ಕಾರಣ ಮನೆಯವರಿಗೂ ಪ್ರದೇಶಕ್ಕೂ ಚೆಂಡೆಮೂಲೆ ಎಂಬ ಹೆಸರಾಯಿತು. ಚೆಂಡೆಮೂಲೆ ಎಂದರೆ ಚೆಂಡೆಮುಳ್ಳಿನ ಕಾಡುಗಳಿರುವ ಮೂಲೆ ಎಂದರ್ಥ ಬರುತ್ತದೆ. ಚೆಂಡೆಮೂಲೆಯನ್ನು ದಾಟಿ ಮುಂದುವರಿಯುವಾಗ ಸಿಗುವ ಪ್ರದೇಶವೇ ಮದಿಮ್ಮಾಲ್ ಗುಂಡಿ (59). ಇಲ್ಲಿ ಒಂದು ಕಾರಣಿಕದ ಕೆರೆ ಇತ್ತಂತೆ. ಹಿಂದಿನ ಕಾಲದಲ್ಲಿ ಒಮ್ಮೆ ಈ ಕೆರೆಯಲ್ಲಿ ಮುಟ್ಟಾದ ಬ್ರಾಹ್ಮಣ ಹೆಂಗಸು ಸ್ನಾನ ಮಾಡುವಾಗ ಮಾಯವಾಗಿ ಹೋಯಿತಂತೆ. ಬ್ರಾಹ್ಮಣ ಸ್ತ್ರೀಯರನ್ನು ಆ ಕಾಲದಲ್ಲಿ ಮದಿಮ್ಮಾಲ್ ಎಂದು ಕರೆಯುತ್ತಿದ್ದರು. ಆದ ಕಾರಣ ಈ ಸ್ಥಳಕ್ಕೆ ಮದಿಮ್ಮಾಲ್ ಗುಂಡಿ ಎಂದು ಹೆಸರಾಯಿತು. ಇಲ್ಲೇ ಎಡಭಾಗಕ್ಕೆ ಕಾಣುವ ಸ್ಥಳ ತೋಟದಮನೆ (60). ಇಲ್ಲಿ ಈಗ ಒಂದು ಶರಳಾಯ ಕುಟುಂಬದವರ ಮತ್ತೊಂದು ಗೌಡ ಕುಟುಂಬದವರೂ ವಾಸಿಸುತ್ತಾರೆ. ಹಿಂದಿನ ಕಾಲದಲ್ಲಿ ಈ ಭಾಗದಲ್ಲಿ ಇಲ್ಲಿ ಮಾತ್ರಾ ತೋಟವಿದ್ದ ಕಾರಣ ಈ ಪ್ರದೇಶಕ್ಕೆ ತೋಟದ ಮನೆ ಎಂಬ ಹೆಸರು ಬಂದಿರಬಹುದು. ಇನ್ನು ಮದಿಮ್ಮಾಲ್ ಗುಂಡಿಯಿಂದ ಸ್ವಲ್ಪ ಮೇಲಕ್ಕೆ ಉತ್ತರಾಭಿಮುಖವಾಗಿ ಸಾಗಿದರೆ ಸಿಗುವ ಪ್ರದೇಶ ಚಾವಡಿ (61). ಚಾವಡಿ ಎಂದರೆ ಹಿಂದಿನ ಕಾಲದಲ್ಲಿ ನ್ಯಾಯ ತೀರ್ಮಾನವನ್ನು ಕೊಡುತ್ತಿದ್ದ ದೇಲಂಪಾಡಿಯ ಧರ್ಮಚಾವಡಿ. ಇಲ್ಲಿ ಮುದಿಯಾರು ಗೌಡ ಕುಟುಂಬಸ್ಥರ ತರವಾಡು ಮನೆ, ಧರ್ಮದೈವ ಸ್ಥಾನ, ಧರ್ಮಚಾವಡಿ ಮತ್ತು ಇಡೀ ಊರಿಗೆ ಸಂಬಂಧಿಸಿದ ರಾಜನ್ ದೈವಸ್ಥಾನವಿದೆ. ಇಲ್ಲಿ ಕಾಲಕಾಲಕ್ಕೆ ತಂಬಿಲ, ನೇಮ, ಕೋಲಗಳು ನಡೆಯುತ್ತವೆ. ಇಲ್ಲೇ ಎಡಭಾಗಕ್ಕೆ ಇರುವ ಜಾಗವೇ ಅರಿಯಡ್ಕ (62). ಇಲ್ಲಿ ಹಿಂದಿನ ಕಾಲದಿಂದಲೇ ವಾಸವಾಗಿದ್ದ ಮುಸ್ಲಿಂ ಸಮುದಾಯದ ಮನೆಯವರು ಕುಂಬ್ರ ಸಮೀಪದ ಅರಿಯಡ್ಕದಿಂದ ಇಲ್ಲಿಗೆ ಬಂದು ನೆಲೆಸಿದ ಕಾರಣ ಈ ಸ್ಥಳಕ್ಕೆ ಅರಿಯಡ್ಕ ಎಂಬ ಹೆಸರು ಬಂತು. ಅರಿಯಡ್ಕದಿಂದ ಪಶ್ಚಿಮಾಭಿಮುಖವಾಗಿ ಕೆಳಗಿಳಿದಾಗ ಮುಂದಕ್ಕೆ ಕಾಣುವ ಒಂದು ಸಣ್ಣ ಗುಡ್ಡ ಪ್ರದೇಶವನ್ನು ಏರುತ್ತಾ ಹೋಗವಾಗ ಬಲಬದಿಯಲ್ಲಿ ನಮಗೆ ಸಿಗುವ ಸ್ವಲ್ಪ ಹೆಚ್ಚು ವಿಸ್ತಾರವಾದ ಪ್ರದೇಶಕ್ಕೆ ಕನ್ನಂಗೋಲು (63) ಎಂದು ಕರೆಯುತ್ತಾರೆ. ಇಲ್ಲಿಗೆ ಈ ಹೆಸರು ಬರಲು ಕಾರಣವೇನು ಎಂಬುದರ ಬಗ್ಗೆ ಯಾರಿಂದಲೂ ತಿಳಿದುಕೊಳ್ಳುವುದಕ್ಕೆ ನನಗೆ ಸಾಧ್ಯವಾಗಲಿಲ್ಲ. ಇದು ಕೆಲವು ಮರಾಟಿ ಸಮುದಾಯದವರೂ, ಬೇಟುವ ಆದಿವಾಸಿ ಸಮುದಾಯರೂ ಮತ್ತು ಸ್ವಲ್ಪ ಮುಸ್ಲಿಂ ಸಮುದಾಯದವರೂ ವಾಸಿಸುವ ಸಾಮಾನ್ಯ ಗುಡ್ಡ, ಇಳಿಜಾರು ಪ್ರದೇಶ. ಇಲ್ಲಿ ಎಡಬದಿಯಲ್ಲಿ ಮೊದಲಿಗೆ ಸಿಗುವ ಜಾಗವೇ ಕೊಡೆಂಕಿರಿ (64). ಈ ಕೊಡೆಂಕಿರಿಯಲ್ಲಿ ಹಿಂದೆ ಸುಪ್ರಸಿದ್ಧ ನಾಟಿವೈದ್ಯರಾದ ಮುತ್ತು ರೈಗಳು ವಾಸಿಸುತ್ತಿದ್ದರು. ಈಗ ಅವರ ಮಕ್ಕಳು ಇಲ್ಲಿದ್ದಾರೆ. ಈ ಪ್ರದೇಶಕ್ಕೆ ಕೊಡೆಂಕಿರಿ ಎಂದು ಹೆಸರು ಬರಲು ಕಾರಣವೇನೆಂದು ತಿಳಿದು ಬರುವುದಿಲ್ಲ. ಪುತ್ತೂರು ಸಮೀಪದಲ್ಲಿ ಕೊಡೆಂಕಿರಿ ಎಂಬೊಂದು ಪ್ರದೇಶವಿದೆ. ಬಹುಶಃ ಹಿಂದಿನ ಕಾಲದಲ್ಲಿ ಅಲ್ಲಿಂದ ಬಂದವರು ಇಲ್ಲಿ ತಮ್ಮ ವಾಸವನ್ನು ಮುಂದುವರಿಸಿದಾಗ ಅವರ ಮೂಲ ಪ್ರದೇಶದ ಹೆಸರು ಇಲ್ಲಿಗೆ ಬಂದಿರಲೂಬಹುದು. ಚಾವಡಿ ರಾಜನ್ ದೈವ ಸಾನ್ನಿಧ್ಯಗಳ ಮೂಲ ಸ್ಥಾನವೂ ಇಲ್ಲಿದೆ. ಇಲ್ಲಿಯೇ ಎಡಭಾಗದಲ್ಲಿರುವ ಒಂದು ಸಣ್ಣ ಪ್ರದೇಶವನ್ನು ಕೋಪಾಲಮೂಲೆ (65) ಎನ್ನುತ್ತಾರೆ. ಗೋಪಾಲಮೂಲೆ ಕೊಪಾಲಮೂಲೆಯಾಯಿತೋ ಅಥವಾ ಕೋಪಾಳರು ಎಂಬ ಭೂತಕಟ್ಟುವ ಒಂದು ವಿಭಾಗದವರಿಂದಾಗಿ ಇದು ಕೋಪಾಲಮೂಲೆಯಾಯಿತೋ ತಿಳಿದಿಲ್ಲ. ಪ್ರಸ್ತುತ ಇಲ್ಲಿ ಕೋಪಾಳರಿಗಿಂತಲೂ ಹೆಚ್ಚಾಗಿ ಬೇಟುವ ವಿಭಾಗದವರು ವಾಸಿಸುತ್ತಾರೆ. ಇಲ್ಲಿಂದ ಸಾಮಾನ್ಯ ಒಂದು ಕಿಲೋಮೀಟರುಗಳಷ್ಟು ವ್ಯಾಪ್ತಿಯಲ್ಲಿ ಕೋಪಾಳ ವಿಭಾಗದವರ ಮನೆ ಇಂದಿಗೂ ಇದೆ. ಇಲ್ಲಿಂದ ಮಯ್ಯಾಳ ಕಡೆಗಾಗಿ ಹೋಗುವ ದಾರಿಯಲ್ಲಿ ಸ್ವಲ್ಪ ನಡೆದಾಗ ನಮಗೆ ಗೋಳಿತ್ತಡ್ಕ (66) ಸಿಗುತ್ತದೆ. ಗೋಳಿಮರಗಳು ಹೇರಳವಾಗಿರುವ ಕಾರಣಕ್ಕೆ ಈ ಸ್ಥಳಕ್ಕೆ ಗೋಳಿತ್ತಡ್ಕ ಎಂಬ ಹೆಸರಾಗಿರಬಹುದು. ಗೋಳಿತ್ತಡ್ಕ ದಾಟಿ ಸೀದಾ ರಸ್ತೆಯಲ್ಲಿ ಸಾಗಿ ಪರಪ್ಪೆಯಿಂದ ಬರುವ ರಸ್ತೆ ಸಿಕ್ಕಿದಾಗ ಎಡಭಾಗಕ್ಕೆ ಅಂದರೆ ಪರಪ್ಪೆಯ ಕಡೆಗೆ ಸ್ವಲ್ಪ ನಡೆದರೆ ಅಲ್ಲಿ ಇಳಿಜಾರು ಮುಗಿದಾಗ ಎಡಭಾಗದಲ್ಲಿ ಸಿಗುವ ನಾಲ್ಕೈದು ಗದ್ದೆಗಳನ್ನೊಳಗೊಂಡ ಪ್ರದೇಶವೇ ಕಲ್ಲಮಜಲು (67). ಸಾಮಾನ್ಯವಾಗಿ ಮಜಲು ಎಂದರೆ ಏಣಿಲು ಸುಗ್ಗಿ ಹೀಗೆ ಎರಡು ಬೆಳೆ ಮಾತ್ರ ಬೆಳೆಯುವ ಗದ್ದೆ. ಇದು ಸಂಪೂರ್ಣ ಒಂದೇ ಸಮತಟ್ಟಾಗಿರದೆ ಮೆಟ್ಟಿಲುಗಳಂತೆ ಎತ್ತರ ಎತ್ತರವಾಗಿರುತ್ತದೆ. ಇಲ್ಲಿ ಕಲ್ಲುಗಳಿರುವ ಕಾರಣ ಕಲ್ಲಮಜಲಾಯಿತೋ ಅಥವಾ ಬೇರೇನಾದರೋ ಕಾರಣವೋ ಗೊತ್ತಿಲ್ಲ. ಲ್ಲೇ ಮುಂದಕ್ಕೆ ಎಡಭಾಗದಲ್ಲಿ ನೆಕ್ಕಿತ್ತಡಿ (68) ಎಂಬ ಬಹಳ ಕಾರ್ಣಿಕದ ಒಂದು ಪ್ರದೇಶವಿದೆ. ನೆಕ್ಕಿ ಎಂದರೆ ಸಾಮಾನ್ಯವಾಗಿ ಹಳ್ಳಿ ಔಷಧಿಗಳಲ್ಲಲ್ಲಾ ಉಪಯೋಗಿಸುವ ಒಂದು ತರದ ಅಗಲ ಕಡಿಮೆ ಮತ್ತು ತುದಿ ಚೂಪಾಗಿರುವ ಎಲೆಗಳಿರುವ ಸಸ್ಯ. ಇಲ್ಲಿ ಹಿಂದಿನ ಕಾಲದಲ್ಲಿ ವಿಫುಲವಾಗಿ ನೆಕ್ಕಿಯ ಗಿಡಗಳುದ್ದುವು. ಈಗಲೂ ಕೆಲವು ಗಿಡಗಳು ಇವೆ. ಇದು ಭೂತ, ದೈವ ದೇವರುಗಳಿಗೆ ಸಂಬಂಧಿಸಿದ ಒಂದು ಪ್ರದೇಶ. ನೆಕ್ಕಿತ್ತಡಿಯನ್ನು ದಾಟಿ ಮುಂದಕ್ಕೆ ಎಡಭಾಗದಲ್ಲಿ ಮೇಲಕ್ಕೆ ಹತ್ತುತ್ತಾ ಹೋದರೆ ನಮಗೆ ಮಲಕ್ಕಾರ (69) ಸಿಗುವುದು. 'ಕಾರು'ಗಳು ಎಂದರೆ ಮರ ಮಟ್ಟು ಇರವ ಗದ್ದೆಗಳು. ಇಲ್ಲಿ ಹತ್ತಿರದಲ್ಲೇ ಮಲೆ ಮತ್ತು ಕಾಡೂ ಇದೆ. ಇವೆಲ್ಲವುಗಳೂ ಸೇರಿ ಈ ಭಾಗ ಮಲೆಕ್ಕಾರ ಆಗಿಬಹುದು. ಮಲೆಕ್ಕಾರದ ಬಲಪಾರ್ಶ್ವದಲ್ಲಿ ಕೆಳಗೆ ಇರುವ ಗದ್ದೆ ಪ್ರದೇಶವನ್ನು ಲೆಸಿರಿ (70) ಎನ್ನುತ್ತಾರೆ. ಇಲ್ಲಿ ಹಿಂದೆ ತುಳುನಾಡಿನ ಆಚರಣೆಗೆ ಸಂಬಂಧಿಸಿದ ಪೂಕರೆಯನ್ನು ಹಾಕಿ ದವಗಳ ಓಲೆಸಿರಿ ಜಾತ್ರೆ ನಡೆಯುತ್ತಿತ್ತು. ಇಲ್ಲಿಂದ ಮುಂದುವರಿದು ಪಶ್ಚಿಮಕ್ಕೆ ಸಾಗುವಾಗ ಎಡಬಲಗಳಲ್ಲಿ ಸಿಗುವ ಬಯಲು ಪ್ರದೇಶವನ್ನು ದೇವರಕಂಡ (71) ಎನ್ನುವರು. ಇವೆಲ್ಲವೂ ಹಿಂದಿನ ಕಾಲದಲ್ಲಿ ದೈವ ದೇವರುಗಳ ಆಚರಣೆಗಳಿಗೆ ಸಂಬಂಧಿಸಿದ ಪ್ರದೇಶಗಳಾಗಿದ್ದವು. ಇಲ್ಲಿಂದ ಮತ್ತೆ ಮುಂದಕ್ಕೆ ಹೋದರೆ ರಸ್ತೆಯ ಬಲಭಾಗದಲ್ಲಿ ನಮಗೆ ಮಯ್ಯಾಳ (72) ಶಾಲೆ ಸಿಗುತ್ತದೆ. ಇಲ್ಲೇ ಮಯ್ಯಾಳ ಶ್ರೀ ಸತ್ಯನಾರಾಯಣ ಭಜನಾ ಮಂದಿರವೂ ಇದೆ. ಸಾಮಾನ್ಯವಾಗಿ ಗೋಳಿತ್ತಡ್ಕದಿಂದ ಪ್ರಾರಂಭಿಸಿ ಶಾಲೆತ್ತಡ್ಕದವರೆಗಿನ ಎಲ್ಲಾ ಪ್ರದೇಶಗಳೂ ಮಯ್ಯಾಳ ಎಂದು ಕರೆಸಿಕೊಳ್ಳುತ್ತಿದ್ದರೂ ನಮಗೆ ಮಯ್ಯಾಳ ಶಾಲೆ ಇರುವ ಕಾರಣದಿಂದ ಈ ಸ್ಥಳವನ್ನೇ ಮಯ್ಯಾಳದ ಕೇಂದ್ರಸ್ಥಾನವೆಂದು ಗುರುತಿಸಬಹುದು. ಶಾಲೆಯ ಮುಂಭಾಗದಲ್ಲಿ ಗದ್ದೆ ಇರುವ ಪ್ರದೇಶಕ್ಕೆ ಅಜೆಕ್ಕಳ (73) ಎಂದು ಕರೆಯುತ್ತಾರೆ. ಸಾಮಾನ್ಯವಾಗಿ ಬೇಟೆಯಲ್ಲಿ ದೊರಕಿದ ಪ್ರಾಣಿಗಳನ್ನು ಹಾಗೂ ಭೂತಕೋಲಗಳ ಸಮಯದಲ್ಲಿ ಬಲಿಕೊಟ್ಟ ಪ್ರಾಣಿಗಳನ್ನು ಮಾಂಸ ಮಾಡುವ ಜಾಗಕ್ಕೆ ಅಜಕ್ಕಳವೆನ್ನುತ್ತಾರೆ. ಅಲ್ಲಿಂದ ಮುಂದಿರುವ ಒಂದು ಗದ್ದೆಯೇ ಬಟ್ಟಕಂಡ (74). ಮಳೆಗಾಲದಲ್ಲಿ ಮಾತ್ರ ಕಾಡಿನ ತೊರೆಗಳ ನೀರನ್ನು ಕಟ್ಟಿ ಒಂದೇ ಬೆಳೆ ತೆಗೆಯುವ ಗದ್ದೆಗೆ ಬೊಟ್ಟು ಅಥವಾ ಬೆಟ್ಟು ಎನ್ನುವರು. ಸಾಮಾನ್ಯವಾಗಿ ಕೃಷಿ ಮಾಡದ ಅಥವಾ ತಾರತಮ್ಯೇಣ ಕಡಿಮೆ ಫಲವತ್ತತೆ ಇರುವ ಗದ್ದೆಗಳನ್ನು ತುಳುವಿನಲ್ಲಿ ಬೊಟ್ಟಿ ಕಂಡ ಎನ್ನುತ್ತಾರೆ. ಈ ಬೊಟ್ಟಿಕಂಡವೇ ಇಲ್ಲಿ ಬಟ್ಟಕಂಡವಾಗಿರಬಹುದು. ಪುನಃ ನಾವು ಸ್ವಲ್ಪ ಹಿಂದಕ್ಕೆ ಬಂದು ಮಯ್ಯಾಳ ಶಾಲೆಯಿಂದ ಬಲಭಾಗದ ಮೂಲಕ ಮೇಲಕ್ಕೆ ಹತ್ತುತ್ತ ಸಾಗಿದರೆ ಎಂಕಣಮೂಲೆ (75) ಗೆ ತಲುಪುತ್ತೇವೆ. ಕನ್ನಡದಲ್ಲಿ ನಮ್ಮ ಮೂಲೆ ಎಂಬ ಅರ್ಥ ಬರುವ ತುಳುವಿನ ಎಂಕ್ಲೆನಮೂಲೆ ಎಂಬ ಪದದಿಂದ ಈ ಎಂಕಣಮೂಲೆಯಾಯಿತೆಂದು ಹೇಳುತ್ತಾರೆ. ಎಂಕಣಮೂಲೆಯಿಂದ ಪರಪ್ಪೆ ದಾರಿಯಲ್ಲಿ ಸಾಗಿದರೆ ನಮಗೆ ಸಿಗುವ ಪ್ರದೇಶವೇ ಬಂಗಾರ್ ಪಾದೆ (76). ಹಿಂದೆ ಇಲ್ಲಿ ಶುಭಕಾರ್ಯಗಳಿಗೆ ಬೇಕಾದ ಚಿನ್ನಾಭರಣಗಳು ಒಂದು ದೊಡ್ಡ ಹಾಸುಗಲ್ಲಿನ ಮೇಲೆ ಸಿಗುತ್ತಿದ್ದುದರಿಂದ ಈ ಜಾಗವನ್ನು ಬಂಗಾರ್ ಪಾದೆ ಎಂದು ಕರೆಯುತ್ತಾರೆ. ಅದರ ನಂತರ ಸಿಗುವ ಒಂದು ಸ್ಥಳ ಕಂಬಳಿಕೆರೆ (77). ಅಗಲ ಕಡಿಮೆಯಾಗಿ ಉದ್ದವಾಗಿದ್ದ ಕಂಬಳಿಯಾಕಾರದ ಒಂದು ಕೆರೆಯಿಂದಾಗಿ ಅಥವಾ ಆ ಪ್ರದೇಶವು ಕಾಡಿನ ಮಧ್ಯಭಾಗದಲ್ಲಿದ್ದುದರಿಂದ ಮತ್ತು ಆ ಕೆರೆಯ ಸುತ್ತಮುತ್ತಲೂ ಹೇರಳವಾಗಿ ಕಂಬಳಿಹುಳುಗಳು ಇದ್ದುದರಿಂದಾಗಿ ಈ ಪ್ರದೇಶಕ್ಕೆ ಹೀಗೆ ಹೆಸರು ಬಂದಿರಬಹುದೊ ಏನೋ... ಕೇಳೋಣವೆಂದರೆ ಈ ಎರಡು ಪ್ರದೇಶಗಳಲ್ಲೂ ಈಗ ಜನವಾಸವಿಲ್ಲ.
ಹಿಂದೆ ಕೀರಿಕ್ಕಾಡು ಮಾಸ್ತರ್ ವಿಷ್ಣು ಭಟ್ಟರು ಕೀರಿಕ್ಕಾಡಿನಿಂದ ಬಂದ ಸ್ವಲ್ಪ ವರ್ಷಗಳ ನಂತರ ಅವರನ್ನು ಅನುಸರಿಸಿ ಬಂದ ಅವರ ತಮ್ಮ ಕೀರಿಕ್ಕಾಡು ಗೋಪಾಲಕೃಷ್ಣ ಭಟ್ಟರು ಇಲ್ಲಿ ವಾಸವಾಗಿದ್ದಾರು. ಆಗ ಅವರ ಮನೆಯ ಪರಿಸರದಲ್ಲಿಯೇ ಒಂದು ಶಾಲೆಯನ್ನು ಪ್ರಾರಂಭಿಸಲಾಯಿತು. ಹೀಗೆ ಈ ಪರಿಸರದ ಮೊದಲ ಶಾಲೆ ಕಂಬಳಿಕೆರೆಯಲ್ಲಿ ಸ್ಥಾಪನೆಯಾಯಿತು ಎಂಬ ವಿಚಾರವನ್ನು ಸ್ಥಳೀಯರು ನೆನಪಿಸುತ್ತಾರೆ. ನಂತರ ಅದೇ ಶಾಲೆಯನ್ನು ಊರರ ಸಹಕಾರದೊಂದಿಗೆ ಮಯ್ಯಾಳಕ್ಕೆ ವರ್ಗಾಯಿಸಲಾಗಿ ಅದು ಶ್ರೀ ಗೋಪಾಲಕೃಷ್ಣ ಅನುದಾನಿತ ಕಿರಿಯ ಪ್ರಾಥಮಿಕ ಶಾಲೆ(ಎಸ್ ಜಿ ಎ ಎಲ್ ಪಿ ಎಸ್ ಮಯ್ಯಾಳ) ಯಾಗಿ ಬದಲಾಯಿತು. ಕೀರಿಕ್ಕಾಡು ಗೋಪಾಲಕೃಷ್ಣ ಭಟ್ಟರು ಈ ಶಾಲೆಯ ಮೇನಜರ್ ಆಗಿದ್ದರು. ಅವರ ನಂತರ ಶಾಲೆಯ ಆಡಳಿತವು ಅವರ ಮಗ ಸಾಹಿತಿ, ಕಲಾವಿದರಾಗಿದ್ದ ಶ್ರೀ ಕಂಬಳಿಕೆರೆ ಚಂದ್ರಶೇಖರ ಶರ್ಮರ ಪಾಲಾಯಿತು. ಕಟೀಲು ಮೇಳದ ಕಲಾವಿದರಾಗಿದ್ದ ಶ್ರೀ ಸಿದ್ದಕಟ್ಟೆ ಗಣೇಶ ಶರ್ಮರು ಈ ಗೋಪಾಲಕೃಷ್ಣ ಭಟ್ಟರ ಇನ್ನೊರ್ವ ಮಗ. ಆ ಶಾಲೆಯನ್ನು ಮತ್ತೆ ಮಯ್ಯಾಳ ಖಾದರ್ ಹಾಜಿ ಕುಟುಂಬದವರು ಖರೀದಿಸಿ ಈಗ ಖಾದರ್ ರವರು ಇದರ ಮೇನೆಜರ್ ಆಗಿದ್ದಾರೆ. ಇಲ್ಲಿ ಹೇಳಬಹುದಾದ ಇನ್ನೊಂದು ವಿಚಾರವೆಂದರೆ ಕೀರಿಕ್ಕಾಡಿನಿಂದ ಬಂದ ಅಣ್ಣ ದೇಲಂಪಾಡಿಯಲ್ಲಿ ಬನಾರಿ ಶ್ರೀ ಗೋಪಾಲಕೃಷ್ಣ ಯಕ್ಷಗಾನ ಕಲಾ ಸಂಘವನ್ನು ಸ್ಥಾಪನೆ ಮಾಡಿದರೆ, ತಮ್ಮ ಮಯ್ಯಾಳದಲ್ಲಿ ಶ್ರೀ ಗೋಪಾಲಕೃಷ್ಣ ಕಿರಿಯ ಪ್ರಾಥಮಿಕ ಶಾಲೆಯನ್ನು ಸ್ಥಾಪಿಸಿದರು. ಗೋಪಾಲಕೃಷ್ಣ ಎಂಬ ಹೆಸರನ್ನು ಈ ಎರಡು ಸಂಸ್ಥೆಗಳಿಗೂ ಕೀರಿಕ್ಕಾಡಿನ ಸಮೀಪದ ಮುನಿಯೂರು ಗೋಪಾಲಕೃಷ್ಣನ ನಾಮವಾಗಿ ಹಾಕಲಾಗಿದೆ ಎಂಬುದು ನನ್ನ ಅನಿಸಿಕೆ. ಇಲ್ಲಿಂದ ಪುನಃ ಎಂಕಣಮೂಲೆಗೆ ಹಿಂತಿರುಗಿ ಬಂದು ಅಲ್ಲಿಂದ ಉತ್ತರಕ್ಕೆ ಬಲಭಾಗದಲ್ಲಿ ಸಾಗಿದರೆ ನಮಗೆ ಮೊದಲು ಎರ್ಮಾಳ (78) ಸಿಗುತ್ತದೆ. ತುಳುವಿನಲ್ಲಿ ಎರು ಎಂದರೆ ಎತ್ತು. ಮಾಳ ಎಂದರೆ ಲಾಯ, ದೊಡ್ಡಿ, ಕೊಟ್ಟಿಗೆ ಎಂಬ ಅರ್ಥವು ಕನ್ನಡದಲ್ಲಿಯೂ ತುಳುವಿನಲ್ಲಿಯೂ ಇದೆ. ಹೀಗೆ ಎತ್ತುಗಳನ್ನು ಕಟ್ಟುತ್ತಿದ್ದ ದೊಡ್ಡಿ ಅಥವಾ ಕೊಟ್ಟಿಗೆ ಇದ್ದ ಪ್ರದೇಶವೇ ಮುಂದೆ ಎರು ಮಾಳ ಎಂಬರ್ಥದಲ್ಲಿ ಎರ್ಮಾಳವಾಗಿರಬಹುದು. ಅಲ್ಲಿಂದ ಮುಂದಕ್ಕಿರುವ ತಗ್ಗಿನ ಬಯಲು ಪ್ರದೇಶವೇ ಮಯ್ಯಾಳ ಬಾವ (79). ಬಾವ ಎಂದರೆ ಗುತ್ತಿನ ಹಾಗೆ ಇರುವ ಹೆಚ್ಚಾಗಿ ತುಳು ಬಿಲ್ಲವರ ತರವಾಡು ಮನೆ ಅವಾ ಗುತ್ತು. ಈ ಪ್ರದೇಶದಲ್ಲಿ ತುಳು ಬಿಲ್ಲವರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಅದೇ ರೀತಿ ಅವರ ತರವಾಡು, ದೈವ ದೇವರ ಆಲಯಗಳು, ಟ್ಟೆ, ಬನ ಇತ್ಯಾದಿಗಳೂ ಇವೆ. ಬಾವದ ಮುಂದುವರಿಕೆಯತೆ ಇರುವ ಪೂರ್ವಭಾಗದ ಒಂದು ಪ್ರದೇಶಕ್ಕೆ ಮಾಯಿಲ್ತಿಮಾರ್ (80) ಎನ್ನುತ್ತಾರೆ. ಮಾಯಿಲ ಎನ್ನುವ ಒಂದು ವಿಭಾಗದವರು ಇಲ್ಲಿದ್ದ ಕಾರಣ ಇಲ್ಲಿಗೆ ಈ ಹೆಸರು ಬಂದಿರಬಹುದೆಂಬುದು ತಿಳಿದವರ ಮಾತು.
ಅದೇ ರೀತಿ ಎಂಕಣಮೂಲೆಯಿಂದ ಎಡಭಾಗಕ್ಕೆ ಅಂದರೆ ಪಶ್ಚಿಮ ಭಾಗದತ್ತ ಸಾಗಿದಾಗ ನಮಗೆ ಮೊದಲು ಉರಿಕ್ಯಾಡಿ (81) ಎಂಬ ಪ್ರದೇಶ ಸಿಗುತ್ತದೆ. ಇಲ್ಲಿ ಗೌಡ ಮನೆತನಕ್ಕೆ ಸಂಬಂಧಿಸಿದ ದೈವಸ್ಥಾನವಿದೆ. ಉರಿಕ್ಯಾಡಿ ದಾಟಿ ಮುಂದುವರಿದಾಗ ಕಾಣಸಿಗುವ ಹೇರಳವಾಗಿ ಸಾಗುವಾನಿ ಮರಗಳಿರುವ ಜಾಗವೇ ಚೆಕ್ಕ್ ಕಾಡ್ (82). ಚೆಕ್ಕ್ ಕಾಡಿನಿಂದ ಮುಂದುವರಿಯುವಾಗ ಬಳಿಕ ನಮಗೆ ನೂಜಿಬೆಟ್ಟು (83) ಎಂಬ ಪ್ರದೇಶ ಸಿಗುತ್ತದೆ. ಇಲ್ಲಿ ಸಂಪೂರ್ಣ ಶಿಲಾಮಯವಾಗಿ ಜೀರ್ಣೋದ್ಧಾರಗೊಂಡ ಶ್ರೀ ಮಹಾವಿಷ್ಣು ಮಹಾ ಕ್ಷೇತ್ರವು ಪೂರ್ವಾಧಿಕ ಶೋಭೆಯೊಂದಿಗೆ ಭಕ್ತರನ್ನು ಕೈಬೀಸಿ ಕರೆಯುತ್ತಿದೆ. ತಲಕಾವೇರಿಗೂ ಈ ಕ್ಷೇತ್ರಕ್ಕೂ ನಿಕಟ ಸಂಬಂಧವಿದೆ. ಕ್ಷೇತ್ರವನ್ನು ಬಿಟ್ಟು ಪಶ್ಚಿಮಾಭಿಮುಖವಾಗಿ ಮತ್ತೂ ಮುಂದುವರಿದಾಗ ನಮಗೆ ಮೊದಲು ಸಿಗುವ ಜಾಗವು ಅಡ್ಡಂತಡ್ಕ (84) ವಾಗಿದೆ. ಇದು ಅಡ್ಡಕ್ಕೆ ಇರುವ ಒಂದು ಅಡ್ಕ ಎಂಬ ನೆಲೆಯಲ್ಲಿ ಈ ಹೆಸರನ್ನು ಪಡೆದುಕೊಂಡಿರಬೇಕು. ಅಲ್ಲಿಂದ ಮುಂದಕ್ಕೆ ಹೋದಾಗ ಒಂದು ತೋಡು ಸಿಗುತ್ತದೆ. ತೋಡಿನಲ್ಲಿ ಒಂದು ಕಡೆ ನಮಗೆ ದಾಟಲು ಸಾಧ್ಯವಿರುವ ಪ್ರದೇಶವಿದೆ. ಇದರ ಸುತ್ತಮುತ್ತಲ ಜಾಗವನ್ನು ಎರುಕಡಪ್ಪು (85) ಎಂದು ಕರೆಯುತ್ತಾರೆ. ತುಳುವಿನಲ್ಲಿ ಎರು ಎಂದರೆ ಎತ್ತು. ಕಡಪ್ಪು ಎಂರೆ ತೋಡು ಅಥವಾ ಹೊಳೆಯ ಕಡವು. ಹೀಗೆ ಎತ್ತುಗಳನ್ನು ದಾಟಿಸುವ ಪ್ರದೇಶ ಎಂಬರ್ಥಲ್ಲಿ ಇದು ಎರುಕಡಪ್ಪು. ಇಲ್ಲಿಗೆ ನಮ್ಮ ಮಯ್ಯಾಳದ ಪಶ್ಚಿಮ ಭಾಗದ ಸರಹದ್ದು ಮುಕ್ತಾಯವಾಗುತ್ತದೆ.  
ಇಲ್ಲಿಂದ ಎಡಭಾಗಕ್ಕೆ ಸ್ವಲ್ಪ ದೂರಕ್ಕೆ ಹೋದರೆ ಸಿಗುವ ಸ್ಥಳ ಇರುವತ್ತನಾಲ್ ಮೈಲ್ (86). ಅಲ್ಲಿಗೆ ಕಾಸರಗೋಡಿನಿಂದ ಬರುವ ರಸ್ತೆಗೆ ತಲುಪುತ್ತೇವೆ. ಇಲ್ಲಿಂದ ಕಾಸರಗೋಡಿಗೆ ಇಪ್ಪತ್ತನಾಲ್ಕು ಮೈಲುಗಳ ದೂರು. ಈ ಹೆಸರನ್ನು ಇಲ್ಲಿ ಯಾಕೆ ಉಲ್ಲೇಖಿಸುತ್ತೆನೆಂದರೆ ಹಿಂದಿನ ಕಾಲದಲ್ಲಿ ಈ ಸ್ಥಳದಿಂದ ಕಾಸರಗೋಡಿಗೆ ಹೋಗುವ ಎತ್ತಿನ ಗಾಡಿಗಳು ಸಿಗುತ್ತಿತ್ತು. ದೇಲಂಪಾಡಿ ಭಾಗದವರಿಗೆ ಪರಪ್ಪೆ ಇದ್ದ ಹಾಗೆ ಈ ಪ್ರದೇಶದವರಿಗೆ ಹೊರಲೋಕಕ್ಕೆ ತಲುಪುವುದಕ್ಕಿರುವ ಪ್ರಧಾನ ಮಾರ್ಗವು ಇದಾಗಿತ್ತು. ಮತ್ತೆ ಅಲ್ಲಿಂದ ಹಿಂತಿರುಗಿ ಬರುವಾಗ ಸಿಗುವ ಪ್ರದೇಶವು ಬೊಳ್ಪಾರ್ (87) ಆಗಿದೆ. ಆರ್ ಎಂದರೆ ನೀರಿನ ಆಶ್ರಯದ ಸ್ಥಳ ಎಂದರ್ಥ. ಬೊಳ್ಪು ಎಂದರೆ ತುಳುವಿನಲ್ಲಿ ಬೆಳಕು ಎಂದರ್ಥ. ಆದರೆ ಬೊಳ್ಪು ಮತ್ತು ಆರ್ ಸೇರಿ ಬೊಳ್ಪಾರ್ ಯಾಕಾಯಿತು ಎಂಬುದು ತಿಳಿದಿಲ್ಲ. ಬಹುಶಃ ಸೂರ್ಯನ ಬೆಳಕು ಮೊದಲು ಬೀಳುವ ಸ್ಥಳ ಎಂಬರ್ಥದಲ್ಲಿಯೂ ಈ ಹೆಸರು ಬಂದಿರಲು ಸಾಧ್ಯವಿದೆ. ಬೊಳ್ಪಾರಿನಿಂದ ನೇರ ಬಾವದ ಕಡೆಗಾಗಿ ಪೂರ್ವಾಭಿಮುಖವಾಗಿ ಬರುವಾಪಿಂಡಿಕೋಡಿ (88) ಎಂದು ಕರೆಯುವ ಒಂದು ಪ್ರದೇಶಕ್ಕೆ ತಲುಪುತ್ತೇವೆ. ಇದು ಹತ್ತು ಹದಿನೈದು ಮನೆಗಳಿರುವ ಪ್ರದೇಶವಾಗಿದೆ. ಈ ಹೆಸರಿನ ಬಗ್ಗೆ ನನಗೆ ಹೆಚ್ಚಿನ ಮಾಹಿತಿಯಿಲ್ಲ. ಪಿಂಡಿಕೋಡಿಯಿಂದ ರಸ್ತೆಯ ಮೂಲಕ ಉತ್ತರಕ್ಕೆ ಸಾಗಿ ಅಲ್ಲಿಂದ ಪಶ್ಚಿಮದತ್ತ ಸ್ವಲ್ಪ ಸಾಗುವಾಗ ಸಿಗುವ ವಿಶಾಲವಾದ ಒಂದು ಮೈದಾನದಂತಹ ಪ್ರದೇಶವು ಶಾಲೆತ್ತಡ್ಕ (89). ಹಿಂದಿನ ಕಾಲದಲ್ಲಿ ಮಯ್ಯಾಳ ಶಾಲೆಯು ಇಲ್ಲಿದ್ದುದರಿಂದಾಗಿ ಈ ಪ್ರದೇಶವು ಶಾಲೆತ್ತಡ್ಕವಾಯಿತು. ಇತಿಹಾಸ ಪ್ರಸಿದ್ಧವಾದ ಮಯ್ಯಾಳ ಒತ್ತೆಕೋಲವು ಇದೇ ಜಾಗದಲ್ಲಿ ಪ್ರತಿವರ್ಷ ನಡೆಯುತ್ತದೆ. ಈ ಶಾಲೆತ್ತಡ್ಕದಿಂದ ಪಶ್ಚಿಮ ಉತ್ತರದಲ್ಲಿ ನಾಲ್ಕೈದು ಮನೆಗಳಿರುವ ಪ್ರದೇಶವನ್ನು ಮಯ್ಯಾಳ ದರ್ಖಾಸ್ (90) ಎಂದು ಕರೆಯುತ್ತೇವೆ. ಇದು ಮೊದಲೊಮ್ಮೆ ಹೇಳಿದ ರೀತಿಯಲ್ಲಿ ಸರಕಾರದಿಂದ ಪಟ್ಟಾ ಮೂಲಕ ಲಭಿಸಿದ ಭೂಮಿಯಾದುದರಿಂದ ಈ ಹೆಸರು ಬಂದಿದೆ.
ಈಗ ನಾವೊಮ್ಮೆ ಪುನಃ ಕಲ್ಲಮಜಲಿನತ್ತ ಬರಬೇಕು. ಕಲ್ಲಮಜಲಿನಿಂದ ಪಶ್ಚಿಮಾಭಿಮುಖವಾಗಿ ಬಲಭಾಗಕ್ಕೆ ಬರುವಾಗ ಅಂಕೊತ್ತಿಮಾರ್ (91) ಎಂಬ ಪ್ರದೇಶವು ಸಿಗುತ್ತದೆ. ಈಗಾಗಲೇ ಹೇಳಿದಂತೆ ಮಾರ್ ಅಂದರೆ ಗದ್ದೆ. ಅಂಕ ಅಂದರೆ ಕಾಳಗ, ಜಗಳ ಎಂಬರ್ಥವೂ ಇದೆ. ಹಿಂದಿನ ಕಾಲದಲ್ಲಿ ಕೋಳಿ ಅಂಕಗಳು, ಕುಸ್ತಿ ಪಂದ್ಯಗಳೆಲ್ಲ ನಡೆಯುತ್ತಿದ್ದ ಜಾಗಕ್ಕೆ ಅಂಕೊತ್ತಿಮಾರ್ ಎಂದು ಕರೆಯುತ್ತಿದ್ದರು. ಅಂಕೊತ್ತಿಮಾರ್ ದಾಟಿದ ನಂತರ ಸಿಗುವ ಸ್ಥಳ ಪದೆಂಜಿಮಾರ್ (92). ಪದೆಂಜಿ ಅಂದರೆ ಪಚ್ಚೆಹೆಸರು. ಪಚ್ಚೆಹೆಸರು ಕೃಷಿ ಮಾಡುತ್ತಿದ್ದ ಗದ್ದೆಯೇ ಪದೆಂಜಿಮಾರ್ ಆಯಿತು. ನಂತರ ಒಂದೆರಡು ಮನೆಗಳಿರುವ ಉದ್ದಾರ (93). ಉದ್ದಕ್ಕೆ ಇರುವ ಆರ್ ಅಂದರೆ ನೀರಿನ ಪ್ರದೇಶವೇ ಉದ್ದಾರವಾಗಿರಬಹುದು. ಉದ್ದಾರದ ಮುಂದಕ್ಕೆ ತೋಡಿನ ನೀರು ಮೇಲಿನಿಂದ ವೇಗವಾಗಿ ಬಿದ್ದು ಉಂಟಾದ ದೊಡ್ಡ ಹೊಂಡವಿರುವ ಪ್ರದೇಶವೇ ಗುರುಂಪು (94). ನಂತರ ಇರುವ ಜಾಗ ಬೊಮ್ಮಿಕಂಡ (95). ಬಹುಶಃ ಬೊಮ್ಮ ಅಥವಾ ಬೊಮ್ಮಿ ಎಂಬ ವ್ಯಕ್ತಿಗೆ ಸೇರಿದ ಗದ್ದೆ ಎಂಬರ್ಥದಲ್ಲಿ ಈ ಹೆಸರು ಬಂದಿರಬಹುದು. ಇನ್ನು ಬೊಮ್ಮಿಕಂಡ, ಗುರುಂಪಿನಿಂದ ಸ್ವಲ್ಪ ಹಿಂದಕ್ಕೆ ಉದ್ದಾರದವರೆಗೆ ಬಂದು ಎಡಭಾಗದಲ್ಲಿ ಅಂದರೆ ಉತ್ತರಭಾಗದಲ್ಲಿರುವ ಸಣ್ಣ ಗುಡ್ಡವನ್ನು ಹತ್ತಿದಾಗ ಸಿಗುವ ಸ್ಥಳವೇ ಭೈರವಗುಡ್ಡೆ (96). ಇಲ್ಲಿ ಶ್ರೀ ಮೂಕಾಂಬಿಕಾ ಭಜನಾ ಮಂದಿರವಿದೆ. ಅದೇ ರೀತಿಯಲ್ಲಿ ಒಂದು ಭೈರವನ ಕಟ್ಟೆಯೂ ಇದೆ. ಈ ಭೈರವನ ಕಟ್ಟೆಯಿಂದಾಗಿ ಇಲ್ಲಿಗೆ ಭೈರವ ಗುಡ್ಡೆ ಎಂಬ ಹೆಸರು ಬಂತು. ಅಲ್ಲಿಯೇ ಮಂದಿರದ ಎಡಭಾಗಕ್ಕೆ ಕೆಳಗೆ ಮಯ್ಯಾಳ ಪಳ್ಳಿ ಇದೆ. ಈ ಪಳ್ಳಿಯನ್ನು ದಾಟಿ ಪಶ್ಚಿಮಕ್ಕೆ ರಸ್ತೆಯಲ್ಲಿ ಸ್ವಲ್ಪ ಮುಂದುವರಿದಾಗ ಬಲಭಾಗದಲ್ಲಿ ಇರುವ ಸ್ಥಳವನ್ನು ಕೂರಮಜಲ್ (97) ಎನ್ನುವರು. ಮಜಲು ಎಂದರೆ ಈಗಾಗಲೇ ವಿವರಿಸಿದಂತೆ ಏಣಿಲು ಸುಗ್ಗಿ ಬೆಳೆ ತೆಗೆಯುವ ಗದ್ದೆ. ಕೂರ ಎನ್ನುವ ಪದಕ್ಕೆ ಅನ್ನ ಆಹಾರ ಎನ್ನುವ ಅರ್ಥವೂ ಇದೆ. ಆಹಾರ ಕೊಡುವ ಮಜಲು ಎಂಬರ್ಥದಲ್ಲಿ ಈ ಕೂರಮಜಲು ಬಂದಿರಲೂ ಬಹುದು.
ಈ ಕೂರಮಜಲಿನಿಂದ ಸ್ವಲ್ಪ ಮುಂದಕ್ಕೆ ಹೋಗಿ ತೋಡನ್ನು ದಾಟಿದರೆ ನಾವು ಚಾಮೆತ್ತಡ್ಕ ಅಥವಾ ಸಾಮೆತ್ತಡ್ಕ (98) ಕ್ಕೆ ತಲುಪುತ್ತೇವೆ. ಸಾಮೆ ಕೃಷಿ ಮಾಡುತ್ತಿದ್ದ ಅಡ್ಕವೇ ಸಾಮೆತ್ತಡ್ಕವಾಗಿರಬಹುದು. ಇಲ್ಲಿ ಹರಿಯುವ ತೋಡಿನ ಬಲಭಾಗವು ಕರ್ನಾಟಕಕ್ಕೆ ಸೇರಿರುತ್ತದೆ. ಸಾಮೆತ್ತಡ್ಕದಿಂದ ಪಶ್ಚಿಮಕ್ಕೆ ಮುಂದುವರಿಯುವಾಗ ಸಿಗುವ ಸ್ಥಳವು ಗೌರಿಮೂಲೆ (99) ಆಗಿದೆ. ಗೌರಿ ಇದ್ದ ಪ್ರದೇಶವು ಗೌರಿಮೂಲೆಯಾಗಿರಬಹುದು. ಸಾಮೆತ್ತಡ್ಕದಿಂದ ಮುಂದಕ್ಕೆ ಉತ್ತರದ ಕಡೆಗಾಗಿ ಬರುವಾಗ ಎಡಭಾಗಕ್ಕೆ ಮೊದಲು ಸಿಗುವುದು ಬೇರಿಕೆ (100). ಈ ಬೇರಿಕೆ ಯಾಕೆ ಬಂತು ಎನ್ನುವುದು ತಿಳಿದಿಲ್ಲ. ಬೇರಿಕೆಯನ್ನು ದಾಟಿದಾಗ ಅದೇ ಭಾಗದಲ್ಲಿ ಸುಡಿಕ್ಕಿರಿ (101) ಎಂಬ ಒಂದು ಸಣ್ಣ ಪ್ರದೇಶವು ಸಿಗುತ್ತದೆ. ಸ್ಮಶಾನಕ್ಕೆ ಹೇಳುವ ಇನ್ನೊಂದು ಹೆಸರು ಚುಡಿಕ್ಕಿರಿ ಅಥವಾ ಸುಡಿಕ್ಕಿರಿ. ಹಿಂದೆ ಈ ಪ್ರದೇಶವು ಕೆಲವು ಸಮುದಾಯದವರ ಹೆಣ ಸುಡುವ ಜಾಗವಾಗಿತ್ತು. ಆದುದರಿಂದ ಈ ಪ್ರದೇಶಕ್ಕೆ ಸುಡಿಕ್ಕಿರಿ ಎಂಬ ಹೆಸರು ಬಂದಿದೆ. ಸುಡಿಕ್ಕಿರಿಯಿಂದ ಪಶ್ಚಿಮಕ್ಕೆ ಒಳಭಾಗದಲ್ಲಿರುವ ಪ್ರದೇಶವೇ ಮುಣ್ಚಿಕಾನ (102). ಇದನ್ನು ಈಗೀಗ ಕನ್ನಡಕ್ಕೆ ಸೇರಿಸಿ ಮೆಣಸಿನಕಾನ ಎಂದೂ ಕರೆಯಲಾರಂಭಿಸಿದ್ದಾರೆ. ಗದ್ದೆಗೆ ತಾಗಿಕೊಂಡಿರುವ ಜಮೀನನ್ನು ಕಾನ ಎನ್ನುವ ಕಾರಣ ಮತ್ತು ಇಲ್ಲಿ ಈ ಜಮೀನಿನಲ್ಲಿ ಮೆಣಸಿನ ಕೃಷಿ ಮಾಡುತ್ತಿದ್ದ ಕಾರಣ ಇದು ಮುಣ್ಚಿಕಾನವಾಯಿತು. ಯಕ್ಷಗಾನ ಯುವ ಭಾಗವತರಾದ ಶ್ರೀ ಮೋಹನ ಮೆಣಸಿನಕಾನರವರು ಇದೇ ಪ್ರದೇಶದಲ್ಲಿ ವಾಸವಾಗಿದ್ದಾರೆ. ಮುಣ್ಚಿಕಾನದಿಂದ ರಸ್ತೆಯ ಮೂಲಕ ದೇಲಂಪಾಡಿಯ ಕಡೆಗೆ ಸಾಗವಾಗ ಎಡಬಲಗಳಲ್ಲಿರುವ ಪ್ರದೇಶಗಳೆಲ್ಲವೂ ಶಾಂತಿಮಲೆ (103). ಹಿಂದೆ ಈ ಪ್ರದೇಶದಲ್ಲಿ ಹೇರಳವಾಗಿ ಕಾಡುಗಳಿದ್ದು ಅಲ್ಲೆಲ್ಲಾ ಹೆಚ್ಚಾಗಿ ಶಾಂತಿಮರಗಳಿದ್ದ ಕಾರಣ ಇದು ಶಾಂತಿಮಲೆಯಾಯಿತು. ಶಾಂತಿಮಲೆಯಿಂದ ಮತ್ತೂ ಮುಂದುವರಿಯವಾಗ ಎಡಕ್ಕೆ ಮೇಲ್ಭಾಗಕ್ಕೆ ಹೋಗುವ ಒಂದು ರಸ್ತೆ ಸಿಗುತ್ತದೆ. ಈ ರಸ್ತೆಯಲ್ಲಿ ಅಂದಾಜು ಒಂದು ಮೈಲು ಸಾಗಿದಾಗ ಸಿಗುವ ಸ್ಥಳವೇ ಕೆಮ್ಮತಡ್ಕ (104). ಕಾಡು ಮೇಕೆಗಳಿಗೆ ತುಳುವಿನಲ್ಲಿ ಕೆಮ್ಮ ಎಂದು ಕರೆಯುತ್ತಾರೆ. ಇದು ಆಗಲೂ ಈಗಲೂ ಕಾಡುಗಳಿಂದಾವೃತವಾಗಿರುವ ಸಣ್ಣ ಕೃಷಿಭೂಮಿ ಇರುವ ಪ್ರದೇಶ. ಈ ಭಾಗದಲ್ಲಿ ಹಿಂದೆ ಹೇರಳವಾಗಿ ಈ ಕೆಮ್ಮಗಳು ಇದ್ದ ಕಾರಣ ಇದು ಕೆಮ್ಮತ್ತಡ್ಕವಾಯಿತು. ಇಲ್ಲಿಂದ ಕರ್ನಾಟಕದ ಸರಹದ್ದು ಪ್ರಾರಂಭವಾಗುತ್ತದೆ. ಕೆಮ್ಮತ್ತಡ್ಕದಿಂದ ಪುನಃ ಬಂದು ದೇಲಂಪಾಡಿಗೆ ಹೋಗುವ ರಸ್ತೆಗೆ ತಲುಪುವಲ್ಲಿ ಊಜಂಪಾಡಿ ಪಳ್ಳಿ ಸಿಗುತ್ತದೆ. ಈ ಪಳ್ಳಿಯ ಹಿಂಭಾಗದಲ್ಲಿ ಸಾಗುವ ರಸ್ತೆಯ ಮೂಲಕ ಮುಂದುವರಿದಾಗ ನಮಗೆ ಎಡಭಾಗದಲ್ಲಿ ಉಂಗುಳಿಯಡ್ಕ (105) ಎಂಬ ಒಂದು ಪ್ರದೇಶ ಸಿಗುತ್ತದೆ. ಮುಂಗುಳಿ ಅಡ್ಕವೋ ಉಂಡೆಪುಳಿಯಡ್ಕವೋ ನಂತರ ಉಂಗುಳಿಯಡ್ಕವಾಗಿರಬಹುದೇನೊ. ಇಲ್ಲಿಂದ ರಸ್ತೆಯಲ್ಲಿಯೇ ಸ್ವಲ್ಪ ಮುಂದುವರಿಯುವಾಗ ಊಜಂಪಾಡಿ ಅಂಗನವಾಡಿ ಮತ್ತು ಎಂಜಿಎಲ್‍ಸಿ ಸಿಗುತ್ತದೆ. ಇಲ್ಲಿಂದ ಪೂರ್ವಾಭಿಮುಖವಾಗಿ ಸಾಗುವಾಗ ಬಲಬದಿಯಲ್ಲಿ ಸಿಗುವ ಸ್ಥಳ ಸಾರೆಪ್ಪಾಡಿ (106). ತುಳುವಿನಲ್ಲಿ ಸಾರುವುದು ಎಂದರೆ ಮಣ್ಣಿನಲ್ಲಿ ಹೂತುಹೋಗುವುದು ಎಂದರ್ಥ. ಹಿಂದಿನ ಕಾಲದಲ್ಲಿ ಇಲ್ಲಿರುವ ಸಣ್ಣ ಹೊಂಡದಲ್ಲಿ ಒಮ್ಮೆಲೇ ಐದು ಜನ ಹೂತುಹೋಗಿದ್ದರಂತೆ. ಇದು ಊಜಂಪಾಡಿಯ ದೈವ ದೇವರುಗಳಿಗೆ ಸಂಬಂಧಿಸಿದ ಕಾರಣಿಕದ ಜಾಗ. ಈಗಲೂ ಊಜಂಪಾಡಿಯಲ್ಲಿ ಭೂತ ಕಟ್ಟುವವರು ಮೊದಲು ಈ ಸ್ಥಳಕ್ಕೆ ಬಂದು ಇಲ್ಲಿಂದ ಒಂದು ಕೊಡವಾದರೂ ನೀರನ್ನು ತೆಗೆದು ಸ್ನಾನ ಮಾಡದಿ ನಂತರವೇ ಭೂತ ಕಟ್ಟಬೇಕು. ಸಾರೆಪ್ಪಾಡಿಯಿಂದ ದಕ್ಷಿಣಕ್ಕಿರುವ ಒಂದು ಸ್ಥಳ ಮುತ್ತಣಹಿತ್ತಿಲು (107). ಮುತ್ತಣ್ಣನ ಹಿತ್ತಿಲು ಎಂಬ ಅರ್ಥದಲ್ಲಿ ಈ ಹೆಸರು ಬಂದಿದೆ. ಈ ಮುತ್ತಣಹಿತ್ತಿಲಿನಿಂದ ಇನ್ನೂ ದಕ್ಷಿಣಕ್ಕೆ ನಾವು ತೋಡು ದಾಟಿ ಮಾರ್ಗದ ಸಮೀಪಕ್ಕೆ ಬರುವಾಗ ಕಲ್ಲಕಟ್ಟೆ (108) ಎಂಬ ಸ್ಥಳ ಸಿಗುತ್ತದೆ. ಇಲ್ಲಿ ಒಂದೆರಡು ಅಂಗಡಿಗಳೂ ಸ್ವಲ್ಪ ಮನೆಗಳೂ ಇವೆ. ಅದೇ ರೀತಿ ಹೆಸರಿನ ಸೂಚಕವಾಗಿ ಕಗ್ಗಲ್ಲಿನಿಂದ ಕಟ್ಟಿದ ದೊಡ್ಡ ಕಲ್ಲಕಟ್ಟವೂ ಕಂಪೌಂಡಿನ ರೀತಿಯಲ್ಲಿದೆ. ಕಲ್ಲಕಟ್ಟದಿಂದ ರಸ್ತೆಯನ್ನು ದಾಟಿ ದಕ್ಷಿಣಕ್ಕೆ ಹೊದರೆ ನಮಗೆ ಸಿಗುವ ಸ್ಥಳ ಪೊಸಕಂಡೊ (109). ಹೊಸತಾಗಿ ಮಾಡಿದ ಗದ್ದೆ ಎಂಬರ್ಥದಲ್ಲಿ ಪೊಸಕಂಡೊ ಎಂದು ಕರೆಯುತ್ತಾರೆ. ಈಗೀಗ ಇದನ್ನು ಕನ್ನಡೀಕರಿಸಿ ಹೊಸಗದ್ದೆ ಎಂದೂ ಕರೆಯುವುದುಂಟು. ಇದು ಸಾಮಾನ್ಯ ಹತ್ತು ಹದಿನೈದು ಮನೆಗಳಿರುವ ಪ್ರದೇಶ. ಇದರ ಇನ್ನೊಂದು ಬದಿಯು ನಾವು ಮಯ್ಯಾಳ ಭಾಗದಲ್ಲಿ ಹೇಳಿದ ಕನ್ನಂಗೋಲು ಆಗಿದೆ. ಪೊಸಕಂಡದಿಂದ ಪೂರ್ವಕ್ಕೆ ರಸ್ತೆ ದಾಟಿದ ನಂತರ ಸಿಗುವ ಸ್ಥಳಕ್ಕೆ ಕೋಡಿಯಡ್ಕ (110) ಎನ್ನುತ್ತಾರೆ. ಇದು ಈ ಪ್ರದೇಶದ ಕೋಡಿಯಲ್ಲಿ ಅಂದರೆ ಕೊನೆಯಲ್ಲಿ ಇರುವ ಅಡ್ಕವಾದ ಕಾರಣ ಇದು ಕೋಡಿಯಡ್ಕವಾಗಿದೆ. ಅಲ್ಲಿಂದ ಮುಂದಕ್ಕೆ ಪೂರ್ವಕ್ಕೆ ಬಂದಾಗ ಅಲ್ಲಿ ಇನ್ನೊಂದು ದರ್ಖಾಸು (111) ಸಿಗುತ್ತದೆ. ಈ ದರ್ಖಾಸನ್ನು ದಾಟಿ ಮತ್ತೆ ಮೇಲಕ್ಕೆ ಬರುವಾಗ ನಗೆ ದೇಲಂಪಾಡಿ ಕಲ್ಲಕಟ್ಟ ರಸ್ತೆ ಸಿಗುತ್ತದೆ. ರಸ್ತೆಯ ಉತ್ತರ ಭಾಗದಲ್ಲಿ 1996ರಲ್ಲಿ ಸ್ಥಾಪಿಸಲ್ಪಟ್ಟ ದೇಲಂಪಾಡಿ ಚರ್ಚ್ ಇದೆ. ಚರ್ಚಿನ ಮುಂಭಾಗದಿಂದ ಊಜಂಪಾಡಿಯೆಡೆಗೆ ಸಾಗುವ ದಾರಿಯಲ್ಲಿ ನೂರಿನ್ನೂರು ಮೀಟರುಗಳಷ್ಟು ಸಾಗುವಾಗ ನಮ್ಮ ಬಲಭಾಗದಲ್ಲಿ ತೆಂಗಿನ ತೋಟ ಇರುವ ಪ್ರದೇಶವನ್ನು ಕಾಳಮಜಲ್ (112) ಎನ್ನತ್ತೇವೆ. ಈ ಎಲ್ಲಾ ಪ್ರದೇಶಗಳಲ್ಲಿ ಹಿಂದೆ ಇಲ್ಲಿನ ಆದಿವಾಸಿ, ಬುಡಕಟ್ಟು ವಿಭಾಗದವರು ಹೆಚ್ಚಿನ ಸಂಖ್ಯೆಯಲ್ಲಿ ವಾಸಿಸುತ್ತಿದ್ದರು. ಬಹುಶಃ ಅವರ ಪೈಕಿಯಲ್ಲೊಬ್ಬರಾದ ಕಾಳ ಎನ್ನುವವರಿಗೆ ಸೇರಿದ ಮಜಲು ಎಂಬರ್ಥದಲ್ಲಿ ಇದು ಕಾಳಮಜಲು ಆಗಿರಬಹುದು. ಕಾಳಮಜಲು ದಾಟಿ ನಂತರ ಸಿಗುವ ತೋಡನ್ನೂ ದಾಟಿ ಮುಂದುವರಿದಾಗ ಎಡಭಾಗದಲ್ಲಿ ಮುತ್ತಣಹಿತ್ತಿಲಿನ ಸಮೀಪದಲ್ಲಿಯೆ ಕಾರಣಿಕದ ದೈವವಾದ ಮಾರಿಗುಡಿ ಇದೆ. ಇಲ್ಲಿ ಪ್ರತಿ ವರ್ಷ ಎಪ್ರೀಲ್ ಕೊನೆಗೆ ಪ್ರಸಿದ್ಧವಾದ ಮಾರಿ ಜಾತ್ರೆ ನಡೆಯುತ್ತದೆ. ಈ ರೀತಿಯ ಮಾರಿ ಜಾತ್ರೆ ನಮ್ಮ ಸುತ್ತಮುತ್ತಲಿನ ಬೇರೆ ಯಾವುದೇ ಪ್ರದೇಶದಲ್ಲಿ ನಡೆಯುವುದಿಲ್ಲ. ಇಲ್ಲಿಂದ ಉತ್ತರಕ್ಕಿರುವ ಸಣ್ಣ ಗುಡ್ಡವನ್ನು ದಾಟಿ ಕೆಳಗಿಳಿದಾಗ ನಾವು ಊಜಂಪಾಡಿ (113) ಗೆ ತಲುಪುತ್ತೇವೆ. ಒಂದೇ ಜಾತಿಯ ಗಿಡಗಳಿರುವ ಸ್ಥಳಕ್ಕೆ ಪಾಡಿ ಎಂದು ಕರೆಯುತ್ತಾರೆ. ಅದೇ ರೀತಿ ಪಾಡಿ ಎಂಬ ಪದಕ್ಕೆ ಹಳ್ಳಿ ಎಂಬ ಅರ್ಥವೂ ಇದೆ. ಇದ್ಯಾವುದೊ ಒಂದು ಕಾರಣಕ್ಕೆ ಇದು ಊಜಂಪಾಡಿಯಾಗಿರಬೇಕು. ಊಜಂಪಾಡಿಯ ಒಟ್ಟೂ ಪ್ರದೇಶವು ಹೆಚ್ಚು ವಿಶಾಲವಾದುದಾರೂ ಪ್ರಸಿದ್ಧವಾದ ಊಜಂಪಾಡಿ ಮನೆ ಇರುವ ಈ ಪ್ರದೇಶವನ್ನು ನಾವು ಊಜಂಪಾಡಿಯ ಕೇಂದ್ರಸ್ಥಾನವೆಂದು ಹೇಳಬಹುದು. ಇಲ್ಲಿ ಒಂದೊಮ್ಮೆ ಇಡೀ ದೇಲಂಪಾಡಿ ಪ್ರದೇಶಕ್ಕೇ ಧನಿಗಳಾಗಿದ್ದ ಪ್ರಸಿದ್ಧವಾದ ಊಜಂಪಾಡಿ ಮನೆ ಇದೆ. ಈಗ ಹಿರಿಯರಾದ ಶ್ರೀ ಊಜಂಪಾಡಿ ನಾರಾಯಣ ನಾಯ್ಕರು ಇಲ್ಲಿ ವಾಸವಾಗಿದ್ದಾರೆ. ಇದು ದೈವ ದೇವರುಗಳು ನೆಲೆನಿಂತಿರುವ ಕಾರಣಿಕದ ನೆಲೆಬೀಡು. ಮುಂದಕ್ಕೆ ಈ ಊಜಂಪಾಡಿ ಆಸ್ತಿಯ ಪೂರ್ವಭಾಗದಲ್ಲಿ ಇರುವ ಸ್ಥಳ ಅಂಕತಮಜಲ್ (114). ಅಂಕ ಅಂದರೆ ಕಾಳಗ, ಜಗಳ ಎಂಬರ್ಥವೂ ಇದೆ. ಹಿಂದಿನ ಕಾಲದಲ್ಲಿ ಕೋಳಿ ಅಂಕಗಳು, ಕುಸ್ತಿ ಪಂದ್ಯಗಳೆಲ್ಲ ಈ ಜಾಗದಲ್ಲಿ ನಡೆಯುತ್ತಿದ್ದವು. ಮಜಲು ಎಂದರೆ ಏಣಿಲು ಸುಗ್ಗಿ ಬೆಳೆ ಮಾತ್ರ ಬೆಳೆಯುವ ಗದ್ದೆ. ಅಂಕತಮಜಲ್ ಅಂದರೆ ಅಂಕ ನಡೆಯುತ್ತಿದ್ದ ಮಜಲು ಗದ್ದೆ. ಇಲ್ಲಿ ಊಜಂಪಾಡಿಯ ಒಕ್ಕಲುಗಳಾಗಿದ್ದವರೆಲ್ಲಾ ಸೇರಿ ಎರಡು ವರ್ಷಗಳಿಗೊಮ್ಮೆ ಜೂಮಾದಿ ನೇಮವನ್ನು ನಡೆಸುವ ಸಂಪ್ರದಾಯವಿದೆ. ಮಜಲು ಗದ್ದೆಗಳು ಸಾಮಾನ್ಯವಾಗಿ ಸಮತಟ್ಟಾಗಿರದೆ ಮೆಟ್ಟಿಲುಗಳಂತೆ ಎತ್ತರ ಎತ್ತರವಾಗಿರುತ್ತವೆ. ಇಲ್ಲೇ ಮುಂದಕ್ಕಿರುವ ಒಂದು ಸಣ್ಣ ಪ್ರದೇಶ ಕಡೆಂಜ (115). ಇಲ್ಲಿ ಈಗ ವಾಸವಾಗಿರುವವರು ಸಮೀಪದ ಕರ್ನಾಟಕದ ಕಡೆಂಜ ಎಂಬ ಸ್ಥಳದಿಂದ ಬಂದವರಾದುದರಿಂದ ಈ ಸ್ಥಳಕ್ಕೆ ಕಡೆಂಜ ಎಂಬ ಹೆಸರಾಗಿರಬೇಕು. ಕಡೆಂಜವನ್ನು ದಾಟಿ ಮುಂದುವರಿಯುವಾಗ ನಮಗೆ ಎಣ್ಣೆಜಲು (116) ಎಂಬ ಸ್ಥಳ ಸಿಗುತ್ತದೆ. ಎಣ್ಣೆ ಧಾನ್ಯಗಳಾದ ಎಳ್ಳು ಅಥವಾ ಬೇರೆ ಯಾವುದಾದರೂ ಕೃಷಿಯನ್ನು ಇಲ್ಲಿ ಮಾಡುತ್ತಿದ್ದುದರಿಂದಾಗಿ ಈ ಹೆಸರು ಬಂದಿರಬೇಕು. ಇಲ್ಲಿಂದ ಇನ್ನೂ ಪಶ್ಚಿಮಕ್ಕೆ ಸಾಗಿದಾಗ ನಮಗೆ ದೇಲಂಪಾಡಿಯ ಕಡೆಗೆ ಹೋಗುವ ರಸ್ತೆ ಸಿಗುತ್ತದೆ. ರಸ್ತೆಯಲ್ಲಿ ಒಂದು ತಿರುವು ಇರುವ ಸ್ಥಳದಲ್ಲಿ ಯಾವಾಗಲೂ ರಸ್ತೆಯ ಮೇಲೆ ನೀರು ಹರಿದು ಹೋಗುವ ಒಂದು ಸ್ಥಳವಿದೆ. ಇದುವೇ ಬೂತಳಮೂಲೆ (117). ಬೂತೊಲೆನ ಮೂಲೆ ಅಂದರೆ ಭೂತಗಳ ಮೂಲೆ ಎಂಬರ್ಥದಲ್ಲಿ ಈ ಪ್ರದೇಶವನ್ನು ಬೂತಳಮೂಲೆ ಎಂದು ಕರೆಯುತ್ತಾರೆ. ಇಲ್ಲಿನ ನೀರ ತೊರೆಯಲ್ಲಿ ಹಿಂದಿನ ಕಾಲದಲ್ಲಿ ಒಬ್ಬಾಕೆ ಹೆಂಗಸು ಮಾಂಸವನ್ನು ತೊಳೆಯುವ ಸಮಯದಲ್ಲಿ ಮಾಯವಾಗಿ ಹೋಗಿದ್ದಾರೆ ಎಂಬ ಕಥೆಯನ್ನು ಹಿರಿಯರು ನೆನಪಿಸುತ್ತಾರೆ. ಇದು ಅನೇಕ ಭೂತಗಳು ನೆಲೆನಿಂತಿರುವ ಕಾರಣಿಕದ ಸ್ಥಳ. ಆದರೆ ಇಲ್ಲಿರುವ ಎಲ್ಲಾ ದೈವ ಸಾನ್ನಿಧ್ಯಗಳೂ ಜೀರ್ಣವಾಗಿ ಹೋಗಿವೆ. ಬೂತಳಮೂಲೆಯನ್ನು ಬಿಟ್ಟು ರಸ್ತೆಯಲ್ಲಿಯೇ ಮುಂದುವರಿಯುವಾಗ ನಂತರ ಸಿಗುವ ಸ್ಥಳ ಪಡ್ಪು (118). ಹಿಂದೆ ಹೇರಳವಾಗಿ ಮುಳಿಹುಲ್ಲು ಬೆಳೆಯುತ್ತಿದ್ದ ಅನೇಕ ಜಾತಿಯ ಮರಗಳೂ ಪೊದರುಗಳೂ ಇದ್ದ ಸಮತಟ್ಟಾದ ಈ ಎತ್ತರದ ಪ್ರದೇಶಗಳಲ್ಲಿ ಈಗ ಅನೇಕ ಮನೆಗಳು ತಲೆ ಎತ್ತಿವೆ. ಇನ್ನು ಇದೇ ದಾರಿಯಲ್ಲಿ ಸ್ವಲ್ಪ ಮುಂದುವರಿದಾಗ ನಾವು ನಾಲ್ಕು ರಸ್ತೆ ಸೇರುವ ಒಂದು ಜಾಗಕ್ಕೆ ತಲುಪುತ್ತೇವೆ. ಈ ಸ್ಥಳವನ್ನು ವಾಲ್ತಾಜೆ (119) ಎನ್ನುವರು. ಈ ಹೆಸರಿನ ಮೂಲದ ಬಗ್ಗೆ ನನಗೆ ಯಾವುದೇ ಮಾಹಿತಿ ಲ್ಲ. ನಿಜವಾಗಿ ಈ ವಾಲ್ತಾಜೆ ಎನ್ನುವುದು ಸ್ವಲ್ಪ ವಿಸ್ತಾರವಾದ ಪ್ರದೇಶ. ಈ ವಾಲ್ತಾಜೆಯ ನಾಲ್ಕು ರಸ್ತೆ ಸೇರುವ ಜಾಗದಿಂದ ನಾವು ಉತ್ತರಕ್ಕೆ ಹೋಗುವಾಗ ಎಡಬದಿಯಲ್ಲಿ ನಾನು ಮೊದಲೇ ಹೇಳಿದ ಪಡ್ಪಿನ ಒಂದು ಭಾಗ ಸಿಗುತ್ತದೆ. ಮತ್ತೂ ಹತ್ತುತ್ತಾ ಮುಂದುವರಿದಾಗ ನಾವೊಂದು ಸಣ್ಣ ಸಮತಲ ಪ್ರದೇಶಕ್ಕೆ ತಲುಪುತ್ತೇವೆ. ಈ ಜಾಗವೇ ನೀರ ಬಸಿರಿ (120). ನೀರಿನ ಒಸರು ಇರುವ ಜಾಗ ನೀರಬಸಿರಿ ಆಯಿತೊ ಏನೊ. ಇದೇ ರಸ್ತೆಯಲ್ಲಿ ಮುಂದುವರಿದಾಗ ಕೊನೆಗೆ ಒಂದು ಅತ್ಯಂತ ಎತ್ತರದ ಸ್ಥಳಕ್ಕೆ ತಲುಪುತ್ತೇವೆ. ಇಲ್ಲಿಂದ ಕರ್ನಾಟಕ ರಾಜ್ಯದ ಗುಡ್ಡಡ್ಕ ರಕ್ಷಿತಾರಣ್ಯ ಪ್ರಾರಂಭವಾಗುತ್ತದೆ. ಈ ಜಾಗದಲ್ಲಿ ನಿಂತು ದೇಲಂಪಾಡಿಯತ್ತ ನೋಡಿದರೆ ಈಗಲೂ ದೇಲಂಪಾಡಿಯ ಪ್ರದೇಶ ನಮಗೆ ಕಾಣುತ್ತದೆ. ಹಿಂದೆ ನಾವು ಪೆರ್ನಾಜೆ, ಪುತ್ತೂರು ಕಾಲೇಜಿಗೆ ಹೋಗುತ್ತಿದ್ದಾಗ ಇದೇ ದಾರಿಯಲ್ಲಿ ನಡೆದು ಹೋಗುತ್ತಿದ್ದೆವು. ಹೀಗೆ ದೇಲಂಪಾಡಿಯತ್ತ ಮುಖಮಾಡಿ ನಾವು ನಿಂತಿರುವಲ್ಲಿಂದ ನಮ್ಮ ಎಡಭಾಗದತ್ತ ನಾವು ಇಳಿಯಬೇಕು. ಹೀಗೆ ಇಳಿಯುತ್ತಿರುವಾಗ ನಮ್ಮ ಬಲಭಾಗಕ್ಕೆ ಇರುವ ಎಂಟ್ಹತ್ತು ಮನೆಗಳಿರುವ ಪ್ರದೇಶವು ಮಿತ್ತಮೂಲೆ (121) ಯಾಗಿದೆ. ಮಿತ್ತ್ ಅಂದರೆ ಮೇಲೆ ಎಂದರ್ಥ. ಮೇಲೆ ಇರುವ ಮೂಲೆಯೇ ಮಿತ್ತಮೂಲೆಯಾಗಿದೆ. ಇಲ್ಲಿ ಬಲಭಾಗದಲ್ಲಿ ಇರುವ ಒಂದು ಸ್ಥಳ ಮುಗೇರ್ (122). ರಾಜಕೀಯವಾಗಿ ನಮ್ಮ ರಾಜ್ಯಕ್ಕೆ ಸೇರದಿದ್ದರೂ ಬಹಳ ಹಿಂದಿನಿದಲೇ ಮುಗೇರು ದೇಲಂಪಾಡಿಯೊಂದಿಗೆ ನಿರಂತರ ಸಂಪರ್ಕವಿರಿಸಿಕೊಂಡಿದ್ದ ಒಂದು ಸ್ಥಳವಾಗಿತ್ತು. ಇಲ್ಲಿ ಜುಮಾದಿ, ಉಳ್ಳಾಗುಲು ಸೇರಿದಂತೆ ನೂರೊಂದು ಭೂತಗಳ ನೇಮವು ಐದು ದಿವಸಗಳ ಕಾಲ ವಿಜೃಂಭಣೆಯಿಂದ ನಡೆಯುತ್ತಿತ್ತು. ಅದರಂಗವಾಗಿ ಐದು ದಿವಸಗಳ ಕಾಲ ನಡೆಯುತ್ತಿದ್ದ ಕೋಳಿಕಟ್ಟವು ನಮ್ಮ ಆಸುಪಾಸಿನ ಎಲ್ಲಾ ಊರುಗಳಲ್ಲಿಯೂ ಪ್ರಸಿದ್ಧವಾಗಿತ್ತು. ಆದಕಾರಣ ಈ ಮುಗೇರನ್ನು ನಮ್ಮ ಒಂದು ಊರಾಗಿ ನಾನು ಪರಿಗಣಿಸಿರುತ್ತೇನೆ. ಇನ್ನು ಮುಗೇರಿನಿಂದ ವಾಪಾಸು ವಾಲ್ತಾಜೆಗೆ ಬರುವಾಗ ಸಿಗುವ ಸ್ಥಳ ಮಾರಾಟಿಮೂಲೆ (123). ಹಿಂದೆ ಇಲ್ಲಿ ಮರಾಟಿ ಸಮುದಾಯದವರು ಮುಗೇರಿನವರ ಒಕ್ಕಲುಗಳಾಗಿ ಇದ್ದುದರಿಂದಾಗಿ ಈ ಸ್ಥಳಕ್ಕೆ ಮಾರಾಟಿಮೂಲೆ ಎಂಬ ಹೆಸರಾಯಿತು. ಈಗ ಇಲ್ಲಿ ಕೃಷಿ ಸ್ಥಳವಲ್ಲದೇ ಬೇರೆ ಯಾವುದೇ ಜನವಾಸವಿಲ್ಲ. ಇಲ್ಲಿಂದ ವಾಲ್ತಾಜೆಯ ಮೂಲಕ ಬರುವಾಗ ನಮಗೆ ದೇಲಂಪಾಡಿಗೆ ಹೋಗುವ ರಸ್ತೆ ಸಿಗುತ್ತದೆ. ಆ ರಸ್ತೆಯನ್ನು ತುಂಡರಿಸಿ ಪಶ್ಚಿಮದತ್ತ ಸಾಗುವ ಕಾಲುದಾರಿಯಲ್ಲಿ ಮುಂದುವರಿದರೆ ನಾವೊಂದು ಬಯಲು ಪ್ರದೇಶಕ್ಕೆ ತಲುಪುತ್ತೇವೆ. ಈ ಪ್ರದೇಶವನ್ನು ಮಣಿಯೂರು (124) ಎನ್ನುತ್ತೇವೆ. ಇಲ್ಲಿ ಶ್ರೀ ಶಾಸ್ತಾರೇಶ್ವರ ಕ್ಷೇತ್ರವಿದೆ. ಅಲ್ಲಿಂದ ಮತ್ತೆ ದೇಲಂಪಾಡಿಯ ಕಡೆಗಾಗಿ ಬರುವಾಗ ಪಟ್ರಮಜಲ್ (125) ಸಿಗುತ್ತದೆ. ಭಟ್ಟ್ರೆನ ಮಜಲ್ ನಂತ ಪಟ್ರಮಜಲ ಆಯಿತು. ಇದೇ ಪಟ್ರಮಜಲ್ ಬೈಲಿನ ಒಳಭಾಗದಲ್ಲಿ ನಾವು ನೇರ ಬಂದರೆ ದೇಲಂಪಾಡಿಯ ಸೊಸೈಟಿ ಇರುವ ಜಾಗಕ್ಕೆ ತಲುಪಬಹುದು. ಈ ಸ್ಥಳಕ್ಕೆ ಹಿಂದೆ ಬಂಡಸಾಲೆ (126) ಎಂದು 
ಕರೆಯುತ್ತಿದ್ದರು. ಬಂದ್ಯಡ್ಕ ಮನೆಯವರು ಬಹಳ ಹಿಂದಿನ ಕಾಲದಲ್ಲಿಯೇ ಕಟ್ಟಿದ್ದ, ಈಗಲೂ ಸುಸ್ಥಿತಿಯಲ್ಲಿರುವ ಎರಡಂತಸ್ತಿನ ಕಟ್ಟಡದಿಂದಾಗಿ ಇಲ್ಲಿಗೆ ಈ ಹೆಸರು ಬಂತು. ಈ ಭಂಡಸಾಲೆಯು ಒಂದು ಪ್ರತ್ಯೇಕ ಊರಲ್ಲದಿದ್ದರೂ ಆ ಪ್ರದೇಶಕ್ಕೆ ಅಂದಿಗೂ ಇಂದಿಗೂ ಒಂದು ಗುರುತಿನ ಚಿಹ್ನೆ (ಲ್ಯಾಂಡ್ ಮಾರ್ಕ್) ಗಿರುವುದರಿಂದ ಈ ಹೆಸರನ್ನು ಇಲ್ಲಿ ಸೇರಿಸಿರುತ್ತೇನೆ. ಅಲ್ಲಿಂದ ಸ್ವಲ್ಪ ಮುಂದುವರಿದು ಮೂರು ಮಾರ್ಗಗಳು ಸೇರುವಲ್ಲಿಗೆ ತಲುಪಿದಾಗ ಅಲ್ಲಿ ಬಲಕ್ಕೆ ಇರುವ ಸಣ್ಣ ಪ್ರದೇಶವೇ ಪಾಲಡ್ಕ (127). ಆ ಜಮೀನಿನ ಮುಂದುವರಿಕೆಯಾಗಿ ಇರುವ ಎಲ್ಲಾ ಪ್ರದೇಶಗಳನ್ನು ಮತ್ತು ಆ ಒಂದು ಮನೆಯನ್ನ ಹಿಂದೆ ಪಾಲಡ್ಕ ಎಂದೇ ಕರೆಯುತ್ತಿದರು. ಬಹುಶಃ ಪಾಲೆ ಮರಗಳಿರುವ ಅಡ್ಕ ಎಂಬರ್ಥದಲ್ಲಿ ಕರೆದಿರಬಹುದು. ಇಲ್ಲಿರುವ ಮೂರು ಮಾರ್ಗಗಳ ಪೈಕಿ ಎಡಭಾಗಕ್ಕಿರುವ ಮಾರ್ಗದಲ್ಲಿ ಅಂದಾಜು ಇನ್ನೂರು ಮೀಟರು ಹೋದಾಗ ಅಲ್ಲೊಂದು ಅಂಗಡಿ ಇದೆ. ಇದನ್ನು ಹಿಂದೆ ಪೊಸಂಗಡಿ (128) ಎಂದು ಕರೆಯುತ್ತಿದ್ದರು. ಬಹಳ ಹಿಂದೆ ಕೇವಲ ದೇಲಂಪಾಡಿಯ ಮೇಲಿನ ಪ್ರದೇಶದಲ್ಲಿ ಮಾತ್ರ ಎರಡ್ಮೂರು ಅಂಗಡಿಗಳಿದ್ದ ಸಮಯದಲ್ಲಿ ಬೆಳ್ಳಿಪ್ಪಾಡಿಯಿಂದ ಬಂದ ಬಾಲಕೃಷ್ಣ ಗಡರು ಅಲ್ಲೊಂದು ಹೊಸ ಅಂಗಡಿಯನ್ನು ಪ್ರಾರಂಭಿಸಿದರು. ನಂತರ ಆ ಸ್ಥಳಕ್ಕೂ ಅಂಗಡಿಗೂ ಪೊಸಂಗಡಿ ಎಂಬ ಹೆಸರಾಯಿತು. ಅಲ್ಲಿಂದ ಅರ್ಧ ಕಿಲೋಮಟರುಗಳಷ್ಟು ದೂರದಲ್ಲಿ ದೇಲಂಪಾಡಿಯ ಹಿಂದಿನ ಧನಿಗಳಾಗಿದ್ದ ಪಟೇಲರ ಮನೆ ಮತ್ತು ಸಮೀಪದಲ್ಲಿಯೇ ದೇಲಂಪಾಡಿಯ ಗ್ರಾಮ ಕ್ಷೇತ್ರವಾದ ಶ್ರೀ ಮಹಾಲಿಂಗೇಶ್ವರ ಕ್ಷೇತ್ರವಿದೆ. ಇನ್ನು ಈ ಪೊಸಂಗಡಿಯ ಹಿಂಭಾಗದಲ್ಲಿ ಒಂದು ಮನೆ ಇರುವ ಜಾಗಕ್ಕೆ ಮಾರ್ಗೊ (129) ಎಂದು ರೆಯುತ್ತಾರೆೆ. ಲ್ಲಿ ಹಿಂದೆ ಚೆನ್ನಪ್ಪ ಗಡರೆಂಬವರೊಬ್ಬರು ವಾಸವಾಗಿದ್ದರು. ಈ ಚೆನ್ನಪ್ಪ ಗೌಡರು ಹಿಂದೆ ಕನಕಮಜಲು ಭಾಗದಲ್ಲಿ ರಸ್ತೆಯ ಕೆಲಸಕ್ಕೆ ಖಾಯಂ ನೌಕರರಾಗಿ (ಹಿಂದೆ ರಸ್ತೆಗಳ ಸಣ್ಣ ಪುಟ್ಟ ಕೆಲಸಗಳನ್ನು ಮಾಡುವುದಕ್ಕಾಗಿ ರೈಲ್ವೆಯ ಗ್ಯಾಂಗ್‍ಮನ್ ರೀತಿಯಲ್ಲಿ ರಸ್ತೆ ಕಾರ್ಮಿಕರು ಎಂಬ ಒಂದು ವಿಭಾಗ ಕರ್ನಾಟಕ ಲೋಕೋಪಯೋಗಿ ಇಲಾಖೆಯಲ್ಲಿತ್ತು) ಹೋಗುತ್ತಿದ್ದರು. ಆದುದರಿಂದ ಅವರನ್ನು ಮಾರ್ಗ ಚೆನ್ನಪ್ಪ ಗೌಡರೆಂದೂ ಅವರಿರುವ ಮನೆಯನ್ನು ಮಾರ್ಗ ಎಂದೂ ಕರೆಯುತ್ತಿದ್ದರು. ಈ ಮಾರ್ಗದಿಂದ ಹಿಂಭಾಗದಲ್ಲಿ ತೋಡಿನ ಬದಿಯಲ್ಲಿ ಹಿಂದೆ ಹಿರಿಯರಾದ ಕರಿಯಪ್ಪ ಗೌಡರು ವಾಸ ಮಾಡುತ್ತಿದ್ದ ಸ್ಥಳವನ್ನು ಮೂಲೆ (130) ಎಂದು ಕರೆಯುತ್ತಾರೆ. ಈ ಸ್ಥವು ಒಂದು ಮೂಲೆಯಲ್ಲಿದ್ದುದರಿಂದ ಈ ಹೆಸರು ಬಂದಿರಬೇಕು. ಇದು ಒಂದು ತರವಾಡು ಸ್ಥಳ ಸೂಚಕವೂ ಆಗಿದೆ. ಈ ತರವಾಡಿಗೆ ಸೇರಿದವರು ವಾಸಿಸುವ ಬೇರೆ ಒಂದೆರಡು ಸ್ಥಳಗಳಿಗೂ ಮೂಲೆ ಮನೆ ಎಂದೇ ಕರೆೆಯುತ್ತಾರೆ. ನಮ್ಮ ದೇಲಂಪಾಡಿ ಹಯರ್ ಸೆಕೆಂಡರಿ ಶಾಲೆಯ ಮುಖ್ಯೋಪಾಧ್ಯಾಯರಾಗಿರುವ ಶ್ರೀ ರಾಮಣ್ಣ ಮಾಸ್ತರರು ಇದೇ ಕುಟುಂಬಕ್ಕೆ ಸೇರುವ ಕಾರಣ ಅವರ ಮನೆಯನ್ನೂ ಮೂಲೆಮನೆ ಎಂದು ಕರೆಯುತ್ತಾರೆ. ಈ ಮೂಲೆಯಿಂದ ಸ್ವಲ್ಪ ಪೂರ್ವಕ್ಕೆ ಬಂದು ನಂತರ ಉತ್ತರದ ಕಡೆಗೆ ಮುಂದುವರಿಯುವಾಗ ಸಿಗುವ ಸ್ಥಳ ಕುಡುತ್ತಡ್ಕ (131). ತುಳುವಿನಲ್ಲಿ ಕುಡು ಎಂದರೆ ಹುರುಳಿ. ಹುರುಳಿ ಕೃಷಿ ಮಾಡುತ್ತಿದ್ದ ಅಡ್ಕ ಎಂಬರ್ಥದಲ್ಲಿ ಕುಡುತ್ತಡ್ಕ ಎಂಬ ಹೆಸರು ಬಂತು. ಇಲ್ಲಿಂದ ರಸ್ತೆಗೆ ಬಂದು ಶಾಲೆಗೆ ಸೇರಿದ ಜವುಕ್ಕು ಕಾಡಿನ ಮೂಲಕ ಮೇಲಕ್ಕೆ ಹೋದಾಗ ನಮಗೆ ದೇಲಂಪಾಡಿ ಶಾಲೆ ಸಿಗುತ್ತದೆ. ಇದನ್ನೇ ದೇಲಂಪಾಡಿ (132) ಕೇಂದ್ರಸ್ಥಾನವೆಂದು ಗುರುತಿಸಬಹುದು. ದೇಲಪುದಗಳೆಂದು ತುಳುವಿನಲ್ಲಿ ಕರೆಯುತ್ತಿದ್ದ ಒಂದು ಜಾತಿಯ ಸಣ್ಣ ಪಾರಿವಾಳಗಳು ಹೇರಳವಾಗಿದ್ದ ಸ್ಥಳ ಎಂಬರ್ಥದಲ್ಲಿ ಇದು ದೇಲಂಪಾಡಿಯಾಯಿತು. 1921ರಲ್ಲಿ ಸ್ಥಾಪಿಸಲ್ಪಟ್ಟು ನಂತರ ವಿವಿಧ ಹಂತಗಳಲ್ಲಿ ಮೇಲ್ದರ್ಜೆಗೇರಿಸಲ್ಪಟ್ಟ ದೇಲಂಪಾಡಿ ಉನ್ನತ ಪ್ರೌಢ ಶಾಲೆ ಇಲ್ಲಿದೆ. ಇಲ್ಲಿ ಈಗ ಪೂರ್ವ ಪ್ರಾಥಮಿಕದಿಂದ ಪದವಿಪೂರ್ವದವರೆಗಿನ ಶಿಕ್ಷಣ ಲಭಿಸುತ್ತಿದೆ. ಶಾಲೆಯನ್ನು ಬಿಟ್ಟು ಮುಂದುವರಿಯುವಾಗ ನಮಗೆ ದೇಲಂಪಾಡಿ  ಸಿಗುತ್ತದೆ. ಮುಂದಕ್ಕೆ ಸಿಗುವುದೇ ಪ್ರಧಾನವಾದ ದೇಲಂಪಾಡಿ ಪೇಟೆ!! ಅಂದರೆ ಹತ್ತು ಹದಿನೈದು ಅಂಗಡಿಗಳೂ ಒಂದೆರಡು ಹೊಟೇಲುಗಳೂ ಇರುವ ನಮ್ಮ ದೇಲಂಪಾಡಿ ಪೇಟೆ. ಇಲ್ಲಿಯೇ ದೇಲಂಪಾಡಿ ಪಳ್ಳಿ ಮತ್ತು ನಾನು ಮೊದಲು ಹೇಳಿದ ಚರ್ಚ್ ಇದೆ. ಪಳ್ಳಿಯಿಂದ ಸ್ವಲ್ಪ ಮುಂದಕ್ಕೆ ಹೋಗುವಾಗ ಎಡಭಾಗಕ್ಕೆ ಸಾಗುವ ಮಣ್ಣಿನ ರಸ್ತೆಯಲ್ಲಿ ಸ್ವಲ್ಪ ಹೋದರೆ ನಮಗೆ ದೇಲಂಪಾಡಿ ಪಡ್ಪು (133) ಎಂಬ ಸಣ್ಣ ಸ್ಥಳ ಸಿಗುತ್ತದೆ. ಇದು ನಾವೆಲ್ಲಾ ಸಣ್ಣವರಾಗಿದ್ದಾಗ ಆಟವಾಡುತ್ತಿದ್ದ ಪ್ರದೇಶ. ಅಲ್ಲೇ ಮುಂದಕ್ಕೆ ತೋಡಿನ ನೀರು ಮೇಲಿನಿಂದ ಬಿದ್ದು ಉಂಟಾದ ಗುರುಂಪು (134) ಎಂಬ ಸ್ಥಳವೂ ಇದೆ. ಇಲ್ಲಿ ನಾವು ಸಣ್ಣವರಾಗಿದ್ದಾಗ ತರಕಾರಿ ಕೃಷಿಗಾಗಿ ಚೊಟ್ಟೆಯ ಮೂಲಕ ಹಿರಿಯರು ನೀರು ಸೇದುವಾಗ ಅವರಿಗೆ ಸಹಾಯಮಾಡುತ್ತಿದ್ದೆವು. ಇಲ್ಲೇ ಪಕ್ಕದಲ್ಲಿರುವ ನಾರಾಯಣ ಡರ ಮನೆಯನ್ನು ಗುರುಂಪು ಮನೆ ಎಂದೇ ಕರೆಯುತ್ತಿದ್ದರು. ಇಷ್ಟೆಲ್ಲಾ ಹೇಳಿದ ನಾನು ನನ್ನ ಮನೆಯ ಬಗ್ಗೆ ಹೇಳಲೇ ಇಲ್ಲವಲ್ಲ!! ಹೌದು ಈ ಗುರುಂಪಿನಿಂದ ಪುನಃ ಮೇಲೆ ಬಂದು ದೇಲಂಪಾಡಿಯ ಕಡೆಗಾಗಿ ಸ್ವಲ್ಪ ಸಾಗಿದರೆ ಅಲ್ಲೇ ಇರುವುದು ನನ್ನ ಮನೆ.... ನನ್ನ ಪ್ರಕೃತಿ ರಮಣೀಯವಾದ ದೇಲಂಪಾಡಿಗೊಮ್ಮೆ ಬನ್ನಿ.... ಪಂಜಿಕಲ್ಲಿನಿಂದ ಪ್ರಾರಂಭಿಸಿ ನಾನೀಗ ಹೇಳಿರುವ ಎಲ್ಲಾ ಪ್ರದೇಶಗಳ ಮೂಲಕ ಹಾದು ಕೊನೆಗೆ ನನ್ನ ಮನೆಗ ಬಂದು ಚಾ, ಕಾಫಿ ಕುಡಿದು, ಊಟ ಮಾಡಿ ಹೋಗಬಹುದು.... ನನ್ನೂರಿಗೆ ನಿಮಗೆ ಪ್ರೀತಿಯ ಸ್ವಾಗತ.

39 comments:

  1. ಅದ್ಭುತ ....
    ಉತ್ತಮ ವಿವರಗಳು,ಸ್ಥಳನಾಮಗಳು ಅಭಿವ್ಯಕ್ತಗೊಂಡ ಸರಳ- ಅದ್ಭುತ ಶೈಲಿಯ ಇತಿಹಾಸ ಅನಾವರಣ ಬರವಣಿಗೆ����

    ReplyDelete
  2. ಚಂದ್ರಿಕಾ28 April 2020 at 22:25

    ಊರೊಳಗಿನ ನಿಮ್ಮ ಊರಿಗೆ ನಮ್ಮನ್ನು ಕರೆದೊಯ್ಯುವಾಗ ಹಾಕಿದ ಮುನ್ನುಡಿ ತುಂಬ ಚೆನ್ನಾಗಿದೆ.130 ಸ್ಥಳ ಪುರಾಣಗಳ ಸಂಕ್ಷಿಪ್ತ ಪರಿಚಯವಾಯಿತು.

    ReplyDelete
  3. ಅದ್ಭುತವಾದ ವಿವರಣೆ. ಕಣ್ಮುಂದೆ ಎಲ್ಲ ಹಾದು ಹೋದ ಹಾಗೆ ಅನಿಸಿತು.

    ReplyDelete
  4. ಚೆನ್ನಾಗಿದೆ. ಉಪಯುಕ್ತ ಬರಹ ಸರ್

    ReplyDelete
  5. ಅದ್ಭುತವಾಗಿದೆ. ಈ ಪ್ರದೇಶಗಳ ಮೂಲಕ ಹಾದು ಹೋದ ಹಾಗಿನ ಅನುಭವ. ಕಣ್ಮುಂದೆ ಕಂಡ ಹಾಗೆ

    ReplyDelete
  6. Wonderful description of rural areas ....good one sir...it will help us 2 read and increse knowledge...witing 4 ur nxt post☺

    ReplyDelete
  7. Delampady ya halavu oorina kurithu bahala sogasagi vivarisiddeeri. Nimma oorige omme baruva

    ReplyDelete
  8. ಸರ್ ಅತ್ಯುತ್ತಮ. ದೆಲಂಪಾಡಿಗೆ ಬಂದರೆ ಖಂಡಿತಾ ಮನೆಗೆ ಬರುವ

    ReplyDelete
  9. ಒಳ್ಳೆಯ ಶೀರ್ಷಿಕೆಯನ್ನು ಕೊಟ್ಟಿದ್ದೀರಿ.ನಿಮ್ಮ ಬರವಣಿಗೆಯು ಚೆನ್ನಾಗಿದೆ. ನಿಮ್ಮ ಪಯತ್ನಕ್ಕೆ ಅಭಿನಂಧನೆಗಳು ಸರ್.

    ReplyDelete
  10. So sweet explanation. It is a valuable resource book for the future generation.congratulations

    ReplyDelete
  11. ಅದ್ಬುತ ಮಾಹಿತಿ.. ಸರ್

    ReplyDelete
  12. Wow...much needed one. Literally got goosebump while reading this article. Hats off to your work. 😊

    ReplyDelete
  13. Nyc article sir. Thank you lot for spend the valuable time for our native. Super��������

    ReplyDelete
  14. What an immanuable explanation!..

    ReplyDelete
  15. Super sir,it's super story about our Delampady

    ReplyDelete
  16. ನನ್ನ ಮೆಚ್ಚಿನ ಶಿಕ್ಷಕರಾದ ಶ್ರೀ ನಾರಾಯಣ ಸರ್ ರವರ ಅದ್ಭುತ ಬರಣಿಗೆಗಳಲ್ಲಿ ಇದೂ ಒಂದು... ಓದಿದಾಗ ಬಲು ಖುಷಿಯಾಯಿತು..ಓದುತ್ತಿರುವಾಗಲೇ ಕಣ್ಮುಂದೆ ಊರಿನ ಚಿತ್ರಣಗಳು ಕಂಡಂತಾಗುತ್ತದೆ...

    ReplyDelete
  17. Ganesh kdagadi1 May 2020 at 00:48

    Nice explanation thank you for kind information about our delampdy

    ReplyDelete
  18. Akshatha valthaje1 May 2020 at 03:07

    Wonderful sir👌👌..Thank you for letting us know the names of our hometowns..even search on google will not find such a things..thank you for your patience for what you have written😊

    ReplyDelete
  19. 👍👌👌👌😘😘

    ReplyDelete
  20. Good Explation Sir..🙏👌👍👍

    ReplyDelete
    Replies
    1. Please read all posts and comment... Please note your name in comments....

      Delete
    2. Deviprasad delampady..

      Delete
  21. Nice explanation,tnku your kind information explanation about our anasina(munchi)kana..☺️

    ReplyDelete
  22. ಮಾನ್ಯ,ನಾರಾಯಣರವರೇ, ನಿಮ್ಮಈ ಕಾರ್ಯ ಸ್ಮರಣೀಯ ಹಾಗೂ ಸ್ತುತ್ಯರ್ಹ.ಸುಮಾರು ನನ್ನ ತಿಳುವಳಿಕೆಯಂತೆ 5 ತಲೆಮಾರಿನ ಇತಿಹಾಸ ಹೊಂದಿದ ಕೋಟಿಗದ್ದೆ ಎನ್ನುವ ಜಾಗೆಯನ್ನು ಈ ಲೇಖನದಲ್ಲಿ ಸೇರಿಸಬಹುದು.ಓಟೆಕಜೆಯ ದಕ್ಷಿಣಕ್ಕೆ ಹಾಗೂ ಅಮ್ಮಾಜಿಮೂಲೆಯ ಪಶ್ಚಿಮಕ್ಕೆ ಬನದಮೂಲೆಯ ತನಕ ವ್ಯಾಪಿಸಿದ ಈ ಜಾಗಕ್ಕೆ ಹಿಂದೆ ಕೋಟಿಕಂಡ ಎಂದು ತುಳು ಭಾಷೆಯಲ್ಲಿ ಕರೆಯುತಿದ್ದರು.ಗೌರಿ ತೋಡಿನ ಬಲ ದಂಡೆಯ ಮೂರು ಬೆಳೆ ಬೆಳೆಯುವ ಏಕೈಕ ಕೊಳಕೆ ಗದ್ದೆಗೆ ಹಿಂದೆ ಕೋಟಿಕಂಡ( ಕೊನೆಯ ಗದ್ದೆ ) ಎನ್ನುವ ಹೆಸರು ಇದ್ದಿರಬಹುದು.

    ReplyDelete
    Replies
    1. Update ಮಾಡಿರುತ್ತೇನೆ. ಯಾವುದೇ ಸ್ಥಳಗಳನ್ನು ಸೇರಿಸಲು ಅಥವಾ ಸ್ಥಳಗಳ ಕುರಿತಾದ ಕಿರು ಮಾಹಿತಿಗಳಲ್ಲಿ ಬದಲಾವಣೆಗಳಿದ್ದಲ್ಲಿ ದಯವಿಟ್ಟು ನನ್ನ ಗಮನಕ್ಕೆ ತನ್ನಿ. ನನ್ನ ಮೇಲ್ ಐ ಡಿ. delampadynarayan@gmail.com.
      Comments ನಲ್ಲಿ ದಯವಿಟ್ಟು ನಿಮ್ಮ ಹೆಸರು ಮತ್ತು ವಿವರ ಹಾಕಿ.
      Narayan Delampady

      Delete
  23. Krishna Thejaswi1 May 2020 at 06:31

    Nice one...collector's piece...👌👌

    ReplyDelete
  24. Nice sir👏👏👌👌🙏🙏

    ReplyDelete
  25. Very Good explananation sir....thanks for your effort..

    ReplyDelete
  26. ಗುರುಮೂರ್ತಿ ನಾಯ್ಕಾಪು1 May 2020 at 18:46

    ನಿಜಕ್ಕೂ ಅಭಿನಂದನಾರ್ಹ ಮತ್ತು ಮುಂದಿನ ಪೀಳಿಗೆಗೆ ಉಪಯುಕ್ತವಾದ ಕಾರ್ಯವಿದು. ಕೊರೋನ ಕಾಲವನ್ನು ಚೆನ್ನಾಗಿ ಬಳಸಿಕೊಂಡಿದ್ದೀರಿ.

    ReplyDelete
  27. ಅದ್ಭುತ ಸರ್.ತುಂಬಾ ಚೆನ್ನಾಗಿ ಬರೆದಿದ್ದೀರಿ. ಧನ್ಯವಾದಗಳು. ನಮ್ಮ ಊರು....

    ReplyDelete