Saturday 7 June 2014

ಆಚಾರ್ಯಜ್ಜ
ಬಹಳ ಸಮಯವಾಯಿತು, ಆಚಾರ್ಯಜ್ಜನವರ ಬಗ್ಗೆ ಒಂದೆರಡು ಪದಗಳನ್ನು ಟೈಪಿಸಬೇಕೆಂದು ತೀರ್ಮಾನಿಸಿ. ಆದರೆ ಸಮಯ, ಮೂಡ್ ಬರಲೇ ಇಲ್ಲ. ಆದರೆ ಈಗ ನಾನು ತಿರುವನಂತಪುರದಲ್ಲಿ ಇರುವಾಗ.... ರಮಾನಂದಣ್ಣನ ಫೊನು ಬಂತು. ನಾನು ದೇಲಂಪಾಡಿಯ ಸ್ಥಿರವಾಸ ಕಡಿಮೆ ಮಾಡಿದ ನಂತರ ದೇಲಂಪಾಡಿಯ ಸುದ್ದಿ ವಿಶೇಷಗಳನ್ನು ನನಗೆ ಮೊದಲು ತಿಳಿಸುವವರೇ ಈ ರಮಾನಂದಣ್ಣ. ಆದ ಕಾರಣವೇ ಅವರ ಫೋನು ಬರುವಾಗ ಏನೋ ಗಾಬರಿ... ಹೌದು ನನ್ನ ಆತಂಕ ನಿಜವಾಗಿದೆ. ಆಚಾರ್ಯಜ್ಜನವರು ಇಂದು ನಮ್ಮನ್ನಗಲಿ ಹೊದ್ರಂತೆ!! ಈಗಲಾದರೂ ನಾನೆರಡು ಪದಗಳನ್ನು ಹೇಳದಿದ್ದರೆ ಇನ್ನು ಸಾಧ್ಯವಾಗಲಿಕ್ಕಿಲ್ಲ. ಈಗ ನಾನು ಊರಲ್ಲಿಯೋ ಊರ ಸಮೀಪದಲ್ಲಿಯೋ ಇಲ್ಲದ ಕಾರಣ ಅವರ ಅಂತಿಮ ದರ್ಶನವನ್ನು ಮಾಡಲು ನನಗೆ ಸಾಧ್ಯವಾಗುತ್ತಿಲ್ಲ. ಆದಕಾರಣ ಇದುವೇ ಅವರಿಗೆ ಶ್ರದ್ಧಾಂಜಲಿ.
ಆಚಾರ್ಯಜ್ಜ ಎ೦ದರೆ ದೇಲಂಪಾಡಿ ನಾರಾಯಣ ಆಚಾರಿಗಳು, ಮೂಲತಃ ಕವಿ ಮುದ್ದಣನ ನಾಡಾದ ನಂದಳಿಕೆಯವರಂತೆ, ನಮ್ಮ ತಂದೆಯವರ ಸಮಕಾಲೀನರು. ನಮ್ಮ ತಂದೆ, ತಾಯಿ, ಮಾವ, ಇವರೆಲ್ಲಾ ಜೊತೆಜೊತೆಯಾಗಿಯೇ ಬೆಳೆದವರು. ಮತ್ತು ಇನ್ನು ಆಚಾರ್ಯಜ್ಜನವರ ಧರ್ಮಪತ್ನಿ ಆಚಾರ್ತಿಯಕ್ಕ ಕೆಲವು ವರ್ಷಗಳ ಹಿಂದೆಯೇ ತೀರಿಕೊಂಡಿದ್ದರು. ಆಚಾರ್ಯಜ್ಜನ ಬಗ್ಗೆ ಹಲವಾರು ವಿಚಾರಗಳನ್ನು ನಾನು ಅವರಿಂದ ಮತ್ತು ಇತರರಿಂದ ಕೇಳಿ ತಿಳಿದುಕೊಂಡಿದ್ದೇನೆ. ಸಣ್ಣವರಿರುವಾಗ ಲೊಟಾನು ಮಾಡುವುದರಲ್ಲಿ ಅವರದ್ದು ಎತ್ತಿದ ಕೈಯಂತೆ. ಲೋಟಾನು ಅಂದರೆ ಈಗಿನ ಭಾಷೆಯಲ್ಲಿ ಹೇಳುವುದಾದರೆ ಕೆಲವು ಅನುಪಯುಕ್ತ ವಸ್ತುಗಳನ್ನು ಉಪಯೋಗಿಸಿ ಆಟಕ್ಕೆ ಅಥವಾ ಇತರ ಅಗತ್ಯಗಳಿಗೆ ಉಪಯೋಗಿಸುವಂತಹ ಕೆಲವು ವಸ್ತುಗಳು. ಹೀಗೆ ಅವರು ಆ ಕಾಲದಲ್ಲಿ ಈಂದು ಮತ್ತು ತೆಂಗಿನ ಹಾಳೆಯಿಂದ ಕಾಲಿಗೆ ಹಾಕುವ ಚಪ್ಪಲಿ, ಕಿಳ್ಳಿ, ಕೆಡಂಜೋಲು, ಹಕ್ಕಿಗಳನ್ನು ಮತ್ತು ಪ್ರಾಣಿಗಳನ್ನು ಹಿಡಿಯುವ ಮುಡ್ಕನೆ ಇತ್ಯಾದಿಗಳನ್ನೆಲ್ಲಾ ಮಾಡುತ್ತಿದ್ದರಂತೆ. ಮತ್ತು ಆ ಕಾಲದ ಮಕ್ಕಳನ್ನು ಸುಲಭದಲ್ಲಿ ಮಂಗ ಮಾಡುತ್ತಿದ್ದರಂತೆ. ಆದುದರಿಂದ ಅವರನ್ನು ಕಿಂದರಿಜೋಗಿ ಎ೦ದು ಬೇಕಾದರೂ ಕರೆಯಬಹುದಿತ್ತು.
ಇನ್ನು ನನಗೆ ಬಹಳ ಸಣ್ಣಪ್ರಾಯದಿಂದಲೇ ಅವರ ಸಂಪರ್ಕ ಇತ್ತು. ನಮ್ಮ ಮತ್ತು ಅವರ ಮನೆ ಕೇವಲ ಇನ್ನೂರೈವತ್ತು ಮೀಟರುಗಳ ಅಂತರದಲ್ಲಿದ್ದುದು. ಅವರು ಆಚಾರಿ ಕೊಟ್ಯದಲ್ಲಿ ಕೌಪೀನಧಾರಿಗಳಾಗಿ ಕಬ್ಬಿಣದ ಕೆಲಸವನ್ನು ಮಾಡುವುದನ್ನು ನಾನು ಮತ್ತು ನನ್ನ ಒರಗೆಯ ಮಕ್ಕಳು ಬಹಳ ಸಣ್ಣವರಿರುವಾಗಲೇ ಆಶ್ಚರ್ಯದಿಂದ ನೋಡುತ್ತಿದ್ದೆವು. ಮುಂಜಾನೆ ಎದ್ದು ಒಂದು ಹಂತದ ಕೆಲಸ ಮುಗಿದರೆ ಮತ್ತೆ ಆಚಾರ್ಯಜ್ಜ ಮನೆಯಲ್ಲಿ ನಿಲ್ಲುತ್ತಿರಲಿಲ್ಲ, ಸವಾರಿ....... ಅದು ನಮ್ಮ ಮನೆಯಿಂದ ಪ್ರಾರಂಭಿಸಿ ಅ೦ಗಡಿಯಲ್ಲಾಗಿ ಹೋಗಿ ಹೋಗಿ ಮುಗೇರಿನಲ್ಲಿಯೋ ಮುಂಚಿಕಾನದಲ್ಲಿಯೋ, ಕಕ್ಕೆಪ್ಪಾಡಿಯಲ್ಲಿಯೋ, ಈಶ್ವರಮಂಗಲದಲ್ಲಿಯೋ ಕೊನೆಗೊಳ್ಳುತ್ತಿತ್ತು. ವಿಶೇಷ ಎ೦ದರೆ ಈ ಎಲ್ಲಾ ಸಂಚಾರಕ್ಕೆ ಹೋಗುವಾಗ ಅಥವಾ ಯಾವುದೇ ಸಂದರ್ಭದಲ್ಲಿ ಅವರು ಚಪ್ಪಲಿ ಧರಿಸುತ್ತಲೇ ಇರಲಿಲ್ಲ ಮಾತ್ರವಲ್ಲದೇ ಸಾಮಾನ್ಯವಾಗಿ ಹೋಗಿ ಬರಲು ಇಪ್ಪತ್ತೈದು ಕಿಲೋಮೀಟರುಗಳಷ್ಟು ದೂರ ಇದ್ದರೆ ಬಹಳ ಹಿಂದಿನ ಕಾಲದಿಂದ ಪ್ರಾರಂಭಿಸಿ ಅವರಿಗೆ ನಡೆಯಲು ಸಾಧ್ಯವಾಗುತ್ತಿದ್ದ ಇತ್ತೀಚೆಗಿನವರೆಗೂ ಅವರು ಇದಕ್ಕಾಗಿ ಯಾವುದೇ ವಾಹನವನ್ನು ಆಶ್ರಯಿಸುತ್ತಿರಲಿಲ್ಲ. ಅವರ ನಡಿಗೆಯ ಹಾದಿಯಲ್ಲಿ ಯಾವುದೇ ವಾಹನ ಬಂದಾಗ ವಾಹನವನ್ನು ನಿಲ್ಲಿಸಿ ಇವರನ್ನು ಕರೆದರೂ ಅದಕ್ಕವರು ಹತ್ತುತ್ತಿರಲಿಲ್ಲ. ಸ್ವಾಭಿಮಾನವೋ ವ್ಯಾಯಾಮವೇ ಗೊತ್ತಿಲ್ಲ. ಈ ಎಲ್ಲಾ ಕಾರಣಗಳೇ ಅವರನ್ನು ಇತರರಿಗಿಂತ ಪ್ರತ್ಯೇಕಗೊಳಿಸುತ್ತಿತ್ತು. ಇನ್ನು ನನಗೆ ನಮ್ಮೂರಿನ ಬಗೆಗಿನ ಯಾವುದಾದರೂ ಮಾಹಿತಿ ಬೇಕಾಗಿದ್ದಲ್ಲಿ ನಾನು ಆಚಾರ್ಯಜ್ಜನವರನ್ನು ಆಶ್ರಯಿಸುತ್ತಿದ್ದೆ. ನಾಡಿನ ಹಿಂದಿನ ಕಾಲದ ಜಮೀನ್ದಾರಿ ವ್ಯವಸ್ಥೆಯ ಎಲ್ಲಾ ಪಳೆಯುಳಿಕೆಗಳ ಬಗೆಗಿನ ಮಾಹಿತಿಗಳು ಅವರ ಬಾಯಿಯಿಂದ ರಸವತ್ತಾಗಿ ಬರುತ್ತಿದ್ದುವು. ಇವುಗಳ ಪೈಕಿ ನಮ್ಮೂರಿನಲ್ಲಿ ಬಹಳ ಹಿಂದೆ ನಡೆದ ಶಂಕರ ರೈಗಳ ಅಂಗಡಿಯ ಲಡಾಯಿ, ಚುಂಡಮೇಸ್ತಿಯ ಪ್ರಕರಣ, ಮಲಯಾಳ ನಾರಾಯಣ ಆಚಾರಿಯ ಕೊಲೆ, ಅಜ್ಜ ದಾಸಯ್ಯರು ಪೂವಣಿ ಗೌಡ್ರಿಗೆಂದು ಜಡಿದ ಈಡು ಹೊಡೆದು ಇನ್ಯಾರೋ ಮೃತಪಟ್ಟ ವಿಚಾರ, ಸುಬ್ಬಯ್ಯ ರೈಗಳ ದಂಡು, ಚಾವಡಿಯ ಭೂತಗಳ ಹಿನ್ನೆಲೆ ಇತ್ಯಾದಿಗಳೆಲ್ಲಾ ಸೇರಿಕೊಳ್ಳುತ್ತಿದ್ದವು. ನಾನೆಂದರೆ ಅವರಿಗೆ ಬಹಳ ಇಷ್ಟ, ಅವರೆಂದರೆ ನನಗೂ. ನಾನು ಮನೆಯಲ್ಲಿದ್ದ ಸಮಯದಲ್ಲಿ ಆಗಾಗ ನಮ್ಮಲ್ಲಿಗೆ ಬಂದು ಏನಾದರೂ ಔಷಧಿಗಳಿದ್ದರೆ ಅವರು ಪಡೆಯುತ್ತಿದ್ದರು, ಹೀಗೆ ನಾನು ಅತ್ಯಗತ್ಯಕ್ಕೆಂದು, ಕೆಲವೊಮ್ಮೆ ಅವರಿಗೇ ಎ೦ದು ಸಂಗ್ರಹಿಸಿಡುತ್ತಿದ್ದ ಮಾತ್ರೆಗಳನ್ನೆಲ್ಲಾ ಅವರು ಆಗಾಗ ಪಡೆದು ಸಂತೋಷಪಡುತ್ತಿದ್ದರು! ಇದು ಪ್ರೀತಿ ವಿಶ್ವಾಸದ ದ್ಯೋತಕ. ಇನ್ನು ಆಚಾರ್ಯಜ್ಜನಿಗೆ ದೈವ ದೇವರುಗಳೆಂದರೆ ಅತೀವ ಭಕ್ತಿ. ಊರಿನ ಹೆಚ್ಚಿನ ದೈವ ದೇವಸ್ಥಾನಗಳು ಜೀರ್ಣೋದ್ಧಾರವಾಗುತ್ತಿದ್ದ ವಿಷಯಗಳನ್ನು ತಿಳಿದು ಅವರು ಬಹಳ ಸಂತೋಷಪಡುತ್ತಿದ್ದರು. ಮಾತ್ರವಲ್ಲದೇ ಅವರಿಗೆ ಮಾಟ, ಮಂತ್ರ, ವಾಮಾಚಾರ ಇತ್ಯಾದಿಗಳ ಬಗ್ಗೆ ಸ್ವಲ್ಪ ಹೆಚ್ಚೇ ವಿಶ್ವಾಸವಿತ್ತು. ಅನ್ಯಾಯ ಮಾಡಿದವನಿಗೆ ಕೋರ್ಟಿನಿಂದ ಸಿಗುವುದಕ್ಕಿಂತಲೂ ಹೆಚ್ಚಿನ ಶಿಕ್ಷೆ ದೈವ ದೇವರುಗಳಿಂದ ಸಿಗುತ್ತದೆ ಎ೦ದು ಅವರು ದೃಢವಾಗಿ ನಂಬಿದ್ದರು ಮಾತ್ರವಲ್ಲದೇ ಎಲ್ಲರಿಗೂ ಒಳ್ಳೆಯದಾಗಬೇಕು ಎ೦ಬುದೇ ಅವರ ಮನಸ್ಸಾಗಿತ್ತು.
ಈ ಆಚಾರಣ್ಣ ಈಗ ಈ ಕಾಲದಲ್ಲಿ ನಮ್ಮೂರಿನಲ್ಲಿದ್ದವರಲ್ಲಿ ಹಿರಿಯರು, ಅ೦ದರೆ ಅವರ ಸಮಕಾಲೀನರು ಯಾರೂ ಇನ್ನು ದೇಲಂಪಾಡಿಯಲ್ಲಿ ಬಾಕಿ ಇಲ್ಲ. ಇದಕ್ಕೆ ಕಾರಣ ಅವರ ಬಹಳ ವರ್ಷದ ಬರಿಗಾಲಿನ ನಡಿಗೆ ಆಗಿರಲೂ ಬಹುದೇನೋ! ಆದ ಕಾರಣದಿಂದಲೇ ನಾನು ಅವರಲ್ಲಿ ಕೆಲವೊಮ್ಮೆ ಹೇಳುವುದಿತ್ತು "ಮಾತೇರ್ಲ ಪೋಯೆರ್, ನಮ ಏಪ....” (ಎಲ್ಲರೂ ಹೋದ್ರು, ನಾವು ಯಾವಾಗ) ಆಗ ಒಂದು ನಗೆಯೊಂದಿಗೆ ಅವರು ಹೇಳುತ್ತಿದ್ದರು "ಲೆತ್ತೀಜೆರ್.. ಪಾಸ್ಪೋರ್ಟು ಆತಿಜೋಡೊ”.... (ಕರೆಯಲಿಲ್ಲ.... ಪಾಸ್ಪೋರ್ಟು ಆಗ್ಲಿಲ್ವೋ ಏನೋ)
ಹೌದು ಈಗ ಆಚಾರಣ್ಣನನ್ನು 'ಲೆತ್ತತೇರ್, ಆರ್ ಪೋಯೆರ್ ನಾನ ಎ೦ಕ್ಲೇ ಊರುದ ಪರ ವಿಚಾರೊಲೇನ್ ಪೂರ ತೆರಿಯೊಡಾಂಡ...... ಏರ್ಲಾ ಇಜ್ಜಿ..' (ಆಗ ಅವರನ್ನು ಕರೆದಿದ್ದಾರೆ, ಅವರು ಹೋದರು ಇನ್ನು ನಮ್ಮ ಊರಿನ ಹಳೆ ವಿಚಾರಗಳನ್ನು ತಿಳಿಯಬೇಕಾದರೆ …..... ಯಾರೂ ಇಲ್ಲ.)
ಅವರ ಆತ್ಮಕ್ಕೆ ಚಿರಶಾಂತಿ ಲಭಿಸಲಿ.......

1 comment:

  1. mama, so sad to note that acharyajja is no more...may his soul rest in peace...he is a personality who comes to my mind when i remind of my child hood days at delampady..really miss all those fond memories..

    ReplyDelete