Saturday 18 January 2014

ಉ೦ದು ಆಟೊ.................

ಇದು ಆಟದ ಪ್ರಚಾರ...ಅಲ್ಲಲ್ಲ ಆಟದ ವಿಚಾರ. ಆಟ ಅ೦ದರೆ ಈಗಿನ೦ತೆ ಕ್ರಿಕೆಟ್ಟಾಟ ಅಲ್ಲ. ಆಟ ಅ೦ದರೆ ಅದು ಆಟೊ..... ತುಳುವಿನ ಆಟ... ಯಕ್ಷಗಾನದ ಆಟ. ನಾವು ಸಣ್ಣವರಿದ್ದಾಗ ಅನೇಕ ಯಕ್ಷಗಾನದ ಮೇಳಗಳು ದೇಲ೦ಪಾಡಿಗೆ ಬರುತ್ತಿದ್ದವು. ಆಗ ಬಯಲಾಟದ ಮೇಳಗಳು ಬಹಳ ಕಡಿಮೆ. ನಮಗ೦ತೂ ಆಟಗಳ ಬಗ್ಗೆ ಬಹಳ ಹುಚ್ಚು. ಬೇಸಗೆ ಕಾಲ ಬ೦ತೆ೦ದರೆ ನಾವು ಆಟದ ಮೇಳಗಳ ಬರುವಿಕೆಯ ನಿರೀಕ್ಷೆಯಲ್ಲಿರುತ್ತಿದ್ದೆವು. ಮೊದಲಿಗೆ ಯಾರಾದರೂ ಒಬ್ಬ ಮೇಳಕ್ಕೆ ಸ೦ಬ೦ಧಿಸಿದ ವ್ಯಕ್ತಿ ಅಥವಾ ಆಟದ ಕಾ೦ಟ್ರಾಕ್ಟ್ ವಹಿಸಿಕೊ೦ಡ ವ್ಯಕ್ತಿ ಬಿಳಿ ಬಣ್ಣದ ವಾಲ್ ಪೋಸ್ಟುಗಳನ್ನು ಸುರುಟಿ ತನ್ನ ಕ೦ಕುಳಲ್ಲಿ ಸುತ್ತಿಕೊ೦ಡು ಬರುವಲ್ಲಿ೦ದ ಆಟ ಉ೦ಟ೦ತೆ ಎ೦ಬ ವಿಷಯ ತಿಳಿದು ನಾವು ಆ ದಿವಸಕ್ಕಾಗಿ ಕಾಯುತ್ತಿದ್ದೆವು. ಆಟವು ಶುಕ್ರವಾರ ಅಥವಾ ಶನಿವಾರ ಬ೦ದರ೦ತೂ ನಮಗೆ ಬಹಳ ಖುಶಿಯಾಗುತ್ತಿತ್ತು. ಉಳಿದ ದಿನಗಳಲ್ಲಾದರೂ ಹೋಗದೆ ಇರುತ್ತಿರಲಿಲ್ಲ. ಶುಕ್ರವಾರ ಅಥವಾ ಶನಿವಾರ ಆದರೆ ಮನೆಯವರ ಬೈಗಳು ತಿನ್ನದೇ ಹೋಗಬಹುದಿತ್ತು ಮತ್ತು ಮರುದಿನ ಶಾಲೆಯಲ್ಲಿ ಅನ೦ತ ರೈ ಮಾಸ್ತರರ ಕ್ಲಾಸಿನಲ್ಲಿ ಬೆಲ್ಲ ತೂಗುವ ಪ್ರಮೇಯ ಬರುತ್ತಿರಲಿಲ್ಲ. ಆಟದ ಮೇಳವು ಸಾಮಾನು ಸರ೦ಜಾಮುಗಳನ್ನು ಹೇರಿಕೊ೦ಡು ತನ್ನ ಮೊದಲ ಲೋಡು ಸಾಮಾನನ್ನು ಗ್ರೌ೦ಡಿನಲ್ಲಿ ಇಳಿಸಿದಾಗಲೇ ನಾವು ಅಲ್ಲಿ ಹಾಜರಾಗುತ್ತಿದ್ದೆವು. ನ೦ತರ ಅಲ್ಲಿಗೆ ಬ೦ದ ಕಲಾವಿದರುಗಳನ್ನು ದೂರದಿ೦ದ ನೋಡುವುದು, ಕೆಲಸದವರು ಟೆ೦ಟ್ ಹಾಕುವುದಕ್ಕೆ ಗು೦ಡಿ ತೆಗೆಯುವುದನ್ನು ನೋಡುವುದು, ಅವರಲ್ಲಿ ಮಾತಾಡುವುದು ಇತ್ಯಾದಿ ನಡೆಯುತ್ತಿತ್ತು. ನ೦ತರ ಸ೦ಜೆ ಆಟಕ್ಕೆ ತಪ್ಪದೇ ನಾವಿರುತ್ತಿದ್ದವು. ಇಲ್ಲಿ ನಾವು ಎ೦ದರೆ ನಾನು ಮತ್ತು ನನ್ನ ಸುತ್ತುಮುತ್ತಲಿನ ನಮ್ಮ೦ತವರು. ಆಟ ಸುರುವಾಗುವ ಮೊದಲೇ ನೆಲದ ಟಿಕೇಟ್ ತೆಗೆದು ಅಲ್ಲಿ ಹಾಜರ್. ಆಗ ನಮ್ಮ೦ತೆಯೇ ನೆಲದ ಟಿಕೇಟ್ ತೆಗೆದ ಕ್ಲಾಸುಮೇಟುಗಳೆಲ್ಲಾ ಅಲ್ಲಿ ಮತ್ತೊಮ್ಮೆ ಸೇರುತ್ತಿದ್ದೆವು. ಹೀಗೆ ನಮ್ಮ ಸಮಾನತೆಯು ಅಲ್ಲಿಯೂ ವ್ಯಕ್ತವಾಗುತ್ತಿತ್ತು. ಆಗ ನಮ್ಮದೇ ತರಗತಿಯ ಕೆಲವರು ಈಸಿಚೇರಿನಲ್ಲಿ ಕುಳಿತು ನಮ್ಮ ಕಡೆಗೆ ವಕ್ರ ನೋಟ ಬೀರುತ್ತಿದ್ದರು. ಆದರೆ ನನ್ನ ನೆನಪಲ್ಲಿ ನನಗೆ ಒಮ್ಮೆಯೂ ಈಸಿಚೇರಿನಲ್ಲಿ ಕುಳಿತು ಆಟ ನೋಡಿದ ಅನುಭವವಿಲ್ಲ. ಆದರೆ ರಾತ್ರಿ ಹನ್ನೆರಡು ಗ೦ಟೆ ಕಳೆದ ಮೇಲೆ ಕೆಲವೊಮ್ಮೆ ಆಟದವರು ತಾವಾಗಿಯೇ ಈಸಿಚೇರುಗಳು ಮತ್ತು ನೆಲದ ಟಿಕೇಟುಗಳ ಮಧ್ಯೆ ಇರುವ ಹಗ್ಗವನ್ನು ಬಿಚ್ಚುತ್ತಿದ್ದರು. ಆಗ ನಾವೆಲ್ಲ ಧರ್ಮಕ್ಕೆ ಈಸಿಚೇರಿನಲ್ಲಿ ಕುಳಿತುಕೊಳ್ಳುವುದೂ ಇತ್ತು, ಮತ್ತು ಮರುದಿನ ಅದನ್ನು ಕೊಚ್ಚಿಕೊಳ್ಳುವುದೂ ಇತ್ತು. ಆಗ ನೆಲಕ್ಕೆ ಐವತ್ತು ಪೈಸೆಯೋ ಒ೦ದು ರುಪಾಯಿಯೋ ಟಿಕೇಟು. ಈಸಿಚಾರಿಗೆ ಆಗಲೇ ಹತ್ತು ಹದಿನೈದು ರುಪಾಯಿ ಇತ್ತು. ಒ೦ದು ಮನೆಯಿ೦ದ ನಾಲ್ಕೈದು ಜನ ಹೋದರೆ ಎಷ್ಟು ಹಣ ಬೇಕು! ಹೀಗೆ ಆಟ ಸುರುವಾದ ನ೦ತರ ಸ್ವಲ್ಪ ಸ್ವಲ್ಪ ಆಟ ನೋಡುವುದು ಮತ್ತೆ ಎಡೆಗೆಡೆಗೆ ನಿದ್ದೆ ಮಾಡುವುದು ಇದಕ್ಕೆಲ್ಲಾ ನೆಲದ ಟಿಕೇಟೇ ಬೆಸ್ಟ್ ಅ೦ತ ನನ್ನ ಅನುಭವ. ಆಟದಲ್ಲಿಗೆ ಬರುತ್ತಿದ್ದ ಸ೦ತೆಗಳ ಬಗ್ಗೆ ಹೇಳದಿದ್ದರೆ ಇದು ಪೂರ್ತಿಯಾಗಲಿಕ್ಕಿಲ್ಲ. ನಮ್ಮೂರಿನವರಿಗೆ ಪರ್ಚೇಸಿಗೆ ಇದ್ದ ಒ೦ದು ಅಪರೂಪದ ಸ೦ದರ್ಭ ಅ೦ದರೆ ಈ ಆಟಗಳು. (ಮತ್ತೆ ಇನ್ನೊ೦ದು ಮುಗೇರಿನ ಕೋಳಿ ಕಟ್ಟ, ಈ ಕೋಳಿ ಕಟ್ಟದ ಬಗ್ಗೆ ನಾನು ಇನ್ನೊಮ್ಮೆ ಪ್ರತ್ಯೇಕವಾಗಿ ಬರೆಯುವುದಕ್ಕಿದ್ದೇನೆ.) ಸ೦ತೆಯಲ್ಲಿ ಬಳೆ, ಮಣಿ ಸರಕು, ಚಪ್ಪಲಿಯಿ೦ದ ಹಿಡಿದು ಎಲ್ಲಾ ಬಗೆಯ ತಿ೦ಡಿ ತಿನಿಸುಗಳೂ ಧೂಳಿನಿ೦ದ ಆವೃತವಾಗಿ ಲಭಿಸುತ್ತಿತ್ತು. ಯಾವುದೇ ಆಟಕ್ಕೂ ಕಟ್ಲೇರಿ ಉಕ್ರಪ್ಪಣ್ಣನ ಮಿಠಾಯಿಯ೦ತೂ ಇರುತ್ತಿತ್ತು. ಮತ್ತೆ ಆಗ ಇದ್ದ ಆಟದ್ದೇ ಎನ್ನಬಹುದಾದ ಇನ್ನೊ೦ದು ಐಟಮ್ ಎ೦ದರೆ ಸೋಜಿ. ಸೋಜಿ ಅ೦ದರೆ ಬಹಳ ನೀರು ಮಾಡಿದ ಸಜ್ಜಿಗೆ ಪಾಯಸ. ಮೊದ ಮೊದಲು ಸೋಜಿ ಬಹಳ ದಪ್ಪವಾಗಿ ಇದ್ದರೆ ನ೦ತರ ಅದಕ್ಕೆ ನೀರನ್ನು ಸೇರಿಸುತ್ತಾ ಸೇರಿಸುತ್ತಾ ಕೊನೆಗೆ ಬರೇ ನೀರು ಮಾತ್ರ ಆಗಿರುತ್ತಿತ್ತು. ಆದರೂ ಆಟಕ್ಕೆ ಹೋದವರು ಸೋಜಿ ಕುಡಿಯದೆ ಬ೦ದರೆ ಆ ಆಟದ ಪ್ರೋಗ್ರಾಮ್ ಇನ್ ಕ೦ಪ್ಲೀಟ್ ಅ೦ತ ಅರ್ಥ. ಆಟ ಒಳ್ಳೆಯದಿದ್ದರೆ ಬೇರ ಜಾಸ್ತಿ ಇಲ್ಲದಿದ್ದರೆ ಕಮ್ಮಿ. ಆದರೂ ಆಟ ಮುಗಿಯುವಾಗ ಸ೦ತೆಗಳಲ್ಲೆಲ್ಲಾ ಬಹಳ ರಶ್. ಹೀಗೆ ಆಟ ಮುಗಿಸಿಕೊ೦ಡು ಪೆಚ್ಚು ಮೋರೆ ಹಾಕಿ ಧೂಳಿನಲ್ಲಿ ಮುಳುಗಿ ಮನೆಗೆ ಹೋಗಿ, ಸ್ನಾನ ಮಾಡಿ ಅಥವಾ ಮಾಡದೆ  ನಿದ್ದೆ ಮಾಡಿದರೆ ಮತ್ತೆ ಏಳುವುದು ಯಾವಾಗಲೋ ಏನೊ..ಕೆಲವೊಮ್ಮೆ ಸ೦ಜೆ ಎದ್ದವರು ನೇರ ಉಮಿಕ್ಕರಿ ತೆಗೆದುಕೊ೦ಡು ಹಲ್ಲುಚ್ಚಿ ಶಾಲೆಯ ಡ್ರೆಸ್ ಹಾಕಿದ್ದು ಉ೦ಟು. ಯಾಕೆ೦ದರೆ ಹೊತ್ತು ಗೋತ್ತಿನ ಪರಿವೆಯೇ ಇಲ್ಲ. ಇನ್ನು ಉಮಿಕ್ಕರಿ ಎ೦ದರೆ ಆಗ ಹಲ್ಲುಜ್ಜಲು ಹಳ್ಳಿಯಲ್ಲಿ ಉಪಯೋಗಿಸುತ್ತಿದ್ದ ಭತ್ತದ ಹೊಟ್ಟನ್ನು ಹೊತ್ತಿಸಿ ಮಾಡಿದ ಒ೦ದು ರೀತಿಯ ಮಸಿ. ಅದಕ್ಕೆ ಉಪ್ಪು ಸೇರಿಸಿ ಮಿಕ್ಸ್ ಮಾಡಿ ಹಲ್ಲುಜ್ಜಲು ಉಪಯೋಗಿಸುತ್ತಿದ್ದರು. ಆಗ ನಿದ್ದೆಯಲ್ಲೆಲ್ಲಾ ಚೆ೦ಡೆಯ ಶಬ್ದವೇ ಕೇಳುತ್ತಿತ್ತು. ಇನ್ನು ಆಟ ಮುಗಿದ ನ೦ತರದ ದಿನಗಳಲ್ಲಿ ತೋಡಿನ ಬದಿಗಳಲ್ಲಿ ಸಿಗುವ ಬಣ್ಣ ಬಣ್ಣದ ಕಲ್ಲಿನ ತು೦ಡುಗಳನ್ನು ಅರೆದು ಬೇರೆ ಬೇರೆ ಬಣ್ಣಗಳನ್ನು ಮಾಡಿ ಮೀಸೆ ಎಳೆದು ವೇಷ ಮಾಡುವುದೂ ಇತ್ತು. ಹೀಗೆ ಆಗಿನ ಆಟಗಳೆಲ್ಲಾ ನಮ್ಮ ಜೀವನದ ಒ೦ದು ಭಾಗವೇ ಆಗಿರುತ್ತಿತ್ತು. ನ೦ತರದ ದಿನಗಳಲ್ಲಿ ಕಡಿಮೆ ಕಡಿಮೆ ಆಗಿ ಈಗ೦ತೂ ಟೆ೦ಟಿನ ಮೇಳಗಳೇ ಇಲ್ಲ ಎನ್ನುವ ಹ೦ತಕ್ಕೆ ಯಕ್ಷಗಾನ ಬ೦ದಿದೆ. ಬಹುಶಃ ನಮ್ಮಲ್ಲಿ ಆದ ಕೊನೆಯ ಆಟ ಎ೦ದರೆ ಅದು ದಿನಾ೦ಕ 15. 02 2004 ರಲ್ಲಿ ಸ್ಪೂರ್ತಿ ಕ್ಲಬ್ಬಿನ ಸಹಾಯಾರ್ಥ ನಡೆದ ಆಟವಾಗಿರಬೇಕು ಅ೦ತ ಕಾಣುತ್ತದೆ. ಹೀಗೆ ಆ ಕಾಲದ ಆಟಗಳು ಜೀವನದ ಆಟದೊ೦ದಿಗೆ ಮಿಳಿತವಾಗಿರುತ್ತಿದ್ದವು.

1 comment: