Thursday 27 February 2014


ಶಿವರಾತ್ರಿಯ ಆ ರಾತ್ರಿಗಳು..........

ನಮಗೆಲ್ಲಾ ಶಿವರಾತ್ರಿ ಎ೦ದರೆ ಒಂದು ಹಬ್ಬವೆಂದೂ ಆಚರಣೆಯೆಂದೂ ಗೊತ್ತಾದುದು ತೀರ ಇತ್ತೀಚೆಗೆ. ಯಾಕೆಂದರೆ ನಾವು ಸಣ್ಣದಿರುವಾಗಲೇ ಶಿವರಾತ್ರಿ ಇದ್ದರೂ ಆಗ ನಮ್ಮೂರಿನಲ್ಲಿದ್ದ ಶಿವಕ್ಷೇತ್ರದಲ್ಲಾಗಲೀ ಇತರ ದೇವಸ್ಥಾನಗಳಲ್ಲಾಗಲೀ ಹೇಳಿಕೊಳ್ಳುವಂತಹ ಆಚರಣೆಗಳೇನೂ ಇರಲಿಲ್ಲ. ಮನೆಗಳಲ್ಲಂತೂ ಇರಲೇ ಇಲ್ಲ. ಆದರೆ ಯಾವಾಗ ಶಿವರಾತ್ರಿ ಬರುತ್ತದೆಂದು ಕೆಲವು ದಿವಸಗಳ ಮೊದಲೇ ನಮಗೆ ತಿಳಿಯುತ್ತಿತ್ತು ಮತ್ತು ಜನರು ಅದಕ್ಕೆ ತಯಾರಾಗುತ್ತಿದ್ದರು!!
ಮೊದಲಿಗೆ ಸ್ವಲ್ಪ ಒಳ್ಳೆಯ ವಿಚಾರಗಳನ್ನು ಹೇಳುವುದಾದರೆ ಶಿವರಾತ್ರಿ ಪ್ರಾರಂಭವಾಗುವುದಕ್ಕಿಂತ ತಿಂಗಳುಗಳ ಮೊದಲೇ ನಮ್ಮ ಅಜ್ಜಿ (ಪಾಟಿ ಎ೦ದು ಅವರ ಹೆಸರು) ಸಮೀಪದ ಗದ್ದೆ, ಗುಡ್ಡಗಳಲ್ಲೆಲ್ಲಾ ಅಲೆದಾಡಿ ಸೆಗಣಿ ಸಂಗ್ರಹಿಸುತ್ತಿದ್ದರು. ಮೊದಲೆಲ್ಲಾ ಇದು ಯಾಕೆಂದು ನಮಗೆ ಗೊತ್ತಿರಲಿಲ್ಲ. ನಂತರ ಶಿವರಾತ್ರಿಯ ಪುಣ್ಯದಿನದಂದು ಸಂಜೆ ಸಂಗ್ರಹಿಸಿ ಒಣಗಿಸಿಟ್ಟಿದ್ದ ಆ ಎಲ್ಲಾ ಸೆಗಣಿಯನ್ನು ಗುಡ್ಡೆಹಾಕಿ ಅದಕ್ಕೆ ಬೆಂಕಿ ಕೊಡುತ್ತಿದ್ದರು. ಅದು ಮೆಲ್ಲ ಮೆಲ್ಲಗೆ ಉರಿದು ಕೊನೆಗೆ ಮರುದಿವಸ ಬೆಳಗ್ಗಾಗುವಾಗ ಭಸ್ಮವಾಗುತ್ತಿತ್ತು. ನಂತರ ಅದನ್ನು ಕಲಸಿ ಬಟ್ಟೆಯಲ್ಲಿ ಸೋಸಿ ಉತ್ತಮವಾದ ಭಸ್ಮ ತಯಾರಿಸುತ್ತಿದ್ದರು. ಶಿವನು ಭಸ್ಮಪ್ರಿಯನಲ್ಲವೇ! ಹೀಗೆ ಶಿವರಾತ್ರಿಯಂದು ತಯಾರಿಸಿದ ಭಸ್ಮವನ್ನು ಮರದಿಂದ ಮಾಡಿದ ಒಂದು ಭಸ್ಮಪಾತ್ರೆಯಲ್ಲಿ ಹಾಕಿ ಇಟ್ಟರೆ ವರ್ಷಪೂರ್ತಿ ಅದನ್ನು ಉಪಯೋಗಿಸಲಾಗುತ್ತಿತ್ತು. ಈಗ ನಮ್ಮೂರಲ್ಲಿ ಈ ರೀತಿ ಭಸ್ಮ ತಯಾರಿಸುವವರೂ ಇಲ್ಲ, ಭಸ್ಮ ಹಾಕುವವರೂ ಇಲ್ಲ.
ಇನ್ನು ಕೇಳೋಣ ನಮ್ಮೂರಿನ ಶಿವರಾತ್ರಿಯ ಇತರ ಕಥೆಗಳನ್ನು..... ಇವುಗಳಲ್ಲಿ ಕೆಲವು ನಾನು ಕೇಳಿ ತಿಳಿದುಕೊಂಡದ್ದು ಮತ್ತು ಕೆಲವು ಸ್ವತಃ ಅನುಭವಿಸಿದ್ದು ಮತ್ತು ಕೆಲವು ಸ್ವತಃ ಮಾಡಿದ್ದು!
ಶಿವರಾತ್ರಿಯಂದು ಯಾರೂ ನಿದ್ದೆ ಮಾಡಬಾರದು, ರಾತ್ರಿ ಪೂರ್ತಿ ಜಾಗರಣೆಯಲ್ಲಿದ್ದು ಶಿವನಾಮಸ್ಮರಣೆ ಮಾಡಬೇಕಿತ್ತು. ಹೀಗೆ ಸುಮ್ಮನೆ ಜಾಗರಣೆ ಮಾಡುವುದು ಹೇಗೆ? ನಿದ್ದೆ ಬರುವುದಿಲ್ಲವೇ? ಇದಕ್ಕಾಗಿ ಕಂಡುಕೊಂಡ ಉಪಾಯ ಮಾತ್ರ ವಿಚಿತ್ರವಾದುದು. ಹೀಗೆ ಶಿವರಾತ್ರಿಯಂದು ನಮ್ಮಲ್ಲಿ ಜನರು ಕದಿಯುವುದು, ಕಲ್ಲು ಬಿಸಾಡುವುದು, ದಾರಿಗೆ ಕಲ್ಲು ಇಡುವುದು, ದಾರಿಯಲ್ಲಿ ಮಾಡಬಾರದ್ದನ್ನು ಮಾಡುವುದು..... ಇತ್ಯಾದಿ ಕೀಟಲೆಗಳನ್ನು ಮಾಡುತ್ತಿದ್ದರು. ಶಿವರಾತ್ರಿಯಂದು ಕಳ್ಳತನ ಮಾಡಿದರೆ ಯಾರೂ ಕೇಳಬಾರದು ಎ೦ಬ ಅಲಿಖಿತ ನಿಯಮವೇ ನಮ್ಮೂರಿನಲ್ಲಿ ಆ ಕಾಲದಲ್ಲಿತ್ತು.
ನಮ್ಮೂರಿನಲ್ಲಿ ನಾವೆಲ್ಲಾ ಚಾವಡಿ ಎ೦ದು ಕರೆಯುವ ಒಂದು ಮನೆಯಿತ್ತು. ಈಗಲೂ ಆ ಮನೆ ಇದ್ದರೂ ಅದು ಹೊಸ ಮನೆಯಾಗಿ ಮಾರ್ಪಾಡಾಗಿದೆ. ಆದರೆ ಹಿಂದೆ ಇದ್ದ ಆ ಚಾವಡಿ ಮನೆಗೆ ಎರಡು ಬಾಗಿಲು, ಪೂರ್ವದಲ್ಲಿ ಹೊದರೆ ನೇರ ಮನೆಯ ಜಗಲಿಗೆ ಉತ್ತರದಲ್ಲಿ ಹೊದರೆ ಸೀದಾ ಅಡುಗೆ ಮನೆಗೆ. ಊರಿನ ದಾರಿ ಉತ್ತರದ ಮೂಲಕ ಸಾಗುವುದರಿಂದ ಯಾರೂ ನೇರವಾಗಿ ಅಡುಗೆ ಮನೆಗೆ ಹೋಗಬಹುದಾಗಿತ್ತು. ಇದು ಆ ಕಾಲದ (ಸಾಮಾನ್ಯ 70-80ರ ದಶಕ) ನಮ್ಮೂರಿನ ಶಿವರಾತ್ರಿ ಕಳ್ಳರ ಟೀಮಿಗೆ ಚೆನ್ನಾಗಿ ಗೊತ್ತಿತ್ತು. ನಾನು ತಿಳಿದುಕೊಂಡಂತೆ ಆಗಿನ ಟೀಮು ಎ೦ದರೆ ಎಲ್ಲಾ ಊರಲ್ಲಿ ಆಗಲೂ ಈಗಲೂ ಇರುವಂತೆ ಬೆಳ್ಚಪ್ಪಾಡ್ …..ಣಣ್ಣ, …...ಣು ಗೌಡ್ರು, .....ಣ್ಣ, ಅರಿಯಡ್ಕ ಇ.....ಯ್ಚ, ಪಟ್ಟಾಜೆ....... ಮತ್ತೆ ಆನ.....ಣ್ಣ ಮತ್ತು ಇತರರು. ಶಿವರಾತ್ರಿಯ ದಿನ ತಮ್ಮ ಎ೦ದಿನ ಕಾಯಕಕ್ಕೆ ಹೊರಟ ಈ ಟೀಮಿಗೆ ಚಾವಡಿಯ ಅಡುಗೆ ಮನೆಯಿಂದ ಕೋಳಿ ಸಾರಿನ ಪರಿಮಳ ಬಂತಂತೆ. ಎರಡಾಗಿ ವಿಭಾಗವಾದ ತಂಡದಲ್ಲಿ ಒ೦ದು ವಿಭಾಗ ಮನೆಯ ಪೂರ್ವ ದ್ವಾರದಿಂದ ಮನೆಗೆ ಹೋಗಿ ಅಲ್ಲಿದ್ದ ಐತ್ತಪ್ಪ ಗೌಡ್ರಲ್ಲಿ, ಕಾವೇರಜ್ಜಿಯಲ್ಲಿ ಮತ್ತು ಮನೆಯವರಲ್ಲಿ ಪಂಚಾತಿಗೆ ಮಾಡುತ್ತಾ ಇತ್ತು, ಮತ್ತೊಂದು ತಂಡದವರು ಆಗಲೇ ಉತ್ತರದ್ವಾರದಿಂದ ನೇರ ಅಡುಗೆ ಮನೆಗೆ ಹೋಗಿ ಮಾಡಿಟ್ಟಿದ್ದ ರೊಟ್ಟಿಯನ್ನು ಮತ್ತು ಕೋಳಿ ಪದಾರ್ಥದ ಪಾತ್ರೆಯನ್ನು ಸೀದಾ ಎತ್ತಿಕೊಂಡು ಬಂದು ಹಿತ್ತಿಲಿನಲ್ಲಿ ತಂಡದ ಉಳಿದ ಸದಸ್ಯರಿಗಾಗಿ ಕಾಯುತ್ತಿದ್ದರು! ಅಡುಗೆ ಮಾಡಿ ತಿನ್ನಲು ಕಾಡುತ್ತಿದ್ದವರಿಗೆ ಶಿವನೇ ಗತಿ.
ಇನ್ನೊಮ್ಮೆ ಶಿವರಾತ್ರಿಯ ತಂಡವೊಂದು ತಮ್ಮ ತಂಡಕ್ಕೇಸೇರಿದ ಬಾಬಣ್ಣನ ಚೊಟ್ಟೆಯ ಕುತ್ತಿಯನ್ನು ಲಪಟಾಯಿಸಲು ತೀರ್ಮಾನಿಸಿತು. (ಚೊಟ್ಟೆ ಎ೦ದರೆ ಹಿಂದೆ ಹಳ್ಳಿಗಳಲ್ಲಿ ಕೆರೆ ತೊಡಿನಿಂದ ಕೃಷಿಗೆ ನೀರು ಸೇದಲು ಉಪಯೋಗಿಸುತ್ತಿದ್ದ ಏತ ನೀರಾವರಿ ವ್ಯವಸ್ಥೆ. ಕುತ್ತಿ ಎ೦ದರೆ ಇದರಲ್ಲಿ ನೀರು ತುಂಬಿಸಲು ಉಪಯೋಗಿಸುತ್ತಿದ್ದ ತಾಳೆಮರದ ಬೇರಿನಿಂದೊಡಗೂಡಿದ ಬುಡ. ಇದರ ಬೊಂಡಿನ ಭಾಗವನ್ನು ತೆಗೆದು ನೀರು ಸೇದಲು, ಉಪ್ಪು ಹಾಕಿಡಲು ಇತ್ಯಾದಿ ಕಾರ್ಯಗಳಿಗೆ ಉಪಯೋಗಿಸುತ್ತಿದ್ದರು. ಇದೇ ರೀತಿ ಕೆಲವೊಮ್ಮೆ ಬಲಿತ ತೆಂಗಿನ ಮತ್ತು ಈಂದ್ ಮರದ ಕುತ್ತಿಗಳನ್ನೂ ತಯಾರಿಸುತ್ತಿದ್ದರು.) ಹೀಗೆ ಒಂದು ಬಾವಿಯ ಕಟ್ಟೆಯಲ್ಲಿ ಕುಳಿತು ಇದರ ಪ್ಲಾನ್ ಮಾಡುವಾಗ ಈ ಬಾಬಣ್ಣನೇ ಬರಬೇಕೆ! ಸರಿ ಅವರನ್ನು ಬೊಂಡ ತೆಗೆಯಲು ಕಳಿಸಿ ಉಳಿದವರು ಬಾಬಣ್ಣನ ಚೊಟ್ಟೆಯ ಕುತ್ತಿಯನ್ನು ಎತ್ತಿ ತಂದರು. ಆಗ ಬೊಡ ತೆಗೆದು ಹಿಂದಿರುಗಿದ ಬಾಬಣ್ಣ ಇತರರು ತಂದಿಟ್ಟಿದ್ದ ಚೊಟ್ಟೆಯ ಕುತ್ತಿಯನ್ನು ನೋಡಿ ಹೇಳಿದರಂತೆ, ಬಾರಿ ಎಡ್ಡೆ ಆತ್೦ಡ್... ಪಾಪ ಅವರಿಗೆ ಗೊತ್ತಿಲ್ಲ..ಇದು ಅವರದ್ದೇ ಚೊಟ್ಟೆಯ ಕುತ್ತಿ!!! ಇನ್ನು ಇದನ್ನು ಏನು ಮಾಡುವುದಂದು ಆಲೋಚಿಸಿದ ಅವರು ಬಾಬಣ್ಣನ ಬಾವಿಗೆ ಹಾಕಲು ತೀರ್ಮಾನಿಸಿ ಹಾಗೆ ಮಾಡುತ್ತಾರೆ. ಮರುದಿನ ಬಾಬಣ್ಣ ನೀರು ಎತ್ತಲು ಹೋದರೆ ಚೊಟ್ಟೆಯ ಕುತ್ತಿ ಎಲ್ಲಿ!! ಛೀ.. ನಾ.... ಸೂ.... ಮಕ್ಕಳು ಎ೦ದು ಬಯ್ಯುತ್ತಾ ಅವರನ್ನೇ ಸೇರಿಸಿ ಬಾವಿಯಿಂದ ಕುತ್ತಿಯನ್ನು ತೆಗೆಸಿದರಂತೆ.
ಇನ್ನೊಮ್ಮೆ ತಂಡದ ಸದಸ್ಯರಲ್ಲೊಬ್ಬರ ತೆಂಗಿನ ಮರದಿಂದಲೇ ಸಿಯಾಳ ಕದಿಯುವೆವೆಂದು ತಂಡದ ಸದಸ್ಯರಲ್ಲೇ ಪರಸ್ಪರ ಚಾಲೆಂಜ್ ಆಗಿ ಒಟ್ಟಿಗೆ ಹೊರಟವರ ಪೈಕಿ ಸ್ವಲ್ಪ ಜನ ಇನ್ನು ಸ್ವಲ್ಪ ರಾತ್ರಿಯಾಗಲಿ ಎ೦ದು ಕಾಯುತ್ತಿರುವಾಗಲೇ ಮೆಲ್ಲಗೆ ಎದ್ದು ಹೋದ ರಾಮಣ್ಣ ಬಾಲಕೃಷ್ಣಣ್ಣನ ತೆಂಗಿನ ಮರದಿಂದ ಸಿಯಾಳ ಕದ್ದು ಚ್ಯಾಲೆಂಜ್ ಪೂರ್ತಿ ಮಾಡಿದರಂತೆ. ಶಿವರಾತ್ರಿಯಂದು ಕತ್ತಲೆ ತಾನೆ...
ನಮ್ಮ ಮನೆಯ ಕೆಳಭಾಗದಲ್ಲಿ ಒಂದು ದಾಸಯ್ಯರ ಮನೆ ಇದೆ. ಅಲ್ಲಿ ಹಿಂದೆ ಒಬ್ಬರು ಪ್ರಾಯದ ದಾಸಯ್ಯಜ್ಜ ಇದ್ದರಂತೆ. ಅವರನ್ನು ಅಜ್ಜ ದಾಸಯ್ಯರು ಅಂತಲೇ ಕರೆಯುತ್ತಿದ್ದರು. ಆ ಕಾಲದಲ್ಲಿ ಎಲ್ಲರಿಗೂ ನಟ್ಟಿಕಾಯಿಯ ಹಿತ್ತಿಲು ಇತ್ತು. ಅಲ್ಲಿ ತರಕಾರಿ ಸಸ್ಯಗಳಿಗೆ ನೀರೆರೆಯಲು ಕಡ್ಯ ಎ೦ದು ಕರೆಯುತ್ತಿದ್ದ ಮಣ್ಣಿನ ಗಡಿಗೆಯನ್ನು ಉಪಯೋಗಿಸುತ್ತಿದ್ದರು. ನೀರೆರೆದಾದ ನಂತರ ಈ ಕಡ್ಯವನ್ನು ಹಿತ್ತಿಲಿನಲ್ಲೇ ಕವುಚಿ ಹಾಕುತ್ತಿದ್ದರು. ಹೀಗಿರುವಾಗ ಶಿವರಾತ್ರಿಯ ಒಂದು ದಿನ ನಮ್ಮ ಬೆಳ್ಚಪ್ಪಾಡಣ್ಣ ಈ ಕಡ್ಯದಲ್ಲಿ ಮಾಡಬಾರದನ್ನು ಮಾಡಿದರು! ಕಡ್ಯದಲ್ಲಿ ಸಸ್ಯಗಳಿಗೆ ನೀರೆರೆಯುವಾಗ ಎತ್ತರದಿಂದ ಕೈಗೆ ಎರೆದು ಚಿಮುಕಿಸುತ್ತಾ ಸಸ್ಯಗಳಿಗೆ ತಲುಪಿಸಬೇಕು, ಆಗ ಮಾತ್ರ ಸಸ್ಯಗಳಿಗೆ ಇದು ಹಿತ ಮಿತವಾದ ವೇಗದಲ್ಲಿ ತಲುಪಿ ಅಲ್ಲಿದ್ದ ಇಬ್ಬನಿ ಇಲ್ಲದಾಗುತ್ತದೆ. ಹೀಗೆ ಶಿವರಾತ್ರಿಯ ಮರುದಿನ ಅಜ್ಜ ದಾಸಯ್ಯರು ಮೆಲ್ಲಗೆ ಗಡಿಗೆಯಿಂದ ನೀರನ್ನು ಕೈಗೆ ಹಾಕಿ ಪಚ ಪಚ ಎ೦ದು ಚಿಮುಕಿಸುವಾಗ ಗಡಿಗೆಯೊಳಗಿನಿಂದ ವಾಸನೆಯೊಂದಿಗೆ ಪೀಸ್ ಪೀಸಾಗಿ ಬಂತಂತೆ!! ಈಗ ಹಿತಾನುಭವ ಯಾರಿಗೋ.....
ಇಲೆಕ್ಷನಿನ ಕಾಲದಲ್ಲಿ ಬಂದ ಒಂದು ಶಿವರಾತ್ರಿಯಂದು ಲಕ್ಷ್ಮಣಣ್ಣನ ಸೈಕಲ್ಲು ಬೆಳಿಗ್ಗೆ ನೊಡುವಾಗ ಇರಲಿಲ್ಲ. ಎಲ್ಲೆಲ್ಲಿ ಹುಡುಕಿದರೂ ಸೈಕಲ್ಲು ಕಾಣದಿದ್ದಾಗ ಆಗ ಎಲ್ಲೊ ಸಮೀಪದಲ್ಲಿ ಸೈಕಲ್ ಚಿಹ್ನೆಯ ಪಾರ್ಟಿಯವರು ಹಾಕಿದ ಸಾಮಾನ್ಯ 10-12 ಕೊಲು ಎತ್ತರದ ಕಂಬದ ಮೇಲ್ಭಾಗದಲ್ಲಿ ಈ ಸೈಕಲ್ ಏರಿ ಕುಳಿತುಕೊಂಡಿತ್ತು! ಅಲ್ಲಿಗೆ ಹೇಗೆ ಏರಿಸಿದ್ದರೋ ಏನೋ? ಅಂತೂ ಇಳಿಸಬೇಕಾದರೆ ಸುಸ್ತೋ ಸುಸ್ತು.
ಸಾಮಾನ್ಯವಾಗಿ ಶಿವರಾತ್ರಿ ಬರುವ ಮೊದಲೇ ಬೆಳೆದಿದ್ದ ಎಲ್ಲಾ ತರಕಾರಿಗಳನ್ನು ಕೊಯ್ದಿಡುತ್ತಿದ್ದರು, ಇಲ್ಲದಿದ್ದರೆ ಇದು ಶಿವರಾತ್ರಿಯ ಒಂದು ದಿನದ ಕಳ್ಳರಿಗೆ ಆಹುತಿಯಾಗುತ್ತಿತ್ತು. ಮಾತ್ರವಲ್ಲದೆ ಕೈಗೆ ಎಟುಕುತ್ತಿದ್ದ ತೆಂಗಿನ ಕಾಯಿಗಳನ್ನು, ಸಿಯಾಳ, ಬನ್ನಂಗಾಯಿಗಳನ್ನೂ ತೆಗೆಯುತ್ತಿದ್ದರು. ಅದೇ ರೀತಿ ಗೇರುಬೀಜಗಳನ್ನೂ ಜನರು ಕದಿಯುತ್ತಿದ್ದರು. ಹಸಿ ಗೇರುಬೀಜಗಳೆಲ್ಲವೂ ಈ ಸಮಯದಲ್ಲಿ ಪದಾರ್ಥಕ್ಕೆ ಆಹುತಿಯಾಗುತ್ತಿದ್ದವು. ಏನಿದ್ದರೂ ಆ ಒಂದು ಹೊತ್ತಿಗೆ ತಿನ್ನುವುದಕ್ಕಾಗಿ ಮತ್ತು ಮಜಾ ಮಾಡುವುದಕ್ಕಾಗಿ ಮಾತ್ರವೇ ಇದನ್ನೆಲ್ಲಾ ಕದಿಯುತ್ತಿದ್ದರಲ್ಲದೇ ಬೇರೆ ಉದ್ದೇಶದಿಂದಲ್ಲ.
ಇನ್ನು ಶಿವರಾತ್ರಿಯಂದು ಮನೆಗೆ, ಅಂಗಳಕ್ಕೆ ಕಲ್ಲು ಬಿಸಾಡುವುದೂ ಸಾಮಾನ್ಯವಾಗಿತ್ತು. ಮಾತ್ರವಲ್ಲದೆ ರಸ್ತೆಯಲ್ಲಿ ಪೂರ್ತಿ ಕಲ್ಲು ಇಡುತ್ತಿದ್ದರು. ಮರುದಿವಸ ಹೊರಡುವ ವಾಹನಗಳಿಗೆ ಕಲ್ಲು ತೆಗೆಯುವುದೇ ಒಂದು ಕೆಲಸವಾಗಿತ್ತು.
ಬೊರ್ಡು ಅದಲು ಬದಲು ಮಾಡುವುದೂ ಆಗಲೂ ಈಗಲೂ ನಮ್ಮೂರಿನಲ್ಲಿ ಶಿವರಾತ್ರಿಗಳಂದು ನಡೆಯುತ್ತಿದ್ದ ಕಿತಾಪತಿಗಳಲ್ಲಿ ಒಂದು. ಹೀಗೆ ಶಿವರಾತ್ರಿಯ ಮರುದಿನ ನಮ್ಮೂರಿನ ಆಯುರ್ವೇದಿಕ್ ಡಿಸ್ಪೆನ್ಸರಿಯ ಬೋರ್ಡು ಎ೦ಕಪ್ಪಣ್ಣನ ಗಡಂಗಿಗೆ.... ಗಡಂಗಿನ ಬೋರ್ಡು ಅಣ್ಣಯ್ಯ ಬಂಡಾರಿಯವರ ಬಾರ್ಬರ್ ಶೋಪಿಗೆ...... ಅಂಗಡಿಯ ಬೋರ್ಡು ಶಾಲೆಗೆ..... ಆದುದರಿಂದ ಶಿವರಾತ್ರಿಯ ಮೊದಲ ದಿನವೇ ಹೆಚ್ಚಿನ ಎಲ್ಲಾ ಬೋರ್ಡುಗಳನ್ನು ಜನರೂ ಜಾಗ್ರತೆಯಿಂದ ತೆಗೆದಿರಿಸುತ್ತಿದ್ದರು.
ನಮ್ಮ ತಂಡವು ಕೂಡ ಒಮ್ಮೆ ಮಿಚ್ಚ ಭೂಮಿಯ ತೆಂಗಿನ ತೋಟಗಳಿಗೆ ಲಗ್ಗೆ ಹಾಕಿದ್ದೂ ನನಗೆ ನೆನಪಿದೆ. ಆದರೆ ಈಗೀಗ ಇದು ಕಡಿಮೆಯಾಗಿದ್ದರೂ ರಸ್ತೆಗಳಿಗೆ ಕಲ್ಲು ಇಡುವುದೂ ಬೋರ್ಡು ಬದಲಾಯಿಸುವುದೇ ಮೊದಲಾದ ಕಿತಾಪತಿಗಳು ಈಗಲೂ ನಡೆಯುತ್ತಾ ಇದೆ.

3 comments:

  1. ನಿಮ್ಮ ಮಾತಿನಂತೆಯೇ ಬರವಣಿಗೆಯೂ ಚಂದ...
    ಕುಶಿಯಾಯಿತು...

    ReplyDelete
  2. ಸದಾ ಜಾಗರಣೆ ಮಾಡಬೇಕೆಂಬುದೇ ಈ ಹಬ್ಬದ ಸಂದೇಶ.
    ಜಾಗರಣೆ ಹೇಗೆ ಎಂಬುದಕ್ಕೆ ದೊಡ್ಡ ವ್ಯಾಖ್ಯಾನವನ್ನೇಕೊಡಬಹುದು.
    ಎಚ್ಚರವಿರುವಾಗಲೂ ಜಾಗರಣೆಬೇಕು
    ನಿದ್ರೆಯಲ್ಲೂ ಜಾಗರಣೆಬೇಕು
    ಮಾಡುವ ಕಾರ್ಯದಲ್ಲೂ ಜಾಗರಣೆ ಬೇಕು
    ಆಡುವಮಾತು ನೋಡುವ ನೋಟ, ಕುಡಿಯುವ ಪಾನೀಯ,ಹೆಚ್ಚೇಕೆ ಪ್ರತಿಕ್ಷಣವೂ ಎಚ್ಚರದಲ್ಲಿರಬೇಕು ಎಂಬ ಬಹಳ ದೊಡ್ಡ ಸಂದೇಶ ಭಕ್ಕಸಂದೋಹಕ್ಕೆ ಈ ಹಬ್ಬ ನೀಡುವುದು ಎಂಬುದರಲ್ಲಿ ಅತಿಶಯೋಕ್ಕಿಯಿಲ್ಲ.

    ReplyDelete
  3. ಶಿವರಾತ್ರಿಯ ಆ ದಿನಗಳು.....ಈಗ ಆ ನೆನಪುಗಳು ಮಾತ್ರ ಅಲ್ವಾ!?

    ReplyDelete