Wednesday 12 February 2014

ಕೆಡ್ಡಸ
ಈವತ್ತು ಸುಮ್ಮನೆ ಮನೆಯಲ್ಲಿಯೇ ಕುಳಿತಿದ್ದೆ. ಆಗ ನೆನಪಾಯ್ತು, ಇಂದು ನಡು ಕೆಡ್ಡಸ. ಅಂದರೆ ಪೊನ್ನಿ ಮಾಸ ದಿನ 29. ಮನಸು ಬಾಲ್ಯ ಕಾಲದತ್ತ ಹೊರಳುತ್ತಿದೆ. ಹೌದು, ತುಳು ತಿಂಗಳು ಪೊನ್ನಿಯ 28 ರಿಂದ 30 ರವರೆಗೆ ನಮ್ಮೂರಿನಲ್ಲಿ ಕೆಡ್ಡಸದ ದಿವಸಗಳು. ಅಂದರೆ ಭೂಮಿ ತಾಯಿಯನ್ನು ಆರಾಧಿಸುವ ದಿನಗಳು. ಭೂಮಿಯು ಸಕಲ ಫಲಭರಿತಳಾಗಿ ಇರುವ ಈ ಸಮಯ ಹಳ್ಳಿಯ ಜನರಿಗೆಲ್ಲಾ ಸಂತೊಷದ ದಿವಸ. ಅವರು ತಮಗೆ ಕೃಷಿಯ ಮೂಲಕ ಸಕಲವನ್ನೂ ದಯಪಾಲಿಸಿದ ಭೂದೇವಿಯನ್ನು ಕೃತಜ್ಞತಾಭಾವದಿಂದ ಸ್ಮರಿಸುತ್ತಾರೆ. ಇದು ನಮ್ಮೂರಿನ ಜನರ ಪ್ರಕೃತಿ ಆರಾಧನೆಯ ಒಂದು ರೂಪವೆಂದರೂ ತಪ್ಪಾಗಲಾರದು. ಭೂಮಿಯನ್ನು ಸ್ತ್ರೀಯಾಗಿ ಸಂಕಲ್ಪಿಸಿ ಮಾನುಷಿಕ ರೂಪದಲ್ಲಿ ಸ್ರೀಯರಲ್ಲಾಗುವ ಸಕಲ ಬದಲಾವಣೆಗಳನ್ನೂ ಭೂಮಿಯಲ್ಲಿಯೂ ಸಂಕಲ್ಪಿಸಿ ಅವಳನ್ನು ಆರಾಧಿಸುತ್ತಾರೆ.

ಈ ದಿನ ಹಳ್ಳಿಯಲ್ಲಿ ಯಾರೂ ಕೆಲಸಕ್ಕೆ ಹೋಗುವುದಿಲ್ಲ. ಮಾತ್ರವಲ್ಲದೆ ಯಾವುದೇ ಹತ್ಯಾರುಗಳಿಂದ ಭೂಮಿಗೆ ಗಾಯಮಾಡುತ್ತಿರಲಿಲ್ಲ. ಅಂದರೆ ಈ ದಿವಸಗಳಲ್ಲಿ ಭೂಮಿಗೆ ಸಂಪೂರ್ಣ ವಿಶ್ರಾಂತಿ ಬೇಕೆಂದು ನಮ್ಮೂರಿನ ಜನರು ಹೇಳುತ್ತಿದ್ದರು. ನಡು ಕೆಡ್ಡಸದ ದಿನ ಬೆಳಿಗ್ಗೆ ಅಂಗಳದಲ್ಲಿ ಸೆಗಣಿ ಸಾರಿಸಿ ಅಲ್ಲಿ ಬಾಳೆ ಎಲೆ ಹಾಕಿ ನನ್ನರಿ ಎ೦ಬ ವಿಶೇಷವಾಗಿ ತಯಾರಿಸಿದ ಭಕ್ಷ್ಯವನ್ನು ಮತ್ತು ತೆಂಗಿನ ಕಾಯಿಯ ಹೋಳುಗಳನ್ನು ಬಾಳೆ ಎಲೆಯಲ್ಲಿ ಬಡಿಸುತ್ತಿದ್ದರು. ಮಾತ್ರವಲ್ಲದೆ ಅಲ್ಲಿ ಸಣ್ಣ ಒಂದು ಹಿಡಿಸೂಡಿ ಮತ್ತು ಸಣ್ಣ ಕತ್ತಿಯನ್ನೂ ಇರಿಸುತ್ತಿದ್ದರು. ಇನ್ನು ಈ ನನ್ನರಿ ಎ೦ದರೆ ಹುರಿದ ಕುಚ್ಚಲಕ್ಕಿ ಮತ್ತು ವಿವಿಧ ಬೇಳೆ ಕಾಳುಗಳ ಮಿಶ್ರಣ. ಇಲ್ಲಿ ವಿಶೇಷ ಏನು ಅಂದರೆ ಊರಿನಲ್ಲಿ ಹಲವಾರು ಆಚರಣೆಗಳು, ಹಬ್ಬಗಳು ಇದ್ದರೂ ಇದನ್ನು ಕೇವಲ ಕೆಡ್ಡಸಕ್ಕ ಮಾತ್ರ ಮಾಡುತ್ತಾರೆ ಹೊರತು ತನ್ನ ದಿನ ನಿತ್ಯದ ಅಗತ್ಯಕ್ಕಾಗಿಯೊ, ಇತರ ಹಬ್ಬಗಳಿಗೋ ನಮ್ಮೂರಿನಲ್ಲಿ ಉಪಯೋಗಿಸುವುದಿಲ್ಲ ಎ೦ಬುದು.
ಹೀಗೆ ಬೆಳಿಗ್ಗೆ ಇಟ್ಟ ನನ್ನರಿಯನ್ನು ಯಾವುದಾದರೂ ಬಹಳ ಸಣ್ಣ ಮಕ್ಕಳು ಉರ್ಬುಳಿಯಾಗಿ (ನಗ್ನರಾಗಿ) ತಿನ್ನಬೇಕಾಗಿತ್ತು. ಈದಿನ ನಮ್ಮೂರಿನಲ್ಲಿ ಪ್ರತಿ ಮನೆಯಲ್ಲಿಯೂ ಹುಡಿ ಮಾಡಿದ ನನ್ನರಿ, ಅವಲಕ್ಕಿ, ಹುರಿಯಕ್ಕಿ ಮಿಶ್ರಣ ಬೆಲ್ಲ ಸಹಿತವಾಗಿ ಇರುತ್ತಿತ್ತು. ಬೆಳಗ್ಗಿನ ಉಪಹಾರ ಇದುವೇ! ಮತ್ತೆ ಆಗ ಶಾಲೆಗೆ ಹೆಚ್ಚಿನ ಮಕ್ಕಳು ಇದನ್ನು ತರುತ್ತಿದ್ದರು, ಎಲ್ಲಿಯವರೆಗೆಂದರೆ ಆಗ ಈ ನನ್ನರಿಯನ್ನು ತಂದ ನನ್ನ ಒಬ್ಬ ಮಿತ್ರನಿಗೆ ಆಗ ಇಟ್ಟ ಅಡ್ಡಹೆಸರು ನನ್ನರಿ ಎ೦ಬುದು ಇಂದಿಗೂ ಉಳಿದುಕೊಂಡಿದೆ. ಇನ್ನು ಮಧ್ಯಾಹ್ನಕ್ಕೆ ಬದನೆ ಮತ್ತು ನುಗ್ಗೆಯ ಸಾಂಬಾರು ಕಡ್ಡಾಯ. ಇದನ್ನು ಪುನಃ ಅಂಗಳದಲ್ಲಿ ಬಡಿಸುವುದಕ್ಕುಂಟು. ಇದು ನಮ್ಮೂರಿನಲ್ಲಿ ಬದನೆಗೆ ಮತ್ತು ನುಗ್ಗೆಗೆ ಅತಿ ಹೆಚ್ಚು ಮಾರುಕಟ್ಟೆ ದರ ಬರುವ ಸಮಯ. ಮಧ್ಯಾಹ್ನದ ನಂತರ ಬಹಳ ಹಿಂದಿನ ಕಾಲದಲ್ಲಿ ಬೇಟೆಗೆ ಹೋಗುವ ಸಂಪ್ರದಾಯವೂ ಇತ್ತಂತೆ. ಅದೇ ಕಡ್ಡಸದ ಬೋಂಟೆ. ಅದೇ ರೀತಿ ಈಗ ಬೊಂಟೆ ಇಲ್ಲದಿದ್ದರೂ ಕೆಡ್ಡಸದ ಕಟ್ಟ (ಕೋಳಿ ಕಟ್ಟ), ಕೆಡ್ಡಸದ ನೇಮ ಇತ್ಯಾದಿಗಳು ಅಲ್ಲಲ್ಲಿ ಈಗಲೂ ನಡೆಯುತ್ತದೆ. ಅಂತೂ ಇಂತು ಈಗಲೂ ಕೆಡ್ಡಸದ ರಾತ್ರಿಯ ಊಟಕ್ಕೆ ಮಾಂಸದೂಟವಂತೂ ಕಡ್ಡಾಯ. ಬೋಂಟೆ ಅಥವಾ ಕಟ್ಟದಲ್ಲಿ ಏನೂ ಸಿಗದಿದ್ದರೆ ಸಾದಾ ಕೋಳಿ ಅಥವಾ ಊರ ಹಂದಿ. ಅಲ್ಲಿಗೆ ನಮ್ಮೂರಿನವರ ಕೆಡ್ಡಸ ಮುಕ್ತಾಯ.

 

4 comments:

  1. ಕೆಡ್ಡಸದ ಹಿನ್ನೆಲೆ ತಿಳಿಯಲು ಸಾಧ್ಯವಾಯಿತು........ಸಾವಿರ ನಮನಗಳು ಸಾರ್......

    ReplyDelete
  2. ಕೆಡ್ಡಸದ ಹಿನ್ನೆಲೆ ತಿಳಿಯಲು ಸಾಧ್ಯವಾಯಿತು........ಸಾವಿರ ನಮನಗಳು ಸಾರ್......

    ReplyDelete
  3. ಒಳ್ಳೆಯ ಲೇಖನ ಸರ್..

    ReplyDelete