Sunday 1 June 2014

ನಾಳೆ ಶಾಲಾ ಪ್ರವೇಶೋತ್ಸವ...............

ಜೂನ್ 1, ಶಾಲಾರಂಭದ ದಿನ. ನಮ್ಮಲ್ಲಿ ಬಹಳ ಹಿಂದಿನಿಂದಲೇನಡೆದುಕೊಂಡು ಬಂದ ಸಂಪ್ರದಾಯವೆಂದರೆ ಜೂನ್ ತಿಂಗಳ ಮೊದಲ ಸೋಮವಾರ ಆಧ್ಯಯನ ವರ್ಷದ ಆರಂಭ. ಆದುದರಿಂದ ನಾಳೆ ಸೊಮವಾರ, ಜೂನ್ ಎರಡು, ಈ ವರ್ಷದ ಶಾಲಾ ವ್ರವೇಶೊತ್ಸವ. ಶಾಲೆಗಳೆಲ್ಲಾ ಸಜ್ಜುಗೊಂಡು ಮಕ್ಕಳ ಆಗಮನಕ್ಕಾಗಿ ಕಾಯುತ್ತಿವೆ. ಅಲಂಕಾರಗಳೆಲ್ಲಾ ಪೂರ್ತಿಯಾಗಿವೆ, ಚಾಕೋಲೇಟ್ ಪೊಟ್ಟಣಗಳು ರೆಡಿಯಾಗಿವೆ.ಇನ್ನೇನು ಮಕ್ಕಳು ಬಂದರೆ ಆಯಿತು!!!!
ಮಕ್ಕಳು ತಯಾರಾಗಿ ಬರುತ್ತಾರೆ. ಹೊಸ ಬ್ಯಾಗು, ಹೊಸ ಯೂನಿಫಾರ್ಮ್, ಪುಸ್ತಕ, ಕೊಡೆ ಎಲ್ಲವೂ ಹೊಸತೆ... ಮಕ್ಕಳಿಗಂತೂ ಸಂತೋಷವೇ ಸಂತೋಷ.......
ಮನಸ್ಸು ಹಿಂದಕ್ಕೋಡುತ್ತಿದೆ... ಆಸುಪಾಸು 1980 ರ ದಶಕ. ಹೆಚ್ಚಿನ ಮನೆಗಳಲ್ಲಿ ಮಕ್ಕಳಿಗೆ ಮೇ ತಿಂಗಳಿನಲ್ಲಿಯೇ ಶಾಲೆಗೆ ಹೊಗಬೇಕಾದ ಸಿದ್ಧತೆಗಳು ಆರಂಭವಾಗುತ್ತಿದ್ದವು.... ಅ೦ದರೆ ಮೇ 2ನೇ ತಾರೀಕು ಪಾಸ್ ಫೈಲು ಆದರೆ ಅದೇ ದಿನ ಮೇಲಿನ ಕ್ಲಾಸಿನಲ್ಲಿ ಪಾಸು ಆದ ಯಾರನ್ನಾದರು ಹುಡುಕಿ (ಯಾರು ಅಂತ ಮೊದಲೇ ಸಿದ್ಧವಾಗಿರುತ್ತಿತ್ತು) ಅವರ ಹಳೆಯ ಪಾಠ ಪುಸ್ತಕಗಳನ್ನು ಅರ್ಧಕ್ರಯಕ್ಕೆ ಪಡೆಯಲು ಅವರ ಜೊತೆಗ ಅವರ ಮನೆಗೆ ಹೋಗುವುದು, ಅಲ್ಲಿ ಪುಸ್ತಕಕ್ಕೇನಾದರೂ ಡ್ಯಾಮೇಜು ಆಗಿದ್ದರೆ ಅದರ ವಾಸಿ ಹಣವನ್ನು ಕಳೆದು ಬಾಕಿ ಒಟ್ಟು ಪುಸ್ತಕಕ್ಕೆ ಎಷ್ಟು ಮೊತ್ತ ಎ೦ದು ತೀರ್ಮಾನಿಸಿ ಪುಸ್ತಕ ತೆಕ್ಕೊಂಡು ಬರುವುದು... ಸಾಲಕ್ಕೆ. ನಂತರ ರಜೆಯ ಉಳಿದ ದಿನಗಳಲ್ಲಿ ಕೆಲಸಕ್ಕೆ ಹೋಗಿಯೊ ಅಥವಾ ಪತ್ತನಾಜೆ ಕಳೆದ ನಂತರ ಗೇರು ಬೀಜ ಹೆಕ್ಕಿಯೊ (ಪತ್ತನಾಜೆಯ ನಂತರ ಹೆಚ್ಚಿನ ಎಲ್ಲಾ ಗೇರುಮರಗಳಿಂದ ಮಕ್ಕಳು ಗೇರು ಬೀಜವನ್ನು ಸಂಗ್ರಹಿಸಬಹುದೆಂಬ ಅಲಿಖಿತ ನಿಯಮ ಆಗ ಹಳ್ಳಿ ಕಡೆಗಳಲ್ಲಿ ಇತ್ತು) ಸಂಗ್ರಹಿಸಿದ ಹಣವನ್ನು ಕೊಡುವುದು. ಹೀಗೆ ಪುಸ್ತಕ ರೆಡಿಯಾಗುತ್ತಿತ್ತು. ಆ ಕಾಲದಲ್ಲಿ ಒಂದು ಪುಸ್ತಕವನ್ನು ಕಡಿಮೆ ಎ೦ದರೂ ನಾಲ್ಕೈದು ವರ್ಷಗಳ ಕಾಲ ಬೇರೆ ಬೇರೆ ಮಕ್ಕಳು ಉಪಯೋಗಿಸುತ್ತಿದ್ದರು. ಇನ್ನು ಸ್ಕೂಲ್ ಬ್ಯಾಗ್. ಅಂದರೆ ಭುಜದಿಂದ ಕೆಳಗೆ ಇಳಿಬಿಡುವ ಬಟ್ಟಯ ಜೀಲ, ಸಾಮಾನ್ಯವಾಗಿ ಖಾಕಿ ಬಣ್ಣದ್ದು, ಕೆಲವೊಮ್ಮೆ ಹಳೆಯ ದಪ್ಪದ ಬಟ್ಟೆ ಇದ್ದರೆ ಅದರಿಂದ ಹೊಲಿದು ಮಾಡಿದ ಚೀಲ. ಇನ್ನು ಸ್ಕೂಲ್ ಬ್ಯಾಗ್ ಎ೦ದು ಆಗ ಬಂದದ್ದು ಸಾಮಾನ್ಯ 1985ರ ಸಮಯದಲ್ಲಿ. ಅದು ಆಯತಾಕೃತಿಯಲ್ಲಿರುವ ರೆಕ್ಸಿನಿಗೆ ಎರಡು ಬದಿಗಳಲ್ಲಿಯೂ ದಪ್ಪದ ತಂಗೀಸನ್ನು ಹಾಕಿದ ಬ್ಯಾಗು. ಅದನ್ನು ಡಿಸ್ಕೋ ಬ್ಯಾಗು ಅಂತ ಕರೆಯುತ್ತಿದ್ದರು. ನನಗೆ ಎ೦ಟನೆಯ ಕ್ಲಾಸು ಆಗುವಾಗ ನನ್ನ ಅಕ್ಕನ ಕೃಪೆಯಿಂದ ಅ೦ತಹ ಒಂದು adidas ಎ೦ದು ಬರೆದ ಬ್ಯಾಗು ಸಿಕ್ಕಿತ್ತು. ಆಗ ಅದಕ್ಕೆ 15 ರೂಪಾಯಿ ಬೆಲೆ. ಪುಸ್ತಕ ಬ್ಯಾಗು ಆಯಿತಲ್ಲ. ಇನ್ನು ಕೊಡೆ ಬೇಡವೇ... ಹೆಚ್ಚಿನ ಮಕ್ಕಳು ಆಗ ಹಳೆಯ ಕೊಡೆಗಳನ್ನೇ ಉಪಯೋಗಿಸುತ್ತಿದ್ದರು. ಕಡ್ಡಿ ಹೋದರೆ ಅದಕ್ಕೆ ಕಡ್ಡಿ ಹಾಕುವ ಅಪ್ಪುಟಣ್ಣ, ಕಿಟ್ಟಣ್ಣ ಮೊದಲಾದವರೆಲ್ಲಾ ಇದ್ದರು. ಅವರು ಕಡ್ಡಿ ಎಲ್ಲಾ ಸರಿ ಮಾಡಿ ಬಟ್ಟೆಗೆ ಟೊಪ್ಪಿ ಹಾಕಿ ಕೊಟ್ಟರೆ ಮತ್ತೆ ಆ ಮಳೆಗಾಲ ಕಳೆಯುವಲ್ಲಿಯವರೆಗೆ ತೊಂದರೆ ಇಲ್ಲ. ಅದೇ ರೀತಿ ನಮ್ಮ ಆಚಾರಣ್ಣ ಕೂಡ ರಿಪೇರಿ ಮಾಡುತ್ತಿದ್ದರು. ಈ ಕೊಡೆ ರಿಪೇರಿಯ ಕಾಯಕ ಸಾಮಾನ್ಯ ಒಂದೆರಡು ತಿಂಗಳಾದ್ರು ಮುಂದುವರಿಯುತ್ತಿತ್ತು. ಇನ್ನು ಕೆಲವು ಮಕ್ಕಳಿಗೆ ಗೊರಬೆ ಮಳೆಯಿಂದ ಆಶ್ರಯ ಕೊಡುತ್ತಿತ್ತು.
ಈಗ ಶಾಲೆ ಸುರುವಾಗುವ ಮೊದಲನೆಯ ದಿವಸ ಶುಚಿತ್ವ ದಿನ ಎ೦ದು ಶಾಲೆಗಳಲ್ಲಿ ಆಚರಿಸುತ್ತಾರೆ. ಆದರೆ ಆ ಕಾಲದಲ್ಲಿ ಅ೦ತದ್ದೇನೂ ಇಲ್ಲ. ಮಾರ್ಚ್ ತಿಂಗಳು ಊರಿಗೆ ಹೋದ ಕೆಲವು ಅಧ್ಯಾಪಕರು ಬರುವುದೇ ಶಾಲೆ ಆರಂಭವಾಗುವ ದಿನ ಮಧ್ಯಾಹ್ನಕ್ಕೆ (ಎಲ್ಲರೂ ಅಲ್ಲ). ಆದುದರಿಂದ ಶಾಲಾರಂಭದ ದಿನ ಮಕ್ಕಳು ಶಾಲೆಗ ಹೋದಾಗ ಮೊದಲಿಗೆ ಅವರನ್ನು ಎದುರುಗೊಳ್ಳುವುದು ಪಾರಿವಾಳಗಳ ಹಿಕ್ಕೆಗಳಿಂದ ಸಂಪೂರ್ಣ ಮುಚ್ಚಿ ಹೋದ ಬೆಂಚುಗಳು.... ಇದನ್ನೆಲ್ಲಾ ತೆಗೆದು ಗೆಳೆಯರೊಡನೆ ಜಗಳ ರಚ್ಚೆ ಪಚ್ಚೆ ಮಾಡಿ ತನ್ನ ಸೀಟನ್ನು ಗುರುತಿಸಿ ಕ್ಲೀನ್ ಮಾಡಿದಾಗ ಮಧ್ಯಾಹ್ನವಾಗುತ್ತಿತ್ತು. ಶಾಲಾರಂಭದ ದಿವಸ ಮಧ್ಯಾಹ್ನದ ನಂತರ ರಜೆ.... ಯಾಕೆಂದು ಗೊತ್ತಿಲ್ಲ. ಅಲ್ಲಿಗೆ ನಮ್ಮ ಪ್ರವೇಶೋತ್ಸವ ಮುಗಿದಿರುತ್ತಿತ್ತು. ನಂತರ ಎ೦ದಿನಂತೆ ಶೆಟ್ಟಿ ಮಾಸ್ತರರ ಕ್ಲಾಸು, ಪೆಟ್ಟು, ಅನಂತ ರೈಗಳ ತಮಾಷೆಗಳು, ಸಾಂತಪ್ಪ ಮಾಸ್ತರರ ಗಣಿತ, ಕೊರಗಪ್ಪ ಮಾಸ್ತರರ ಚಿತ್ರಗಳು, ಮಣಿಯಾಣಿ ಮಾಸ್ತರರ ನೂಲೇ ನೂಲನ್ನ ನೂಲೇ, ಗುಡ್ಡೆಯ ಕುಂಟಂಗೇರುಹಣ್ಮು, ಬಜಕ್ಕುರೆ ಪಕ್ಕಿಯ ಗೂಡು, ಭಾಸ್ಕರನ ಮುಡ್ಕನೆ, ಪಾರವತಿ ಅಕ್ಕನ ಚಿಕ್ಕು, ಕುಕ್ಕು, ಪೆಲಕ್ಕಾಯಿ..... ಹೀಗೆ ಕಲಿಕೆಯ ಜೊತೆಗೆ ಜೀವನಾನುಭವಗಳೊಂದಿಗೆ ದಿನಗಳು ಮುಂದೋಡುತ್ತಿದ್ದವು.
ಕಾಲ ಬದಲಾಗಿದೆ, ಮಕ್ಕಳ ಹಕ್ಕುಗಳು, ಕಲಿಕೆ ಇತ್ಯಾದಿಗಳಿಗೆಲ್ಲಾ ಸಂಬಂಧಿಸಿದಂತೆ ಬಹಳ ಬಹಳ ಬದಲಾವಣೆಗಳು ಭಾರತದಲ್ಲಿ ಹಾಗು ಪ್ರಪಂಚದಲ್ಲಿ ಆಗಿದೆ. ಹಲವು ಕ್ರಾಂತಿಕಾರಕವಾದ ಸುಧಾರಣೆಗಳ ಪರಿಣಾಮವಾಗಿ ಮಕ್ಕಳಿಗೆ ಉಚಿತ ಹಾಗು ಗುಣಮಟ್ಟದ ಶಿಕ್ಷಣ ಇಂದು ಲಭ್ಯವಾಗುತ್ತಿದೆ. ಇದಕ್ಕಾಗಿ ಡಿಪಿಯಿಪಿಯಿಂದ ಪ್ರಾರಂಭವಾದ ವ್ಯವಸ್ಥೆಗಳು ಇಂದು ಎಸ್ಎಸ್ಎ, ಆರ್ಎ೦ಎಸ್ಎಗಳ ಮುಖಾಂತರ ಬಹಳ ವ್ಯವಸ್ಥಿತವಾಗಿ ಮುಂದುವರಿಯುತ್ತಿದೆ. ಆರ್ಟಿಇ, ಮಕ್ಕಳ ಹಕ್ಕುಗಳು ಇತ್ಯಾದಿ ಇದಕ್ಕೆ ಬಲವನ್ನೊದಗಿಸುತ್ತಿದೆ. ಮಕ್ಕಳಿಗೆ ಇಂದು ಶಾಲೆಯಲ್ಲಿ ಸೌಕರ್ಯಗಳು, ಭಾಗವಹಿಸುವಿಕೆ, ಸಂರಕ್ಷಣೆ (3Ps- Provision, Protection, Participation)ಇತ್ಯಾದಿ ಹಕ್ಕುಗಳೆಲ್ಲಾ ಲಭ್ಯವಾಗುತ್ತಿದೆ. ಆದುದರಿಂದ ಹಳೆಯ ಕಾಲದಲ್ಲಿದ್ದ ಯಾವುದೇ ತೊಂದರೆಗಳನ್ನೆದುರಿಸದೇ ಇಂದಿನ ಮಕ್ಕಳು ಉತ್ತಮ ರೀತಿಯ ಶಿಕ್ಷಣವನ್ನು ಪಡೆಯಲು ಸಾಧ್ಯವಾಗುತ್ತಿದೆ.
ಇನ್ನೊಂದು ಅಧ್ಯಯನ ವರ್ಷ ಆರಂಭವಾದ ಈ ಸಂದರ್ಭದಲ್ಲಿ ವಿದ್ಯಾಸರಸ್ವತಿಯ ದೇಗುಲಕ್ಕೆ ಕಾಲಿರಿಸುವ ಎಲ್ಲಾ ಮಕ್ಕಳಿಗೂ ನೂತನ ಅಧ್ಯಯನ ವರ್ಷ ಶುಭವನ್ನು ತರಲಿ ಎ೦ದು ಹಾರೈಸೋಣ.

No comments:

Post a Comment